Summer Health Tips: ಬೇಸಿಗೆಯಲ್ಲೇ ಹೊಟ್ಟೆಯ ಅನಾರೋಗ್ಯ ಕಾಡುವುದೇಕೆ?
Health Tips: ಬೇಸಿಗೆಯಲ್ಲಿ ಹೊಟ್ಟೆನೋವು, ವಾಂತಿ, ಡಯರಿಯಾ ಸೇರಿದಂತೆ ಹಲವು ರೀತಿಯ ಹೊಟ್ಟೆಯ ಸಮಸ್ಯೆಗಳು ಹೆಚ್ಚುವುದನ್ನು ಕಾಣುತ್ತೇವೆ. ಹೊಟ್ಟೆಯ ಅನಾರೋಗ್ಯ ಬೇಸಿಗೆಯಲ್ಲೇ ಕಾಡುವುದೇಕೆ? ಸಮಸ್ಯೆ ಇರುವುದು ಋತುವಿನಲ್ಲೋ ಅಥವಾ ನಮ್ಮ ಆಹಾರದ ದೋಷವೋ? ನಿಮ್ಮೆಲ್ಲ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಬೇಸಿಗೆ (Summer)ಯಲ್ಲಿ ಹೊಟ್ಟೆನೋವು, ವಾಂತಿ, ಡಯರಿಯಾ (Diarrhea) ಸೇರಿದಂತೆ ಹಲವು ರೀತಿಯ ಹೊಟ್ಟೆಯ ಸಮಸ್ಯೆಗಳು ಹೆಚ್ಚುವುದನ್ನು ಕಾಣುತ್ತೇವೆ. ಹಾಗೆ ನೋಡಿದರೆ ಎಲ್ಲಕ್ಕಿಂತ ಹೆಚ್ಚು ತಿನ್ನುವ ಕಾಲವೆಂದರೆ ಚಳಿಗಾಲ. ಬೆಚ್ಚಗೆ, ಹಿತವಾಗಿರಬೇಕೆಂದು ಸಿಹಿ ತಿನಿಸುಗಳು, ಕರಿದ ತಿಂಡಿಗಳು ಇತ್ಯಾದಿಗಳು ಹೆಚ್ಚು ಹೊಟ್ಟೆ ಸೇರುವುದು ವಾತಾವರಣದಲ್ಲಿ ಚಳಿಯಿದ್ದಾಗ. ಅಂಥ ಕಾಲದಲ್ಲಿ ಕಾಣದ ಹೊಟ್ಟೆಯ ಅನಾರೋಗ್ಯ ಬೇಸಿಗೆಯಲ್ಲೇ ಕಾಡುವುದೇಕೆ? (Summer Health Tips) ಸಮಸ್ಯೆ ಇರುವುದು ಋತುವಿನಲ್ಲೋ ಅಥವಾ ನಮ್ಮ ಆಹಾರದ ದೋಷವೋ?
ಬೇಸಿಗೆ ಸುಡುವುದಕ್ಕೇ ಆರಂಭವಾಗಿದೆ. ಇಂಥ ದಿನಗಳಲ್ಲಿ ಒಂದು ತಂಪಾದ ಲಸ್ಸಿ, ತಣ್ಣಗಿನ ಮಿಲ್ಕ್‌ಶೇಕ್, ಬಾಯಲ್ಲೇ ಕರಗುವ ಐಸ್‌ಕ್ರೀಮ್, ಐಸ್‌ಟೀ, ಬಬಲ್ ಟೀ, ಕೋಲ್ಡ್ ಕಾಫಿ, ಫ್ರೂಟ್ ಜ್ಯೂಸ್‌ಗಳು… ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಮಸ್ಯೆಯೆಂದರೆ ಇವು ಯಾವುದೂ ಮನೆಯಲ್ಲಿ ತಯಾರಾಗುವಂಥದ್ದಲ್ಲ. ಎಲ್ಲೋ ಯಾರೋ ತಯಾರಿಸಿದ್ದನ್ನು ಸೇವಿಸಿದಾಗ ಹಿತ ಎನಿಸಿದರೂ, ನಂತರ ಹೊಟ್ಟೆ ತಡಬಡಾಯಿಸುವುದು ಸಾಮಾನ್ಯ. ಇದೊಂದೇ ಕಾರಣಕ್ಕೆ ಹೊಟ್ಟೆಯ ಅನಾರೋಗ್ಯ ಕಾಡುತ್ತದೆಯೇ ಅಥವಾ ಬೇರೇನೋ ಉಂಟೋ? ಹೊಟ್ಟೆಯನ್ನು ತಂಪಾಗಿರಿಸಿಕೊಂಡು ಬೇಸಿಗೆ ಕಳೆಯಲಾಗದೇ? ಅದಕ್ಕೇನು ಮಾಡಬೇಕು?
ಈ ಸುದ್ದಿಯನ್ನೂ ಓದಿ: Watermelon: ಕಲ್ಲಂಗಡಿ ತಿಂದ ಮೇಲೆ ಈ ಆಹಾರ ಸೇವಿಸುವ ಅಭ್ಯಾಸ ನಿಮಗಿದ್ರೆ ಇಂದೇ ಬಿಟ್ಟು ಬಿಡಿ!
ನೀರು: ದೇಹಕ್ಕೆ ನೀರಿನಂಶ ಕಡಿಮೆಯಾಗುತ್ತಿದ್ದಂತೆ ಹೊಟ್ಟೆ ನೋವು, ವಾಂತಿ, ಡಯರಿಯಾ, ಮಲಬದ್ಧತೆ ಮುಂತಾದ ಏನಕ್ಕೇನೋ ಸಮಸ್ಯೆಗಳು ಉಲ್ಭಣಿಸುತ್ತವೆ. ಹಾಗಾಗಿ ಬೇಸಿಗೆಯಲ್ಲಿ ಹೊಟ್ಟೆಯನ್ನು ಶಾಂತವಾಗಿಸುವುದಕ್ಕೆ ಮೊದಲು ಬೇಕಾಗಿರುವುದು ದಿನಕ್ಕೆ 10 ಗ್ಲಾಸ್ ನೀರು. ಶರೀರಕ್ಕೆ ಬೇಕಾದಷ್ಟು ನೀರುಣಿಸಿಬಿಟ್ಟರೆ ಮತ್ತೆ ಕಂಡಿದ್ದನ್ನೆಲ್ಲ ನಾಲಿಗೆ ಬೇಡುವುದೇ ಇಲ್ಲ. ಹೌದೋ ಅಲ್ಲವೋ ನೀವೇ ಪರೀಕ್ಷಿಸಿ ನೋಡಿ.
ಗುಜರಿ ತಿಂಡಿ: ಕರಿದ ತಿಂಡಿಗಳು ಮತ್ತು ಚಾಟ್‌ಗಳು ಈ ಪಟ್ಟಿಯಲ್ಲಿ ಪ್ರಧಾನ ಸ್ಥಾನ ಪಡೆಯುತ್ತವೆ. ಸಂಜೆಯ ನಾಲಿಗೆಯ ಚಪಲಕ್ಕೆ ಇದೇ ಬೇಕೆಂದರೆ ಅಜೀರ್ಣ, ಗ್ಯಾಸ್, ಆಸಿಡಿಟಿಯ ತೊಂದರೆಗಳು ನಿತ್ಯ ಸಂಗಾತಿಗಳಾಗಬಹುದು. ಹಾಗಾಗಿ ಜಂಕ್ ತಿಂಡಿಗಳಿಗೆ ಕಡಿವಾಣ ಹಾಕಿ. ಸುಲಭವಾಗಿ ಪಚನವಾಗುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಬೇಸಿಗೆಯ ಬಿಸಿ ಹೊಟ್ಟೆಗೆ ತಟ್ಟದಂತೆ ಇರಬಹುದು.
ಶುಚಿತ್ವ: ನೀರು ಮತ್ತು ಆಹಾರ ಶುದ್ಧವಾಗಿರಲಿ. ಬೇಸಿಗೆಯ ಸಲಾಡ್ ಹಿತವೆನಿಸಬಹುದು. ಆದರೆ ಹಸಿ ತರಕಾರಿಗಳನ್ನು, ಹಣ್ಣುಗಳನ್ನು ಶುದ್ಧ ನೀರಲ್ಲಿ ತೊಳೆದು ಬಳಸಬೇಕು. ಬಾಯಾರಿಕೆಯ ನೆವದಲ್ಲಿ ಸಿಕ್ಕಿದ ತಂಪು ಪೇಯಗಳನ್ನು ಕುಡಿದರೆ ಆರೋಗ್ಯಕ್ಕೆ ಖಂಡಿತಕ್ಕೂ ಆಪತ್ತು. ಹಾಗಾಗಿ ಶುದ್ಧ ನೀರು, ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಿ. ಬೀದಿ ಬದಿಯ ಯಾವುದೇ ತಿನಿಸುಗಳು ಕ್ಷೇಮವಲ್ಲ; ಇದರಿಂದ ಹೊಟ್ಟೆಗೆ ಸೋಂಕಾಗಬಹುದು.
ಮನೆಯೂಟ: ಇದಕ್ಕಿಂತ ದೊಡ್ಡ ಸಂಜೀವಿನಿ ಇನ್ನೊಂದಿಲ್ಲ. ಬಿಸಿಲಿನ ದಿನಗಳಿಗೆ ಅನುಕೂಲವಾಗುವಂಥ ಆಹಾರವನ್ನು ರುಚಿ-ಶುಚಿಯಾಗಿ ಮನೆಯಲ್ಲಿ ನಾವೇ ಮಾಡಿಕೊಳ್ಳುವುದು ಎಲ್ಲಕ್ಕಿಂತ ಒಳ್ಳೆಯದು. ಯಾವ ದಿನಕ್ಕೆ ಎಂಥಾ ಆಹಾರ ಪಚನವಾಗಬಹುದೆಂಬ ನಮ್ಮ ಹೊಟ್ಟೆಯ ಸ್ಥಿತಿ ಅರ್ಥವಾಗುವುದು ನಮಗೆ ಮಾತ್ರವಲ್ಲವೇ? ಖಾರ, ಮಸಾಲೆಯ ಆಹಾರದ ಬದಲು ರಸಭರಿತ ಕೋಸಂಬರಿ, ತಂಪಾದ ತಂಬುಳಿ, ಪಚ್ಚಡಿ, ರಾಯತ ಇತ್ಯಾದಿಗಳು ಹೊಟ್ಟೆಯನ್ನು ಸುಸ್ಥಿತಿಯಲ್ಲಿ ಇರಿಸಬಲ್ಲವು.
ಒತ್ತಡ ಬೇಡ: ಹೊಟ್ಟೆಗೆ ನೇರವಾಗಿ ಮೆದುಳಿನ ಜೊತೆಗೆ ಸಂಬಂಧವಿದೆ ಎನ್ನುವುದನ್ನು ಲೆಕ್ಕವಿಲ್ಲದಷ್ಟು ಅಧ್ಯಯನಗಳು ದೃಢಪಡಿಸಿವೆ. ಹಾಗಾಗಿ ಮನಸ್ಸು ನೆಮ್ಮದಿಯಲ್ಲಿ ಇದ್ದರಷ್ಟೇ ಹೊಟ್ಟೆಯೂ ನೆಮ್ಮದಿಯಲ್ಲಿ ಇದ್ದೀತು. ಇದಕ್ಕಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಮನಸ್ಸು ಉದ್ವೇಗದಲ್ಲಿರುವಾಗ ಅಜೀರ್ಣ, ಆಸಿಡಿಟಿ ಸಹಜ. ಇದನ್ನು ಕಡಿಮೆ ಮಾಡಲು ದೀರ್ಘ ಉಸಿರಾಟ, ಯೋಗ, ಧ್ಯಾನ, ಲಘು ವ್ಯಾಯಾಮಗಳು, ನಿಮ್ಮಿಷ್ಟದ ಯಾವುದೇ ದೈಹಿಕ ಚಟುವಟಿಕೆಗಳು ನೆರವಾಗಬಲ್ಲವು.