ಬೊಜ್ಜು ಕರಗಿಸುವುದು ಹೇಗೆ? ಏನು ಹೇಳುತ್ತಾರೆ ತಜ್ಞರು?
ಕೇವಲ ತಿನ್ನುವುದರಿಂದ ಬೊಜ್ಜು ಬರುವುದಿಲ್ಲ ಅಥವಾ ಕೇವಲ ಪಥ್ಯೆ, ವ್ಯಾಯಾಮ ಮಾಡಿ ಬೊಜ್ಜು ಕರಗಿಸಲು ಕೂಡ ಆಗುವುದಿಲ್ಲ. ದಪ್ಪವಾಗಲು, ಸಣ್ಣವಾಗಲು ನಾವು ದೇಹದ ಮೇಲೆ ಮಾಡುವ ಪ್ರಯೋಗಗಳು ತುಂಬಾನೇ ಅಪಾಯಕಾರಿ. ಬೊಜ್ಜು ಕರಗಿಸುವ ಮುನ್ನ ಅದು ಯಾಕೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ.
ಡಾ. ಸುತ್ತೂರು ಮಾಲಿನಿ -
ಬೆಂಗಳೂರು: ಬೊಜ್ಜಿಗೆ (obesity control tips) ಕಾರಣ ಕೇವಲ ನಮ್ಮ ಆಹಾರ ಸೇವನೆ ಕ್ರಮ ಅಲ್ಲವೇ ಅಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಆಹಾರ ಸೇವನೆ ಕ್ರಮವು ಒಂದು. ಕೇವಲ ಹೆಚ್ಚು ತಿನ್ನೋವುದರಿಂದ ಬೊಜ್ಜು (obesity problem) ಬರುವುದಿಲ್ಲ. ಇವತ್ತು ಬೊಜ್ಜಿಗೆ ಮೂಲ ಕಾರಣ ಆಹಾರದಲ್ಲಿ ಹೆಚ್ಚಾಗಿರುವ ಸಕ್ಕರೆ, ಉಪ್ಪು, ಕೊಬ್ಬಿನಂಶಗಳು ಕೂಡ ಸೇರಿವೆ. ಪದೇ ಪದೇ ಹೆಚ್ಚು ದಪ್ಪ, ತುಂಬಾ ತೆಳ್ಳಗೆ ಆಗುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ.'ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಬೊಜ್ಜು ಎಲ್ಲ ಕಾಯಿಲೆಗಳ ಮೂಲ ಎಂದು ಹೇಳಿದರು.
ಸಾಮಾನ್ಯವಾಗಿ ದಪ್ಪ ಇರುವವರು ಹೆಚ್ಚಾಗಿ ಕಡಿಮೆ ಆಹಾರ ಸೇವನೆ ಮಾಡುತ್ತಾರೆ. ಹೀಗಾಗಿ ಆಹಾರವೊಂದೇ ದಪ್ಪ ಆಗಲು ಕಾರಣವಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ದಪ್ಪ ಆಗಲು ಮೆದುಳಿನಲ್ಲಿ ಆಗುವ ಸಾಕಷ್ಟು ಬದಲಾವಣೆಗಳು, ಹಾರ್ಮೋನ್, ಜೀವಕೋಶಗಳು ಕೂಡ ಕಾರಣವಾಗಿರುತ್ತದೆ. ಇವೆಲ್ಲವೂ ದೇಹದಲ್ಲಿ ಪರಸ್ಪರ ಸಹಕಾರವಾಗಿ ಕಾರ್ಯನಿರ್ವಹಿಸಿದರೆ ಬೊಜ್ಜು ಉಂಟಾಗುವುದಿಲ್ಲ ಎಂದು ಹೇಳಿದರು.
ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಅಂತ ತಿಳಿದುಕೊಳ್ಬೇಕಾ?
ಬೊಜ್ಜು ಯಾಕೆ ಉಂಟಾಗುತ್ತದೆ ಎಂಬುದನ್ನು ನಾವು ತಿಳಿಯಲು ಆದಿ ಮಾನವನ ಜೀವನ ಶೈಲಿ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದ ಅವರು ಆಗಿನ ಕಾಲದಲ್ಲಿ ಆಹಾರ ಸಿಗುವುದು ತುಂಬಾ ಕಷ್ಟವಾಗಿತ್ತು. ಶೇಖರಣೆ ಮಾಡುವುದು ಕೂಡ ಗೊತ್ತಿರಲಿಲ್ಲ. ಎಷ್ಟೋ ಜನರು ಆಗ ಹಸಿವಿನಿಂದ ಸತ್ತು ಹೋಗಿದ್ದಾರೆ. ಹೀಗಾಗಿ ಇದರಿಂದ ಮಾನವನ ಮೆದುಳಿನಲ್ಲಿ ಆಗಿರುವ ಬದಲಾವಣೆಯ ಕಾರಣದಿಂದ ದೇಹದಲ್ಲಿ ಆಹಾರ ಶೇಖರಣೆಯ ವ್ಯವಸ್ಥೆ ಹುಟ್ಟಿಕೊಂಡಿತು ಎನ್ನುತ್ತಾರೆ ಅವರು.
ಸಾಮಾನ್ಯವಾಗಿ ಪರಿಸರಕ್ಕೆ ತಕ್ಕಂತೆ ಪ್ರತಿಯೊಂದು ಜೀವಿಯ ಮೆದುಳಿನಲ್ಲಿ ಬೆಳವಣಿಗೆ ಆಗುತ್ತಿರುತ್ತದೆ. ಇದಕ್ಕಾಗಿ ಹಲವಾರು ಲಕ್ಷ ವರ್ಷಗಳೇ ಬೇಕಾಗುತ್ತದೆ. ದೇಹದಲ್ಲಿ ಬೊಜ್ಜು ಶೇಖರಣೆಯಾಗುವುದು ಸರವೈವಲ್ ಮೆಕಾನಿಸಂ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿ ದೇಹದಲ್ಲಿ ಇರುವ ಸ್ಟೋರ್ ರೂಮ್. ಇವುಗಳನ್ನು ಬೊಜ್ಜಿನ ಜೀವಕೋಶಗಳು ಎನ್ನಲಾಗುತ್ತದೆ. ಆದಿ ಮಾನವನ ಜೀವನ ಶೈಲಿಯಲ್ಲಿ ಸತತ ಚಲನೆ, ಉಪವಾಸ ಇರುತ್ತಿತ್ತು. ಆಗ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತಿರಲಿಲ್ಲ. ಹೀಗಾಗಿ ಆಗ ಆಗಿರುವ ಮೆದುಳಿನ ಬೆಳವಣಿಗೆ ಈಗಲೂ ಇದೆ. ಹೀಗಾಗಿ ಇವತ್ತಿಗೂ ಮಾನವನಲ್ಲಿ ಬೊಜ್ಜಿನ ಶೇಖರಣೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಇವತ್ತು ನಮ್ಮೆಲ್ಲರ ಜೀವನ ಹೆಚ್ಚು ಸಂಸ್ಕರಿಸಿದ ಆಹಾರಗಳಿಂದ ಕೂಡಿದೆ. ಹೀಗಾಗಿ ಈಗಿನ ಆಹಾರಕ್ಕೆ ತಕ್ಕಂತೆ ನಮ್ಮ ದೇಹದ ಬೆಳವಣಿಗೆ ಆಗಿಲ್ಲ. ಇದರಿಂದ ದೇಹದಲ್ಲಿ ಶೇಖರಣೆಯಾಗುವ ಫ್ಯಾಟ್ ಸೆಲ್ ಗಳು ಬಿಡುಗಡೆ ಮಾಡುವ ಹಾರ್ಮೋನ್ ಗಳಿಂದ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಉಂಟು ಮಾಡುತ್ತಿದೆ ಎಂದು ಅವರು ತಿಳಿಸಿದರು.
ನಮ್ಮ ಮೆದುಳು ಸುಲಭವಾಗಿ ಬೊಜ್ಜು ಕರಗಿಸಲು ಬಿಡುವುದಿಲ್ಲ. ಯಾಕೆಂದರೆ ಅದು ಬೊಜ್ಜು ಕರಗಿಸುವುದು ಎಂದರೆ ಸಾವು ಎಂದೇ ಭಾವಿಸುತ್ತದೆ. ದೇಹದ ತೂಕ ಇಳಿಸುವುದು ಅಪಾಯಕಾರಿ ಎಂದು ಮೆದುಳು ಪರಿಗಣಿಸುತ್ತದೆ. ಒಂದು ವೇಳೆ ಕಟ್ಟುನಿಟ್ಟಿನ ದಿನಚರಿ ಪಾಲಿಸಿ ವೇಗವಾಗಿ ನಾಲ್ಕು ಕೆಜಿ ಬೊಜ್ಜು ಇಳಿಕೆ ಮಾಡಿದರೂ ಅದಕ್ಕಿಂತ ಹೆಚ್ಚಿನ ತೂಕ ಇಳಿಸಲು ಕನಿಷ್ಠ ಆರರಿಂದ ಒಂದು ವರ್ಷ ಕಾಲ ಬೇಕಾಗುತ್ತದೆ. ಸತತ ಆರು ತಿಂಗಳು ಕಟ್ಟುನಿಟ್ಟಿನ ದಿನಚರಿ ಪಾಲಿಸಿದರೆ ನಿಧಾನವಾಗಿ 10 ಗ್ರಾಮ್ ಇಳಿಯಲು ಪ್ರಾರಂಭವಾಗುತ್ತದೆ ಎಂದು ಹೇಳಿದರು.
ಸುಮಾರು ಒಂದು ವರ್ಷ ಒಂದೇ ರೀತಿಯ ದಿನಚರಿ ಪಾಲಿಸಿದರೆ ಸ್ವಲ್ಪ ಮಟ್ಟದಲ್ಲಿ ದೇಹದ ತೂಕವನ್ನು ಇಳಿಸಬಹುದು ಎಂದ ಅವರು, ಎರಡರಿಂದ ಮೂರು ಲಕ್ಷ ವರ್ಷಗಳ ಹಿಂದೆ ಮಾನವನ ಉಗಮ ಆಗಿರುವುದು. ಆಗ ಆಗಿರುವ ಮೆದುಳಿನ ಬೆಳವಣಿಗೆ ಬದಲಾಗಬೇಕು ಎಂದರೆ ಇನ್ನೊಂದು ಎರಡರಿಂದ ಮೂರು ಲಕ್ಷ ವರ್ಷಗಳು ಬೇಕಾಗುತ್ತದೆ ಎಂದು ತಿಳಿಸಿದರು.
ದೇಹದಲ್ಲಿ ಹೆಚ್ಚಿನ ಬೊಜ್ಜು ಶೇಖರಣೆಯಾಗುವುದರಿಂದ ಡಯಾಬಿಟಿಸ್, ಫ್ಯಾಟಿ ಲಿವರ್, ಬಂಜೆತನ, ಕ್ಯಾನ್ಸರ್ ಮೊದಲಾದ ಸಮಸ್ಯೆಗಳು ಉಂಟಾಗುತ್ತದೆ. ಬೊಜ್ಜು ಯಾಕೆ ಉಂಟಾಗುತ್ತದೆ ಎಂಬುದಕ್ಕೆ ನಾವು ನಮ್ಮ ಹಿರಿಯರನ್ನು ನೋಡಬೇಕು. ಅವರಲ್ಲಿ ಬೊಜ್ಜು ಇದ್ದರೆ ನಾವು ಸಣ್ಣ ವಯಸ್ಸಿನಲ್ಲೇ ಜೀವನ ಶೈಲಿಯಲ್ಲಿ ಶಿಸ್ತು ಪಾಲಿಸಬೇಕು. ಇದರಿಂದ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ ಎನ್ನುತ್ತಾರೆ ಅವರು.
Vishwavani Health: ಮಕ್ಕಳಾಗದಿರಲೂ ಬೊಜ್ಜು ಕಾರಣ; ಆಘಾತಕಾರಿ ಅಂಶ ಬಿಚ್ಚಿಟ್ಟ ತಜ್ಞರು
ಪದೇ ಪದೇ ದಪ್ಪವಾಗುವುದು, ಸಪೂರವಾಗುವುದರಿಂದ ಚರ್ಮ ಹಾಳಾಗುತ್ತದೆ. ಸಿನಿಮಾ ತಾರೆಯರನ್ನು ನೋಡಿ ದೇಹದ ಮೇಲೆ ಪ್ರಯೋಗ ಮಾಡುವುದು ಸರಿಯಲ್ಲ. ಆರೋಗ್ಯವಾಗಿರಲು ದೇಹದ ತೂಕ ಎಷ್ಟಿರಬೇಕು ಅಷ್ಟನ್ನು ನಾವು ನಿರ್ವಹಿಸದರೆ ಸಾಕು ಎನ್ನುತ್ತಾರೆ ಸುತ್ತೂರು ಮಾಲಿನಿ.