ಇಂದು ವಿಶ್ವ ಆರೋಗ್ಯ ದಿನ: ಇತಿಹಾಸದಿಂದ ಥೀಮ್‌ವರೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ
World Health Day 2026: ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಆರೋಗ್ಯದ ಮಹತ್ವ ಮತ್ತು ಸಮಾನ ಆರೋಗ್ಯ ಸೇವೆಗಳ ಅಗತ್ಯವನ್ನು ಒತ್ತಿಹೇಳುವ ಈ ದಿನಕ್ಕೆ 2026ರಲ್ಲಿ ʼಮಾನಸಿಕ ಆರೋಗ್ಯವೇ ಅಸಲಿ ಶಕ್ತಿʼ ಎಂಬ ಥೀಮ್ ಆಯ್ಕೆ ಮಾಡಲಾಗಿದೆ. ಮಾನಸಿಕ ಸ್ವಾಸ್ಥ್ಯ, ಒತ್ತಡ ನಿಯಂತ್ರಣ ಮತ್ತು ಸಮಗ್ರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ವರ್ಷದ ಪ್ರಮುಖ ಉದ್ದೇಶ.
ವಿಶ್ವ ಆರೋಗ್ಯ ದಿನ -
ಬೆಂಗಳೂರು, ಏ. 7: ಆರೋಗ್ಯವು ಮಾನವ ಜೀವನಕ್ಕೆ ಅತಿ ಮುಖ್ಯ ಆಧಾರ. ಆರೋಗ್ಯವಿಲ್ಲದೆ ಜೀವನದಲ್ಲಿ ಯಾವುದೇ ಗುರಿ ಸಾಧಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆಸ್ತಿ, ಹಣ, ಸ್ಥಾನಮಾನ ಎಲ್ಲವೂ ಇದ್ದರೂ ಆರೋಗ್ಯ ಇಲ್ಲದಿದ್ದರೆ ಅವುಗಳೆಲ್ಲವೂ ಅರ್ಥಹೀನ. ಆದ್ದರಿಂದಲೇ ಆರೋಗ್ಯವೇ ನಿಜವಾದ ಸಂಪತ್ತು ಎಂದು ಹೇಳಲಾಗುತ್ತದೆ. ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ, ಅಸಮತೋಲನ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಮಾಲಿನ್ಯದಿಂದ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ತುರ್ತು ಅಗತ್ಯ ಎನಿಸಿಕೊಂಡಿದೆ. ಈ ಅಗತ್ಯವನ್ನು ಮನಗಂಡು ಪ್ರತಿ ವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು(World Heath Day) ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.
ಈ ದಿನವು ಕೇವಲ ಆಚರಣೆ ಮಾತ್ರವಲ್ಲದೆ, ಉತ್ತಮ ಆರೋಗ್ಯ ಸೇವೆಗಳ ಲಭ್ಯತೆ, ಆರೋಗ್ಯ ಅಸಮಾನತೆಗಳ ನಿವಾರಣೆ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಒತ್ತಿಹೇಳುವ ಜಾಗತಿಕ ಚಳುವಳಿ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ವರ್ಷ ವಿಭಿನ್ನ ಥೀಮ್ ಮೂಲಕ ಜಗತ್ತಿನ ಪ್ರಮುಖ ಆರೋಗ್ಯ ಸಮಸ್ಯೆಗಳತ್ತ ಗಮನ ಸೆಳೆಯುತ್ತದೆ.
ಇತಿಹಾಸ
1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ 61 ದೇಶಗಳು ವಿಶ್ವ ಆರೋಗ್ಯ ಸಂಸ್ಥೆ (WHO) ಸ್ಥಾಪನೆಗೆ ಒಪ್ಪಿಗೆ ಸೂಚಿಸಿ ಒಪ್ಪಂದಕ್ಕೆ ಸಹಿ ಹಾಕಿದವು. ಈ ನಿರ್ಣಯದ ಭಾಗವಾಗಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವುದಾಗಿ ತೀರ್ಮಾನಿಸಲಾಯಿತು.
ಆರಂಭದಲ್ಲಿ 1949ರ ಜುಲೈ 22ರಂದು ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ನಂತರ, ವಿಶ್ವ ಆರೋಗ್ಯ ಸಂಸ್ಥೆಯ ಸ್ಥಾಪನೆಯ ದಿನವಾದ ಏಪ್ರಿಲ್ 7 ಅನ್ನು ಈ ದಿನವಾಗಿ ನಿಗದಿಪಡಿಸಲಾಯಿತು.
1950ರಿಂದ ಏಪ್ರಿಲ್ 7ರಂದು ಪ್ರತಿವರ್ಷ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. WHO ರಚನೆಗೆ ಅಧಿಕೃತವಾಗಿ ಸಹಿ ಹಾಕಿದ ಮಹತ್ವದ ಕ್ಷಣವನ್ನು ಸ್ಮರಿಸುವುದಾಗಿ ಇದರ ಉದ್ದೇಶ.
ಈ ವರ್ಷದ ಥೀಮ್ ಏನು?
2026ರ ವಿಶ್ವ ಆರೋಗ್ಯ ದಿನದ ಥೀಮ್ ʼಮಾನಸಿಕ ಆರೋಗ್ಯವೇ ಅಸಲಿ ಶಕ್ತಿʼ (Mental Health is Real Strength). ದೈಹಿಕ ಫಿಟ್‌ನೆಸ್‌ನಷ್ಟೇ ಮಾನಸಿಕ ಸ್ವಾಸ್ಥ್ಯ, ಒತ್ತಡ ನಿರ್ವಹಣೆ ಮತ್ತು ಭಾವನಾತ್ಮಕ ಸಮತೋಲನವು ಸಮಗ್ರ ಆರೋಗ್ಯಕ್ಕೆ ಮುಖ್ಯ ಎಂಬುದನ್ನು ಈ ವರ್ಷದ ಅಭಿಯಾನವು ಒತ್ತಿ ಹೇಳುತ್ತದೆ.
ವಿಶ್ವ ಆರೋಗ್ಯ ದಿನದ ಉದ್ದೇಶ
ಜನರಲ್ಲಿ ಆರೋಗ್ಯದ ಮಹತ್ವವನ್ನು ತಿಳಿಸುವುದು ಮತ್ತು ಆರೋಗ್ಯದ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಆರೋಗ್ಯ ದಿನದ ಪ್ರಮುಖ ಉದ್ದೇಶ. ಈ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಮತ್ತು ಅಭಿಯಾನಗಳ ಮೂಲಕ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸರ್ಕಾರಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಈ ದಿನದಂದು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಜನರಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ಅರಿವು ಹೆಚ್ಚಿಸುವ ಕಾರ್ಯ ಮಾಡುತ್ತದೆ.