ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BOB Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿದೆ 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆ; ಹೀಗೆ ಅಪ್ಲೈ ಮಾಡಿ

Bank Jobs: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 2,500 ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ 450 ಹುದ್ದೆಗಳನ್ನು ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ಜು. 24.

2,500 ಹುದ್ದೆಗಳ ಭರ್ತಿಗೆ ಬ್ಯಾಂಕ್ ಆಫ್ ಬರೋಡಾದಿಂದ ಅರ್ಜಿ ಆಹ್ವಾನ

Profile Ramesh B Jul 9, 2025 4:52 PM

ಬೆಂಗಳೂರು: ಭಾರತದಲ್ಲಿ ವೃತ್ತಿಯನ್ನು ಆರಿಸಿಕೊಳ್ಳುವ ಹೊಸಬರಿಗೆ ಮತ್ತು ಅನುಭವಿ ವೃತ್ತಿಪರರಿಗೆ ಬ್ಯಾಂಕಿಂಗ್‌ ಹುದ್ದೆ ಅತ್ಯಂತ ಪ್ರತಿಷ್ಠಿತ ಉದ್ಯೋಗಗಳಲ್ಲಿ ಒಂದಾಗಿದೆ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ (Bank of Baroda) ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ (BOB Recruitment 2025). ಒಟ್ಟು 2,500 ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ 450 ಹುದ್ದೆಗಳನ್ನು ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿ ಪರಿಣತಿ ಹೊಂದಿದವರಿಗೆ ಮಾತ್ರ ಈ ಉದ್ಯೋಗ ನೀಡಲಾಗುತ್ತದೆ.

ಹುದ್ದೆಗಳ ಸಂಖ್ಯೆ: ರಾಜ್ಯಕ್ಕೆ ಮೀಸಲಿಟ್ಟ ಒಟ್ಟು 450 ಹುದ್ದೆಗಳಲ್ಲಿ ಸಾಮಾನ್ಯ ವರ್ಗದವರಿಗೆ 184, ಆರ್ಥಿಕ ದುರ್ಬಲ ವರ್ಗದವರಿಗೆ 45, ಇತರ ಹಿಂದುಳಿದ ವರ್ಗದವರಿಗೆ 121, ಎಸ್ಟಿ 33 ಹಾಗೂ ಎಸ್ಸಿ ಅಭ್ಯರ್ಥಿಗಳಿಗೆ 67 ಹುದ್ದೆಗಳನ್ನು ಮೀಸಲಿಡಲಾಗಿದೆ. ಅಧಿಕಾರಿಗಳ ವೃಂದದಲ್ಲಿ ಮಾಜಿ ಸೈನಿಕರಿಗೆ ಯಾವುದೇ ಮೀಸಲಾತಿ ಇಲ್ಲ.

ಹುದ್ದೆಯ ಹೆಸರು: ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್‌ -1

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಈಗಾಗಲೇ ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು ಜು. 24ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ವೇತನಶ್ರೇಣಿ: 48,480-85,920 ರೂ. ವಾಣಿಜ್ಯ ಬ್ಯಾಂಕ್ ಅಥವಾ ಯಾವುದೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕೆಲಸದ ಅನುಭವಕ್ಕಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಮುಂಗಡ ವೇತನ ಬಡ್ತಿ ನೀಡಲಾಗುತ್ತದೆ. ಆದಾಗ್ಯೂ, ಯಾವುದೇ ಸೇವಾ ಹಿರಿತನಕ್ಕೆ ಪೂರ್ವ ಅನುಭವವನ್ನು ಪರಿಗಣಿಸಲಾಗುವುದಿಲ್ಲ.ಇದಲ್ಲದೆ ಬ್ಯಾಂಕ್ ಹೆಚ್ಚುವರಿಯಾಗಿ, ವಿಶೇಷ ಭತ್ಯೆ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವಸತಿ ಕ್ವಾರ್ಟರ್ಸ್/ಲೀಸ್ ಬಾಡಿಗೆ, ಬ್ಯಾಂಕಿನ ನೀತಿಯ ಪ್ರಕಾರ ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ LFC, ಮರುಪಾವತಿಯಂತಹ ಇತರ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ. ಮತ್ತು ಇತರ ಭತ್ಯೆಗಳನ್ನು ಚಾಲ್ತಿಯಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಪಾವತಿಸಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ ಹಾಗೂ ಆರ್ಥಿಕ ದುರ್ಬಲ ಅಭ್ಯರ್ಥಿಗಳಿಗೆ: 850 ರೂ. ಪ.ಜಾ, ಪ.ಪಂ, ಮಹಿಳೆಯರು, ಮಾಜಿ ಸೈನಿಕರಿಗೆ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ 175 ರೂ. ಅಭ್ಯರ್ಥಿಗಳು ಆನ್ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ವಯೋಮಿತಿ: ಕನಿಷ್ಠ 21 ವರ್ಷ ಹಾಗೂ ಗರಿಷ್ಡ 30 ವರ್ಷಗಳಿಗಿಂತ ಹೆಚ್ಚಿರಬಾರದು. ಸರ್ಕಾರದ ನಿಯಮಾನುಸಾರ ಎಸ್.ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: SBI Recruitment 2025: ಎಸ್‌ಬಿಐ ಹುದ್ದೆಗೆ ನೇಮಕ ಹೇಗೆ? ಈ ಸಲದ ಪರೀಕ್ಷೆಯಲ್ಲಿ ಆದ ಮುಖ್ಯ ಬದಲಾವಣೆಗಳೇನು?

ಶೈಕ್ಷಣಿಕ ಅರ್ಹತೆ:

  • ಯಾವುದೆ ವಿಷಯಗಳಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವೈದ್ಯಕೀಯ, ಎಂಜಿನಿಯರಿಂಗ್, ಸಿ.ಎ. ಮಾಡಿದವರು ಕೂಡ ಅರ್ಜಿ ಸಲ್ಲಿಸಬಹುದು ಪದವಿಯ ಜತೆಯಲ್ಲಿ ಸ್ಥಳೀಯ ಭಾಷಾ ಜ್ಞಾನವನ್ನು (ಬರೆಯುವ, ಓದುವ ಮತ್ತು ಅರ್ಥಮಾಡಿಕೊಳ್ಳುವ) ಅಭ್ಯರ್ಥಿಯು ಹೊಂದಿರಬೇಕು.
  • ಒಂದು ವರ್ಷ ಯಾವುದೇ ವಾಣಿಜ್ಯ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಅಥವಾ ಆರ್ಬಿಐನಿಂದ ಅಂಗೀಕೃತವಾಗಿರುವ ಯಾವುದೇ ಬ್ಯಾಂಕ್ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕಿರುತ್ತದೆ. ಎನ್ಬಿಎಫ್ಸಿ, ಸಹಕಾರಿ, ಪೇಮೆಂಟ್ಸ್, ಸ್ಮಾಲ್ ಫೈನಾನ್ಸ್ ಬ್ಯಾಂಕ್ಗಳಲ್ಲಿನ ಅನುಭವವನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜತೆಗೆ, ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿ, ರಾಜೀನಾಮೆ ನೀಡಿದ, ಬ್ಯಾಂಕ್ ಕೆಲಸ ತೊರೆದವರು ಅರ್ಜಿ ಸಲ್ಲಿಸುವಂತಿಲ್ಲ. ಅಲ್ಲದೆ, ಉತ್ತಮ ಸಿಬಿಲ್ ಸ್ಕೋರ್ ಹೊಂದಿರಬೇಕು.ಸ್ಕೋರ್ ಹೊಂದಿರುವುದು ಅಗತ್ಯವಾಗಿದೆ. ಅಂತೆಯೇ, ಬ್ಯಾಂಕ್ ಆಫ್ ಬರೋಡಾ 680 ಸಿಬಿಲ್ ಸ್ಕೋರ್ ನಿಗದಿಪಡಿಸಿದೆ.

ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಕಲಬುರಗಿ, ಉಡುಪಿ, ಶಿವಮೊಗ್ಗ,ಮಂಗಳೂರು ಹಾಗೂ ಮೈಸೂರು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಮ್ಮ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

ಪರೀಕ್ಷಾ ಪೂರ್ವ ತರಬೇತಿ: ಬ್ಯಾಂಕ್ ವತಿಯಿಂದ ಎಸ್‌ಸಿ/ಎಸ್‌ಟಿ/ಒಬಿಸಿ/ಧಾರ್ಮಿಕ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಈ ತರಬೇತಿಯ ಅಗತ್ಯವಿದ್ದವರು ಅರ್ಜಿ ಸಲ್ಲಿಸುವಾಗಲೇ ಅರ್ಜಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಬೇಕಾಗುತ್ತದೆ.

ಅಪ್‌ಲೋಡ್‌ ಮಾಡಬೇಕಾದ ದಾಖಲೆಗಳ ಪಟ್ಟಿ: ಸಂಕ್ಷಿಪ್ತ ರೆಸ್ಯೂಮ್, ಜನ್ಮ ದಿನಾಂಕದ ಪುರಾವೆ, ಎಡ ಹೆಬ್ಬೆರಳಿನ ಗುರುತು, ಕೈಬರಹದ ಘೋಷಣೆ, ಐಡಿ ಪುರಾವೆ, ಉದ್ಯೋಗ ಪ್ರೊಫೈಲ್ ( ಅಸ್ತಿತ್ವದಲ್ಲಿರುವ /ಹಿಂದಿನಉದ್ಯೋಗದಾತರು ಪ್ರಮಾಣೀಕರಿಸಿದ್ದು), ಶೈಕ್ಷಣಿಕ ಪ್ರಮಾಣಪತ್ರಗಳು - ಸಂಬಂಧಿತ ಅಂಕಗಳು- ಶೀಟ್‌ಗಳು/ ಪದವಿ/ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ/ ನೇಮಕಾತಿ ಪತ್ರ (ಎಲ್ಲವೂ PDF ರೂಪದಲ್ಲಿ)

ನೇಮಕಾತಿ ಪ್ರಕ್ರಿಯೆ ಹೇಗೆ?: ಮೊದಲಿಗೆ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆ ಪ್ರಕ್ರಿಯೆಯ ಭಾಗವಾಗಿ, ಅಭ್ಯರ್ಥಿಗಳು ಸೈಕೋಮೆಟ್ರಿಕ್ ಮೌಲ್ಯಮಾಪನಕ್ಕೆ ಒಳಗಾಗಬೇಕಾಗುತ್ತದೆ. ಬ್ಯಾಂಕ್ ಆಫ್ ಬರೋಡಾದ ಪ್ರಮುಖ ಮೌಲ್ಯಗಳೊಂದಿಗೆ ಅಭ್ಯರ್ಥಿಯ ಹೊಂದಾಣಿಕೆಯನ್ನು ನಿರ್ಧರಿಸಲು ಮತ್ತು ಮಾರಾಟ-ಸಂಬಂಧಿತ ಪಾತ್ರಗಳಿಗೆ ಅವರ ಯೋಗ್ಯತೆಯನ್ನು ನಿರ್ಣಯಿಸಲು ಈ ಮೌಲ್ಯಮಾಪನವನ್ನುವಿನ್ಯಾಸಗೊಳಿಸಲಾಗಿದೆ.ಬ್ಯಾಂಕಿನ ಪ್ರಮುಖ ಮೌಲ್ಯಗಳೊಂದಿಗೆ ಬಲವಾದ ಹೊಂದಾಣಿಕೆಯನ್ನು ಪ್ರದರ್ಶಿಸುವ ಮತ್ತು ಮಾರಾಟಕ್ಕಾಗಿ ನೈಸರ್ಗಿಕ ಸಾಮರ್ಥ್ಯವನ್ನು ಪ್ರದರ್ಶಿಸುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ವಿವರಣಾತ್ಮಕ ಪರೀಕ್ಷೆ/ಕೇಸ್ ಸ್ಟಡಿ ಮೂಲಕ ಸೇರ್ಪಡೆ/ಬದಲಿ ಸೇರಿದಂತೆ ಪರೀಕ್ಷೆಯ ರಚನೆಯನ್ನು ಮಾರ್ಪಡಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.

ನೆನಪಿಡಿ: ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಿ, ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಈ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿರುತ್ತದೆ.

ಪರೀಕ್ಷೆಯ ಸ್ವರೂಪ: ಅನ್‌ಲೈನ್‌ ಪರೀಕ್ಷೆ, ಸೈಕೋಮ್ಯಾಟಿಕ್ ಟೆಸ್ಟ್ ಅಥವಾ ಇತರ ಯಾವುದೇ ಅಗತ್ಯವೆನಿಸಿದ ಪರೀಕ್ಷೆಗಳನ್ನು ನಡೆಸಲಾಗುವುದು. ಬಳಿಕ ಗುಂಪು ಚರ್ಚೆ / ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ 120 ಅಂಕದ 120 ಪ್ರಶ್ನೆಗಳಿಗೆ ಎರಡು ತಾಸಿನಲ್ಲಿ ಉತ್ತರಿಸಬೇಕಿರುತ್ತದೆ. ಇಂಗ್ಲಿಷ್, ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ/ಆರ್ಥಿಕ ತಿಳಿವು, ರೀಸನಿಂಗ್ ಎಬಿಲಿಟಿ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಕುರಿತ ಪ್ರಶ್ನೆಗಳಿದ್ದು, ಹಿಂದಿ ಅಥವಾ ಇಂಗ್ಲಿಷ್ನಲ್ಲಿರುತ್ತವೆ.

ಆನ್‌ಲೈನ್ ಪರೀಕ್ಷೆಯು 120 (30x4)ಅಂಕಗಳಿಗೆ ನಡೆಯಲಿದ್ದು, ನಾಲ್ಕು ವಿಭಾಗಗಳನ್ನು ಹೊಂದಿರುತ್ತದೆ. ಅವುಗಳೆಂದರೆ:

  • ಇಂಗ್ಲಿಷ್ ಭಾಷೆ (English Language)
  • ಬ್ಯಾಂಕಿಂಗ್ ಕ್ಷೇತ್ರದ ಜ್ಞಾನ (Banking Knowledge)
  • ಸಾಮಾನ್ಯಜ್ಞಾನ/ಆರ್ಥಿಕತೆ(General / Economy Awareness)
  • ತಾರ್ಕಿಕ ಸಾಮರ್ಥ್ಯ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ (Reasoning Ability & Quantitative Aptitude) ಒಟ್ಟು 120 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆ ಬರೆಯಲು 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಇದರಲ್ಲಿ ಬ್ಯಾಂಕ್ ನಿಗದಿಪಡಿಸಿರುವಷ್ಟು ಕನಿಷ್ಠ ಅಂಕ ಪಡೆದ ಅಭ್ಯರ್ಥಿಗಳನ್ನು ಮಾತ್ರ ನೇಮಕಕ್ಕೆ ಪರಿಗಣಿಸಲಾಗುತ್ತದೆ.

ಋಣಾತ್ಮಕ ಮೌಲ್ಯಮಾಪನ ಇದೆ: ಆನ್‌ಲೈನ್‌ ಪರೀಕ್ಷೆಯ ವಸ್ತುನಿಷ್ಠ ಮಾದರಿಯಲ್ಲಿ ನಡೆಯುವ ಈ ಪರೀಕ್ಷೆಯ ಪ್ರತಿ ವಿಭಾಗದಲ್ಲಿಯೇ ಇಂತಿಷ್ಟೇ ಅಂಕ ಪಡೆದಿರಲೇಬೇಕೆಂಬ ನಿಯಮ ಇದ್ದು ಕನಿಷ್ಠ ಅರ್ಹತಾ ಅಂಕಗಳು/ಪ್ರತಿ ವಿಭಾಗದಲ್ಲಿ ಅಂಕಗಳ ಶೇಕಡಾವಾರು ಸಾಮಾನ್ಯ ಮತ್ತು ಇಡಬ್ಲ್ಯುಎಸ್‌ ವರ್ಗಕ್ಕೆ 40% ಮತ್ತು ಮೀಸಲು ವರ್ಗಗಳಿಗೆ 35% ಆಗಿರುತದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತ್ತು ರ್ಯಾಂಕ್ ಪಟ್ಟಿಯನ್ನು ರಚಿಸಲು ವಿಭಾಗ 1,2,3 ಮತ್ತು 4 ರ ಸಂಚಿತ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಅಂತೆಯೇ 0.25 ಋಣಾತ್ಮಕ ಮೌಲ್ಯಮಾಪನ ಇದೆ.

ಗಮನಿಸಿ: ಕನ್ನಡದಲ್ಲಿ ಪರೀಕ್ಷೆ ನಡೆಯೊಲ್ಲ.

ನಿಯೋಜನೆ ಹೇಗೆ?: ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಿರುವ ರಾಜ್ಯಕ್ಕೆ ನೇಮಿಸಲಾಗುತ್ತದೆ. 12 ವರ್ಷದ ಬಳಿಕ ಅಥವಾ ಎಸ್ಎಂಜಿಎಸ್-4ನೇ ಗ್ರೇಡ್‌ಗೆ ಪದೋನ್ನತಿ ಬಳಿಕ ಬೇರೆ ರಾಜ್ಯಕ್ಕೆ ವರ್ಗಾಯಿಸಬಹುದು.

ಪ್ರೊಬೇಷನ್ ಅವಧಿ: ಆಯ್ಕೆಯಾದವರು ಒಂದು ವರ್ಷದ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಬೇಕಿದೆ. ಜತೆಗೆ ಕನಿಷ್ಠ ಮೂರು ವರ್ಷಗಳವರೆಗೆ ಸೇವೆ ಸಲ್ಲಿಸುವುದಾಗಿ ತಪ್ಪಿದಲ್ಲಿ ಬ್ಯಾಂಕ್ಗೆ 5 ಲಕ್ಷ ರೂ.ಗಳ ಪಾವತಿಸುವುದಾಗಿ ಸೇವಾ ಬಾಂಡ್ ಸಲ್ಲಿಸುವುದು ಕಡ್ಡಾಯವಾಗಿದೆ.

ಅರ್ಜಿ ಸಲ್ಲಿಸಲು ಹಾಗೂ ಅಧಿಸೂಚನೆಗೆ: www.bankofbaroda.co.in, www.Bankofbaroda.In/Career.Htm ವೆಬ್‌ಸೈಟ್‌ಗೆ ಭೇಟಿ ನೀಡಿ.