10 ನಗರಗಳಲ್ಲಿ ಉದ್ಯೋಗಾವಕಾಶ: ಲಿಂಕ್ಡ್ ಇನ್ ಸಿಟೀಸ್ ಆನ್ ದಿ ರೈಸ್ 2025 ವರದಿ ಬಿಡುಗಡೆ
ವಿಶಾಖಪಟ್ಟಣ (#1), ರಾಂಚಿ (#2), ವಿಜಯವಾಡ (#3), ನಾಸಿಕ್ (#4), ರಾಯ್‌ಪುರ್ (#5) ಈ ವರ್ಷದ ಟಾಪ್ 5 ಕರಿಯರ್ ಹಬ್ ಗಳಾಗಿ ಮೂಡಿ ಬಂದಿವೆ. ತಂತ್ರಜ್ಞಾನ, ಆರೋಗ್ಯ ಸೇವೆ, ಹಣಕಾಸು ಸೇವೆಗಳ ಕಂಪನಿಗಳು ಈ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಎಂಜಿನಿಯರಿಂಗ್, ಬಿಸಿನೆಸ್ ಡೆವಲಪ್ಮೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿವೆ


ಜಗತ್ತಿನ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್ ಇನ್ ತನ್ನ ಮೊದಲ ಸಿಟೀಸ್ ಆನ್ ದಿ ರೈಸ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದಲ್ಲಿ ಅತ್ಯುತ್ತಮ ಉದ್ಯೋಗಾವಕಾಶ ಮತ್ತು ಆರ್ಥಿಕ ಅವಕಾಶಗಳು ಒದಗಿ ಬರುತ್ತಿರುವ ಮಹಾನಗರ ಹೊರತಾದ ದೇಶದ ಟಾಪ್ 10 ನಗರಗಳನ್ನು ಗುರುತಿಸಲಾಗಿದೆ. ವಿಶಾಖಪಟ್ಟಣ (#1), ರಾಂಚಿ (#2), ವಿಜಯವಾಡ (#3), ನಾಸಿಕ್ (#4), ಮತ್ತು ರಾಯ್‌ಪುರ್ (#5) ನಗರಗಳು ಈ ಪಟ್ಟಿಯಲ್ಲಿರುವ ಅತಿ ಹೆಚ್ಚಿನ ವೃತ್ತಿಪರ ಅವಕಾಶ ಗಳನ್ನು ಒದಗಿಸುತ್ತಿರುವ ನಗರಗಳಾಗಿವೆ.
ಸಿಟೀಸ್ ಆನ್ ದಿ ರೈಸ್ ಎಂಬುದು ಲಿಂಕ್ಡ್ ಇನ್ ನ ಮೊದಲ ಪ್ರದೇಶಾಧಾರಿತ ಶ್ರೇಯಾಂಕವಾಗಿದ್ದು, ಇದನ್ನು ಭಾರತದಾದ್ಯಂತ ನೇಮಕಾತಿ, ಉದ್ಯೋಗ ಸೃಷ್ಟಿ ಮತ್ತು ಪ್ರತಿಭಾ ವಲಯದ ಬೆಳವಣಿಗೆ ಯನ್ನು ಲಿಂಕ್ಡ್ ಇನ್ ನ ಮಾಹಿತಿಗಳ ಆಧಾರದಿಂದ ಗುರುತಿಸಲಾಗುತ್ತದೆ.
ಈ ವರ್ಷ ಐದರಲ್ಲಿ ನಾಲ್ಕು ಭಾರತೀಯ ವೃತ್ತಿಪರರು ಉದ್ಯೋಗ ಬದಲಾವಣೆಗೆ ಇಚ್ಛಿಸುತ್ತಿದ್ದು, ಈ ಸಂದರ್ಭದಲ್ಲಿ ಸಿಟೀಸ್ ಆನ್ ದಿ ರೈಸ್ ಪಟ್ಟಿಯು ಸಾಂಪ್ರದಾಯಿಕ ಮಹಾ ನಗರಗಳಾಚೆಗಿನ ಪ್ರದೇಶಗಳಲ್ಲಿ ಎಲ್ಲಿ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು ಎಂಬುದರು ಕುರಿತು ಮಾರ್ಗದರ್ಶನ ನೀಡುತ್ತದೆ. ಈ ಪಟ್ಟಿಯು ಸ್ಥಳಾಂತರಗೊಳ್ಳಲು, ಹೊಸ ಕೈಗಾರಿಕಾ ವಲಯಗಳಲ್ಲಿ ಹುದ್ದೆಗಳನ್ನು ಹುಡುಕಲು ಅಥವಾ ಸ್ಥಳೀಯವಾಗಿ ವೃತ್ತಿಜೀವನವನ್ನು ಬೆಳೆಸಲು ಬಯಸುವ ವೃತ್ತಿಪರರಿಗೆ ಎರಡನೇ ಮತ್ತು ಮೂರನೇ ಹಂತದ ನಗರಗಳನ್ನು ಸೂಚಿಸುತ್ತಿದೆ.
ಇದನ್ನೂ ಓದಿ: Vishweshwar Bhat Column: ಪೈಲಟ್ ಮತ್ತು ಪರಿಸ್ಥಿತಿ ಅರಿವು
ಈ ಕುರಿತು ಲಿಂಕ್ಡ್ ಇನ್ ನ ವೃತ್ತಿ ತಜ್ಞೆ ಮತ್ತು ಭಾರತದ ಹಿರಿಯ ವ್ಯವಸ್ಥಾಪಕ ಸಂಪಾದಕಿ ನಿರಾಜಿತಾ ಬ್ಯಾನರ್ಜಿ ಅವರು, “ಎರಡನೇ ಮತ್ತು ಮೂರನೇ ಹಂತದ ನಗರಗಳು ಭಾರತದ ಆರ್ಥಿಕ ರೂಪಾಂತರದ ಕೇಂದ್ರ ಭಾಗದಲ್ಲಿವೆ. ಜಿಸಿಸಿ ಹೂಡಿಕೆಗಳ ಒಳಹರಿವು, ಸ್ಥಳೀಯ ಎಂಎಸ್ಎಂಇಗಳ ಬೆಳವಣಿಗೆ ಮತ್ತು ಸರ್ಕಾರದ ವಿಕಸಿತ ಭಾರತ ದೃಷ್ಟಿಕೋನ ಇತ್ಯಾದಿ ಎಲ್ಲವೂ ಸೇರಿಕೊಂಡು ಚಿಕ್ಕ ಚಿಕ್ಕ ನಗರಗಳನ್ನು ಮಹತ್ವದ ಕರಿಯರ್ ಹಬ್ ಗಳಾಗಿ ರೂಪಿಸುತ್ತಿವೆ. ಇದು ಭಾರತೀಯರಿಗೆ ಅರ್ಥಪೂರ್ಣ ವೃತ್ತಿ ಅಭಿವೃದ್ಧಿ ಸಾಧಿಸಲು ಇನ್ನು ಮುಂದೆ ದೊಡ್ಡ ನಗರಕ್ಕೆ ಸ್ಥಳಾಂತರಗೊಳ್ಳುವ ಅಗತ್ಯವಿಲ್ಲ ಎಂಬುದನ್ನು ತೋರಿಸುತ್ತದೆ. ಈ 10 ಅಭಿವೃದ್ಧಿಶೀಲ ನಗರಗಳು ಅವರಿರುವ ಸ್ಥಳ ದಲ್ಲಿಯೇ ಕೈಗಾರಿಕೆಗಳು, ಕೆಲಸ ಮತ್ತು ಹುದ್ದೆಗಳಲ್ಲಿ ಹೊಸ ಅವಕಾಶಗಳನ್ನು ಒದಗಿಸಲಿವೆ” ಎಂದು ಹೇಳಿದರು.
ತಂತ್ರಜ್ಞಾನ, ಔಷಧ ಮತ್ತು ಹಣಕಾಸು ಕಂಪನಿಗಳ ಹೂಡಿಕೆಯಿಂದ ಎರಡನೇ ಮತ್ತು ಮೂರನೇ ಹಂತದ ಭಾರತೀಯ ನಗರಗಳು ಕರಿಯರ್ ಹಬ್ ಗಳಾಗಿ ಬದಲಾಗುತ್ತಿವೆ
ಡೇಟಾ ಮತ್ತು ಎಐ ಬೂಮ್ ನ ಮಧ್ಯೆ, ಮಿರಾಕಲ್ ಸಾಫ್ಟ್ ವೇರ್ ಸಿಸ್ಟಮ್ಸ್ ಇಂಕ್ (ವಿಶಾಖ ಪಟ್ಟಣ), ಹೆಚ್ ಸಿ ಎಲ್ ಟೆಕ್ (ವಿಜಯವಾಡ, ಮದುರೈ), ಇನ್ಫೋಸಿಸ್ (ವಿಜಯವಾಡ), ಡೇಟಾ ಮ್ಯಾಟಿಕ್ಸ್ (ನಾಸಿಕ್), ಬುಲ್ ಐಟಿ ಸರ್ವೀಸಸ್ (ಮದುರೈ) ಮುಂತಾದ ತಂತ್ರಜ್ಞಾನ ಕಂಪನಿಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕಚೇರಿಗಳನ್ನು ಸ್ಥಾಪಿಸುತ್ತಿವೆ. ಈ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಒದಗಿಸುತ್ತಿವೆ. ಹೆಲ್ತ್ ಕೇರ್ ಮತ್ತು ಫಾರ್ಮಾ ಕಂಪನಿಗಳಾದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಲಾರಸ್ ಲ್ಯಾಬ್ಸ್ ಲಿಮಿಟೆಡ್, ಅಲೆಂಬಿಕ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್, ಸನ್ ಫಾರ್ಮಾ ಮುಂತಾದ ಕಂಪನಿಗಳು ವಿಶಾಖಪಟ್ಟಣ ಮತ್ತು ವಡೋದರಾದಲ್ಲಿ ಉದ್ಯಾವಕಾಶಗಳನ್ನು ಸೃಷ್ಟಿಸುತ್ತಿವೆ. ಹೆಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸಂಸ್ಥೆಗಳು ರಾಯ್‌ಪುರ್, ಆಗ್ರಾ, ಮತ್ತು ಜೋಧ್‌ಪುರ್‌ನಲ್ಲಿ ಹಣಕಾಸು ಸೇವಾ ವಿಭಾಗದಲ್ಲಿ ಅಭಿವೃದ್ಧಿ ಸಾಧಿಸುತ್ತಿವೆ.
ಈ ನಗರಗಳಲ್ಲಿ ಬಿಸಿನೆಸ್ ಡೆವಲಪ್ಮೆಂಟ್ ಮತ್ತು ಎಂಜಿನಿಯರಿಂಗ್ ಹುದ್ದೆಗಳಿಗೆ ಜಾಸ್ತಿ ಬೇಡಿಕೆ ಉಂಟಾಗುತ್ತಿದೆ
10 ಅಭಿವೃದ್ಧಿಶೀಲ ನಗರಗಳಲ್ಲಿ 6 ನಗರಗಳಲ್ಲಿ ಬಿಸಿನೆಸ್ ಡೆವಲಪ್ಮೆಂಟ್ ಹುದ್ದೆಗಳಿಗೆ ಜಾಸ್ತಿ ಉದ್ಯೋಗಾವಕಾಶ ದೊರಕುತ್ತಿವೆ. ಇದರಲ್ಲಿ ನಾಸಿಕ್, ರಾಯ್‌ಪುರ್, ರಾಜ್‌ಕೋಟ್, ಆಗ್ರಾ, ವಡೋ ದರಾ, ಮತ್ತು ಜೋಧ್‌ಪುರ್ ಮುಂಚೂಣಿಯಲ್ಲಿವೆ. ವಿಶಾಖಪಟ್ಟಣ, ವಿಜಯವಾಡ, ಮತ್ತು ಮದುರೈನ ವೃತ್ತಿಪರರಿಗೆ ಎಂಜಿನಿಯರಿಂಗ್ ವಿಭಾಗದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಸೇಲ್ಸ್, ಆಪರೇಷನ್ಸ್, ಮತ್ತು ಶಿಕ್ಷಣ ವಿಭಾಗಗಳು ಎರಡನೇ ಮತ್ತು ಮೂರನೇ ಹಂತದ ನಗರಗಳ ವೃತ್ತಿಪರರು ಉದ್ಯೋಗವನ್ನು ಹುಡುಕಬಹುದಾದ ಇತರ ಪ್ರಮುಖ ಕ್ಷೇತ್ರ ಗಳಾಗಿವೆ.
ಸರ್ಕಾರವು ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಮೂಲಕ ಸಣ್ಣ ಊರುಗಳನ್ನೂ ಕರಿಯರ್ ಹಾಟ್ ಸ್ಪಾಟ್ ಗಳಾಗಿ ಪರಿವರ್ತಿಸುತ್ತಿದೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಥಳೀಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಸಣ್ಣ ನಗರಗಳು ಅಭಿವೃದ್ಧಿ ಹೊಂದುತ್ತಿರುವುದು ಸಾಧ್ಯವಾಗಿದೆ. ವಿಶೇಷವಾಗಿ ರಾಂಚಿ (#2) ಯಲ್ಲಿ, ಸ್ಮಾರ್ಟ್ ಸಿಟಿ ಯೋಜನೆಗಳು ನಡೆಯುತ್ತಿದ್ದು, ಅದರ ರಾಜಧಾನಿಯಾದ ಜಾರ್ಖಂಡ್ ವೃತ್ತಿಪರರಿಗೆ ಆಕರ್ಷಕ ಕರಿಯರ್ ಹಬ್ ಆಗಿ ರೂಪುಗೊಂಡಿದೆ. ರಾಜ್‌ಕೋಟ್ (#6) ನಲ್ಲಿ ರಸ್ತೆ ಸಂಪರ್ಕವನ್ನು ಸುಧಾರಿಸಲು ಅತ್ಯುತ್ತಮ ಯೋಜನೆ ಹಾಕಲಾಗಿದ್ದು, ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ. ಛತ್ತೀಸ್‌ಗಢ ಸರ್ಕಾರದ ‘ನಯಾ ರಾಯ್‌ಪುರ್’ ಯೋಜನೆಯಿಂದ ಅಲ್ಲಿ ಮೂಲಸೌಕರ್ಯದ ಮೇಲಿನ ಹೂಡಿಕೆ ಹೆಚ್ಚುತ್ತಿದೆ.
ಲಿಂಕ್ಡ್ ಇನ್ ನ ಸಿಟೀಸ್ ಆನ್ ದಿ ರೈಸ್ ಪಟ್ಟಿಯಲ್ಲಿರುವ 10 ಟಾಪ್ ನಗರಗಳ ಹೆಸರು:
- ವಿಶಾಖಪಟ್ಟಣ
- ರಾಂಚಿ
- ವಿಜಯವಾಡ
- ನಾಸಿಕ್
- ರಾಯ್‌ಪುರ್
- ರಾಜ್‌ಕೋಟ್
- ಆಗ್ರಾ
- ಮದುರೈ
- ವಡೋದರಾ
- ಜೋಧ್ ಪುರ