ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಅತಿ ಶೀಘ್ರದಲ್ಲೇ ಜಂಟಿ ಸಮಿತಿ ರಚನೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Pralhad Joshi: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಬದ್ಧವಿದೆ. ಪಕ್ಷಾತೀತವಾಗಿ ಎಲ್ಲಾ ರಾಜ್ಯ ಸರ್ಕಾರಗಳ ಸಹಕಾರ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತದೆ. ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ್ ಮತ್ತು ಆಹಾರ ಸಚಿವನಾಗಿ ನಾನು ರೈತರ ಸಮಸ್ಯೆಗಳನ್ನೆಲ್ಲ ಆಲಿಸಿದ್ದು, ಶೀಘ್ರದಲ್ಲೇ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ನವದೆಹಲಿ, ಅ.13: ಕೇಂದ್ರ ಸರ್ಕಾರ, ಇದೇ ಮೊದಲ ಬಾರಿ ಕಬ್ಬು ಬೆಳೆಗಾರರನ್ನು (sugarcane growers) ದೆಹಲಿಗೆ ಕರೆಸಿ ಅಹವಾಲುಗಳನ್ನು ಆಲಿಸಿದ್ದು, ಯಶಸ್ವಿ ಮಾತುಕತೆ ಸಹ ನಡೆಸಿದೆ. ಇದರ ಹೊರತಾಗಿಯೂ ಕೆಲವರು ʼರಸ್ತೆ ತಡೆ ನಡೆಸುತ್ತೇವೆʼ ಎನ್ನುತ್ತಿದ್ದಾರೆ. ಇದರ ಅಗತ್ಯವಿಲ್ಲ, ಸರ್ಕಾರ ತಮ್ಮ ಪರವಾಗಿಯೇ ಇದ್ದು, ಸಕಾರಾತ್ಮಕ ಕ್ರಮಗಳನ್ನೇ ಕೈಗೊಳ್ಳಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಯಾವತ್ತೂ ರೈತಪರವಾಗಿಯೇ ಇದೆ. ಹಾಗಾಗಿ ಯಾರೂ ಪ್ರತಿಭಟನೆ, ರಸ್ತೆ ತಡೆ ನಡೆಸುವ ಅವಶ್ಯವಿಲ್ಲ. ಯಾರೂ ಇದಕ್ಕೆ ಅವಕಾಶ ಕೂಡ ಕಡಬಾರದು ಎಂದು ರೈತರಲ್ಲಿ ಮನವಿ ಮಾಡಿದರು.
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಬದ್ಧವಿದೆ. ಪಕ್ಷಾತೀತವಾಗಿ ಎಲ್ಲಾ ರಾಜ್ಯ ಸರ್ಕಾರಗಳ ಸಹಕಾರ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತದೆ. ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ್ ಮತ್ತು ಆಹಾರ ಸಚಿವನಾಗಿ ನಾನು ರೈತರ ಸಮಸ್ಯೆಗಳನ್ನೆಲ್ಲ ಆಲಿಸಿದ್ದು, ಶೀಘ್ರದಲ್ಲೇ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಮಹತ್ತರ ಹೆಜ್ಜೆ: ವಾರದೊಳಗೆ ಉನ್ನತ ಮಟ್ಟದ ಸಮಿತಿ ರಚನೆ
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಒಂದೆರೆಡು ದಿನದಲ್ಲಿ ಅಥವಾ ಒಂದೆರೆಡು ಸಚಿವಾಲಯಗಳಿಂದ ಆಗುವಂಥದ್ದಲ್ಲ, ಬಹು ಮಂತ್ರಾಲಯಗಳ ಸಹಕಾರ, ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಆಗಬೇಕಿದೆ. ಹಾಗಾಗಿ ಅತಿ ಶೀಘ್ರದಲ್ಲೇ ಕಬ್ಬು ಬೆಳೆಗಾರರಿಗೆ ತಮ್ಮ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಕಾರಣ ಯಾರೊಬ್ಬರೂ ರಸ್ತೆ ರೋಖೋ ನಡೆಸಬೇಕಿಲ್ಲ ಎಂದು ಪ್ರಲ್ಹಾದ್ ಜೋಶಿ ಕರೆ ನೀಡಿದರು.
ಇದೇ ಮೊದಲು ದೆಹಲಿಗೆ ಕರೆಸಿ ಚರ್ಚೆ
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರನ್ನು ದೆಹಲಿಗೆ ಕರೆಸಿ ಉನ್ನತ ಮಟ್ಟದ ಸಭೆ ನಡೆಸಿರುವುದು ಇದೇ ಮೊದಲು. ಶಿವರಾಜಸಿಂಗ್ ಚವ್ಹಾಣ ಅವರ ನೇತೃತ್ವದಲ್ಲಿ, ಕೇಂದ್ರದ ಉನ್ನತ ಅಧಿಕಾರಿಗಳು, ರಾಜ್ಯ ಸರ್ಕಾರಗಳ ಸಂಬಂಧಿತ ಸಚಿವರು ಹಾಗೂ ಕಬ್ಬು ಬೆಳೆಗಾರರ ಸಮ್ಮುಖದಲ್ಲೇ ಸತತ ಮೂರ್ನಾಲ್ಕು ತಾಸುಗಳ ಕಾಲ ಸುದೀರ್ಘವಾಗಿ ಮಾತುಕತೆ ನಡೆಸಿದೆ. ರೈತರ ಎಲ್ಲಾ ಸಮಸ್ಯೆಗಳನ್ನು ಸಹನಾಭೂತಿಯಿಂದ ಆಲಿಸಿದ್ದೇವೆ. ಅತ್ಯಂತ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲೆಂದೇ ʼಜಂಟಿ ಸಮಿತಿʼ ಸಹ ರಚಿಸಲು ತೀರ್ಮಾನಿಸಿದೆ ಎಂದರು.
ಅತಿ ಶೀಘ್ರದಲ್ಲೇ ಕಬ್ಬು ಬೆಳೆಗಾರರು, ಕೃಷಿ ವಿಜ್ಞಾನಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿ ರಚನೆಯಾಗಿ ಕಬ್ಬು ಬೆಳೆಗಾರರ ಎಲ್ಲಾ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲಿದ್ದು, ಕೇಂದ್ರ ಸರ್ಕಾರ ರೈತರ ಸಮಸ್ಯೆ ಪರಿಹರಿಸುವಲ್ಲಿ ಮುಕ್ತ ಮನಸ್ಸಿನಿಂದಿದೆ. ಹಾಗಾಗಿ ಯಾರೂ ಹೋರಾಟಕ್ಕಿಳಿಯುವ ಅಗತ್ಯವಿಲ್ಲ ಎಂದು ಹೇಳಿದರು.
ದೆಹಲಿ ಸಭೆ ವಿಫಲವಾಗಿಲ್ಲ
ಕೇಂದ್ರ ಸರ್ಕಾರ ಮಹಾರಾಷ್ಟ್ರ ಮತ್ತು ಕರ್ನಾಟಕ ಭಾಗದ ರೈತ ಹೋರಾಟಗಾರರೊಂದಿಗೆ ನಡೆಸಿದ ಸಭೆ ವಿಫಲವಾಗಿಲ್ಲ. ಫಲಪ್ರದ ಮತ್ತು ಸಕಾರಾತ್ಮಕವಾಗಿದೆ. ʼಜಂಟಿ ಸಮಿತಿʼ ರಚನೆ, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತಂತೆ ಅಧ್ಯಯನ ನಡೆಸಿ, ಶಾಶ್ವತ ಪರಿಹಾರ ಕಾರ್ಯಗಳನ್ನ ಕೈಗೊಳ್ಳುವ ಕೇಂದ್ರ ಸರ್ಕಾರದ ತೀರ್ಮಾನಗಳನ್ನು ರೈತ ನಾಯಕ ರಾಜು ಶೆಟ್ಟಿ ಅವರೂ ಒಪ್ಪಿದ್ದಾರೆ. ಸಭೆಯಲ್ಲಿದ್ದ ಮೂರ್ನಾಲ್ಕು ರೈತ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳೂ ಸಹ ಅಗತ್ಯ ಸಲಹೆಗಳನ್ನು ನೀಡಿದ್ದು, ಸ್ವೀಕರಿಸಲಾಗಿದೆ ಎಂದು ಜೋಶಿ ತಿಳಿಸಿದರು.
ರೈತರು ಉದ್ವೇಗಕ್ಕೆ ಒಳಗಾಗಬಾರದು
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಬದ್ಧವಿದೆ. ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆದು ಅತ್ಯಂತ ಸಕಾರಾತ್ಮಕವಾಗಿಯೇ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಹಾಗಾಗಿ ʼರೈತರು ಯಾರೂ ಹೋರಾಟಕ್ಕಿಳಿಯಬೇಕಿಲ್ಲ; ಉದ್ವೇಗಕ್ಕೆ ಒಳಗಾಗಬೇಕಿಲ್ಲʼ ಎಂದು ಕರೆ ಕೊಟ್ಟಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ʼರೈತರೇ ಮೋದಿ ಸರ್ಕಾರದ ಪ್ರಥಮಾಧ್ಯತೆʼ ಎಂದು ಪ್ರತಿಪಾದಿಸಿದರು.
ದೆಹಲಿ ಸಭೆಯಲ್ಲೇನು ಚರ್ಚೆ
ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ್, ಆಹಾರ ಸಚಿವ ಪ್ರಲ್ಹಾದ್ ಜೋಶಿ, ಇಲಾಖಾ ಕಾರ್ಯದರ್ಶಿಗಳು ಹಾಗೂ ರಾಜ್ಯ ಸರ್ಕಾರದ ಮೂವರು ಸಚಿವರು ಮತ್ತು ರೈತ ಹೋರಾಟಗಾರರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ, ಅಹವಾಲುಗಳು ಕುರಿತಂತೆ ಸುದೀರ್ಘ ಚರ್ಚೆ ನಡೆದಿದೆ. ಕಬ್ಬು ಬೆಳೆಗಾರರು FRP ಕಡಿಮೆಯಿದೆ, MSP, ತೂಕದಲ್ಲಿನ ವ್ಯತ್ಯಾಸ, ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಬಳಿಕ ಶೇ.9ರಷ್ಟು ವೇಸ್ಟೇಜ್ ಹಾಕುತ್ತಿರುವುದು ಮತ್ತು ಕಮರ್ಶಿಯಲ್ ಪ್ರತ್ಯೇಕ ದರ ಬಗ್ಗೆ ವಿಸ್ತ್ರತ ಚರ್ಚೆ ನಡೆಸಲಾಗಿದೆ.
ಭಾರತೀಯ ಯೋಧರಿಗೆ ಗುಣಮಟ್ಟದ ʼಭಾರತ್ ರೈಸ್ʼ; ಸೇನೆಗೆ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮೀಸಲು
ರಾಜ್ಯ ಸರ್ಕಾರಕ್ಕೇನು ಸೂಚನೆ
ಈ ಮಹತ್ವದ ಸಭೆಯಲ್ಲಿ ರಾಜ್ಯ ಸರ್ಕಾರದಿಂದಲೂ ಮೂವರು ಸಚಿವರು ಭಾಗಿಯಾಗಿದ್ದು, ಕಬ್ಬು ಬೆಳೆಗಾರರಿಗಾಗಿ ರಾಜ್ಯದಲ್ಲಿ SAP ಜಾರಿ ತರುವಂತೆಯೂ ಅವರ ಗಮನ ಸೆಳೆಯಲಾಗಿದೆ. ತಮಿಳುನಾಡು, ಹರಿಯಾಣ, ಪಂಜಾಬ್, ಉತ್ತರಪ್ರದೇಶದಲ್ಲಿ ಈಗಾಗಲೇ SAP ಇದೆ. ಅದರಂತೆ ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಕರ್ನಾಟಕದಲ್ಲೂ ಸಹ ಇದನ್ನು ಮಾಡುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ. ಅಲ್ಲದೇ, ರಿಕವರಿ, 9 ಪರ್ಸೆಂಟ್ ವೇಸ್ಟೇಜ್, ತೂಕದ ವ್ಯತ್ಯಾಸ ಕುರಿತಂತೆ ಸಕ್ಕರೆ ಕಾರ್ಖಾನೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಯಿತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಭೆಯಲ್ಲಿನ ಬೆಳವಣಿಗೆಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದರು.