CM Siddaramaiah: ಅಬ್ದುಲ್ ಜಬ್ಬಾರ್ ನಂತರ ಕಾಂಗ್ರೆಸ್‌ನಲ್ಲಿ ಶೀಘ್ರ ಮತ್ತೊಂದು ತಲೆದಂಡ! ಸಿಎಂ ಸಿದ್ದರಾಮಯ್ಯ ಸುಳಿವು
ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದು, ಅದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಂಗೀಕಾರ ಮಾಡಿ ಆ ಘಟಕವನ್ನೇ ವಿಸರ್ಜನೆ ಮಾಡಿದ್ದಾರೆ. ಇನ್ನು ನಸೀರ್ ಅಹ್ಮದ್ ಶೀಘ್ರದಲ್ಲಿಯೇ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬಂದಿದೆ.
ಅಬ್ದುಲ್ ನಸೀರ್, ಸಿಎಂ ಸಿದ್ದರಾಮಯ್ಯ -
ಬೆಂಗಳೂರು, ಏ.13: ಕೆಪಿಸಿಸಿ (KPCC) ಅಲ್ಪಸಂಖ್ಯಾತ ಘಟಕಕ್ಕೆ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ (resignation) ನೀಡಿದ ಬೆನ್ನಲ್ಲೆ ಮತ್ತಷ್ಟು ತಲೆದಂಡವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ತಮ್ಮ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ರಾಜೀನಾಮೆ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ (CM Siddaramaiah) ಸುಳಿವು ಕೊಟ್ಟಿದ್ದಾರೆ.
ಕಾಂಗ್ರೆಸ್‌ನಲ್ಲಿ ಬಂಡಾಯ ಜೋರಾಗಿದ್ದು, ದಾವಣಗೆರೆ ದಕ್ಷಿಣ ಉಪ ಚುನಾವಣೆ ಬೆಂಬಲ ನೀಡಿದ ಅಲ್ಪಸಂಖ್ಯಾತ ಮುಖಂಡರ ವಿರುದ್ಧ ಹೈಕಮಾಂಡ್ ಕ್ರಮಕ್ಕೆ ಮುಂದಾಗಿದೆ. ಸದ್ಯ ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದು, ಅದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಂಗೀಕಾರ ಮಾಡಿ ಆ ಘಟಕವನ್ನೇ ವಿಸರ್ಜನೆ ಮಾಡಿದ್ದಾರೆ. ಇನ್ನು ನಸೀರ್ ಅಹ್ಮದ್ ಶೀಘ್ರದಲ್ಲಿಯೇ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬಂದಿದ್ದವು. ಸದ್ಯ ಸಿಎಂ ಮಾತನಾಡಿದ್ದಾರೆ.
ನಸೀರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು?
ಚಿಕ್ಕಮಗಳೂರಿನ ಎನ್ಆರ್ ಪುರ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಕಾಂಗ್ರೆಸ್ ನಲ್ಲಿ ಪಕ್ಷ ವಿರೋಧಿಗಳ ರಾಜೀನಾಮೆ ಪರ್ವ ಆರಂಭವಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, " ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಇದುವರೆಗೆ ರಾಜೀನಾಮೆ ನೀಡಿಲ್ಲ. ನೀಡಬಹುದೇನೋ " ಎಂದರು.
ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, " ಕಾಂಗ್ರೆಸ್ ಪಕ್ಷ ಸೋಲನ್ನು ಒಪ್ಪಿಕೊಂಡಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಂಡಿತ. ತಲೆದಂಡಕ್ಕೆ ಚುನಾವಣೆಯ ಸೋಲು ಗೆಲುವು ಕಾರಣವಲ್ಲ. ಸಲೀಂ ಅಹ್ಮದ್ ಅವರು ಪಕ್ಷದ ಮುಖಂಡರು. ಅವರು, ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕೆಲವರ ಪಕ್ಷ ವಿರೋಧಿ ಕಾರ್ಯಗಳ ಬಗ್ಗೆ ಹೇಳಿಕೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಹೊರತು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರಾಜಿತವಾಗಲಿದೆ ಎಂದು ಅವರು ಹೇಳಿರುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳ ನಡುವೆಯೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ " ಎಂದರು.
ಸಚಿವ ಆಕಾಂಕ್ಷಿಗಳು ದೆಹಲಿಗೆ ಭೇಟಿ ನೀಡುವುದು ತಪ್ಪಲ್ಲ
ಸಚಿವ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, " ಸಚಿವ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನರ್‌ರಚನೆ ಕಾರ್ಯ ಬಾಕಿಯಿದೆ. ಐದು ರಾಜ್ಯಗಳ ಚುನಾವಣೆ, ಬಜೆಟ್ ಅಧಿವೇಶನ ಸಂಪುಟ ಪುನರ್‌ರಚನೆ ವಿಳಂಬಕ್ಕೆ ಕಾರಣವಿರಬಹುದು ಎಂದರು.