Tumakur News: ಟಿಪ್ಪರ್ ಲಾರಿ ವಿದ್ಯುತ್ ತಂತಿಗೆ ತಗುಲಿ ಚಾಲಕ ದುರ್ಮರಣ
ತುಮಕೂರು ನಗರದ ದಾನಪ್ಯಾಲೇಸ್ ಮುಖ್ಯ ರಸ್ತೆ ಬಳಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಟಿಪ್ಪರ್ ಲಾರಿಯ ಬಾಕ್ಸ್ ಹೈ-ವೋಲ್ಟೇಜ್ ತ್ರಿಫೇಸ್ ವಿದ್ಯುತ್ ತಂತಿಗಳಿಗೆ ನೇರವಾಗಿ ಸ್ಪರ್ಶಿಸಿ ಚಾಲಕ ಮೃತಪಟ್ಟಿದ್ದಾರೆ. ಮೃತ ಚಾಲಕನನ್ನು ರಾಮಗೊಂಡನಹಳ್ಳಿಯ ನಿವಾಸಿ ಹನುಮಂತರಾಯಪ್ಪ (33) ಎಂದು ಗುರುತಿಸಲಾಗಿದೆ.
ತುಮಕೂರು ನಗರದ ದಾನಪ್ಯಾಲೇಸ್ ಮುಖ್ಯ ರಸ್ತೆಯಲ್ಲಿ ಮೃತಪಟ್ಟ ಟಿಪ್ಪರ್ ಲಾರಿ ಚಾಲಕ ಮತ್ತು ಸಾಂದರ್ಭಿಕ ಚಿತ್ರ -
ತುಮಕೂರು, ಅ. 24: ನಗರದ ದಾನಪ್ಯಾಲೇಸ್ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ದಾರುಣ ವಿದ್ಯುತ್ ಅವಘಡವೊಂದರಲ್ಲಿ ಟಿಪ್ಪರ್ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ರಾಮಗೊಂಡನಹಳ್ಳಿಯ ನಿವಾಸಿ ಹನುಮಂತರಾಯಪ್ಪ (33) ಎಂದು ಗುರುತಿಸಲಾಗಿದೆ. ದಾನಪ್ಯಾಲೇಸ್ ಮುಖ್ಯ ರಸ್ತೆ ಬಳಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಟಿಪ್ಪರ್ ಲಾರಿಯ ಬಾಕ್ಸ್ ಅನ್ನು ಮೇಲಕ್ಕೆ ಎತ್ತಲಾಗಿದೆ. ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸದ ಕಾರಣ ಲಾರಿಯು ಮೇಲ್ಭಾಗದಲ್ಲಿದ್ದ ಹೈ-ವೋಲ್ಟೇಜ್ ತ್ರಿಫೇಸ್ ವಿದ್ಯುತ್ ತಂತಿಗಳಿಗೆ ನೇರವಾಗಿ ಸ್ಪರ್ಶಿಸಿ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ತಂತಿ ತಗುಲುತ್ತಿದ್ದಂತೆ ಲಾರಿಗೆ ತೀವ್ರ ಪ್ರಮಾಣದ ವಿದ್ಯುತ್ ಪ್ರವಹಿಸಿ, ಚಾಲಕ ಹನುಮಂತರಾಯಪ್ಪ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಸ್ಥಳದಲ್ಲಿ ಆತಂಕ ಹಾಗೂ ಪೊಲೀಸ್ ತನಿಖೆ
ಅನಾಹುತದ ಸುದ್ದಿ ತಿಳಿದು ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿ ಜಮಾಯಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
ಎಚ್ಚರಿಕೆ ಸಂದೇಶ
ದೊಡ್ಡ ವಾಹನಗಳು ಅಥವಾ ಹೈಡ್ರಾಲಿಕ್ ಯಂತ್ರಗಳನ್ನು ಬಳಸುವಾಗ, ವಿಶೇಷವಾಗಿ ವಿದ್ಯುತ್ ಲೈನ್‌ಗಳ ಸಮೀಪದಲ್ಲಿ ಕೆಲಸ ಮಾಡುವಾಗ ಸಿಬ್ಬಂದಿ ಅತ್ಯಂತ ಎಚ್ಚರಿಕೆ ಮತ್ತು ಜಾಗರೂಕತೆ ವಹಿಸಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕೃಷಿ ಹೊಂಡದಲ್ಲಿ ಕರೆಂಟ್ ಶಾಕ್ ಹೊಡೆದು ಮೂವರು ಸಾವು
ಮೆಟ್ರೋ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಕೆಲವು ತಿಂಗಳ ಹಿಂದೆ ಬೆಂಗಳೂರು ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ವಿದ್ಯುತ್ ಸರ್ಶಿಸಿ ಗುತ್ತಿಗೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿತ್ತು. ನಮ್ಮ ಮೆಟ್ರೋ ಪಿಲ್ಲರ್‌ಗೆ ಬೆಳಕಿನ ವ್ಯವಸ್ಥೆ ಕಾಮಗಾರಿ ವೇಳೆ ಅವಘಡ ಸಂಭವಿಸಿತ್ತು. ಕಾಮಗಾರಿ ಗುತ್ತಿಗೆಯನ್ನು ಎಂ.ಎಸ್.ಎಂ.ಆರ್. ಎಲೆಕ್ಟ್ರಿಕಲ್ಸ್ ಸಂಸ್ಥೆ ಪಡೆದುಕೊಂಡಿತ್ತು. ಈ ಸಂಸ್ಥೆಯ ಗುತ್ತಿಗೆ ಕಾರ್ಮಿಕರೊಬ್ಬರು ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ನೆಲದಲ್ಲಿ ಅರ್ಥ್ ಪಿಟ್ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ದುರದೃಷ್ಟವಶಾತ್ ವಿದ್ಯುತ್ ತಗುಲಿತ್ತು.
ವಿದ್ಯುತ್ ಸ್ಪರ್ಶದಿಂದ ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ತಕ್ಷಣವೇ ಸ್ಥಳದಲ್ಲಿದ್ದವರು ಸಮೀಪದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.