Vastu Tips: ಹನುಮಂತನ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು ತಿಳಿದಿದೆಯೇ?
ಆಂಜನೇಯ ಭಕ್ತರ ಪ್ರೀತಿಯ ದೇವರು. ಆತ ಶಕ್ತಿ, ಭಕ್ತಿ, ಧೈರ್ಯ, ಜ್ಞಾನ ಎಲ್ಲಕ್ಕೂ ಅಧಿಪತಿ. ಮನೆಯಲ್ಲಿ ಆಂಜನೇಯನ ವಿಗ್ರಹ ಅಥವಾ ಫೋಟೋ ಇಡುವುದಾದರೆ ಯಾವ ದಿಕ್ಕು ಸೂಕ್ತ, ಯಾವ ರೀತಿಯ ಮನೆಯಲ್ಲಿಟ್ಟರೆ ಯಾವ ಲಾಭ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಆಂಜನೇಯ

ದೇವರ ಕೋಣೆ ಅಂದರೆ ನಾವು ಪೂಜೆ ಮಾಡುವ ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸಬೇಕು, ಕೆಲವೊಂದು ವಿಗ್ರಹಗಳನ್ನು ಮಾತ್ರ ದೇವರ ಕೋಣೆಯಲ್ಲಿ ಇಡಬೇಕು ಎಂದು ಹಿಂದೂ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ವಾಸ್ತು ನಿಯಮಗಳು ದೇವರ ಫೋಟೋಗೂ ಅನ್ವಯ ಆಗಲಿದ್ದು, ಮನೆಯ ಯಾವ ದಿಕ್ಕಿನಲ್ಲಿ ಆಂಜನೇಯ ಸ್ವಾಮಿ ಫೋಟೋ ಇಡಬೇಕು, ಅದರಿಂದ ಸಿಗುವ ಫಲಗಳೇನು..? ಇತ್ಯಾದಿ ಮಾಹಿತಿ ಇಲ್ಲಿದೆ.
ಎಲ್ಲರ ಮನೆಯಲ್ಲೂ ಶ್ರೀರಾಮನ ಬಂಟ ಹನುಮಂತನ ಫೋಟೋ ಇದ್ದೇ ಇರುತ್ತದೆ. ಆದರೆ ಹನುಮಂತನನ್ನು ಪೂಜಿಸಲು ಕೆಲವು ನಿಯಮಗಳಿರುವಂತೆಯೇ ಮನೆಯಲ್ಲಿ ಹನುಮಂತನ ಫೋಟೋ ಇಡಲು ಕೂಡ ಕೆಲವು ನಿಯಮಗಳಿವೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಮತ್ತು ನಿಮ್ಮ ಮನೆಯಲ್ಲಿ ಈಗಾಗಲೇ ಆಂಜನೇಯನ ಚಿತ್ರ ಇದ್ದರೆ ಅಥವಾ ಮುಂದೆ ಅದನ್ನು ಹಿಡಬೇಕು ಎಂದು ಅಂದುಕೊಂಡಿದ್ದರೆ , ವಾಸ್ತುವಿನ ಈ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ದಕ್ಷಿಣ ದಿಕ್ಕು
ವಾಸ್ತು ಶಾಸ್ತ್ರದ ಪ್ರಕಾರ, ಹನುಮಂತನ ವಿಗ್ರಹ ಅಥವಾ ಫೋಟೋವನ್ನು ದಕ್ಷಿಣ ದಿಕ್ಕಿನತ್ತ ದೃಷ್ಟಿ ಇರುವ ರೀತಿಯಲ್ಲಿ ಇಡಬೇಕು. ಹನುಮಂತ ಕಾಲ ವಿನಾಶಕ ಮತ್ತು ದುಷ್ಟರನ್ನು ಯಮಲೋಕಕ್ಕೆ ಕರೆತರುತ್ತಾನೆ ಎಂದು ಶಾಸ್ತ್ರದಲ್ಲಿ ಉಲ್ಲೇಖಿತವಾಗಿದ್ದು, ಆದ್ದರಿಂದ ಆಂಜನೇಯನ ಮುಖವು ದಕ್ಷಿಣ ದಿಕ್ಕಿಗೆ ಇರಬೇಕು.
ಮನೆಯಲ್ಲಿನ ವಾಸ್ತು ದೋಷ ನಿವಾರಣೆ ಮಾಡಿ, ನಕಾರಾತ್ಮಕತೆಯನ್ನು ದೂರಗೊಳಿಸಲು ದಕ್ಷಿಣ ದಿಕ್ಕಿನಲ್ಲಿ ಆಂಜನೇಯ ಸ್ವಾಮಿ ಮುಖ ಮಾಡಿರುವ ಫೋಟೋ ಹಾಕಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ.
ಬೆಡ್ ರೂಂನಲ್ಲಿ ಆಂಜನೇಯನ ಫೋಟೋ ಹಿಡುವುದು ಸೂಕ್ತವಲ್ಲ
ಮನೆಯಲ್ಲಿ ಮಲಗುವ ಕೋಣೆಯಲ್ಲಿ ಹನುಮಂತನ ಚಿತ್ರವನ್ನು ಇಡಬಾರದು ಎನ್ನಲಾಗಿದ್ದು,
ಸೂರ್ಯನ ಮಗಳು ಸುವರ್ಚಲಾಳನ್ನು ಹನುಮಂತ ಮದುವೆಯಾದದ್ದು ಸೂರ್ಯ ದೇವರಿಂದ ಜ್ಞಾನವನ್ನು ಪಡೆಯಲು. ಆದರೆ ಎಂದಿಗೂ ಗೃಹಸ್ಥ ಜೀವನದಲ್ಲಿ ಬಾಳಲಿಲ್ಲ. ಆದ್ದರಿಂದಲೇ ಹನುಮಂತನನ್ನು ಬಾಲ ಬ್ರಹ್ಮಚಾರಿ ಎಂದು ಕರೆಯುತ್ತಾರೆ. ಬ್ರಹ್ಮಚಾರಿಯಾಗಿರುವುದರಿಂದ ಮನೆಯವರು ಮಲಗುವ ಕೋಣೆಯಲ್ಲಿ ಆಂಜನೇಯನ ಚಿತ್ರವನ್ನು ಹಾಕಬಾರದು.