ಸಂಡೂರಿನಲ್ಲಿ ಬಿಕೆಜಿ ಫೌಂಡೇಷನ್ನಿಂದ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಸ್ವಯಂಪ್ರೇರಿತ ರಕ್ತದಾನ ಶಿಬಿರ
Sandur News: ಸಂಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ ಕೆ ಜಿ ಫೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ, ಕನ್ಮಡಕ ವಿತರಣೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬಿ.ಕೆ.ಜಿ ಗಣಿ ಕಂಪನಿಯ ನಿರ್ದೇಶಕ ಡಾ. ನಾಗನಗೌಡ ಮಾತನಾಡಿದ್ದಾರೆ.
-
ಸಂಡೂರು: ಕಣ್ಣುಗಳು ದೇಹದ ಅತ್ಯಂತ ಪ್ರಮುಖ ಅಂಗ, ಬೇರೆ ಯಾವ ಅಂಗಗಳಿಲ್ಲದಿದ್ದರೂ ಬದುಕಬಹುದು ಆದರೆ ದೃಷ್ಟಿ ಯಿಲ್ಲದೇ ಬದುಕು ಅತ್ಯಂತ ಕಠಿಣ ಎಂದು ಬಿ.ಕೆ.ಜಿ ಗಣಿ ಕಂಪನಿಯ ನಿರ್ದೇಶಕ ಡಾ. ನಾಗನಗೌಡ ಹೇಳಿದರು. ಸಂಡೂರಿನ (Sandur News) ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ ಕೆ ಜಿ ಫೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ, ಕನ್ಮಡಕ ವಿತರಣೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಕಳೆದ 13 ವರ್ಷಗಳಿಂದ ನಮ್ಮ ತಂದೆ ಅವರಾದ ದಿ.ಕುಮಾರಗೌಡರ ಸ್ಮರಣಾರ್ಥ ಬಿ ಕೆ ಜಿ ಗಣಿ ಕಂಪನಿಯಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು. ನಮ್ಮ ಫೌಂಡೇಶನ್ ವತಿಯಿಂದ ಸಾವಿರಾರು ದೃಷ್ಟಿಹೀನರಿಗೆ ಉಚಿತ ಶಸ್ತ್ರಚಿಕಿತ್ಸೆಯ ಮೂಲಕ ಕಳೆದ 13 ವರ್ಷಗಳಿಂದ ನಿರಂತರವಾಗಿ ಅವರ ದೃಷ್ಟಿಯನ್ನು ಮತ್ತೆ ನೀಡುತ್ತಿದ್ದೇವೆ ಎಂದರು.
ಬಳ್ಳಾರಿ ಜಿಲ್ಲಾಸ್ಪತ್ರೆ ಕ್ಷಯ ರೋಗ ವಿಭಾಗದ ಹಿರಿಯ ವೈದ್ಯೆ ಡಾ. ಇಂದ್ರಾಣಿ ಮಾತನಾಡಿ, ಬಿ ಕೆ ಜಿ ಗಣಿ ಕಂಪನಿಯು ಪ್ರತಿ ವರ್ಷ ಇಂತಹ ಅನೇಕ ಮೂಲಭೂತ ಅವಶ್ಯಕವಾದ ಆರೋಗ್ಯ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇಂತಹ ಸೇವೆ ಅಮೂಲ್ಯ,ಅನುಕರಣೀಯ ಹಾಗೂ ಮಾದರಿ ಎಂದರು.
ನೇತ್ರತಜ್ಞೆ ಡಾ.ಚೈತ್ರಾ ಮಾತನಾಡಿ, ಆರು ತಿಂಗಳ ಅವಧಿಯಲ್ಲಿ ಕಣ್ಣುಗಳನ್ನು, ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಶಿಬಿರದಲ್ಲಿ ಹಗರಿಬೊಮ್ಮನಹಳ್ಳಿ, ಹಂಪಾ ಪಟ್ಟಣ, ಕೂಡ್ಲಿಗಿ, ಗಂಗಾವತಿ, ಕಾರಟಗಿ, ಕೊಪ್ಪಳ, ರಾಯಚೂರು ಕೊಟ್ಟೂರು, ಹೊಸಪೇಟೆ ಹಾಗೂ ಸಂಡೂರಿನ ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದ ದೃಷ್ಟಿ ವಿಹೀನರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಒಟ್ಟಾರೆ ಈ ಶಿಬಿರದಲ್ಲಿ 101 ಯೂನಿಟ್ ರಕ್ತ ಸಂಗ್ರಹಿಸಲಾಗಿದ್ದು194 ಜನರಿಗೆ ಶಸ್ತ್ರಚಿಕಿತ್ಸೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಿ.ಕೆ.ಜಿ ಗಣಿ ಕಂಪನಿಯ ವ್ಯವಸ್ಥಾಪಕ ರಾಜಶೇಖರ ಬೆಲ್ಲದ್, ಕಿಶೋರ್, ಪೆಲ್ಲೆಟ್ ಪ್ಲಾಂಟ್ ನ ಗಣೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಸುಬ್ರಮಣ್ಯ ವಣಕೇರಿ, ಕುಮಾರಸ್ವಾಮಿ, ಅನಿಲ್, ಉಮೇಶ್ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪವನ್ ಕುಮಾರ್ ಹಾಗೂ ಆರೋಗ್ಯ ಸಿಬ್ಬಂದಿ ಮತ್ತು ಶಸ್ತ್ರಚಿಕಿತ್ಸೆಗೊಳಗಾದ ನೂರಾರು ರೋಗಿಗಳು ಉಪಸ್ಥಿತರಿದ್ದರು.