ರಾಹುಲ್ ಗಾಂಧಿ ಆಪ್ತನಿಂದಲೇ ವಿರೋಧ? ಪ್ರಧಾನಿ ಫೋನ್ ಟ್ಯಾಪ್ ಮಾಡಿಲ್ಲವೆಂದು ಮೋದಿ ಪರ ನಿಂತ ಸ್ಯಾಮ್ ಪಿತ್ರೋಡಾ!
Sam Pitroda: ತಮ್ಮ ಫೋನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ ಗಂಭೀರ ಆರೋಪದ ಬೆನ್ನಲ್ಲೇ, ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು "ಪ್ರಧಾನಿಯವರು ಫೋನ್ ಟ್ಯಾಪ್ ಮಾಡುವುದಿಲ್ಲ" ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ, ನ.14: ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಟ್ಯಾಪ್ (Phone Tap) ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ್ದ ಆರೋಪವನ್ನು ತಳ್ಳಿ ಹಾಕಿರುವ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda), ಪ್ರಧಾನಿ ಹಾಗೆ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಧಾನಿ ಇಂತಹ ಕೆಲಸ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಅವರು ಸ್ಕ್ರೂಡ್ರೈವರ್ ಹಿಡಿದುಕೊಂಡು ಕಂಪ್ಯೂಟರ್ ಬಳಿ ಕುಳಿತುಕೊಳ್ಳುವುದಿಲ್ಲ. ನನ್ನ ಫೋನ್ ಕೂಡಾ ಕದ್ದಾಲಿಕೆ ಮಾಡಲಾಗಿದೆ, ನನ್ನ ಬಳಿ ಸಾಕ್ಷಿಯೂ ಇದೆ ಎಂದು ಹೇಳಿದ್ದಾರೆ.
"ನನ್ನ ಫೋನ್ ಟ್ಯಾಪ್ ಮಾಡಲಾಗಿದೆ, ನನ್ನ ಲ್ಯಾಪ್‌ಟಾಪ್ ಮೇಲೆ ದಾಳಿ ಮಾಡಲಾಗಿದೆ, ನನ್ನ ಬ್ಯಾಂಕ್ ಖಾತೆಗಳು ಕಣ್ಗಾವಲಿನಲ್ಲಿವೆ. ನಾನು ತಜ್ಞರನ್ನು ಸಂಪರ್ಕಿಸಿದ್ದೇನೆ ಮತ್ತು ಅವರು ನನ್ನ ಸಾಧನಗಳನ್ನು ಪರಿಶೀಲಿಸಿದ ನಂತರ, ನನಗೆ ಅವರು ಎಚ್ಚರಿಕೆ ನೀಡಿದ್ದಾರೆ" ಎಂದು ಪಿತ್ರೋಡಾ ಹೇಳಿದರು. "ಯಾರು ಅದನ್ನು ಮಾಡುತ್ತಿದ್ದಾರೆ. ನನಗೆ ಗೊತ್ತಿಲ್ಲ ಮತ್ತು ನಾನು ಹೆದರುವುದಿಲ್ಲ. ನಾನು ಅದನ್ನು ಎದುರಿಸುತ್ತೇನೆ. ನನಗೆ ಯಾವುದೇ ಸಮಸ್ಯೆ ಇಲ್ಲ" ಎಂದು ಪಿತ್ರೋಡಾ ಹೇಳಿದರು. "ನಮ್ಮ ಸುತ್ತಲೂ ಕೆಟ್ಟ ಜನರಿದ್ದಾರೆ, ಏನು ಮಾಡುವುದು?" ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಉತ್ತಮ ಸ್ನೇಹಿತ ಎಂದ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ; ಪ್ರಧಾನಿ ಪ್ರತಿಕ್ರಿಯೆ ಹೇಗಿತ್ತು?
ಮೋದಿ ವಿರುದ್ಧ ರಾಹುಲ್ ಗಾಂಧಿ ಫೋನ್ ಕದ್ದಾಲಿಕೆ ಆರೋಪ
ಶುಕ್ರವಾರ ತಮ್ಮ 'X'ನಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ , ನಾನು ಮಾಡಿರುವ ಎಲ್ಲಾ ಆರೋಪಗಳಿಗೆ ಪೂರಕ ಸಾಕ್ಷ್ಯ ಇಲ್ಲಿದೆ. ಅದು ಈ ಫೋನ್‌ನಲ್ಲೇ ಇದೆ. ಪ್ರಧಾನಿಯವರು ನನ್ನ ಫೋನ್ ಟ್ಯಾಪ್ ಮಾಡಿಸುವುದರಿಂದ ಅವರಿಗೆ ಈ ವಿಚಾರ ಗೊತ್ತಿದೆ. ಅವರು ನನ್ನೊಂದಿಗೆ ನೇರ ಚರ್ಚೆಗೆ ಬಂದರೆ, ಯಾರು ವಿದೇಶಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ? ಯಾರು ನಿಜವಾದ ದೇಶವಿರೋಧಿ? ಎಂಬ ಸತ್ಯ ಎಲ್ಲರಿಗೂ ತಿಳಿಯುತ್ತದೆ. ಅವರಿಗೆ ಸಂಬಂಧಿಸಿದ ಇನ್ನೂ ಹಲವು ರಹಸ್ಯ ವಿವರಗಳು ನನಗೆ ತಿಳಿದಿದ್ದು, ಅವೆಲ್ಲವೂ ನನ್ನ ಫೋನ್‌ನಲ್ಲಿವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಜೊತೆಗೆ ಮತ್ತೊಮ್ಮೆ ಬಹಿರಂಗ ಚರ್ಚೆಗೆ ಸವಾಲ್ ಹಾಕಿದ್ದರು.
ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ "ರಾಹುಲ್ ಗಾಂಧಿ ಅವರಿಗೆ ಗೌರವದಿಂದ ಹೇಳುತ್ತೇನೆ, ಅವರು ತಮ್ಮ ತಲೆಯನ್ನು ಪರೀಕ್ಷೆ ಮಾಡಿಕೊಳ್ಳಬೇಕಿದೆ. ಅವರ ಫೋನ್ ಟ್ಯಾಪ್ ಮಾಡಲು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಫೋನ್ ಟ್ಯಾಪ್ ಮಾಡಲು ಯಾರೂ ಆಸಕ್ತಿ ಹೊಂದಿಲ್ಲ, ಯಾರಿಗಾದರೂ ಆಸಕ್ತಿ ಇದ್ದರೂ ಅವರ ಮೆದುಳು ಪ್ರತಿದಿನ ಯಾಕೆ ಸುಳ್ಳುಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು.