Belagavi News: ಸಾಲ ಮರು ಪಾವತಿಸದ್ದಕ್ಕೆ ಹಸುಗೂಸು, ಬಾಣಂತಿಯನ್ನು ಮನೆಯಿಂದ ಹೊರಹಾಕಿದ ಫೈನಾನ್ಸ್ ಕಂಪನಿ!
Belagavi News: ಚೆನ್ನೈ ಮೂಲದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ರೈತರೊಬ್ಬರು ಐದು ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು 14,390 ರೂ.ದಂತೆ 27 ಕಂತುಗಳನ್ನು ಕಟ್ಟಿದ್ದರೂ ನೀವು ಹಣ ಕಟ್ಟಿಲ್ಲ ಎಂದು ಹಸುಗೂಸು, ಬಾಣಂತಿ ಸಮೇತ ಕುಟುಂಬವನ್ನು ಮನೆಯಿಂದ ಫೈನಾನ್ಸ್ ಕಂಪನಿ ಹೊರಹಾಕಿದೆ.
Prabhakara R
January 7, 2025
ಬೆಳಗಾವಿ: ಖಾಸಗಿ ಫೈನಾನ್ಸ್ ಕಂಪನಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಹಸುಗೂಸು, ಬಾಣಂತಿ ಸಮೇತ ಕುಟುಂಬವನ್ನು ಖಾಸಗಿ ಫೈನಾನ್ಸ್ ಕಂಪನಿಯೊಂದು ಪೊಲೀಸರ ಮೂಲಕ ಹೊರ ಹಾಕಿದ ಅಮಾನವೀಯ ಘಟನೆ ಮೂಡಲಗಿ ತಾಲೂಕಿನ (Belagavi News) ನಾಗನೂರ ಗ್ರಾಮದಲ್ಲಿ ನಡೆದಿದೆ.
ಮೈಕೊರೆಯುವ ಚಳಿಯಲ್ಲೇ ಕಂದಮ್ಮನನ್ನು ಕರೆದುಕೊಂಡು ಬಾಣಂತಿ ಹಾಗೂ ಮೂರು ಮಕ್ಕಳ ಸಮೇತ ಏಳು ಜನ ಮನೆಯ ಹೊರಕ್ಕೆ ಬಂದಿದ್ದಾರೆ. ಸಾಲ ಮರು ಪಾವತಿ ಮಾಡಿಲ್ಲ ಅಂತ ಮನೆಯನ್ನು ಸಿಬ್ಬಂದಿ ಸೀಜ್ ಮಾಡಿದ್ದಾರೆ.
ಚೆನ್ನೈ ಮೂಲದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ರೈತ ರೈತ ಸೈದಪ್ಪ ಶಂಕ್ರಪ್ಪ ಗದ್ದಾಡಿ ಅವರು ಹೈನುಗಾರಿಕೆಗಾಗಿ ಐದು ಲಕ್ಷ ಸಾಲ ಪಡೆದಿದ್ದರು. ಎರಡೂವರೆ ವರ್ಷದ ಹಿಂದೆ ಚಿಕ್ಕೋಡಿ ಶಾಖೆಯಲ್ಲಿ ಸಾಲ ಪಡೆದಿದ್ದರು. ಸಾಲ ಪಡೆದು ತೆಗೆದುಕೊಂಡ ಎರಡು ಎಮ್ಮೆಗಳು ಕೂಡ ಸಾವನ್ನಪ್ಪಿವೆ. ಇಷ್ಟಾದರೂ ಈವರೆಗೂ ಪ್ರತಿ ತಿಂಗಳು 14,390 ರೂ.ದಂತೆ 27 ಕಂತುಗಳನ್ನು ರೈತ ಕಟ್ಟಿದ್ದರು. ಮಗಳ ಹೆರಿಗೆಗೆ 85 ಸಾವಿರ ಖರ್ಚು ಮಾಡಿದ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ಕಂತು ಕಟ್ಟಿರಲಿಲ್ಲ. ಆದರೆ ಈವರೆಗೂ ಕಟ್ಟಿದ್ದ ಹಣ ಕಂಪನಿಗೆ ಮುಟ್ಟಿಲ್ಲ ಎಂದು ಐದು ಲಕ್ಷ ಹಣ ಕಟ್ಟುವಂತೆ ಕಂಪನಿ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ. ವಕೀಲರ ಮೂಲಕ ಕಂಪನಿಯಿಂದ ನೋಟಿಸ್ ನೀಡಿ ಮನೆ ಸೀಜ್ ಮಾಡಿದ್ದಾರೆ.
ಮೂಡಲಗಿ ಪೊಲೀಸರ ಮೂಲಕ ಮನೆಯಿಂದ ಬಾಣಂತಿ ಸಮೇತ ಮಕ್ಕಳನ್ನು ಹೊರ ಹಾಕಿ ಸೀಜ್ ಮಾಡಿದೆ. ಇದರಿಂದ ಮೈ ಕೊರೆಯುವ ಚಳಿಯಲ್ಲೇ ಊಟವಿಲ್ಲದೇ ರಾತ್ರಿಯಿಡೀ ಕುಟುಂಬ ಕಳೆದಿದೆ. ಹಣ ಕಟ್ಟಲು ಸಮಯ ಕೊಡಿ ಎಂದರೂ ಲೆಕ್ಕಿಸದೇ ಮನೆಯಿಂದ ಹೊರಕ್ಕೆ ಹಾಕಿದ್ದಾರೆ ಎಂದು ಫೈನಾನ್ಸ್ ಕಂಪನಿ ಹಾಗೂ ಮೂಡಲಗಿ ಪೊಲೀಸರ ನಡೆ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಆವರಣದಲ್ಲಿ ಬಿದ್ದ ಡ್ರೋನ್, ಭಯಬಿದ್ದು ಓಡಿದ ಮಕ್ಕಳು!
ಬೆಳಗಾವಿ: ಶಾಲಾ ಆವರಣದಲ್ಲಿ ಡ್ರೋನ್ ಬಿದ್ದು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ (Belagavi News) ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಲೆ ಬಿಡುವ ಸಂದರ್ಭದಲ್ಲಿ ಏಕಾಏಕಿ ಮೈದಾನದಲ್ಲಿ ವಿಮಾನ ಮಾದರಿಯ ಡ್ರೋನ್ ಬೀಳುತ್ತಿದ್ದಂತೆ ಆತಂಕಗೊಂಡ ಮಕ್ಕಳು ಓಡಿದ್ದಾರೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯ ಫೀನಿಕ್ಸ್ ಶಾಲೆಯಲ್ಲಿ ಸೋಮವಾರ ಘಟನೆ ನಡೆದಿದ್ದು, ಶಿಕ್ಷಕರು ಈ ಬಗ್ಗೆ ತಕ್ಷಣ ಕಾಕತಿ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ, ಡ್ರೋನ್ ವಶಕ್ಕೆ ಪಡೆದರು.
ಡ್ರೋನ್ ಮೇಲಿದ್ದ ಸೀರಿಯಲ್ ನಂಬರ್‌ದಿಂದ ವಿಳಾಸ ಪತ್ತೆ ಹಚ್ಚಿದ್ದಾರೆ. ನಂತರ ಖಾಸಗಿ ಕಂಪನಿಗೆ ಸೇರಿದ ಡ್ರೋನ್ ಎಂಬುದು ಬೆಳಕಿಗೆ ಬಂದಿದ್ದು, ಕಾಕತಿ ಠಾಣೆಗೆ ಕರೆಯಿಸಿಕೊಂಡು ಖಾಸಗಿ ಕಂಪನಿಯವರಿಂದ ದಾಖಲೆ ಪಡೆದು ಪರಿಶೀಲನೆ ಮಾಡಲಾಗಿದೆ. ಜಮೀನು ಸರ್ವೆ ಮಾಡುವುದಕ್ಕೆ ಡ್ರೋನ್ ಬಳಸುತ್ತಿರುವುದಾಗಿ ಹೇಳಿದ ಕಂಪನಿ ಸಿಬ್ಬಂದಿ ಹೇಳಿದ್ದಾರೆ.