ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shivanand Koujalagi: ಮಾಜಿ ಲೋಕೋಪಯೋಗಿ ಸಚಿವ ಶಿವಾನಂದ ಕೌಜಲಗಿ ನಿಧನ

ಶಾಸಕ ಮಹಾಂತೇಶ ಕೌಜಲಗಿ ಅವರ ತಂದೆಯಾದ ಶಿವಾನಂದ ಅವರು, ಮೂರು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ದಶಕದಿಂದ ಈಚೆಗೆ ರಾಜಕೀಯ ಚಟುವಟಿಕೆಗಳಿಂದಲೂ ದೂರವಿದ್ದರು. ಶನಿವಾರ ಮುಂಜಾನೆ 11 ಗಂಟೆಗೆ ಆನಿಗೋಳ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮಾಜಿ ಲೋಕೋಪಯೋಗಿ ಸಚಿವ ಶಿವಾನಂದ ಕೌಜಲಗಿ ನಿಧನ

-

Prabhakara R
Prabhakara R Oct 30, 2026 4:41 PM

ಬೈಲಹೊಂಗಲ: ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ಲೋಕೋಪಯೋಗಿ ಸಚಿವ, ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಾನಂದ ಎಚ್. ಕೌಜಲಗಿ ಶುಕ್ರವಾರ ಬೆಳಗ್ಗೆ ನಿಧನರಾದರು. ಅವರಿಗೆ ಪತ್ನಿ, ಪುತ್ರರಾದ ಶಾಸಕ ಮಹಾಂತೇಶ ಕೌಜಲಗಿ, ಕಾಂಗ್ರೆಸ್ ಮುಖಂಡ ಬಸವರಾಜ ಕೌಜಲಗಿ, ಪುತ್ರಿ ಇದ್ದಾರೆ.

ಕಿತ್ತೂರು ಕರ್ನಾಟಕ ಭಾಗದಲ್ಲಿ ಇವರು ಅತ್ಯಂತ ಹಿರಿಯ, ಸಜ್ಜನ ಹಾಗೂ ಸೌಮ್ಯ ಸ್ವಭಾವದ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಅವರು ಮಾಡಿದ ಹಲವು ಅಭಿವೃದ್ಧಿ ಕಾರ್ಯಗಳು ಈಗಲೂ ಜನೋಪಯೋಗಿ ಆಗಿವೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಜ್ಯದ ಅತ್ಯುತ್ತಮ ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ.

ಮೃತರ ಅಂತ್ಯಕ್ರಿಯೆ ಶನಿವಾರ ಮುಂಜಾನೆ 11 ಗಂಟೆಗೆ ಆನಿಗೋಳ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್‌ ಸಂತಾಪ

ಬೈಲಹೊಂಗಲ ಕಾಂಗ್ರೆಸ್‌ ಶಾಸಕ ಶ್ರೀ ಮಹಾಂತೇಶ ಕೌಜಲಗಿ ಅವರ ತಂದೆ, ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವರು ಹಾಗೂ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶ್ರೀ ಶಿವಾನಂದ ಕೌಜಲಗಿ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬೈಲಹೊಂಗಲ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿದ್ದರು. ಶಿಕ್ಷಣ, ಸಹಕಾರ ಮತ್ತು ಸಮಾಜ ಸೇವೆಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಸಾರ್ವಜನಿಕ ಜೀವನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಶ್ರೀಯುತರ ಅಗಲಿಕೆ ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಅವರನ್ನು ಹತ್ತಿರದಿಂದ ಬಲ್ಲ ರಾಜಕೀಯ ಮತ್ತು ಸಾಮಾಜಿಕ ವಲಯದವರಿಗೂ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಕೌಜಲಗಿ ಅವರ ಕುಟುಂಬದ ಸದಸ್ಯರು, ಬಂಧುಗಳು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಿಎಂ ತಿಳಿಸಿದ್ದಾರೆ.