Belagavi News, ಎಂಇಎಸ್ ಮುಖಂಡರ ಜತೆ ಸೆಲ್ಫಿ ತೆಗೆದುಕೊಂಡ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ: ಗೃಹ ಸಚಿವ ಪರಮೇಶ್ವರ್
Selfie with MES leaders: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಕಪ್ಪು ಬಟ್ಟೆ ಧರಿಸಿ ಕರಾಳ ದಿನಾಚರಣೆ ಆಚರಿಸಲು ಬಂದಿದ್ದ ಎಂಇಎಸ್ ಮುಖಂಡರ ಜತೆ ಮಾಳ ಮಾರುತಿ ಠಾಣೆಯ ಸಿಪಿಐ ಜಾಕೀರ್ ಪಾಷಾ ಕಾಲಿಮಿರ್ಚಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದರು. ಹೀಗಾಗಿ ಅವರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರು. ಇದೀಗ ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.
-
Prabhakara R
Nov 1, 2025 4:30 PM
ತುಮಕೂರು, ನ.1: ಬೆಳಗಾವಿಯಲ್ಲಿ ಎಂಇಎಸ್ ಮುಖಂಡರ ಜತೆಗೆ ಸೆಲ್ಫಿ ತೆಗೆದುಕೊಂಡ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸೆಲ್ಫಿ ತೆಗೆದುಕೊಂಡ ಮಾತ್ರಕ್ಕೆ ಕನ್ನಡ ವಿರೋಧಿ ಮನಸ್ಥಿತಿ ಹೊಂದಿದ್ದಾರೆ ಎಂದು ಭಾವಿಸಲಾಗದು. ಕನ್ನಡ ನಾಡಿನ ಬದ್ಧತೆ, ತತ್ವಕ್ಕೆ ವಿರುದ್ಧವಾಗಿ ಹೋಗುವ ಯಾವುದೇ ಅಧಿಕಾರಿ, ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಕನ್ನಡ ನಾಡು, ನೆಲ, ಜಲ, ಭಾಷೆ ರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತರ ಸಮಾವೇಶಕ್ಕೆ ಹೈಕಮಾಂಡ್ ತಡೆ ಹಾಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದಲಿತರ ಸಮಾವೇಶಕ್ಕೆ ಯಾರೂ ಬ್ರೇಕ್ ಹಾಕಿಲ್ಲ. ಆಗುವ ಸಮಯದಲ್ಲಿ ಆಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಏನಿದು ಪ್ರಕರಣ?
ಕನ್ನಡ ರಾಜ್ಯೋತ್ಸವದಂದು ಕಪ್ಪು ಬಟ್ಟೆ ಧರಿಸಿ ಕರಾಳ ದಿನಾಚರಣೆ ಆಚರಿಸಲು ಬಂದಿದ್ದ ಎಂಇಎಸ್ ಮುಖಂಡರ ಜತೆ ಮಾಳ ಮಾರುತಿ ಠಾಣೆಯ ಸಿಪಿಐ ಜಾಕೀರ್ ಪಾಷಾ ಕಾಲಿಮಿರ್ಚಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದರು.
ಬೆಳಗಾವಿಯ ಸಂಭಾಜಿ ಉದ್ಯಾನವನದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಕರಾಳ ದಿನ ಆಚರಣೆಗಾಗಿ ನಾಡ ದ್ರೋಹಿ ಎಂಇಎಸ್ ಮುಖಂಡ ಶುಭಂ ಶೆಳಕೆ ಹಾಗೂ ಸಹಚರರು ಬಂದಿದ್ದರು. ಈ ವೇಳೆ ಅವರ ಜತೆ ಸಿಪಿಐ ಸೆಲ್ಫಿ ತೆಗೆದುಕೊಂಡಿದ್ದರು. ಸಿಪಿಐ ನಡೆ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಹಿಂದೆ ಶುಭಂ ಸೆಳಕೆ ವಿರುದ್ಧ ಭಾಷಾ ಸಾಮರಸ್ಯ ಕೆಡಿಸುವ ವಿವಾದಾತ್ಮಕ ಹೇಳಿಕೆ, ಶಾಂತಿ ಭಂಗ ಪಡಿಸಿದ ಹಿನ್ನೆಲೆಯಲ್ಲಿ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕರಾಳ ದಿನ ಆಚರಣೆಗೆ ಅನುಮತಿ ಇಲ್ಲ. ಆದರೂ ಲಿಲೇ ಮೈದಾನದಲ್ಲಿ ಕರಾಳ ದಿನ ಆಚರಿಸಲು ಎಂಇಎಸ್ ಪುಂಡರು ಮುಂದಾಗಿದ್ದಾರೆ.
ಎಂಇಎಸ್ ಪುಂಡರಿಂದ ಕರಾಳ ದಿನ ಆಚರಣೆ

ಬೆಳಗಾವಿ: ರಾಜ್ಯಾದ್ಯಂತ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಾತ್ರ ನಾಡದ್ರೋಹಿ ಎಂಇಇಎಸ್ ಪುಂಡರು ಪುಂಡಾಟಿಕೆ ಮುಂದುವರಿಸಿದ್ದಾರೆ. ಬೆಳಗಾವಿಯಲ್ಲಿಯೂ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ, ಈ ನಡುವೆ ನಾಡದ್ರೋಹಿ ಎಂಇಎಸ್ ಪುಂಡರು ಕರಾಳದಿನ ಆಚರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Narendra Modi: 70 ನೇ ರಾಜ್ಯೋತ್ಸವದ ಶುಭಾಶಯಗಳು; ಕನ್ನಡದಲ್ಲಿಯೇ ಶುಭ ಕೋರಿದ ಮೋದಿ
ಎಂಇಎಸ್ ಕರಾಳದಿನ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅವನುಮತಿ ನೀಡಿಲ್ಲ. ಕರಾಳದಿನ ಆಚರಣೆಗೆ ನಿಷೇಧವಿದ್ದರೂ ಪುಂಡಾಟ ಮೆರೆದಿರುವ ಎಂಇಎಸ್ ಕಾರ್ಯಕರ್ತರು ಬೆಳಗಾವಿಯ ಸಂಭಾಜಿ ವೃತ್ತದಿಂದ ಕಪ್ಪು ಬಟ್ಟೆ, ಕಪ್ಪು ಪಟ್ಟಿ ಧರಿಸಿ, ಮೆರವಣಿಗೆ ನಡೆಸಿದ್ದಾರೆ.