ಮಹಿಳಾ ಅಧಿಕಾರಿ ಮನೆಯಲ್ಲಿ ಸೀಕ್ರೆಟ್ ಕ್ಯಾಮೆರಾ ಇಟ್ಟು ಖಾಸಗಿ ವಿಡಿಯೊ ಚಿತ್ರೀಕರಣ; ಬ್ಲ್ಯಾಕ್‌ಮೇಲ್ ಮಾಡಿದ 3 ಯೂಟ್ಯೂಬರ್‌ಗಳ ಅರೆಸ್ಟ್
ಮನೆಯಲ್ಲಿ ಮಹಿಳಾ ಅಧಿಕಾರಿಯು ಸ್ನೇಹಿತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೊ ಮಾಡಿಕೊಂಡಿದ್ದ ಯೂಟ್ಯೂಬರ್‌ಗಳು, ಅವುಗಳನ್ನು ತೋರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ ಅಧಿಕಾರಿ ನೀಡಿದ ದೂರಿನ ಮೇರೆಗೆ ಮೂವರ ಬಂಧನವಾಗಿದೆ.
ಬೆಳಗಾವಿಯಲ್ಲಿ ಬಂಧಿನವಾಗಿರುವ ಯೂಟ್ಯೂಬರ್‌ಗಳು. -
ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ಅವರ ಖಾಸಗಿ ವಿಡಿಯೊಗಳನ್ನು ಚಿತ್ರೀಕರಿಸಿ, 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಯೂಟ್ಯೂಬರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ್‌ನ ಅಬ್ದುಲ್‌ರಷೀದ್ ನಜರ್ ಅಹಮದ್ ಮಕಾನದಾರ (51), ಸಮೀರ್ ನಿಸಾರ್‌ಅಹಮದ್ ಶೇಖ್ (32), ಮೊಹಮ್ಮದ್ ದಿಲಾವರ ನಜೀರ್‌ಅಹಮದ್ ಬಾಳೇಕಿಂದ್ರಿ (45) ಬಂಧಿತರಾಗಿದ್ದಾರೆ.
ಆರೋಪಿಗಳಿಂದ ವಿಡಿಯೊಗಳು, ಮೈಕ್ರೋ ಸೀಕ್ರೆಟ್ ಕ್ಯಾಮೆರಾಗಳು, ಲ್ಯಾಪ್‌ಟಾಪ್, ಪೆನ್‌ಡ್ರೈವ್, ಮೊಬೈಲ್, ಚಿಪ್‌ಗಳು, ಸಿಮ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇವರ ತಂಡದಲ್ಲಿ ಇನ್ನೂ ಯಾರಿದ್ದಾರೆ? ಯಾರ ಸಹಾಯ ಪಡೆದಿದ್ದಾರೆ. ಯಾರಿಗೆ ವಿಡಿಯೊ ಹಂಚಿದ್ದಾರೆ ಎಂಬ ವಿವರಗಳ ಕುರಿತು ತನಿಖೆ ನಡೆಸಲಾಗುತ್ತಿದೆ.
ಏನಿದು ಘಟನೆ?
ನಗರದಲ್ಲಿ ವಾಸವಾಗಿರುವ ಮಹಿಳಾ ಅಧಿಕಾರಿಯೊಬ್ಬರ ಮನೆಗೆ ಸ್ನೇಹಿತರೊಬ್ಬರು ಆಗಾಗ ಬರುತ್ತಿದ್ದರು. ಪ್ರತಿ ದಿನ ಕಚೇರಿಗೆ ಹೋಗುವ ಮುನ್ನ ಮನೆಯ ಬೀಗದ ಕೈಯನ್ನು ಕಿಟಕಿಯಲ್ಲೇ ಇಟ್ಟು ಹೋಗುತ್ತಿದ್ದರು. ಮನೆಯ ಕೆಲಸಗಾರನೊಬ್ಬ ಈ ವಿಷಯವನ್ನು ಯೂಟ್ಯೂಬರ್‌ಗಳಿಗೆ ತಿಳಿಸಿದ್ದ.
ಹೊಂಚುಹಾಕಿದ ಮೂವರೂ ಯೂಟ್ಯೂಬರ್‌ಗಳು ಅಧಿಕಾರಿ ಮನೆ ಪ್ರವೇಶಿಸಿ, 11 ಕಡೆ ಬಲ್ಟ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟಿದ್ದರು. ಮಹಿಳಾ ಅಧಿಕಾರಿ ತಮ್ಮ ಸ್ನೇಹಿತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೊ ಮಾಡಿಕೊಂಡಿದ್ದರು. ಅವುಗಳನ್ನು ತೋರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು.
ಬೆದರಿಕೆಗೆ ಅಂಜಿ ಗಂಡ ಆತ್ಮಹತ್ಯೆ; ಆರೋಪಿಗಳನ್ನು ಬಂಧಿಸದ ಪೊಲೀಸರ ವಿರುದ್ಧ ನೊಂದ ಪತ್ನಿ ಆಕ್ರೋಶ
ಈ ಬಗ್ಗೆ ಮಹಿಳಾ ಅಧಿಕಾರಿ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಬಿ.ಆರ್.ಗಡೇಕರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.