Ramadurga: ರಾಮದುರ್ಗ: ಭೂ ದಾಖಲೆಗಳ ಅಭಿಲೇಖಾಲಯದ ಗಣಕೀರಣ ವ್ಯವಸ್ಥೆಗೆ ಚಾಲನೆ
Ramadurga: ರಾಮದುರ್ಗ: ಭೂ ದಾಖಲೆಗಳ ಅಭಿಲೇಖಾಲಯದ ಗಣಕೀರಣ ವ್ಯವಸ್ಥೆಗೆ ಚಾಲನೆ
Ashok Nayak
January 11, 2025
ರಾಮದುರ್ಗ: ಸರಕಾರಿ ದಾಖಲೆಗಳು ಗಣಕೀಕರಣ ಗೊಂಡಲ್ಲಿ ಜನತೆಗೆ ವಿವಿಧ ಇಲಾಖೆಗಳೊಂದಿಗೆ ತಮ್ಮ ಪತ್ರ ವ್ಯವಹಾರ ಮಾಡಲು ಮತ್ತಷ್ಟು ಪಾರದರ್ಶಕತೆ ದೊರೆತು, ತ್ವರಿತ ಗತಿಯಲ್ಲಿ ದಾಖಲೆಗಳು ಲಭ್ಯವಾಗಲು ಸಹಕಾರಿಯಾಗುತ್ತದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಭೂಮಾಪನ ಇಲಾಖೆಯ ಅಭಿಲೇಖಾಲಯದಲ್ಲಿ ಗಣಕೀಕರಣ ವ್ಯವಸ್ಥೆಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲಾಖೆಯ ಅಧಿಕಾರಿಗಳು ಸರಕಾರದ ಸೌಲಭ್ಯಗಳನ್ನು ಜನತೆಗೆ ವಿಳಂಭ ಮಾಡದೇ ತಲುಪಿಸುವ ಕಾರ್ಯ ಮಾಡಬೇಕು. ವಿನಾಕಾರಣ ಜನತೆಯನ್ನು ಅಲೆದಾಡಿಸಿದ ಕುರಿತು ದೂರು ಕೇಳಿ ಬರದಂತೆ ನೋಡಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಸರ್ವೇ ಇಲಾಖೆಯಲ್ಲಿ ಕೆಲವು ಅಗತ್ಯ ದಾಖಲೆಗಳನ್ನು ಬರವಣಿಗೆ ರೂಪದಲ್ಲಿ ಜನತೆಗೆ ಒದಗಿಸಲಾಗುತ್ತಿತ್ತು. ಬಹುತೇಕ ದಾಖಲೆಗಳನ್ನು ಗಣಕೀಕರಣ ಮಾಡುವ ವ್ಯವಸ್ಥೆ ಯನ್ನು ಸರಕಾರ ಜಾರಿಗೊಳಿಸಿದೆ. ಸರಕಾರದ ನಿರ್ದೇಶನದಂತೆ ತಾಲೂಕಿನ ಜನತೆಗೆ ಯಾವುದೇ ತೊಂದರೆ ಯಾಗದಂತೆ ಅವರ ದಾಖಲೆಗಳನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಭೂದಾಖಲೆಗಳ ಅಭಿಲೇಖಾಲಯದ ಸಹಾಯಕ ನಿರ್ದೇಶಕ ಪ್ರಕಾಶ ಸತ್ತಿಗೇರಿ ಮಾತನಾಡಿ, ಸರ್ವೇ ಇಲಾಖೆಯಲ್ಲಿನ ದಾಖಲೆಗಳನ್ನು ರೈತರಿಗೆ ಒದಗಿಸಲು ಅವುಗಳ ಹುಡುಕಾಟದಲ್ಲಿ ಸಮಯ ವ್ಯರ್ಥವಾಗುತ್ತಿತ್ತು. ಅವುಗಳ ಗಣಕೀ ಕರಣದಿಂದ ರೈತರಿಗೆ ಶೀಘ್ರ ದಾಖಲೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಗ್ರೇಡ್-೨ ತಹಶೀಲ್ದಾರ ಸಿದ್ಧಾರೂಢ ಬನ್ನಿಕೊಪ್ಪ, ಸಿಡಿಪಿಓ ಶಂಕರ ಕುಂಬಾರ, ಸವೇ ಇಲಾಖೆಯ ಸಂಜೀವಕುಮಾರ ಕಡ್ಲಸ್ಕರ, ಶಿರಸ್ತೆದಾರ ಚೊಳಚಗುಡ್ಡ, ಆಹಾರ ಇಲಾಖೆಯ ಈಶ್ವರ, ಸಂಜೀವ ಹಮ್ಮನ್ನವರ, ಸಂಜಯ ಖಾತೆದಾರ ಸೇರಿದಂತೆ ಇತರರಿದ್ದರು.