Laxmi Hebbalkar: ಮಠಗಳ ಸೇವಾ ಕಾರ್ಯ ಸರ್ಕಾರಕ್ಕೆ ಸ್ಫೂರ್ತಿ: ಲಕ್ಷ್ಮಿ ಹೆಬ್ಬಾಳ್ಕರ್
ಸರ್ಕಾರಕ್ಕೆ ಸಮಾನವಾಗಿ ಸಾಮಾಜಿಕ ಕೆಲಸ ಕಾರ್ಯಗಳನ್ನು ನಮ್ಮ ಶ್ರೀಮಠಗಳು ಮಾಡುತ್ತಿವೆ. ಅಕ್ಷರ ದಾಸೋಹ, ಅನ್ನ, ಆರೋಗ್ಯ ದಾಸೋಹಗಳನ್ನು ಸರ್ಕಾರ ಕಾಪಿ ಮಾಡುತ್ತಿವೆ. ಮಠಗಳ ಕೆಲಸವೇ ಸರ್ಕಾರಕ್ಕೆ ಸ್ಫೂರ್ತಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಡಾ.ಶಿವಬಸವ ಶ್ರೀಗಳ ಜಯಂತಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್. -
ಬೆಳಗಾವಿ, ಡಿ.8: ಕರ್ನಾಟಕದ ಮಠಾಧೀಶರು, ಮಠಗಳು ತ್ರಿವಿಧ ದಾಸೋಹಗಳನ್ನು ಆರಂಭಿಸುವ ಮೂಲಕ ಸರ್ಕಾರಕ್ಕೆ ಸ್ಫೂರ್ತಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು. ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಮಹಾಸ್ವಾಮಿಗಳವರ 136ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾನು ಮೊದಲಿನಿಂದಲೂ ಮಠಾಧೀಶರ ಆಶೀರ್ವಾದದಿಂದ ಬೆಳೆದಿರುವೆ, ಈ ಮಠಕ್ಕೂ ನಮ್ಮ ಮನೆತನಕ್ಕೂ ನೂರಾರು ವರ್ಷಗಳ ಸಂಬಂಧ ಇದೆ ಎಂದು ತಿಳಿಸಿದರು.
ಸರ್ಕಾರಕ್ಕೆ ಸಮಾನವಾಗಿ ಸಾಮಾಜಿಕ ಕೆಲಸ ಕಾರ್ಯಗಳನ್ನು ನಮ್ಮ ಶ್ರೀಮಠಗಳು ಮಾಡುತ್ತಿವೆ. ಅಕ್ಷರ ದಾಸೋಹ, ಅನ್ನ, ಆರೋಗ್ಯ ದಾಸೋಹಗಳನ್ನು ಸರ್ಕಾರ ಕಾಪಿ ಮಾಡುತ್ತಿವೆ. ಮಠಗಳ ಕೆಲಸವೇ ಸರ್ಕಾರಕ್ಕೆ ಸ್ಫೂರ್ತಿಯಾಗಿದೆ ಎಂದರು.
ನಾಗನೂರು ಮಠದ ಹಿರಿಯ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಸಾಗುತ್ತಿದ್ದೇವೆ. ಕರ್ನಾಟಕ ಏಕೀಕರಣಕ್ಕೆ ಅವರ ಕೊಡುಗೆ ಅಪಾರ, ಸ್ವಾತಂತ್ರ್ಯ ಹೋರಾಟದಲ್ಲೂ ಅವರ ಶ್ರಮ ಸಾಕಷ್ಟಿದೆ. ಸಮಾಜದ ಮಗಳು ಎನ್ನುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸಮಾಜ ಯಾವ ಕಡೆಗೆ ಸಾಗುತ್ತಿದೆ ಎಂಬುದನ್ನು ನಾವು ನೋಡಬೇಕು. ಜಾತ್ಯಾತೀತ ನಿಲುವಿನ ಮೇಲೆ ನಾವು ನಿಲ್ಲಬೇಕು, ಧರ್ಮದಿಂದ ಜೀವನ ನಡೆಸಬೇಕು. ಆಧ್ಯಾತ್ಮಿಕ ಗುರುಗಳ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳಬೇಕು. ಮಠದ ಕೆಲಸ ಕಾರ್ಯಗಳಿಗೆ ಸದಾ ಬೆಂಬಲಿಸುವೆ, ಸರ್ಕಾರದ ವತಿಯಿಂದ ಯಾವುದೇ ಕೆಲಸಗಳಿದ್ದರೂ ಮಾಡಿಕೊಡುವೆ ಎಂದರು.
ಮಹಿಳೆಯರು ಮುಖ್ಯವಾಹಿನಿಗೆ ಬರಬೇಕೆಂಬುದೇ ನಮ್ಮ ಸರ್ಕಾರದ ಉದ್ದೇಶ: ಹೆಬ್ಬಾಳ್ಕರ್
ಈ ಸಂದರ್ಭದಲ್ಲಿ ಗದಗದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಮನ್ನಿರಂಜನ ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ಧಾರವಾಡದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಬೆಟ್ಟದಪುರದ ಸಲೀಲಾಖ್ಯ ವಿರಕ್ತಮಠದ ಚನ್ನಬಸವ ದೇಶಿಕೇಂದ್ರ ಮಹಾಸ್ವಾಮೀಜಿ, ಅಲ್ಲಮ ಪ್ರಭು ಮಹಾಸ್ವಾಮೀಜಿ, ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ಎಫ್. ಪಿ.ಡಬ್ಲ್ಯೂ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕ ಡಾ. ಬಸನಗೌಡ ಪಾಟೀಲ, ವಿಟಿಯು ಕುಲ ಸಚಿವ ಡಾ. ಪ್ರಸಾದ್ ರಾಂಪೂರೆ, ಸೇವಾರತ್ನ ಪ್ರಶಸ್ತಿ ಪುರಸ್ಕೃತ ಬಸಲಿಂಗಣ್ಣ ವಣ್ಣೂರ, ಕಾವೇರಿ ಕಿಲಾರಿ, ಬಾಳಪ್ಪ ದೊಡ್ಡಬಂಗಿ, ಚನ್ನಪ್ಪ ನರಸಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.