ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ರೀಲ್ಸ್‌ ಗೀಳು ತಂದ ಆಪತ್ತು; ರೈಲು ಡಿಕ್ಕಿಯಾಗಿ ಮೂವರು ಯುವಕರ ಸಾವು

ರೀಲ್ಸ್​ ಮಾಡುವಾಗ ರೈಲು ಡಿಕ್ಕಿ ಹೊಡೆದು ಉತ್ತರ ಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಸಿದ್ದೆನಾಯಕನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ. ಯಶವಂತಪುರ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರೀಲ್ಸ್‌ ಗೀಳು ತಂದ ಆಪತ್ತು; ರೈಲು ಡಿಕ್ಕಿಯಾಗಿ ಮೂವರು ಸಾವು

ಸಾಂದರ್ಭಿಕ ಚಿತ್ರ.

Profile Ramesh B Feb 19, 2025 11:45 PM

ದೊಡ್ಡಬಳ್ಳಾಪುರ: ರೀಲ್ಸ್‌ (Reels) ಹುಚ್ಚಿಗೆ ಮತ್ತೆ 3 ಜೀವ ಬಲಿಯಾಗಿದೆ. ರೀಲ್ಸ್​ ಮಾಡುವಾಗ ರೈಲು ಡಿಕ್ಕಿ ಹೊಡೆದು ಉತ್ತರ ಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural)ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಸಿದ್ದೆನಾಯಕನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ. ಮೃತರನ್ನು ರಾಹುಲ್ (18), ಬಿಕೇಶ್ (20) ಮತ್ತು ಲಲನ್ (24) ಎಂದು ಗುರುತಿಸಲಾಗಿದೆ. ಯಶವಂತಪುರ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಮೃತ ಯುವಕರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ರೈಲ್ವೆ ಹಳಿ ಬಳಿ ಬಂದು ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿಯಾಗಿ ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಹಳಿಗಳ ಮೇಲೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸತ್ಯ ಸಾಯಿ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಹಳಿ ಮೇಲಿದ್ದ ಮೃತದೇಹಗಳನ್ನ ಕಂಡು ಸ್ಥಳಿಯರಿಂದ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ಈಜಲು ಹೋದ ವೈದ್ಯೆ ನೀರು ಪಾಲು

ಕೊಪ್ಪಳ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ವೈದ್ಯೆ ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ (Koppala News). ಹೈದರಾಬಾದ್ ಮೂಲದ ಅನನ್ಯ ರಾವ್ ​(26) ನೀರಿನಲ್ಲಿ ಕೊಚ್ಚಿ ಹೋದ ವೈದ್ಯೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ‌ ಅನನ್ಯ ರಾವ್ ಮಂಗಳವಾರ (ಫೆ. 18) ಮೂವರು ಸ್ನೇಹಿತರ ಜತೆಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಈ ದುರಂತ ನಡೆದಿದೆ. ಬುಧವಾರ ಬೆಳಗ್ಗೆ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಅವರು ನೀರು ಪಾಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೀಲ್ಸ್‌ಗಾಗಿ ಅನನ್ಯಾ ಮೇಲಿನಿಂದ ನದಿಗೆ ಹಾರಿದ್ದರು ಎನ್ನಲಾಗಿದೆ. ಸದ್ಯ ನದಿಗೆ ಹಾರಿದ್ದ ಅನನ್ಯ ರಾವ್‌ ಕೊಚ್ಚಿಕೊಂಡು ಹೋಗಿರುವ ವಿಡಿಯೊ ವೈರಲ್‌ ಆಗಿದೆ. ನೀರಲ್ಲಿ ಈಜಲು ಜಿಗಿಯುತ್ತಿರುವ ವಿಡಿಯೊವನ್ನು ಅವರ ಸ್ನೇಹಿತರು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಸುಮಾರು 20 ಅಡಿ ಎತ್ತರದಿಂದ ಅವರು ನದಿಗೆ ಜಿಗಿದು, ಈಜಲು ಯತ್ನಿಸುತ್ತಿರುವ ದೃಶ್ಯ ಈ ವಿಡಿಯೊದಲ್ಲಿ ಸೆರೆಯಾಗಿದೆ. ಅವರ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ವ್ಯಾಪಕ ಹುಡುಕಾಟ ನಡೆಸಿವೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ: ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ

ವಿಡಿಯೊದಲ್ಲಿ ಏನಿದೆ?

ದೂರದಲ್ಲಿ ನಿಂತಿದ್ದ ವ್ಯಕ್ತಿಯೋರ್ವ 1, 2, 3 ಜಂಪ್ ಎಂದು ಹೇಳಿದ ತಕ್ಷಣ ಅನನ್ಯ ರಾವ್ ನದಿಗೆ ಜಿಗಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೊ ನೋಡಿ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಇಂತಹ ಅಪಾಯಕಾರಿ ಹುಚ್ಚಾಟ ನಿಲ್ಲಿಸಿ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.