Soil Mafia: ಸರ್ಕಾರಿ ಗೋಮಾಳದಲ್ಲಿ ಮಣ್ಣು ಮಾಫಿಯಾ ಅವ್ಯಾಹತ; ಅಧಿಕಾರಿಗಳು ಶಾಮೀಲು ಶಂಕೆ
Soil Mafia: ನೆಲಮಂಗಲ ತಾಲೂಕಿನಲ್ಲಿ ಕೆಂಪು ಮಣ್ಣಿನ ಹಗಲುದರೋಡೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಯಂತ್ರಗಳ ಮೂಲಕ ಅಕ್ರಮವಾಗಿ ಮಣ್ಣು ಸಾಗಣೆ ದಿನನಿತ್ಯ ನಿರಂತರವಾಗಿ ನಡೆಯುತ್ತಿದ್ದು, ಲಕ್ಷಾಂತರ ರೂ. ಬೆಲೆ ಬಾಳುವ ಸುಮಾರು 10 ರಿಂದ 15 ಸಾವಿರ ಲೋಡ್ ಮಣ್ಣು ದೋಚಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.


ನೆಲಮಂಗಲ: ತಾಲೂಕಿನಲ್ಲಿ ಕೆಂಪು ಮಣ್ಣಿನ ಹಗಲುದರೋಡೆ ಎಗ್ಗಿಲ್ಲದೇ ಸಾಗಿದ್ದು, ಈಗ ಸರ್ಕಾರದ ಜಮೀನಿನ ಮಣ್ಣನ್ನೇ (Soil Mafia) ಲೂಟಿ ಹೊಡೆಯುತ್ತಿರುವ ಆರೋಪ ಕೇಳಿಬಂದಿದೆ. ತಾಲೂಕಿನ ಸೋಂಪುರ ಹೋಬಳಿಯ ನಿಜಗಲ್ ಕೆಂಪೋಹಳ್ಳಿಯ ಸರ್ವೆ ನಂಬರ್ 35 ರ 24 ಎಕರೆ ವಿಸ್ತಾರದ ಜಮೀನಿನ ಮೇಲೆ ಮಣ್ಣುಗಳ್ಳರ ದೃಷ್ಟಿ ಬಿದ್ದಿದ್ದು, ಜಮೀನಿನಲ್ಲಿ ಜೆಸಿಬಿ ಸಹಾಯದಿಂದ ಟಿಪ್ಪರ್‌ಗಳನ್ನು ಬಳಸಿಕೊಂಡು ಹಗಲು- ರಾತ್ರಿಯೆನ್ನದೇ ಕೆಂಪು ಮಣ್ಣನ್ನು ಬಗೆದು ಸಾಗಿಸಲಾಗುತ್ತಿದೆ. ಮನೆ ಕಟ್ಟುವವರು, ಕಾರ್ಖಾನೆ, ರಸ್ತೆ ಇತ್ಯಾದಿ ನಿರ್ಮಾಣ ಕಾಮಗಾರಿಗೆ ಕೆಂಪು ಮಣ್ಣು(ಗೊರಚು) ಅಗತ್ಯವಿದ್ದು, ಇದನ್ನೇ ಲೂಟಿಕೋರರು ಬಂಡವಾಳ ಮಾಡಿಕೊಂಡಿದ್ದಾರೆ.
ಯಂತ್ರಗಳ ಮೂಲಕ ಅಕ್ರಮವಾಗಿ ಮಣ್ಣು ಸಾಗಣೆ ದಿನನಿತ್ಯ ನಿರಂತರವಾಗಿ ನಡೆಯುತ್ತಿದ್ದು, ಲಕ್ಷಾಂತರ ರೂ. ಬೆಲೆ ಬಾಳುವ ಸುಮಾರು 10 ರಿಂದ 15 ಸಾವಿರ ಲೋಡ್ ಮಣ್ಣು ದೋಚಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದ್ದ ಅಧಿಕಾರಿಗಳು ಮಾಫಿಯಾದವರ ಜತೆ ಶಾಮೀಲಾಗಿರುವ ಆರೋಪ ಕೇಳಿಬಂದಿದೆ.
ಗೋಮಾಳದ ಫಲವತ್ತಾದ ಮಣ್ಣು ದಂಧೆಕೋರರ ಪಾಲಾಗುತ್ತಿದೆ ಹಾಗೂ ಸ್ಥಳೀಯ ಪ್ರಭಾವಿಗಳ ಕುಮ್ಮಕ್ಕಿನಿಂದ ನಡೆಯುತ್ತಿದೆ ಎನ್ನಲಾಗಿದೆ. ಇದರಿಂದ ಅಪಾರ ಸಂಖ್ಯೆಯ ಮರಗಳು ಕಣ್ಮರೆಯಾಗುತ್ತಿವೆ. ಆದಾಗ್ಯೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಕೆಂಪು ಮಣ್ಣಿಗೆ ಭಾರಿ ಬೇಡಿಕೆ
ಕಾರ್ಖಾನೆಗಳು, ನಿವೇಶನಗಳು, ರಸ್ತೆಗಳ ನಿರ್ಮಾಣಕ್ಕೆ ಈ ಮಣ್ಣಿನ ಬೇಡಿಕೆ ಇದ್ದು, ಅದರಲ್ಲೂ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಕೆಂಪು ಮಣ್ಣಿಗೆ ಭಾರಿ ಬೇಡಿಕೆ ಇದೆ. ಒಂದು ಲೋಡ್‌ಗೆ 5 ರಿಂದ 8 ಸಾವಿರ ನಿಗದಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ದಿನನಿತ್ಯ ಸರ್ಕಾರಿ ಗೋಮಾಳದಲ್ಲಿ ಹಿಟಾಚಿ ಜೆಸಿಬಿಗಳಿಂದ ಮಣ್ಣು ತೆಗೆಸಿ ನೂರಾರು ಟಿಪ್ಪರ್‌ಗಳ ಮೂಲಕ ಮಣ್ಣು ಸಾಗಿಸುತ್ತಿದ್ದು, ಈ ಅಕ್ರಮ ವಹಿವಾಟಿನಿಂದ ಮಧ್ಯವರ್ತಿಗಳು ಲಕ್ಷಾಂತರ ಸಂಪಾದಿಸುತ್ತಿದ್ದಾರೆ.

ಸರ್ಕಾರಕ್ಕೆ ರಾಜಧನ ಖೋತಾ
ನಿಯಮದ ಪ್ರಕಾರ ಕೃಷಿಗೆ ಯೋಗ್ಯವಲ್ಲದ ಗುಡ್ಡ ಪ್ರದೇಶ ಹಾಗೂ ಸರ್ಕಾರಿ ಜಮೀನಿನಲ್ಲಿ ಮಣ್ಣು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು, ಇಲಾಖೆ ನಿಗದಿಪಡಿಸುವ ರಾಯಲ್ಟಿ ಪಾವತಿಸಿ ಗಣಿಗಾರಿಕೆ ನಡೆಸಬೇಕು. ಆದರೆ, ಮಣ್ಣು ದಂಧೆ ಕೋರರು ಪ್ರಭಾವಿಗಳು ಹಾಗೂ ಅಧಿಕಾರಿಗಳ ಬೆಂಬಲದಿಂದ ಸರ್ಕಾರಿ ಗೋಮಾಳದಲ್ಲಿ ಹತ್ತಾರು ಅಡಿ ಆಳದವರೆಗೂ ಮಣ್ಣು ಗಣಿಗಾರಿಕೆ ನಡೆಸುತ್ತಾ ಸರ್ಕಾರಕ್ಕೆ ಬರಬೇಕಾದ ರಾಜ ಧನಕ್ಕೂ ಕತ್ತರಿ ಹಾಕುತ್ತಿದ್ದಾರೆ.
![]()
ಯಾವುದೇ ಅನುಮತಿಯನ್ನು ಪಡೆಯದೆ ಕಾನೂನು ಬಾಹಿರವಾಗಿ ಫಲವತ್ತಾದ ಮಣ್ಣನ್ನು ಹಗಲು ರಾತ್ರಿ ಎನ್ನದೆ ಲಕ್ಷಾಂತರ ರು ಬೆಲೆ ಬಾಳುವ ಮಣ್ಣನ್ನು ತೋಚುತ್ತಿದ್ದಾರೆ, ಸರ್ಕಾರಿ ಗೋಮಾಳದಲ್ಲಿಯೇ ಈ ಆಕ್ರಮ ನಡೆಯುತ್ತಿದೆ ತಹಶೀಲ್ದಾರ್ ರವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಮಹೇಶ್, ಸ್ಥಳೀಯ ನಿವಾಸಿ
ಈ ಸುದ್ದಿಯನ್ನೂ ಓದಿ | Bagalkot News: ಮಲಪ್ರಭಾ ನದಿಯಲ್ಲಿ ಮುಳುಗಿ ಯೋಧ ಸೇರಿ ಇಬ್ಬರ ಸಾವು; ಬಾಲಕನ ರಕ್ಷಿಸಲು ಹೋಗಿ ನೀರುಪಾಲು
ಒಟ್ಟಿನಲ್ಲಿ ತಾಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಸದ್ದು ಮಾಡುತ್ತಿದ್ದು, ಪ್ರತಿದಿನ ನೂರಾರು ಟಿಪ್ಪರ್‌ಗಳ ಮೂಲಕ ಮಣ್ಣನ್ನು ಅಗೆದು ಸಾಗಿಸುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ತಾಲೂಕು ಹಾಗೂ ಜಿಲ್ಲಾಡಳಿತದ ಮೇಲಿದ್ದು, ಪರಿಸರ ನಾಶ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
(ವರದಿ : ಅರಸನಕುಂಟೆ ಗುರುಪ್ರಸಾದ್)