Bengaluru News: ಬಸ್ ಹತ್ತಲು ಬಂದ ಭಿಕ್ಷುಕನನ್ನು ಕಾಲಿನಿಂದ ಒದ್ದು ಬೀಳಿಸಿದ್ದ ಕಂಡಕ್ಟರ್ ಅಮಾನತು
BMTC Conductor suspended: ನೆಲಮಂಗಲ ಟೋಲ್ ಬಳಿ ಬಸ್ ಹತ್ತಲು ಬಂದ ವ್ಯಕ್ತಿಗೆ ನಿರ್ವಾಹಕ ಕಾಲಿನಿಂದ ಒದ್ದು ಬೀಳಿಸಿದ ದೃಶ್ಯ ಬೈಕ್ ಸವಾರರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನಿರ್ವಾಹಕನ ವಿರುದ್ಧ ಬಿಎಂಟಿಸಿ ಶಿಸ್ತುಕ್ರಮ ಕೈಗೊಂಡಿದೆ.
-
ಬೆಂಗಳೂರು: ಬಸ್ ಹತ್ತಲು ಬಂದ ಭಿಕ್ಷುಕನನ್ನು ಕಾಲಿನಿಂದ ಒದ್ದು ಕೆಳಗೆ ತಳ್ಳಿದ್ದ ಬಿಎಂಟಿಸಿ ನಿರ್ವಾಹಕನನ್ನು ಅಮಾನತುಗೊಳಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆದೇಶ ಹೊರಡಿಸಿದೆ. ಆಗಸ್ಟ್ 2ರಂದು ನೆಲಮಂಗಲ ಟೋಲ್ ಬಳಿ ಆಘಾತಕಾರಿ ಘಟನೆ ನಡೆದಿತ್ತು. ಬಸ್ ಹತ್ತಲು ಬಂದ ವ್ಯಕ್ತಿಗೆ ನಿರ್ವಾಹಕ ಕಾಲಿನಿಂದ ಒದ್ದು ಬೀಳಿಸಿದ ದೃಶ್ಯ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನಿರ್ವಾಹಕನ ವಿರುದ್ಧ ಬಿಎಂಟಿಸಿ ಶಿಸ್ತುಕ್ರಮ ಕೈಗೊಂಡಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ಉನ್ನತಾಧಿಕಾರಿಗಳು, ಸಂಬಂಧಪಟ್ಟ ಬಸ್ ನಿರ್ವಾಹಕ ಕೃಷ್ಣಮೂರ್ತಿ ಅವರನ್ನು ವಿಚಾರಣಾಪೂರ್ವ ಅಮಾನತಿನಲ್ಲಿರಿಸಿ ಆದೇಶಿಸಿದ್ದಾರೆ.
Bengaluru - BMTC conductor kicks a beggar attempting to board a bus. pic.twitter.com/KJ6MqpeKjS
— News Arena India (@NewsArenaIndia) August 4, 2026
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಟಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕ-43ಕ್ಕೆ ಸೇರಿದ ವಾಹನ ಸಂಖ್ಯೆ KA-57 F-1104, ಮಾರ್ಗ ಸಂಖ್ಯೆ 258SD/1ರಲ್ಲಿ ದಿನಾಂಕ 02.08.2026ರಂದು ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕ ಕೃಷ್ಣಮೂರ್ತಿ ಬಿಲ್ಲೆ ಸಂಖ್ಯೆ:11503 ರವರ ವರ್ತನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಸಂಸ್ಥೆಯು ಗಂಭೀರವಾಗಿ ಪರಿಗಣಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ವಿಡಿಯೋ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತಕ್ಷಣವೇ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಲಾಗಿದ್ದು, ಸತ್ಯಾಂಶವನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಲು ಸಂಬಂಧಿತ ನಿರ್ವಾಹಕರನ್ನು ದಿನಾಂಕ 04-08-2026 ಮಧ್ಯಾಹ್ನದಿಂದ ಜಾರಿಗೆ ಬರುವಂತೆ ವಿಚಾರಣಾಪೂರ್ವ ಅಮಾನತ್ತಿನಲ್ಲಿ ಇರಿಸಲಾಗಿದೆ.
ಘಟನೆಯ ನಿಖರವಾದ ವಾಸ್ತವಾಂಶವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸಂಬಂಧಿತ ನಿರ್ವಾಹಕ, ಪ್ರಯಾಣಿಕ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಬಸ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿ (ಲಭ್ಯವಿದ್ದಲ್ಲಿ) ಹಾಗೂ ಇತರೆ ಸಂಬಂಧಿತ ಸಾಕ್ಷಾಧಾರಗಳನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಲಾಗುವುದು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಸುರಕ್ಷತೆ, ಘನತೆ ಹಾಗೂ ಗೌರವಯುತ ಸೇವೆಗೆ ಅತ್ಯುನ್ನತ ಆದ್ಯತೆ ನೀಡುತ್ತದೆ. ಪ್ರಯಾಣಿಕರೊಂದಿಗೆ ಯಾವುದೇ ಸಿಬ್ಬಂದಿ ಅನುಚಿತವಾಗಿ ವರ್ತಿಸುವುದು, ದುರ್ವತ್ರನೆ ತೋರುವುದು ಅಥವಾ ಸಂಸ್ಥೆಯ ಸೇವಾ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಸಾರ್ವಜನಿಕರು ವ್ಯಕ್ತಪಡಿಸಿರುವ ಕಳವಳವನ್ನು ಸಂಸ್ಥೆಯು ಗೌರವದಿಂದ ಪರಿಗಣಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಪ್ರಯಾಣಿಕ ಸ್ನೇಹಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಒದಗಿಸುವ ತನ್ನ ಬದ್ಧತೆಯನ್ನು ಪುನರುಚ್ಛರಿಸುತ್ತದೆ ಎಂದು ಸಾರಿಗೆ ನಿಗಮ ಹೇಳಿದೆ.