ಬೆಂಗಳೂರಿನಲ್ಲಿ ಘೋರ ಘಟನೆ; ಬಿಸಿ ಕೆಮಿಕಲ್ ತುಂಬಿದ್ದ ಬಕೆಟ್‌ಗೆ ಬಿದ್ದು 1.9 ವರ್ಷದ ಮಗು ಸಾವು
Bengaluru Tragedy: ಮನೆ ಪಕ್ಕದಲ್ಲೇ ಇರುವ ಕಾಪರ್ ಮೇಕರ್ ಫ್ಯಾಕ್ಟರಿಯಲ್ಲಿ ಮಗು ತನ್ನ ಅಕ್ಕನೊಂದಿಗೆ ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಫ್ಯಾಕ್ಟರಿಯಲ್ಲಿ ಬಿಸಿ ಕೆಮಿಕಲ್ ತುಂಬಿದ ಬಕೆಟ್‌ಗೆ ಮಗು ಬಿದ್ದಿದೆ. ಪರಿಣಾಮ ಮಗುವಿನ ದೇಹಕ್ಕೆ ಗಂಭೀರ ಗಾಯಗಳಾಗಿದ್ದವು. ಆದರೆ, ಚಿಕಿತ್ಸೆ ಫಲಿಸದೇ ಮಗು ಮೃತ ಪಟ್ಟಿದೆ.
-
ಬೆಂಗಳೂರು: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿಸಿ ಕೆಮಿಕಲ್ ತುಂಬಿದ್ದ ಬಕೆಟ್‌ನೊಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ (child death) ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನವೆಂಬರ್ 2ರಂದು ನಗರದ (Bengaluru) ಶ್ರೀರಾಮಪುರದ ಎಲ್. ಎನ್. ಪುರದಲ್ಲಿ 1 ವರ್ಷ 9 ತಿಂಗಳ ಮಗು ಸುಬ್ರಮಣಿ ಗಂಭೀರವಾಗಿ ಗಾಯಗೊಂಡಿತ್ತು. ಬಳಿಕ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ತಡರಾತ್ರಿ ಮೃತಪಟ್ಟಿದೆ.
ನವೆಂಬರ್ 2ರಂದು ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಈ ಘಟನೆ ಸಂಭವಿಸಿತ್ತು. ಮನೆ ಪಕ್ಕದಲ್ಲೇ ಇರುವ ಕಾಪರ್ ಮೇಕರ್ ಫ್ಯಾಕ್ಟರಿಯಲ್ಲಿ ಮಗು ಸುಬ್ರಮಣಿ ತನ್ನ ಅಕ್ಕನೊಂದಿಗೆ ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಫ್ಯಾಕ್ಟರಿಯಲ್ಲಿ ಬಿಸಿ ಕೆಮಿಕಲ್ ತುಂಬಿದ ಬಕೆಟ್‌ಗೆ ಮಗು ಬಿದ್ದಿದೆ. ಪರಿಣಾಮ ಮಗುವಿನ ದೇಹಕ್ಕೆ ಗಂಭೀರ ಗಾಯಗಳಾಗಿದ್ದವು.
ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಗು ತಡರಾತ್ರಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಘಟನೆಯ ಕುರಿತು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ (UDR) ದಾಖಲಾಗಿದೆ.