ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Senior actor Giri Babu: ತೆಲುಗು ಚಿತ್ರರಂಗದ ಹಿರಿಯ ನಟ ಗಿರಿ ಬಾಬು ನಿಧನ

Senior actor Giri Babu: ತೆಲುಗು ಸಿನಿಮಾಗಳಲ್ಲಿ ನಾಯಕ, ಪೋಷಕ ಪಾತ್ರ, ವಿಲನ್​​, ಹಾಸ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದ ಹಿರಿಯ ನಟ ಗಿರಿ ಬಾಬು (Giri Babu) ಇಂದು (ನವೆಂಬರ್ 14) ನಿಧನ ಹೊಂದಿದ್ದಾರೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಿರಿ ಬಾಬು ಶನಿವಾರ ಕೊನೆಯುಸಿರೆಳೆದಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಖಳನಟ, ಹಾಸ್ಯನಟ ಹಾಗೂ ಪೋಷಕ ನಟನಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು.

Senior actor Giri Babu: ತೆಲುಗು ಚಿತ್ರರಂಗದ ಹಿರಿಯ ನಟ ಗಿರಿ ಬಾಬು ನಿಧನ

ನಟ ಗಿರಿ ಬಾಬು -

Yashaswi Devadiga
Yashaswi Devadiga Nov 14, 2026 6:19 PM

ತೆಲುಗು ಸಿನಿಮಾಗಳಲ್ಲಿ ನಾಯಕ, ಪೋಷಕ ಪಾತ್ರ, ವಿಲನ್​​, ಹಾಸ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದ ಹಿರಿಯ ನಟ ಗಿರಿ ಬಾಬು (Giri Babu) ಇಂದು (ನವೆಂಬರ್ 14) ನಿಧನ ಹೊಂದಿದ್ದಾರೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಿರಿ ಬಾಬು ಶನಿವಾರ ಕೊನೆಯುಸಿರೆಳೆದಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಖಳನಟ, ಹಾಸ್ಯನಟ ಹಾಗೂ ಪೋಷಕ ನಟನಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು.

ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಗಿರಿ ಬಾಬು (80) ಶನಿವಾರ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಗಿರಿ ಬಾಬು ಅವರ ನಿಧನದ ಸುದ್ದಿ ತೆಲುಗು ಚಿತ್ರರಂಗದಲ್ಲಿ ದುಃಖದ ಛಾಯೆ ಮೂಡಿಸಿದೆ.

ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಗಿರಿ ಬಾಬು, ತಮ್ಮ ವಿಭಿನ್ನ ಅಭಿನಯ ಶೈಲಿ ಹಾಗೂ ವಿಶಿಷ್ಟ ಸಂಭಾಷಣೆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ತೆಲುಗು ಚಿತ್ರರಂಗದ ಹಲವು ತಲೆಮಾರಿನ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ‌Bigg Boss kannada 13: ಎರಡನೇ ಬಾರಿಗೆ ಕ್ಯಾಪ್ಟನ್‌ ಆದ ಜಗ್ಗ ಮಮ್ಮಿ! ಬಿಕ್ಕಿ ಬಿಕ್ಕಿ ಅತ್ತ ಧನುಷ್

ರಂಗಭೂಮಿಯಿಂದ ಚಿತ್ರರಂಗಕ್ಕೆ

ಗಿರಿ ಬಾಬು ಅವರ ಮೂಲ ಹೆಸರು ಯೆರ್ರಾ ಶೇಷಗಿರಿ ರಾವ್. 1956ರ ಜೂನ್ 8ರಂದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರವಿನುತಲ ಗ್ರಾಮದಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ನಟನೆ ಮತ್ತು ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ತಮ್ಮ ಕಲಾಸಕ್ತಿಯನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು.

1973ರಲ್ಲಿ ಬಿಡುಗಡೆಯಾದ 'ಜಗಮೇ ಮಾಯಾ' ಚಿತ್ರದ ಮೂಲಕ ನಟನಾ ವೃತ್ತಿ ಆರಂಭಿಸಿದರು. ಆರಂಭದಲ್ಲಿ ನಾಯಕನ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದ ಅವರು, ನಂತರ ಖಳನಟ, ಹಾಸ್ಯನಟ ಹಾಗೂ ಪೋಷಕ ನಟನಾಗಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು.

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ

ಗಿರಿ ಬಾಬು ತಮ್ಮ ಸುದೀರ್ಘ ಸಿನಿ ಪಯಣದಲ್ಲಿ ಎನ್.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಕೃಷ್ಣ, ಚಿರಂಜೀವಿ, ಮೋಹನ್ ಬಾಬು ಮತ್ತು ನಾಗಾರ್ಜುನ ಸೇರಿದಂತೆ ತೆಲುಗು ಚಿತ್ರರಂಗದ ಅನೇಕ ಖ್ಯಾತ ನಟರೊಂದಿಗೆ ಕೆಲಸ ಮಾಡಿದ್ದಾರೆ.1977ರಲ್ಲಿ ಬಿಡುಗಡೆಯಾದ ಪೌರಾಣಿಕ ಸಿನಿಮಾ 'ಕುರುಕ್ಷೇತ್ರಂ'ನಲ್ಲಿ ದುಶ್ಯಾಸನನ ಪಾತ್ರದಲ್ಲಿ ಅಭಿನಯಿಸಿದ್ದು ಅವರ ಗಮನಾರ್ಹ ಆರಂಭಿಕ ಚಿತ್ರಗಳಲ್ಲೊಂದು.

ಇದಲ್ಲದೆ 'ಜ್ಯೋತಿ', 'ಮೆರುಪು ದಾಡಿ', 'ಪಸಿವಾಡಿ ಪ್ರಾಣಂ', 'ಹಲೋ ಬ್ರದರ್', 'ಸಿಸಿಂದ್ರಿ', 'ಲಿಟಲ್ ಸೋಲ್ಜರ್ಸ್', 'ನಿನ್ನೆ ಪೆಳ್ಳಾಡತಾ' ಮತ್ತು 'ಚಂದ್ರಲೇಖ' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹೊಸ ತಲೆಮಾರಿನ ನಿರ್ದೇಶಕರು ಹಾಗೂ ಕಲಾವಿದರೊಂದಿಗೂ ಗಿರಿ ಬಾಬು ಉತ್ತಮ ಒಡನಾಟ ಹೊಂದಿದ್ದರು. 'ಗಮ್ಯಂ', 'ಅ ಆ', 'ಗೀತ ಗೋವಿಂದಂ', 'ಡಿಸ್ಕೋ ರಾಜಾ', 'ಜಾತಿ ರತ್ನಾಲು', 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್', 'ಒಕೆ ಓಕ ಜೀವನಂ' ಮತ್ತು 'ಅನ್ನಿ ಮಂಚಿ ಶಕುನಮೂಲೆ' ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು.

ನಿರ್ದೇಶಕ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ಕಲಾವಿದ

ನಟನೆ ಮಾತ್ರವಲ್ಲದೆ ನಿರ್ದೇಶನ ಮತ್ತು ನಿರ್ಮಾಣ ಕ್ಷೇತ್ರದಲ್ಲಿಯೂ ಗಿರಿ ಬಾಬು ತಮ್ಮ ಛಾಪು ಮೂಡಿಸಿದ್ದರು. 1985ರಲ್ಲಿ ಬಿಡುಗಡೆಯಾದ 'ರಣರಂಗಂ', 1990ರ 'ಇಂದ್ರಜಿತ್' ಹಾಗೂ 2008ರ 'ನೀ ಸುಖಮೇ ನೇ ಕೊರತುನ್ನಾ' ಚಿತ್ರಗಳನ್ನು ನಿರ್ದೇಶಿಸಿದ್ದರು.'ದೇವತಲಾರ ದೀವಿಂಚಂಡಿ' ಮತ್ತು 'ಮೆರುಪು ದಾಡಿ' ಸೇರಿದಂತೆ ಕೆಲವು ಸಿನಿಮಾಗಳ ನಿರ್ಮಾಣದಲ್ಲಿಯೂ ಅವರು ತೊಡಗಿಸಿಕೊಂಡಿದ್ದರು. ಹೀಗೆ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ತೆಲುಗು ಚಿತ್ರರಂಗಕ್ಕೆ ಹಲವು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಹೇಳಿದ್ದೇನು? ಮಾಡಿದ್ದೇನು?ಮಂಜುಗೆ ಕಿಚ್ಚನ ಖಡಕ್ ಕ್ಲಾಸ್

ಗಿರಿ ಬಾಬು ಅವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಅವರ ಹಿರಿಯ ಪುತ್ರ ರಘು ಬಾಬು ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯನಟ ಹಾಗೂ ಪೋಷಕ ನಟನಾಗಿ ಗುರುತಿಸಿಕೊಂಡಿದ್ದಾರೆ. ಕಿರಿಯ ಪುತ್ರ ಬೋಸ್ ಬಾಬು ಕೂಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಗಿರಿ ಬಾಬು ಅವರ ಪತ್ನಿ ಶ್ರೀದೇವಿ ಅವರು 2016ರಲ್ಲಿ ನಿಧನರಾಗಿದ್ದರು.