Dharmasthala Case: ಬುರುಡೆ ತಂದವನ ಮೇಲೆ ಮೊದಲು ಎಫ್‌ಐಆರ್ ಆಗಬೇಕಿತ್ತು: ಹೈಕೋರ್ಟ್ ನ್ಯಾಯವಾದಿ ಅರುಣ್ ಶ್ಯಾಮ್
Dharmasthala Case: ಬುರುಡೆ ತಂದ ವ್ಯಕ್ತಿಯ ಮೇಲೆ ಕೇಸ್ ದಾಖಲಿಸಿ, ವಿಚಾರಣೆ ಮಾಡಬೇಕಿತ್ತು. ಇದರ ಹಿಂದೆ ಯಾರು ಯಾರಿದ್ದಾರೆ, ಅವರ ಮುಖವಾಡ ಕಳಚುವ ಕೆಲಸವಾಗಬೇಕು. ಈ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನೀಡಿದವರು, ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಮವಾಗಬೇಕು ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಆಗ್ರಹಿಸಿದ್ದಾರೆ.


ಬೆಂಗಳೂರು: ಧಾರ್ಮಿಕ ಕ್ಷೇತ್ರ, ಶ್ರದ್ಧಾ ಕೇಂದ್ರಕ್ಕೆ ಧಕ್ಕೆ ತಂದವರ ಮೇಲೆ ಪ್ರಕರಣ ದಾಖಲಿಸುವ ಅವಕಾಶ ಕಾನೂನಿನಲ್ಲಿದೆ. ಆದರೆ, ಈ ಬಗ್ಗೆ ಪೊಲೀಸರು ಜಾಗೃತರಾಗಬೇಕು. ಇನ್ನು ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬುರುಡೆ ತಂದವನ ಮೇಲೆ ಮೊದಲು ಎಫ್‌ಐಆರ್ ಹಾಕಬೇಕಿತ್ತು. ಅದರ ಬದಲಾಗಿ ಬುರುಡೆಯನ್ನು ಪಕ್ಕಕ್ಕಿಟ್ಟು, ಅವನಿಗೆ ರಾಯಲ್ ಟ್ರೀಟ್‌ಮೆಂಟ್ ನೀಡುತ್ತಾ, ವೈಭವದಿಂದ ಕರೆದುಕೊಂಡು ಹೋಗಿ ಶೋಧ ಕಾರ್ಯ ಮಾಡುತ್ತಿದ್ದಾರೆ ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಟೀಕಿಸಿದರು.
ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಬುರುಡೆ ತಂದಾಗ ಅವನ ಮೇಲೆ ಕೇಸ್ ದಾಖಲಿಸಿ, ವಿಚಾರಣೆ ಮಾಡಬೇಕಿತ್ತು. ಇದರ ಹಿಂದೆ ಯಾರು ಯಾರಿದ್ದಾರೆ, ಅವರ ಮುಖವಾಡ ಕಳಚುವ ಕೆಲಸವಾಗಬೇಕು. ಈ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನೀಡಿದವರು, ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಮವಾಗಬೇಕು. ಇದರ ಬಗ್ಗೆ ಎಸ್‌ಐಟಿ ಗಮನ ವಹಿಸಬೇಕು ಎಂದು ತಿಳಿಸಿದರು.
ಧರ್ಮಕ್ಕೆ ಅಪಚಾರ ಎಸಗುವವರ ವಿರುದ್ಧ ಕ್ರಮ ಜರುಗಿಸಬಹುದಾಗಿತ್ತು. ಮಾನಹಾನಿ ಕೇಸ್ ಹಾಕಲು ಕಾನೂನಿನಲ್ಲಿ ಅವಕಾಶ ಇದೆ. ಹಿಂದೂ ಧಾರ್ಮಿಕ ಸಂಸ್ಥೆಗಳ ಮೇಲೆ ಹೆಚ್ಚಾಗಿ ದಾಳಿಗಳು ನಡೆಯುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.
ಸೌಜನ್ಯಾಳಿಗೆ ನಿಜವಾಗಿಯೂ ಅನ್ಯಾಯವಾಗಿದೆ
ಸೌಜನ್ಯಾಳಿಗೆ ನಿಜವಾಗಿಯೂ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ. ಆದರೆ, ಆರೋಪಿ ಇವತ್ತು ಖುಲಾಸೆಯಾಗಿ ದೇವಸ್ಥಾನದ ವಿರುದ್ಧದ ಹೋರಾಟಗಾರರ ಜತೆ ಓಡಾಡುತ್ತಿದ್ದಾನೆ. ಆರೋಪಿ ಮತ್ತು ದೂರು ಕೊಟ್ಟವರು ಒಂದಾಗಿದ್ದಾರೆ ಎಂದು ಆರೋಪಿಸಿದರು.
ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆಯಾಗುತ್ತಿದ್ದರಿಂದ ನಾವು ಪಿಐಎಲ್ ಸಲ್ಲಿಸಿದ್ದೆವು. ಪ್ರಕರಣದಲ್ಲಿ ಮರು ತನಿಖೆ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅಪೀಲ್ ಹೋಗಬೇಕಿತ್ತು. ಆದರೆ, ಯಾರೂ ಈ ಕೆಲಸ ಮಾಡಿಲ್ಲ. ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಒಂದು ಆರೋಪ ಮಾಡಿದಾಗ ಎದುರಿಸುವುದು ಭಾರಿ ಕಷ್ಟ. ಎಸ್‌ಐಟಿ ಮಾಡಿದಾಗ ಬಹಳಷ್ಟು ಜನ ವಿರೋಧಿಸಿದರು. ಆದರೆ, ತನಿಖೆ ನಡಯುತ್ತಿರುವುದು ಒಳ್ಳೆಯದೇ ಎಂದರು.
ಈ ಸುದ್ದಿಯನ್ನೂ ಓದಿ | Dharmasthala Vichara Goshti: ವೀರೇಂದ್ರ ಹೆಗ್ಗಡೆ ಶ್ರೀರಾಮ, ಹರ್ಷೇಂದ್ರ ಜೈನ್ ಲಕ್ಷ್ಮಣ: ಜಿತೇಂದ್ರ ಕುಂದೇಶ್ವರ
ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಜೈನರಿಗೆ ಏನು ಸಂಬಂಧ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಹಿಂದೂ ಎಂಬ ಪದದಲ್ಲಿ ಜೈನರೂ ಸೇರಿದ್ದಾರೆ. ಇದರಲ್ಲಿ ಯಾವುದೇ ಸಂದೇಹ ಬೇಡ. ಹಿಂದೂ ಆಚರಣೆಗಳನ್ನು ಮಾಡುವವರೆಲ್ಲ ಹಿಂದೂಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಮಾಹಿತಿ ನೀಡಿದರು.