Viral Video: ವ್ಲಾಗರ್ಸ್ ರೆಸ್ಟೋರೆಂಟ್ ಒಳಗೆ ಕೂತು ಆಹಾರ ತಿನ್ನುತ್ತಿರುವಾಗ ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರು; ಭಯಾನಕ ದೃಶ್ಯ ವೈರಲ್
Car Crashing into Food Influencers: ಇಬ್ಬರು ಫುಡ್ ವ್ಲಾಗರ್‌ಗಳು ರೆಸ್ಟೋರೆಂಟ್‍ವೊಂದರಲ್ಲಿ ಆಹಾರ ತಿನ್ನುತ್ತಿರಬೇಕಾದರೆ ವೇಗವಾಗಿ ಬಂದ ಎಸ್‍ಯುವಿ ಕಾರೊಂದು ಡಿಕ್ಕಿ ಹೊಡೆದಿದ್ದು, ಕಿಟಕಿ ಗಾಜು ಪುಡಿಪುಡಿಯಾಗಿದೆ. ಅಲ್ಲೇ ಕುಳಿತಿದ್ದ ಇಬ್ಬರು ವ್ಲಾಗರ್ಸ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ವಾಷಿಂಗ್ಟನ್: ಇಬ್ಬರು ಫುಡ್ ವ್ಲಾಗರ್‌ಗಳು (Food Influencers) ರೆಸ್ಟೋರೆಂಟ್‍ವೊಂದರಲ್ಲಿ ಆಹಾರ ಸೇವಿಸುತ್ತಿರುವಾಗ ಜೀವಕ್ಕೆ ಕುತ್ತು ಉಂಟಾಗಿರುವ ಘಟನೆ ನಡೆದಿದೆ. ಆಹಾರ ಸವಿಯುತ್ತ ಎಷ್ಟು ಚೆನ್ನಾಗಿದೆ ಎಂದು ತಿಳಿಸಬೇಕು ಅನ್ನೋವಷ್ಟರಲ್ಲಿ ವೇಗವಾಗಿ ಬಂದ ಎಸ್‍ಯುವಿ ಕಾರೊಂದು ರೆಸ್ಟೋರೆಂಟ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ವ್ಲಾಗರ್‌ಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇಬ್ಬರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದೆ. ಹೂಸ್ಟನ್ ಮೂಲದ ಫುಡ್ ವ್ಲಾಗರ್ಸ್ ನೀನಾ ಸ್ಯಾಂಟಿಯಾಗೊ ಮತ್ತು ಪ್ಯಾಟ್ರಿಕ್ ಬ್ಲಾಕ್‌ವುಡ್ ಫುಡ್ ವ್ಲಾಗ್ ಚಿತ್ರೀಕರಿಸುತ್ತಿದ್ದಾಗ, ವೇಗವಾಗಿ ಬಂದ ಕಾರು ಅವರು ಕುಳಿತಿದ್ದ ರೆಸ್ಟೋರೆಂಟ್‌ನ ಮುಂಭಾಗದ ಗೋಡೆಯ ಮೂಲಕ ನುಗ್ಗಿದೆ. ಆಗಸ್ಟ್ 17ರಂದು ಬ್ಲ್ಯಾಕ್‌ವುಡ್ ಮತ್ತು ಸ್ಯಾಂಟಿಯಾಗೊ ಆಹಾರ ಹೇಗಿದೆ ಎಂಬ ಬಗ್ಗೆ ವಿಮರ್ಶಿಸಲು ರೆಸ್ಟೋರೆಂಟ್‌ಗೆ ತೆರಳಿದ್ದರು. ಅವರು ಆಹಾರ ತಿನ್ನುತ್ತಿರಬೇಕಾದರೆ, ಕಾರು ರೆಸ್ಟೋರೆಂಟ್‌ನ ಮುಂಭಾಗಕ್ಕೆ ಗುದ್ದಿದೆ. ಅದು ಗಾಜಿನಿಂದ ಮಾಡಲ್ಪಟ್ಟಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಚೂರು ಚೂರಾಗಿ ಬಿದ್ದಿದೆ.
ವಿಡಿಯೊ ವೀಕ್ಷಿಸಿ:
ಇದನ್ನೂ ಓದಿ: Video Viral: ಗಾಲ್ಫ್ ಕೋರ್ಸ್‌ನಲ್ಲಿ ನೆಲಕ್ಕಪ್ಪಳಿಸಿದ ಲಘು ವಿಮಾನ; ಭಯಾನಕ ವಿಡಿಯೊ ವೈರಲ್
ನಾವು ಊಟ ಮಾಡುವಾಗ ಕಾರೊಂದು ಕಿಟಕಿಗೆ ಡಿಕ್ಕಿ ಹೊಡೆದಿದೆ. ಸಾವಿನ ಅನುಭವದ ಸಮೀಪದಲ್ಲಿತ್ತು ಎಂದು ಸ್ಯಾಂಟಿಯಾಗೊ ವಿಡಿಯೊ ಹಂಚಿಕೊಂಡು ಈ ರೀತಿ ಶೀರ್ಷಿಕೆ ನೀಡಿದ್ದಾರೆ. ಅಪಘಾತದ ನಂತರ ತನ್ನ ಗಾಯಗಳ ಚಿತ್ರಗಳನ್ನು ಸ್ಯಾಂಟಿಯಾಗೊ ಪೋಸ್ಟ್ ಮಾಡಿದ್ದಾರೆ. ಆಕೆಯ ಮಣಿಕಟ್ಟು ಮತ್ತು ಮುಖದ ಮೇಲಿನ ಗಾಯಗಳನ್ನು ವಿವರಿಸುತ್ತ ಆ ಭಯಾನಕ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
“ಅಪಘಾತವಾದಾಗ ಗಾಜು ನಮಗೆ ನೇರವಾಗಿ ತಗುಲಿತು. ನಾನು ಅವನ ಎಡಭಾಗದಲ್ಲಿ, ಅವನು ನನ್ನ ಬಲಭಾಗದಲ್ಲಿ ಕುಳಿತಿದ್ದ. ನಾನು ರುಚಿಕರವಾದ ಸಾಲ್ಮನ್ ಸ್ಲೈಡರ್ ಅನ್ನು ಕಚ್ಚಿದಾಗ, ಎಲ್ಲಿಂದಲೋ ವೇಗವಾಗಿ ಕಾರು ಬಂದು ಡಿಕ್ಕಿ ಹೊಡಿತು. ಅದೃಷ್ಟವಶಾತ್ ನಾವು ಬದುಕುಳಿದೆವು” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. “ಈ ಅನುಭವವು ನನಗೆ ನಿಜವಾಗಿಯೂ ಯಾರು ಮುಖ್ಯ ಎಂದು ತೋರಿಸಿದೆ. ಜೀವನ ತುಂಬಾ ಚಿಕ್ಕದಾಗಿದ್ದು, ಯಾರೊಂದಿಗೂ ದ್ವೇಷ, ಕೋಪ ಮಾಡಬೇಡಿ. ಅವರನ್ನು ಕ್ಷಮಿಸಿ, ಎಲ್ಲರನ್ನೂ ಪ್ರೀತಿಸಿ. ಇದು ನಮ್ಮ ಕೊನೆಯ ಊಟವಾಗಬಹುದಿತ್ತು. ಅದೃಷ್ಟವಶಾತ್ ಬದುಕುಳಿದೆವು” ಎಂದು ಕರಾಳ ಘಟನೆಯ ಬಗ್ಗೆ ಸ್ಯಾಂಟಿಯಾಗೊ ವಿವರಿಸಿದ್ದಾರೆ.