Bengaluru Karaga 2025: ವಿಶ್ವ ವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಡೇಟ್ ಫಿಕ್ಸ್
ಏಪ್ರಿಲ್ 4 ರಿಂದ ಕರಗ ಉತ್ಸವ ಆರಂಭವಾಗಿ ಏಪ್ರಿಲ್ 14 ರವರೆಗೆ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ ವಿಜೃಂಭಣೆಯಿಂದ ನಡೆಯಲಿದೆ. ಇನ್ನು ಇದೇ ವೇಳೆ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ.

Bengaluru Karaga 2025

ಬೆಂಗಳೂರು: ಕನ್ನಡಿಗರ ಹೆಮ್ಮೆ ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ (Bengaluru Karaga 2025)ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 4 ರಿಂದ ಏಪ್ರಿಲ್ 14ರವರೆಗೆ ಈ ಕರಗ ಮಹೋತ್ಸವ ನಡೆಯಲಿದ್ದು,ಈ ಬಾರಿಯೂ ಕರಗವನ್ನು ಅರ್ಚಕ ವಿ.ಜ್ಞಾನೇಂದ್ರ ಅವರು ಹೊರಲಿದ್ದಾರೆ. ಬೆಂಗಳೂರು ಕರಗ ಸಂಬಂಧ ಸೋಮವಾರ ರಾತ್ರಿ ಸಭೆ ನಡೆಯಿತು. ಈ ಸಭೆಯಲ್ಲಿ, ಕರಗ ಹೊರುವ ಪೂಜಾರಿಯಾಗಿ ಎ.ಜ್ಞಾನೇಂದ್ರ ಅವಿರೋಧವಾಗಿ ಆಯ್ಕೆಯಾದರು. ಇವರು 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿದ್ದಾರೆ. ಈ ವರ್ಷ ಕೊನೆಯ ಬಾರಿ ಬೆಂಗಳೂರು ಕರಗ ಹೊರಲಿದ್ದಾರೆ ಎನ್ನಲಾಗಿದೆ.
ಏಪ್ರಿಲ್ 4 ರಿಂದಕರಗ ಉತ್ಸವ ಆರಂಭವಾಗಿ ಏಪ್ರಿಲ್ 14 ರವರೆಗೆ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ ವಿಜೃಂಭಣೆಯಿಂದ ನಡೆಯಲಿದೆ. ಇನ್ನು ಇದೇ ವೇಳೆ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ.
‘ಕರಗ’ ಎಂಬ ಹೆಸರು ಹೂವಿನ ದಿಂಡು ಮತ್ತು ದೇವಿಯ ವಿಗ್ರಹವನ್ನು ಹೊಂದಿರುವ ಕಲಶದ ಅನುರೂಪವಾಗಿದೆ. ಕರಗವನ್ನು ಮುಟ್ಟದೆ ಅಂದರೆ ಹೂವಿನ ದಿಂಡಿನಿಂದ ಅಲಂಕೃತಗೊಂಡ ಮಣ್ಣಿನ ಮಡಿಕೆ ಅದರಲ್ಲಿರುವ ಕಲಶವನ್ನು ಕೈಯಲ್ಲಿ ಮುಟ್ಟದೆ ಆ ಕಲಶವನ್ನು ಹೊರುವ ವ್ಯಕ್ತಿಯ ತಲೆ ಮೇಲೆ ಇಡಲಾಗುತ್ತದೆ. ಕರಗವನ್ನು ಹೊರುವವನು ಮಹಿಳೆಯಂತೆ ಕಂಕಣ, ಮಂಗಳ-ಸೂತ್ರ ಮತ್ತು ಹಣೆಯ ಮೇಲೆ ಸಿಂಧೂರವನ್ನು ಇಟ್ಟುಕೊಂಡಿರುತ್ತಾನೆ. ಭಾವೈಕ್ಯತೆ ದೃಷ್ಟಿಯಿಂದಲೂ ಬೆಂಗಳೂರು ಕರಗ ಮಹೋತ್ಸವ ತನ್ನದೇ ಆದ ವಿಶೇಷ ಹೊಂದಿದೆ. ಕರಗ ಮೆರವಣಿಗೆ ದರ್ಗಾಕ್ಕೆ ತೆರಳುವುದು, ಮುಸ್ಲಿಂ ಸಂತನ ಸಮಾಧಿಗೆ ಭೇಟಿ ನೀಡುವುದು ಇದಕ್ಕೆ ಉದಾಹರಣೆ.
ಈ ಸುದ್ದಿಯನ್ನೂ ಓದಿ: Mahakumbh 2025: ಮಹಾ ಕುಂಭಮೇಳ;ಬೆಂಗಳೂರು-ಪ್ರಯಾಗರಾಜ್ ವಿಮಾನಗಳು 41% ದುಬಾರಿ!
ಕರಗಕ್ಕಿದೆ ಪೌರಾಣಿಕ ನಂಟು
ಕರಗ ಕರ್ನಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದೆ. ಈ ಸಂಧರ್ಭದಲ್ಲಿ ಆದಿಶಕ್ತಿ ಶ್ರೀ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ಜನಾಂಗದವರು ಕುಲದೇವತೆಯಾಗಿ ಆರಾಧಿಸುತ್ತಾರೆ. ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲೂ ನಾವು ಕರಗ ಉತ್ಸವದ ಉಲ್ಲೇಖವನ್ನು ಗುರುತಿಸಬಹುದಾಗಿದೆ. ಕರಗವು ದ್ರೌಪದಿಯನ್ನು ಸರ್ವೋತ್ಕೃಷ್ಟ ಮಹಿಳೆ ಎಂದು ಚಿತ್ರಿಸುತ್ತದೆ ಮತ್ತು ಅವಳನ್ನು ಶಕ್ತಿ ದೇವತೆ ಎಂದು ಗೌರವಿಸುತ್ತದೆ. ಪುರಾಣಗಳ ಪ್ರಕಾರ, ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಛೆತಪ್ಪಿ ಬೀಳುತ್ತಾಳೆ. ದ್ರೌಪದಿ ಮೂರ್ಛಿತಳಾಗಿ ಬಿದ್ದದ್ದು ಪಾಂಡವರಿಗೆ ತಿಳಿಯದೆ ಮುಂದೆ ನಡೆಯುತ್ತಾರೆ. ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದನ್ನು ನೋಡುತ್ತಾಳೆ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಠಿ ಮಾಡುತ್ತಾಳೆ.
ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಾಕ್ಷಸನ ವಿರುದ್ಧ ಹೋರಾಡಿ ಗೆಲ್ಲುತ್ತಾರೆ. ನಂತರ ದ್ರೌಪದಿ ಆದಿಶಕ್ತಿಯಾಗಿ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗಿ ನೆಲೆಸಲು ನಿರ್ಧರಿಸುತ್ತಾಳೆ. ತಾಯಿಯ ಅಗಲುವಿಕೆಯನ್ನು ನೆನೆದು ಆಕೆಯನ್ನು ಹೋಗದಂತೆ ಮಕ್ಕಳು ಬೇಡಿಕೊಳ್ಳುತ್ತಾರೆ. ಇದನ್ನು ನೋಡಿ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವುದಾಗಿ ಭರವಸೆಯನ್ನು ನೀಡುತ್ತಾಳೆ. ಆ ಮೂರು ದಿನಗಳನ್ನೇ ಕರಗ ಎಂದು ಆಚರಿಸಲಾಗುತ್ತದೆ