2 ದಿನಗಳ ಅಂತರದಲ್ಲಿ ನಮ್ಮ ಮೆಟ್ರೋದಲ್ಲಿ ಮತ್ತೆ ಸಮಸ್ಯೆ; 25 ನಿಮಿಷಗಳ ಆತಂಕದ ಬಳಿಕ ಪುನರಾರಂಭಗೊಂಡ ರೈಲು ಸಂಚಾರ
Bengaluru Metro: ಕೇವಲ 2 ದಿನಗಳ ಹಿಂದೆಯಷ್ಟೇ ಕೆಟ್ಟುನಿಂತು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ನಮ್ಮ ಮೆಟ್ರೋ ಗುರುವಾರ (ಜೂನ್ 25) ಮತ್ತೊಮ್ಮೆ ಕೈಕೊಟ್ಟಿತು. ಕಬ್ಬನ್ ಪಾರ್ಕ್ ಸ್ಟೇಷನ್‌ನಲ್ಲೇ ಮತ್ತೊಮ್ಮೆ ಯಡವಟ್ಟಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಸದ್ಯ ಸಮಸ್ಯೆ ಬಗೆ ಹರಿಸಲಾಗಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್‌ನಲ್ಲಿ ಪ್ರಯಾಣಿಕರ ಪರದಾಟ -
ಬೆಂಗಳೂರು, ಜೂ. 25: ಕೇವಲ 2 ದಿನಗಳ ಹಿಂದೆಯಷ್ಟೇ ಕೆಟ್ಟುನಿಂತು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ನಮ್ಮ ಮೆಟ್ರೋ (Namma Metro) ಗುರುವಾರ (ಜೂನ್ 25) ಮತ್ತೊಮ್ಮೆ ಕೈಕೊಟ್ಟಿತು. ಸದ್ಯ ರೈಲು ಸಂಚಾರ ಪುನರಾರಂಭಗೊಂಡಿದೆ. ಮಂಗಳವಾರ (ಜೂನ್ 23) ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಸ್ಟೇಷನ್‌ನಲ್ಲೇ ಮತ್ತೊಮ್ಮೆ ಯಡವಟ್ಟಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಸುಮಾರು 25 ನಿಮಿಷ ನೂರಾರು ಪ್ರಯಾಣಿಕರು ಪರದಾಡಿದರು. ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡು ಬಂತು ಎಂದು ಪ್ರಯಾಣಿಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಸಮಸ್ಯೆ ಸರಿಪಡಿಸಲಾಗಿದ್ದು, ಸಂಚಾರ ಯಥಾಸ್ಥಿತಿಗೆ ಮರಳಿದೆ. ಡೋರ್ ಲಾಕ್ ಆಗಿ ಪ್ರಯಾಣಿಕರು ಕೆಲ ಹೊತ್ತು ರೈಲಿನೊಳಗೆ ಬಾಕಿಯಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಮೆಟ್ರೋದಲ್ಲಿ ಪದೇ ಪದೆ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಬಿಎಂಆರ್‌ಸಿಎಲ್‌ಗೆ (BMRCL) ತಲೆನೋವಾಗಿ ಪರಿಣಮಿಸಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಷನ್‌ನಲ್ಲಿ ಪ್ರಯಾಣಿಕರು ಪರದಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಸಂಸದ ತೇಜಸ್ವಿ ಸೂರ್ಯ ಇದೇ ವಿಚಾರವಾಗಿ ಮತ್ತೊಮ್ಮೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 2024ರ ಜನವರಿಯಿಂದ ಇದುವರೆಗೆ ನಮ್ಮ ಮೆಟ್ರೋದಲ್ಲಿ ಸುಮಾರು 21ರಷ್ಟು ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅದರಲ್ಲೂ ನೇರಳನೆ ಲೈನ್‌ನಲ್ಲಿ ಅತೀ ಹೆಚ್ಚಿನ ಸಮಸ್ಯೆ ಕಂಡು ಬಂದಿದೆ ಎಂದಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ಮತ್ತೊಂದು ದಿನ. ಮತ್ತೊಂದು ಸಮಸ್ಯೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ವೈರಲ್ ವಿಡಿಯೊ:
Bengaluru Metro passengers report delays in train services on Thursday evening at Cubbon Park station. Details awaited.@OfficialBMRCL pic.twitter.com/zYrnmywUU8
— ChristinMathewPhilip (@ChristinMP_) June 25, 2026
ʼʼಇದು ಮೆಟ್ರೋ ಕಾರ್ಯಾಚರಣೆಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಕಳವಳಗಳನ್ನು ಈ ಘಟನೆಗಳು ಹುಟ್ಟುಹಾಕಿವೆ. ನಾನು ಇಂದು ಮೆಟ್ರೋ ಸುರಕ್ಷತೆ ಮತ್ತು ವ್ಯವಸ್ಥೆಗಳ ಬಗ್ಗೆ ಹಲವು ತಜ್ಞರೊಂದಿಗೆ ಮಾತನಾಡಿದ್ದೇನೆ ಮತ್ತು ಅವರ ಇನ್‌ಪುಟ್‌ಗಳ ಆಧಾರದ ಮೇಲೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದೇನೆ. ನಮ್ಮ ಮೆಟ್ರೋ ಬಳಸುವ ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಯು ಅತ್ಯಂತ ಮುಖ್ಯʼʼ ಎಂದು ತಿಳಿಸಿದ್ದಾರೆ.
ತೇಜಸ್ವಿ ಸೂರ್ಯ ಎಕ್ಸ್ ಪೋಸ್ಟ್:
This is just crazy.
— Tejasvi Surya (@Tejasvi_Surya) June 25, 2026
Another day. Another disruption.
Since January 2024, this is the 21st reported technical disruption on Namma Metro.
No metro charges commuters as much as BMRCL does. Yet few metro systems have seen this frequency of disruptions.
I have written to the… https://t.co/O8ZCPvqtbI pic.twitter.com/8qIEOPGkm1
ಜನ ದಟ್ಟಣೆ
ಸಂಜೆಯಾಗುತ್ತಲೇ ನಮ್ಮ ಮೆಟ್ರೋದ ನೇರಳೆ ಮಾರ್ಗ ಪ್ರಯಾಣಿಕರಿಂದ ತುಂಬಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಕಂಪನಿಗಳ ಉದ್ಯೋಗಿಗಳು ಕೆಲಸ ಮುಗಿಸಿ ಮನೆಗಳಿಗೆ ತೆರಳಲು ನೇರಳೆ ಮಾರ್ಗದ ರೈಲುಗಳನ್ನು ಅವಲಂಬಿಸಿರುತ್ತಾರೆ. ರೈಲು ಸ್ಥಗಿತವಾಗಿರುವುದರಿಂದ ಕಬ್ಬನ್ ಪಾರ್ಕ್, ಎಂಜಿ ರಸ್ತೆ, ಟ್ರಿನಿಟಿ, ಹಲಸೂರು, ಇಂದಿರಾನಗರ ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂತು.
ಮೆಟ್ರೋ ಕೈಕೊಟ್ಟಿದ್ದಕ್ಕೆ ಲಾರಿ ಹತ್ತಿದ ಪ್ರಯಾಣಿಕರು; ಥರ್ಡ್ ಕ್ಲಾಸ್ ಆಡಳಿತ ಎಂದು ತೇಜಸ್ವಿ ಸೂರ್ಯ ಕಿಡಿ
ರಾಜ್ಯ ಸರ್ಕಾರವನ್ನು ಟೀಕಿಸಿದ್ದ ತೇಜಸ್ವಿ ಸೂರ್ಯ
ತಾಂತ್ರಿಕ ದೋಷದ ಹಿನ್ನೆಲೆ ಮಂಗಳವಾರ ಸಂಜೆಯಿಂದ ಬುಧವಾರ ಮುಂಜಾನೆವರೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮಂಗಳವಾರ ಮೆಟ್ರೋ ಸಂಚಾರದಲ್ಲಿ ವ್ಯತ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಕಿಡಿಕಾಡಿದ್ದರು. ʼʼವರ್ಲ್ಡ್ ಟೆಕ್ ಟ್ಯಾಲೆಂಟ್, ಥರ್ಡ್ ಕ್ಲಾಸ್ ಆಡಳಿತ. ಇದು ನಮ್ಮ ಬೆಂಗಳೂರಿನ ಕಥೆಯಾಗಿದೆ. ಇತ್ತೀಚೆಗೆ ಮೆಟ್ರೋ ಸೇವೆಗಳಲ್ಲಿನ ವ್ಯತ್ಯಯಗಳು ಆತಂಕಕಾರಿ ರೀತಿಯಲ್ಲಿ ಪದೇ ಪದೆ ಮರುಕಳಿಸುತ್ತಿವೆ. ಮೆಟ್ರೋ ಕೈಕೊಟ್ಟ ಪ್ರತಿ ಬಾರಿಯೂ ಇಡೀ ನಗರವೇ ಗೊಂದಲದ ಗೂಡಾಗುತ್ತದೆ. ಕ್ಯಾಬ್‌ಗಳು ಮಾಯವಾಗುತ್ತವೆ, ಆಟೋ ಚಾಲಕರು ರೈಡ್ ನಿರಾಕರಿಸುತ್ತಾರೆ. ಇದರಿಂದ ಪ್ರಯಾಣಿಕರು ರಸ್ತೆಗಳಲ್ಲಿ ಪರದಾಡುತ್ತಾರೆʼʼ ಎಂದು ಹೇಳಿದ್ದರು.
ಮೆಟ್ರೋ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಮನೆ ಸೇರಲು ಲಾರಿ, ಟ್ರಕ್ ಹತ್ತಿಕೊಂಡು ಹೋಗುತ್ತಿದ್ದ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.