ಹಾಸನ ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ; ಸಿಎಂ ತನಿಖೆ ಮಾಡಿಸದೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದು ಎಚ್ಡಿಕೆ ಕಿಡಿ
HD Kumaraswamy: ಸಾರ್ವಜನಿಕರು ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಮೊಬೈಲ್ ಕರೆ ಮಾಡಿ ದೂರು ಕೊಡಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ ಆರೋಪ ಕೇಳಿ ಬಂದಾಕ್ಷಣ ತನಿಖೆಗೆ ಆದೇಶ ನೀಡಿದೆ ಆರೋಪಿತರಿಗೆ ಕ್ಲೀನ್ ಚಿಟ್ ಕೊಟ್ಟು ಉಪಕರಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
-
ಬೆಂಗಳೂರು, ನ.11: ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಾಟ್ಸಾಪ್ ಚಾಟ್ ದಾಖಲೆ ಹೇಳುತ್ತಿದ್ದರೂ ಅದರ ಬಗ್ಗೆ ತನಿಖೆ ನಡೆಸುವ ಮಾತನ್ನೇ ಆಡದ ರಾಜ್ಯದ ಮುಖ್ಯಮಂತ್ರಿ, ನಿನ್ನೆಯ ದಿನ ಸಂಬಂಧಪಟ್ಟವರೆಲ್ಲರಿಗೂ ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, 10 ರೂಪಾಯಿ ಲಂಚ ಕೇಳಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರು ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಮೊಬೈಲ್ ಕರೆ ಮಾಡಿ ದೂರು ಕೊಡಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದರು. ಆದರೆ ಆರೋಪ ಕೇಳಿ ಬಂದಾಕ್ಷಣ ತನಿಖೆಗೆ ಆದೇಶ ನೀಡಿದೆ ಆರೋಪಿತರಿಗೆ ಕ್ಲೀನ್ ಚಿಟ್ ಕೊಟ್ಟು ಉಪಕರಿಸಿದ್ದಾರೆ ಎಂದು ಆರೋಪಿಸಿದರು.
ಕೃತಕ ಬುದ್ಧಿಮತ್ತೆಯನ್ನು ಬಳಸಿ ವಾಟ್ಸ್ಆ್ಯಪ್ ಚಾಟ್ ಸೃಷ್ಟಿ ಮಾಡಿರಬಹುದು ಎಂದು ಸಂಬಂಧಪಟ್ಟ ಸಚಿವರು ಹೇಳಿದ್ದಾರಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗ ಪ್ರತಿಯೊಬ್ಬರೂ ಕೃತಕ ಬುದ್ಧಿಮತ್ತೆ (AI) ರಕ್ಷಣೆ ಪಡೆಯುತ್ತಿದ್ದಾರೆ. ಇದು ಸುಲಭವಾಗಿದೆ. ಮುಖ್ಯಮಂತ್ರಿಗಳು ಕ್ಲೀನ್ ಚಿಟ್ ಕೊಟ್ಟ ಮೇಲೆ ಇದರ ಬಗ್ಗೆ ತನಿಖೆ ಮಾಡುತ್ತಾರೆ ಎಂದು ನಂಬಿಕೆಯಾದರೂ ಹೇಗೆ ಬರುತ್ತದೆ? ಎಂದು ಬೇಸರ ವ್ಯಕ್ತಪಡಿಸಿದರು.
ದೇವರ ಮೇಲೆ ಆಣೆ ಮಾಡಿ ಕೂಡ ಭ್ರಷ್ಟಾಚಾರ ನಡೆಸುತ್ತಿರುವ ಅನೇಕ ಪ್ರಸಂಗಗಳು ನಡೆಯುತ್ತಿವೆ. ಈ ಸರ್ಕಾರದಲ್ಲಿ ಹಣ ಪಡೆದು ಪೋಸ್ಟಿಂಗ್ ಕೊಡಲಾಗುತ್ತಿವೆ. ಇನ್ನೂ ಕೂಡ ಮೂರು ನಾಲ್ಕು ತಿಂಗಳಿಂದ ಅನೇಕ ಅಧಿಕಾರಿಗಳಿಗೆ ಪೋಸ್ಟಿಂಗ್ ಕೊಡದೆ ಬಾಕಿ ಉಳಿಸಿಕೊಂಡಿದ್ದಾರೆ. ಅಧಿಕಾರಿಗಳು ಹಣ ತಂದು ಕೊಡಲಿ ಎಂದು ಪೋಸ್ಟಿಂಗ್ ಕೊಡದೆ ಸತಾಯಿಸುತ್ತಿದ್ದಾರೆ. ವಿಚಾರ ಹೀಗಿದ್ದಾಗ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆಯೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ನಾನು ನಿರ್ದಿಷ್ಟವಾಗಿ ಯಾವುದೇ ಸಚಿವರ ಬಗ್ಗೆ ಆಗಲಿ ಅಥವಾ ಜಿಲ್ಲಾಧಿಕಾರಿ ಬಗ್ಗೆಯಾಗಲಿ ಅಥವಾ ಯಾವುದೇ ಅಧಿಕಾರಿಯ ವಿರುದ್ಧವಾಗಲಿ ಆರೋಪ ಮಾಡಲಿಲ್ಲ. ಬದಲಿಗೆ ನನ್ನ ಬಳಿ ಬಂದ ವಾಟ್ಸ್ಆ್ಯಪ್ ಚಾಟ್ನಲ್ಲಿ ನಡೆದಿರುವ ಲಂಚಾವತಾರದ ಕುರಿತ ಚರ್ಚೆಯ ಮಾಹಿತಿಯನ್ನಷ್ಟೇ ಮಾಧ್ಯಮಗಳ ಮುಂದೆ ಓದಿದ್ದೆ. ಇದರ ಬಗ್ಗೆ ಕ್ರಮವಹಿಸುವುದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಹೇಳಿದ್ದೆ ಎಂಬುದಾಗಿ ಅವರು ಹೇಳಿದರು.
ನಾನು ಯಾರ ಹೆಸರನ್ನು ಉಲ್ಲೇಖಿಸಿ ಹೇಳದಿದ್ದರೂ ಅವರಾಗಿಯೇ ಅವರೇ ಮಾಧ್ಯಮಗಳ ಮುಂದೆ ಬಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಜಿಲ್ಲಾಧಿಕಾರಿಯ ಆಪ್ತ ಸಹಾಯಕ ನಡೆಸಿರುವ ವಾಟ್ಸಾಪ್ ಚಾಟ್ ಅದಾಗಿದೆ. ತಾವು ಸತ್ಯ ಹರಿಶ್ಚಂದ್ರರೇ ಆಗಿದ್ದರೆ ತಮ್ಮ ಕಚೇರಿಯಲ್ಲಿ ಏನೇನು ನಡೆಯುತ್ತಿದೆ ಎಂಬ ಬಗ್ಗೆ ಪರಿಶೀಲಿಸಿ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಓರ್ವ ಅಧಿಕಾರಿಯಾಗಿ ಆರೋಪ ಮಾಡಿದ ಕೇಂದ್ರ ಸಚಿವರ ವಿರುದ್ಧವೇ ಅವರು ಬಹಿರಂಗವಾಗಿ ಮಾತನಾಡುತ್ತಾರೆ ಎಂದರೆ ಪರಿಸ್ಥಿತಿ ಎಲ್ಲಿಗೆ ಬಂದಿದೆ? ಅವರಿಗೆ ಯಾರ ಕುಮ್ಮಕಿದೆ ಎಂಬುದು ಅರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ಉತ್ತರಿಸಿದರು. ಈ ವೇಳೆ ಮಾಜಿ ಶಾಸಕ ಕೆ. ಅನ್ನದಾನಿ ಜತೆಯಲ್ಲಿದ್ದರು.