ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಸತಿ ಕಟ್ಟಡಗಳಿಗೆ ಒಸಿ ವಿನಾಯಿತಿ: ಶಾಶ್ವತ ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಜುಲೈ 6 ಕೊನೆ ದಿನ

BESCOM: ಬೆಸ್ಕಾಂ ವ್ಯಾಪ್ತಿಯಲ್ಲಿ 2400 ಚದರ ಅಡಿವರೆಗಿನ (+ಶೇ. 20ರಷ್ಟು ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭ ಪ್ರಮಾಣಪತ್ರ (ಒಸಿ) ವಿನಾಯಿತಿ ನೀಡಲಾಗಿದ್ದು, ಜಿ+3 ಅಥವಾ ಸಿಲ್ಟ್‌ ಪಾರ್ಕಿಂಗ್‌ + 4 ಮಹಡಿಗಳಿರುವ ವಸತಿ ಕಟ್ಟಡಗಳ ಮಾಲೀಕರು ಜುಲೈ 6, 2026ರೊಳಗೆ ಶಾಶ್ವತ ವಿದ್ಯುತ್‌ ಸಂಪರ್ಕ ಪಡೆಯಲು ಬೆಸ್ಕಾಂ ಮನವಿ ಮಾಡಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಒಸಿ ವಿನಾಯಿತಿ: ಶಾಶ್ವತ ವಿದ್ಯುತ್‌ ಸಂಪರ್ಕಕ್ಕೆ ಅರ್ಜಿಗೆ ಜುಲೈ 6 ಗಡುವು

ಸಾಂದರ್ಭಿಕ ಚಿತ್ರ. -

Profile
Siddalinga Swamy Jun 24, 2026 10:18 PM

ಬೆಂಗಳೂರು, ಜೂ.24: ಬೆಸ್ಕಾಂ ವ್ಯಾಪ್ತಿಯಲ್ಲಿ 2400 ಚದರ ಅಡಿವರೆಗಿನ (+ಶೇ. 20ರಷ್ಟು ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭ ಪ್ರಮಾಣಪತ್ರ (ಒಸಿ) ವಿನಾಯಿತಿ ನೀಡಲಾಗಿದ್ದು, ಜಿ+3 ಅಥವಾ ಸಿಲ್ಟ್‌ ಪಾರ್ಕಿಂಗ್‌ + 4 ಮಹಡಿಗಳಿರುವ ವಸತಿ ಕಟ್ಟಡಗಳ ಮಾಲೀಕರು ಜುಲೈ 6, 2026ರೊಳಗೆ ಶಾಶ್ವತ ವಿದ್ಯುತ್‌ ಸಂಪರ್ಕ ಪಡೆಯಲು ಬೆಸ್ಕಾಂ (BESCOM) ಮನವಿ ಮಾಡಿದೆ.

ಮೇ 31, 2026ರಂದು ಅಥವಾ ಅದಕ್ಕೂ ಮೊದಲು ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಮಾತ್ರ ಅನ್ವಯವಾಗುವಂತೆ 2400 (+ಶೇ.20ರಷ್ಟು ಹೆಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ಒಸಿ ಇಲ್ಲದೆ ನಿರ್ಮಿಸಿರುವ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ ಕಲ್ಪಿಸಲು ಒಂದು ಬಾರಿಯ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಸೋಮವಾರ (ಜೂನ್‌ 22) ರಂದು ಆದೇಶ ಹೊರಡಿಸಿ 15 ದಿನಗಳೊಳಗೆ ಅರ್ಜಿ ಸಲ್ಲಿಸಲು ಸೂಚಿಸಿತ್ತು.

ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ವ್ಯಾಪ್ತಿಯೊಳಿಗಿರುವ ವಸತಿ ಕಟ್ಟಡಗಳಿಗೆ ಮಾತ್ರ ಶಾಶ್ವತ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬೆಸ್ಕಾಂ ಈಗಾಗಲೇ ಚಾಲನೆ ನೀಡಿದ್ದು, ಸಾರ್ವಜನಿಕರು ಹತ್ತಿರದ ಬೆಸ್ಕಾಂ ಉಪ ವಿಭಾಗ ಕಚೇರಿಗಳಿಗೆ ಭೇಟಿ ನೀಡಿ, ಅಥವಾ ಬೆಸ್ಕಾಂ ಆನ್‌ಲೈನ್ ಜಾಲತಾಣದ ಮೂಲಕ ಜುಲೈ 6ರೊಳಗೆ ಅರ್ಜಿ ಸಲ್ಲಿಸಿ ಯೋಜನೆಯ ಉಪಯೋಗ ಪಡೆಯಲು ಬೆಸ್ಕಾಂ ಕೋರಿದೆ.

ಶಾಶ್ವತ ವಿದ್ಯುತ್‌ ಸಂಪರ್ಕ ಪಡೆಯಲು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸಾರ್ವತ್ರಿಕ ರಜೆ ದಿನಗಳಾದ ಜೂನ್‌ 26 (ಮೊಹರಂ ಕೊನೆದಿನ), ಜೂನ್‌ 27 (ನಾಲ್ಕನೇ ಶನಿವಾರ), 28 (ಭಾನುವಾರ) ಹಾಗೂ ಜುಲೈ 5 (ಭಾನುವಾರ) ರಂದು ಬೆಸ್ಕಾಂನ ಉಪ ವಿಭಾಗ ಕಚೇರಿಗಳು ಕಾರ್ಯನಿರ್ವಹಿಸುತ್ತವೆ.

ಶಾಶ್ವತ ವಿದ್ಯುತ್‌ ಸಂಪರ್ಕಕ್ಕೆ ಮಾರ್ಗಸೂಚಿ

ಶಾಶ್ವತ ಸಂಪರ್ಕ ಕೋರಿರುವ ಅರ್ಜಿಗಳು: ಮೇ 31, 2026ರೊಳಗೆ ಕಟ್ಟಡ ಪೂರ್ಣಗೊಂಡು, ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಮಾಲೀಕರು ಅರ್ಜಿ ಸಲ್ಲಿಸಿದ್ದರೆ, ಅರ್ಜಿದಾರರು/ಮಾಲೀಕರು ಸೇವಾ ಸಂಪರ್ಕ ಕಲ್ಪಿಸುವ ಅಧಿಕಾರಿಗಳ ಸಮ್ಮುಖದಲ್ಲಿ ಕಟ್ಟಡದ ಜಿಯೋ ಟ್ಯಾಗ್ ಆಧರಿತ ಫೋಟೋವನ್ನು ಸಲ್ಲಿಸಿ ಶಾಶ್ವತ ವಿದ್ಯುತ್ ಸಂಪರ್ಕವನ್ನು ಪಡೆಯಬೇಕು.

ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಮಾತ್ರ ಪಡೆದ ಪ್ರಕರಣಗಳು: ಮೇ 31, 2026ರೊಳಗೆ ಕಟ್ಟಡ ಪೂರ್ಣಗೊಂಡು, ತಾತ್ಕಾಲಿಕ ವಿದ್ಯುತ್‌ ಸಂಪರ್ಕದಲ್ಲಿದ್ದು, ಶಾಶ್ವತ ಸಂಪರ್ಕಕ್ಕೆ ಅರ್ಜಿ ಸಲ್ಲಿಸದಿದ್ದಲ್ಲಿ, ಅರ್ಜಿದಾರರು/ಮಾಲೀಕರು ಕಟ್ಟಡದ ಸಮ್ಮುಖದಲ್ಲಿ ತೆಗೆಸಿದ ಜಿಯೋ ಟ್ಯಾಗ್ ಆಧರಿತ ಫೋಟೋವನ್ನು ಸಲ್ಲಿಸಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಹತ್ತಿರದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಭೇಟಿ ನೀಡಿ ಅಥವಾ ಬೆಸ್ಕಾಂ ಆನ್‌ಲೈನ್ ಜಾಲತಾಣದ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಬೇಕು.

ತಾತ್ಕಾಲಿಕ / ಶಾಶ್ವತ ಸಂಪರ್ಕ ಪಡೆಯದ ಪ್ರಕರಣಗಳು

ಮೇ 31,2026ರೊಳಗೆ ವಸತಿ ಕಟ್ಟಡ ಪೂರ್ಣಗೊಂಡಿದ್ದರೂ ಯಾವುದೇ ತಾತ್ಕಾಲಿಕ ಅಥವಾ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸದಿದ್ದರೆ ಅರ್ಜಿದಾರರು/ಮಾಲೀಕರು ಕಟ್ಟಡದ ಸಮ್ಮುಖದಲ್ಲಿ ತೆಗೆಸಿದ ಜಿಯೋ ಟ್ಯಾಗ್ ಆಧರಿತ ಫೋಟೋವನ್ನು ಸಲ್ಲಿಸಿ ಹತ್ತಿರದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಭೇಟಿ ನೀಡಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ನೋಂದಣಿ ಮಾಡಿಕೊಳ್ಳಬೇಕು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.