Bigg Boss Kannada 12 Finale: ಬಿಗ್‌ಬಾಸ್ ಹೌಸ್ ಬಳಿ ಮುಗಿಲುಮುಟ್ಟಿದ ಗಿಲ್ಲಿ ಅಭಿಮಾನಿಗಳ ಸಂಭ್ರಮ; ಪಟಾಕಿ ಸಿಡಿಸಿ, ಸಿಹಿ ಹಂಚಿಕೆ
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದಲೇ ಜಾಲಿವುಡ್ ಸ್ಟುಡಿಯೋದ ಎರಡೂ ಗೇಟ್ಗಳ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಬಿಗ್‌ಬಾಸ್ ವಿನ್ನರ್ ಆಗಿ ಗಿಲ್ಲಿ ಹೆಸರು ಘೋಷಣೆಯಾಗುತ್ತಲೇ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.
ಬಿಡದಿಯ ಜಾಲಿವುಡ್ ಸ್ಟುಡಿಯೋ ಬಳಿ ಬಿಗ್‌ಬಾಸ್ ವಿನ್ನರ್ ಗಿಲ್ಲಿ ಅಭಿಮಾನಿಗಳ ಸಂಭ್ರಮ. -
ರಾಮನಗರ, ಜ.18: ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada 12) ಗಿಲ್ಲಿ ನಟ ಚಾಂಪಿಯನ್ ಆಗಿದ್ದರಿಂದ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಗ್ರ್ಯಾಂಡ್ ಫಿನಾಲೆ ಹಿನ್ನೆಲೆಯಲ್ಲಿ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋದ ಬಿಗ್‌ಬಾಸ್ ಹೌಸ್ ಬಳಿ ಭಾನುವಾರ ರಾತ್ರಿ ಸಾವಿರಾರು ಅಭಿಮಾನಿಗಳು ಜಮಾಯಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಸಂಜೆಯೇ ಜಾಲಿವುಡ್ ಸ್ಟುಡಿಯೋದ ಎರಡೂ ಗೇಟ್ಗಳ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿ, ಗಿಲ್ಲಿ ಪರ ಜೈಕಾರ ಹಾಕಿ ಘೋಷಣೆಗಳನ್ನು ಕೂಗಿದರು. ಈ ವೇಳೆ ನೂಕುನುಗ್ಗಲು ಸಂಭವಿಸಿದ್ದರಿಂದ ಜನಸಂದಣಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟ
— Colors Kannada (@ColorsKannada) January 18, 2026
ಬಿಗ್ ಬಾಸ್ ಗ್ರಾಂಡ್ ಫಿನಾಲೆ #BiggBossKannada12 #BBK12 #ಗ್ರಾಂಡ್ಫಿನಾಲೆ #GrandFinale #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKEngage pic.twitter.com/WBSAo8reE4
ಜಾಲಿವುಡ್ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಗಿಲ್ಲಿ... ಗಿಲ್ಲಿ... ಎಂದು ಕೂಗುತ್ತಿದ್ದರು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗಿತ್ತು. ಹೀಗಾಗಿ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇನ್ನು ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಭದ್ರತೆಗಾಗಿ ಸಿಆರ್‌ಪಿಎಫ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು.
ಗಿಲ್ಲಿ ಸ್ವಗ್ರಾಮದಲ್ಲಿ ಸಂಭ್ರಮ:
ಗಿಲ್ಲಿ ಹುಟ್ಟೂರಾದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಡದಪುರದಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿತ್ತು. ಫಿನಾಲೆ ವೀಕ್ಷಿಸಲು ಗ್ರಾಮದಲ್ಲಿ ದೊಡ್ಡ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಗಿಲ್ಲಿ ನಟ ವಿನ್ನರ್ ಎಂದು ಘೋಷಣೆಯಾಗುತ್ತಲೇ ಜನರು ಕುಣಿದು ಕುಪ್ಪಳಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ರಕ್ಷಿತಾ ಶೆಟ್ಟಿಗೆ 2ನೇ ಸ್ಥಾನ:
ಈ ಬಾರಿಯ ಬಿಗ್‌ಬಾಸ್‌ನಲ್ಲಿ ಗಿಲ್ಲಿ ನಟ ವಿನ್ನರ್ ಆಗಿದ್ದು, ಅವರಿಗೆ 50 ಲಕ್ಷ ನಗದು, ಮಾರುತಿ ಸುಜುಕಿ ಕಂಪನಿ ಕಾರು ಬಹುಮಾನ ನೀಡಲಾಗಿದೆ. ರಕ್ಷಿತಾ ಶೆಟ್ಟಿ ಎರಡನೇ ಸ್ಥಾನ (1ನೇ ರನ್ನರ್ ಅಪ್-20 ಲಕ್ಷ) ಪಡೆದಿದ್ದಾರೆ. 2ನೇ ರನ್ನರ್ ಅಪ್ ಅಶ್ವಿನಿ ಗೌಡ (14 ಲಕ್ಷ), 3ನೇ ರನ್ನರ್ ಅಪ್ ಕಾವ್ಯಾ ಶೈವ (10 ಲಕ್ಷ) ಹಾಗೂ 4ನೇ ರನ್ನರ್ ಅಪ್ ಸ್ಥಾನ ಮ್ಯುಟೆಂಟ್ ರಘು (3.5 ಲಕ್ಷ) ಪಡೆದಿದ್ದಾರೆ.
ಸ್ಪರ್ಧಿಗಳನ್ನು ಬೆಳಗ್ಗೆ ಮನೆಗೆ ಕಳುಹಿಸಲು ಸೂಚನೆ:
ಜಾಲಿವುಡ್ ಸ್ಟುಡಿಯೋ ಬಳಿ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ ಹಿನ್ನೆಲೆಯಲ್ಲಿ ಸ್ಪರ್ಧಿಗಳನ್ನು ಸೋಮವಾರ ಬೆಳಗ್ಗೆ ಮನೆಗಳಿಗೆ ಕಳುಹಿಸಲು ಎಸ್‌ಪಿ ಸೂಚನೆ ನೀಡಿದ್ದಾರೆ.