ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Infrastructure Crisis: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಮಾಜಿ ಪಿಡಬ್ಲ್ಯೂಡಿ ಕಾರ್ಯದರ್ಶಿ ಡಾ. ಕೃಷ್ಣ ರೆಡ್ಡಿ ವಿನೂತನ ಸಲಹೆ

Dr Krishna Reddy: ನಾವು ನಿನ್ನೆಯ ಬೆಂಗಳೂರಿನ ಬಗ್ಗೆ ಅಲ್ಲ, 2050ರ ಬೆಂಗಳೂರಿನ ಬಗ್ಗೆ ಯೋಜನೆ ರೂಪಿಸಬೇಕು. ಬೆಂಗಳೂರಿನ ದಟ್ಟಣೆಯನ್ನು ಮ್ಯಾಜಿಕ್ ನಂತೆ ಸರಿಪಡಿಸುವ ಯಾವುದೇ ಅದ್ಭುತ ಯೋಜನೆಯಿಲ್ಲ. ಆದರೆ ಒಂದು ಪರಿಹಾರವಿದೆ -ಸಮಗ್ರ ಯೋಜನೆ, ದೊಡ್ಡ ಪ್ರಮಾಣದ ಮೂಲಭೂತ ಸೌಕರ್ಯ ಮತ್ತು ಅದನ್ನು ಕಾರ್ಯಗತಗೊಳಿಸುವ ರಾಜಕೀಯ ಇಚ್ಛಾಶಕ್ತಿ. ನಾವು ಇಂದಿನ ನಿರ್ಧಾರಗಳನ್ನು ಮುಂದೂಡಿದರೆ, ಮುಂದಿನ ಪೀಳಿಗೆಗೆ ನಾವು ದೊಡ್ಡ ಬಿಕ್ಕಟ್ಟನ್ನು ಬಿಟ್ಟುಹೋದಂತೆ ಆಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಡಾ. ಕೃಷ್ಣ ರೆಡ್ಡಿ ವಿನೂತನ ಸಲಹೆ

ಮಾಜಿ ಪಿಡಬ್ಲ್ಯೂಡಿ ಕಾರ್ಯದರ್ಶಿ ಡಾ. ಕೃಷ್ಣ ರೆಡ್ಡಿ. -

Profile
Siddalinga Swamy Sep 16, 2026 7:40 PM

ಬೆಂಗಳೂರು, ಸೆ.16: ಬೆಂಗಳೂರು ಈಗ ಪ್ರಮುಖ ಆರ್ಥಿಕ ಶಕ್ತಿಯಾಗಿದ್ದು, ಕೇವಲ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಮಾತ್ರ ಎದುರಿಸುತ್ತಿಲ್ಲ ಇದು ತಕ್ಷಣದ ಹಾಗೂ ದೀರ್ಘಕಾಲೀನ ಕ್ರಮಗಳ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಬಿಕ್ಕಟ್ಟನ್ನು (Bengaluru Infrastructure Crisis) ಎದುರಿಸುತ್ತಿದೆ ಎಂದು ಲೋಕೋಪಯೋಗಿ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಕೃಷ್ಣ ರೆಡ್ಡಿ ತಿಳಿಸಿದ್ದಾರೆ. ಜತೆಗೆ ಬೆಂಗಳೂರಿನ ಸಂಚಾರ ಸಮಸ್ಯೆ ಬಗೆಹರಿಸಲು ಸಮಗ್ರ ಸಲಹೆಯನ್ನೂ ಅವರು ನೀಡಿದ್ದಾರೆ.

ಕಳೆದ ಮೂರು ದಶಕಗಳಲ್ಲಿ ಬೆಂಗಳೂರು ಅಸಾಧಾರಣ ವೇಗದಲ್ಲಿ ಬೆಳೆದಿದೆ. ಈ ಅವಧಿಯಲ್ಲಿ ಇದರ ಜನಸಂಖ್ಯೆಯು ಸುಮಾರು ಮೂರು ಪಟ್ಟು ಹೆಚ್ಚಾಗಿದೆ, ನಗರದ ವ್ಯಾಪ್ತಿಯು ಗಣನೀಯವಾಗಿ ವಿಸ್ತರಿಸಿದೆ ಮತ್ತು ವಾಹನಗಳ ಸಂಖ್ಯೆಯು ಒಂದು ಕೋಟೆಯನ್ನೂ ದಾಟಿದೆ. ಈ ಒತ್ತಡವು ಮುಂದುವರಿದಿದ್ದು, ಆರ್‌ಟಿಒದಲ್ಲಿ ಪ್ರತಿ ತಿಂಗಳು ಸರಿಸುಮಾರು 10,000 ಹೊಸ ವಾಹನಗಳನ್ನು ನೋಂದಾವಣೆಯಾಗುತ್ತಿವೆ. ಇದರಲ್ಲಿ ಹೆಚ್ಚಾಗಿ ಖಾಸಗಿ ವಾಹನಗಳೇ ಸೇರಿವೆ ಎಂದು ತಿಳಿಸಿದ್ದಾರೆ.

"ಬೆಳವಣಿಗೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಹೊಂದಿರದ 21ನೇ ಶತಮಾನದ ಮಹಾನಗರವನ್ನು ನಾವು ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಇನ್ನು ಮುಂದೆ ಸಾಧ್ಯವಿಲ್ಲ. ಬೆಂಗಳೂರು ಕೇವಲ ಇಂದಿನ ಸಂಚಾರದಟ್ಟಣೆಗೆ ತಾತ್ಕಾಲಿಕ ಪರಿಹಾರಗಳನ್ನು ಹುಡುಕುವುದನ್ನು ಬಿಟ್ಟು, ಮುಂದಿನ 20 ರಿಂದ 30 ವರ್ಷಗಳಿಗೆ ಸಮಗ್ರವಾದ ಯೋಜನೆ ರೂಪಿಸಬೇಕು ಎಂದು ಡಾ. ರೆಡ್ಡಿ ಹೇಳಿದರು.

ಬೆಂಗಳೂರಿನ ಬೆಳವಣಿಗೆಯು ಹೆಚ್ಚಾಗಿ ವೃತ್ತಾಕಾರದಲ್ಲಿದೆ (radial), ಮನೆಗಳು, ಕಚೇರಿಗಳು, ವಾಣಿಜ್ಯ ಕೇಂದ್ರಗಳು ಮತ್ತು ಉದ್ಯೋಗಗಳು ಹೊರವಲಯದತ್ತ ಹೆಚ್ಚಾಗಿ ವಿಸ್ತರಣೆಯಾಗುತ್ತಿವೆ. ಆದರೆ ಜನರು ಪ್ರತಿದಿನ ದೀರ್ಘ ದೂರ ಪ್ರಯಾಣಿಸುತ್ತಿದ್ದಾರೆ ಮತ್ತು ಇಂದಿನ ವಾಹನ ದಟ್ಟಣೆಗೆ ಸರಿಯಾಗಿ ವಿನ್ಯಾಸಗೊಳಿಸದ ರಸ್ತೆಗಳಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದಾರೆ.

'ಜನರು ಹೊರವಲಯದಲ್ಲಿ ವಾಸಿಸುತ್ತಿದ್ದಾರೆ, ಹೊರವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಅಥವಾ ಆ ಎರಡರ ನಡುವೆ ಪ್ರಯಾಣಿಸುತ್ತಿದ್ದಾರೆ. ನಿಧಾನವಾಗಿ ಸಾಗುವ ಸಂಚಾರ ದಟ್ಟಣೆಯಲ್ಲಿ ಸಿಲುಕಿ ನರಳದೆ, ಈ ಜನರನ್ನು ತ್ವರಿತವಾಗಿ, ಸುರಕ್ಷಿತವಾಗಿ ಮತ್ತು ಸಮರ್ಥವಾಗಿ ಹೇಗೆ ಸಾಗಿಸುವುದು ಎಂಬುದು ಮೂಲಭೂತ ಪ್ರಶ್ನೆಯಾಗಿದೆ' ಎಂದು ಅವರು ಹೇಳಿದರು.

ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ; ಕೇರ್ ಬೈ ಬಿಎಲ್‌ಆರ್ ಪ್ರೀಮಿಯಂ ಸೇವೆ ಆರಂಭ

ಹಾಗಾದರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸೂಕ್ತ ಪರಿಹಾರವೇನು?

"ಯಾವುದೇ ಒಂದೇ ಒಂದು ವಿಧಾನವು ಬೆಂಗಳೂರಿನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಮೆಟ್ರೋ, ಉಪನಗರ ರೈಲು, ಬಿಎಂಟಿಸಿ ಬಸ್ಸುಗಳು, ನಡಿಗೆ ಮತ್ತು ಸೈಕ್ಲಿಂಗ್ ಮೂಲಭೂತ ಸೌಕರ್ಯಗಳು, ರಸ್ತೆಗಳು ಮತ್ತು ಕೊನೆಯ ಮೈಲಿ ಸಂಪರ್ಕ ಎಲ್ಲವೂ ಒಂದೇ ಸಮಗ್ರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಬೇಕು” ಎಂದು ಡಾ. ರೆಡ್ಡಿ ಹೇಳಿದ್ದಾರೆ.

ನಮ್ಮ ಮೆಟ್ರೋ ಪರಿಹಾರದ ಅತ್ಯಗತ್ಯ ಭಾಗವಾಗಿದೆ. ಆದರೆ ನಗರದ ಗಾತ್ರಕ್ಕೆ ಹೋಲಿಸಿದರೆ ಇದರ ವ್ಯಾಪ್ತಿಯು ಇನ್ನೂ ಸೀಮಿತವಾಗಿದೆ. ಹಲವಾರು ನಿಲ್ದಾಣಗಳಲ್ಲಿ ಸಾಕಷ್ಟು ವಾಹನ ನಿಲುಗಡೆ ಹಾಗೂ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕದ ಕೊರತೆಯಿರುವುದರಿಂದ, ಹೆಚ್ಚಿನ ನಾಗರಿಕರು ರಸ್ತೆ ಜಾಲವನ್ನೇ ಅವಲಂಬಿಸಬೇಕಾಗುತ್ತದೆ. ಬೆಂಗಳೂರು ನೆಲಮಟ್ಟದಲ್ಲಿ ರಸ್ತೆಗಳನ್ನು ಅಗಲೀಕರಣಗೊಳಿಸುತ್ತಲೇ ಇರಲು ಸಾಧ್ಯವಿಲ್ಲ. ಡಾ. ರೆಡ್ಡಿ ಅವರ ಪ್ರಕಾರ, ಜನ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ರಸ್ತೆ ಅಗಲೀಕರಣವು ಹೆಚ್ಚು ಕಷ್ಟಕರವಾಗುತ್ತಿರುವುದು ಅತಿ ದೊಡ್ಡ ಸವಾಲಾಗಿದೆ.

ಬೆಂಗಳೂರಿನ ಅನೇಕ ಭಾಗಗಳಲ್ಲಿ ಈಗಾಗಲೇ ಕಟ್ಟಡಗಳು ದಟ್ಟವಾಗಿ ತಲೆಎತ್ತಿವೆ. ಹಲವಾರು ಕಾರಿಡಾರ್‌ಗಳಲ್ಲಿ ನೆಲಮಟ್ಟದಲ್ಲಿ ರಸ್ತೆಗಳನ್ನು ವಿಸ್ತರಿಸಲು ಸಾಕಷ್ಟು ಜಾಗವಿಲ್ಲ. ನಾವು ಅಸ್ತಿತ್ವದಲ್ಲಿರುವ ರಸ್ತೆ ಜಾಲದ ಮೇಲ್ಬಾಗ ಮತ್ತು ಕೆಳಭಾಗದಲ್ಲಿ ಯೋಚಿಸಲು ಪ್ರಾರಂಭಿಸಬೇಕು. ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಸಾಧ್ಯವಿರುವ ಕಡೆಗಳಲ್ಲಿ ಗ್ರೇಡ್ ಸೆಪರೇಟರ್‌ಗಳು, ಸಣ್ಣ ಮತ್ತು ಉದ್ದವಾದ ಫೈಓವರ್‌ಗಳು, ರೈಲ್ವೆ ಮೇಲ್ವೇತುವೆಗಳು ಮತ್ತು ಕೆಳಸೇತುವೆಗಳು, ಅಂಡರ್‌ಪಾಸ್‌ಗಳು ಮತ್ತು ಸೂಕ್ತ ಉದ್ದದ ಸುರಂಗಗಳನ್ನು ಒಳಗೊಂಡ ಹೊಸ ತಲೆಮಾರಿನ ರಸ್ತೆ ಮೂಲಭೂತ ಸೌಕರ್ಯಗಳು ಬೆಂಗಳೂರಿಗೆ ಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ನಾವು ಪ್ರತಿ ಜಂಕ್ಷನ್ ಅನ್ನು ಪ್ರತ್ಯೇಕವಾಗಿ ನೋಡುವುದನ್ನು ನಿಲ್ಲಿಸಿ, ಕಾರಿಡಾರ್ ಆಧಾರಿತವಾಗಿ ಯೋಚಿಸಬೇಕು. ಒಬ್ಬ ಪ್ರಯಾಣಿಕರು 12 ಅಥವಾ 15 ಸಿಗ್ನಲ್‌ಗಳನ್ನು ದಾಟಬೇಕಾದರೆ, ಒಂದು ಸಿಗ್ನಲ್ ಅನ್ನು ಸರಿಪಡಿಸುವುದು ಅಥವಾ ಒಂದು ಸಣ್ಣ ಫೈಓವರ್ ನಿರ್ಮಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಂಚಾರದ ಬಹು ಅಡಚಣೆಗಳನ್ನು ತಪ್ಪಿಸಲು ನಮಗೆ ನಿರಂತರ ಕಾರಿಡಾರ್‌ಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಸ್ತಾವಿತ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಅನ್ನು ಈ ಹಿಂದೆ ಇದನ್ನು ಪೆರಿಫೆರಲ್ ರಿಂಗ್ ರಸ್ತೆ ಎಂದು ಕರೆಯಲಾಗುತ್ತಿತ್ತು. ನಗರದ ಜಾಲಕ್ಕೆ ಒಂದು ಪ್ರಮುಖ ಸೇರ್ಪಡೆಯಾಗಲಿದೆ ಎಂದು ಅವರು ಹೇಳಿದರು, ಆದರೆ ಇದು ಒಂದರಿಂದಲೇ ಅಸ್ತಿತ್ವದಲ್ಲಿರುವ ನಗರ ಪ್ರದೇಶದ ದಟ್ಟಣೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ, ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಚಲನೆಗಳನ್ನು ಒದಗಿಸಲು, ಪ್ರವೇಶ ರಾಂಪ್‌ಗಳೊಂದಿಗೆ ಎರಡು ದೀರ್ಘ ಫೈಓವರ್ ಕಾರಿಡಾರ್‌ಗಳಿಗೆ ಯೋಜನೆಗಳನ್ನು ಸಿದ್ಧಪಡಿಸಿ ಅನುಮೋದನೆ ಪಡೆಯಲಾಗಿತ್ತು ಎಂದು ಡಾ. ರೆಡ್ಡಿ ಸ್ಮರಿಸಿದರು. ಇದು ನಿರಂತರ ಸಂಚಾರವನ್ನು ಒದಗಿಸಲು ಮತ್ತು ನೆಲಮಟ್ಟದಲ್ಲಿ 12-15 ಸಿಗ್ನಲ್ ಇರುವ ಜಂಕ್ಷನ್‌ಗಳನ್ನು ಬೈಪಾಸ್ ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತಾವಿತ ಕಾರಿಡಾರ್‌ಗಳು ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಲು ಮತ್ತು ಪ್ರಮುಖ ಮಾರ್ಗಗಳಲ್ಲಿ ವಿಳಂಬವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು ಕೇವಲ ಪ್ರತ್ಯೇಕ ಫೈಓವರ್‌ಗಳಾಗಿ ಕಲ್ಪಿಸಲಾಗಿಲ್ಲ. ಇವುಗಳನ್ನು ದೀರ್ಘವಾದ, ನಿರಂತರ ಸಂಚಾರ ಕಾರಿಡಾರ್‌ಗಳಾಗಿ ಯೋಜಿಸಲಾಗಿದೆ. ಅಂತಿಮ ಸಂಚಾರ ಸಂರಚನೆ ಮತ್ತು ವಿನ್ಯಾಸವನ್ನು ಅವಲಂಬಿಸಿ, ಅಂತಹ ಕಾರಿಡಾರ್‌ಗಳು ಬಾಧಿತ ಮಾರ್ಗಗಳಿಂದ ಸುಮಾರು 20% ರಷ್ಟು ಅಸ್ತಿತ್ವದಲ್ಲಿರುವ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ಡಾ. ರೆಡ್ಡಿ ಹೇಳಿದರು.

ಪ್ರತಿ ವರ್ಷ ನಾವು ಜಾಲಕ್ಕೆ ಸಾವಿರಾರು ವಾಹನಗಳನ್ನು ಸೇರಿಸುತ್ತಿದ್ದೇವೆ ಎಂಬುದು ನಮಗೆ ತಿಳಿದಿರುವಾಗ, ಸಂಚಾರ ದಟ್ಟಣೆ ಅಸಹನೀಯವಾಗುವವರೆಗೆ ಮೂಲಭೂತ ಸೌಕರ್ಯಗಳನ್ನು ಪ್ರಾರಂಭಿಸಲು ಏಕೆ ಕಾಯಬೇಕು? ಇಂದಿನ ವಿಳಂಬವು ನಾಳಿನ ಪರಿಹಾರವನ್ನು ಹೆಚ್ಚು ವೆಚ್ಚದಾಯಕವಾಗಿಸುತ್ತದೆ ಪ್ರಮುಖ ಮೂಲಭೂತ ಸೌಕರ್ಯ ನಿರ್ಧಾರಗಳನ್ನು ಮುಂದೂಡುವುದು ಬೆಂಗಳೂರಿನ ಸಮಸ್ಯೆಗಳನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ ಮತ್ತು ಪರಿಹರಿಸಲು ಕಷ್ಟಕರವಾಗಿಸುತ್ತದೆ ಎಂದು ಡಾ. ರೆಡ್ಡಿ ಎಚ್ಚರಿಸಿದ್ದಾರೆ.

ಪ್ರತಿ ವರ್ಷದ ವಿಳಂಬವೆಂದರೆ ಹೆಚ್ಚು ವಾಹನಗಳು, ಹೆಚ್ಚು ಕಟ್ಟಡಗಳು, ಹೆಚ್ಚಿನ ಭೂಮಿಯ ವೆಚ್ಚ ಮತ್ತು ನಿರ್ಮಾಣದಲ್ಲಿ ಹೆಚ್ಚಿನ ತೊಂದರೆಗಳು. ಇಂದು ಕಾರ್ಯಸಾಧ್ಯವಿರುವ ಕಾರಿಡಾರ್ ಈಗಿನಿಂದ ಐದು ಅಥವಾ ಹತ್ತು ವರ್ಷಗಳ ನಂತರ ಕಾರ್ಯಗತಗೊಳಿಸಲು ಅತ್ಯಂತ ಕಷ್ಟಕರವಾಗಬಹುದು. ಸ್ಪಷ್ಟ ಆದ್ಯತೆಗಳು, ಧನಸಹಾಯ ವಿಧಾನಗಳು, ಅನುಮೋದನೆಗಳು ಮತ್ತು ಕಾರ್ಯಗತಗೊಳಿಸುವ ಕಾಲಮಿತಿಗಳೊಂದಿಗೆ 20-30 ವರ್ಷಗಳ ದೃಷ್ಟಿಕೋನವನ್ನು ಹೊಂದಿರುವ ಸಮಗ್ರ ಮಹಾನಗರ ಮೂಲಭೂತ ಸೌಕರ್ಯ ಯೋಜನೆಗೆ ಅವರು ಕರೆ ನೀಡಿದರು.

ಬೆಂಗಳೂರಿನ ಗಾತ್ರದ ನಗರಕ್ಕೆ ಯಾವುದೇ ಅಲ್ಪಾವಧಿಯ ಪರಿಹಾರವಿಲ್ಲ. ನಾವು ಈಗ ಪ್ರಮುಖ ಕಾರಿಡಾರ್‌ಗಳನ್ನು ಗುರುತಿಸಬೇಕು, ಈಗಲೇ ಮೂಲಭೂತ ಸೌಕರ್ಯಗಳನ್ನು ಯೋಜಿಸಬೇಕು ಮತ್ತು ಈಗಲೇ ಕಾರ್ಯಗತಗೊಳಿಸಲು ಪ್ರಾರಂಭಿಸಬೇಕು. ಯೋಜನೆಗಳು ಕೇವಲ ವರದಿಗಳು ಮತ್ತು ಪ್ರಸ್ತಾವನೆಗಳೊಂದಿಗೆ ಕೊನೆಗೊಳ್ಳಬಾರದು; ಯೋಜನೆಗಳು ನೆಲದ ಮೇಲೆ ಸಾಕಾರಗೊಳ್ಳಬೇಕು. ಸಂಚಾರವು ಕೇವಲ ಸಂಚಾರದ ಸಮಸ್ಯೆಯಾಗಿ ಉಳಿದಿಲ್ಲ. ಬೆಂಗಳೂರಿನ ದಟ್ಟಣೆಯು ಈಗ ಆರ್ಥಿಕ ಮತ್ತು ಜೀವನದ ಗುಣಮಟ್ಟದ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಡಾ. ರೆಡ್ಡಿ ಹೇಳಿದರು.

ಸಂಚಾರದಲ್ಲಿ ಕಳೆದುಹೋದ ಸಮಯವು ಕಳೆದುಹೋದ ಉತ್ಪಾದಕತೆಯಾಗಿದೆ. ಇದು ವ್ಯವಹಾರಗಳು, ಉದ್ಯೋಗಿಗಳು, ವಿದ್ಯಾರ್ಥಿಗಳು, ಕುಟುಂಬಗಳು, ತುರ್ತು ಸೇವೆಗಳು ಮತ್ತು ನಗರದ ಒಟ್ಟಾರೆ ವಾಸಯೋಗ್ಯತೆಯ ಮೇಲೆ ಪರಿಣಾಮ ಬೀರುತ್ತದೆ. ಬೆಂಗಳೂರಿನ ಮೂಲಭೂತ ಸೌಕರ್ಯವು ನಗರದ ಆರ್ಥಿಕ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಕಾರುಗಳು ವೇಗವಾಗಿ ಚಲಿಸುವಂತೆ ಮಾಡುವುದು ಮಾತ್ರವಲ್ಲ, ಜನರು ಮತ್ತು ಸರಕುಗಳು ವೇಗವಾಗಿ, ಸುರಕ್ಷಿತವಾಗಿ ಮತ್ತು ಸಮರ್ಥವಾಗಿ ಚಲಿಸುವಂತೆ ಮಾಡುವುದು ಇದರ ಉದ್ದೇಶವಾಗಿರಬೇಕು ಎಂದು ಅವರು ಹೇಳಿದರು.

"ಬೆಂಗಳೂರು ಪ್ರಮುಖ ಆರ್ಥಿಕ ಎಂಜಿನ್‌ಗಳಲ್ಲಿ ಒಂದಾಗಿದೆ. ಮೂಲಭೂತ ಸೌಕರ್ಯಗಳ ಕೊರತೆಯು ಅದರ ಬೆಳವಣಿಗೆಗೆ ತಡೆಯಾಗಲು ನಾವು ಬಿಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ರಸ್ತೆಗಳು, ಸಾರ್ವಜನಿಕ ಸಾರಿಗೆ, ಮೆಟ್ರೋ, ಉಪನಗರ ರೈಲು ಮತ್ತು ನಗರ ಅಭಿವೃದ್ಧಿಗೆ ಜವಾಬ್ದಾರರಾಗಿರುವ ಎಲ್ಲಾ ಏಜೆನ್ಸಿಗಳ ನಡುವೆ ಸಮನ್ವಯತೆಯ ಯೋಜನೆಯನ್ನು ಡಾ. ರೆಡ್ಡಿ ಕರೆ ನೀಡಿದರು, ಮತ್ತು ಕೇವಲ ಇಂದಿನ ದಟ್ಟಣೆಗಿಂತ ಭವಿಷ್ಯದ ಬೇಡಿಕೆಯ ಆಧಾರದ ಮೇಲೆ ಯೋಜನೆಗಳನ್ನು ಆಯ್ಕೆ ಮಾಡಬೇಕು ಎಂದರು.

Bengaluru Rains: ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ; ನದಿಯಂತಾದ ಪ್ರಮುಖ ರಸ್ತೆಗಳು, ವಾಹನ ಸವಾರರ ಪರದಾಟ!

"ನಾವು ನಿನ್ನೆಯ ಬೆಂಗಳೂರಿನ ಬಗ್ಗೆ ಅಲ್ಲ, 2050 ರ ಬೆಂಗಳೂರಿನ ಬಗ್ಗೆ ಯೋಜನೆ ರೂಪಿಸಬೇಕು. ಬೆಂಗಳೂರಿನ ದಟ್ಟಣೆಯನ್ನು ಮ್ಯಾಜಿಕ್‌ನಂತೆ ಸರಿಪಡಿಸುವ ಯಾವುದೇ ಅದ್ಭುತ ಯೋಜನೆಯಿಲ್ಲ. ಆದರೆ ಒಂದು ಪರಿಹಾರವಿದೆ -ಸಮಗ್ರ ಯೋಜನೆ, ದೊಡ್ಡ ಪ್ರಮಾಣದ ಮೂಲಭೂತ ಸೌಕರ್ಯ ಮತ್ತು ಅದನ್ನು ಕಾರ್ಯಗತಗೊಳಿಸುವ ರಾಜಕೀಯ ಇಚ್ಛಾಶಕ್ತಿ. ನಾವು ಇಂದಿನ ನಿರ್ಧಾರಗಳನ್ನು ಮುಂದೂಡಿದರೆ, ಮುಂದಿನ ಪೀಳಿಗೆಗೆ ನಾವು ದೊಡ್ಡ ಬಿಕ್ಕಟ್ಟನ್ನು ಬಿಟ್ಟುಹೋದಂತೆ ಆಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಕೃಷ್ಣ ರೆಡ್ಡಿ ತಿಳಿಸಿದ್ದಾರೆ.