ಒಳಮೀಸಲಾತಿ ಜಾರಿ, ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ: ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಬಹಿರಂಗ ಪತ್ರ
ಒಳಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವು ಕಾಲಹರಣ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಂದು ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲು ತಮಗಿರುವ ಅಡ್ಡಿಯಾದರೂ ಏನು? ಎಂದು ಪ್ರಶ್ನಿಸಿರುವ ಛಲವಾದಿ ನಾರಾಯಣಸ್ವಾಮಿ ಅವರು, ಒಳಮೀಸಲಾತಿಯ ನೆಪವೊಡ್ಡಿ ನೀವು ಈ ನೇಮಕಾತಿಗಳನ್ನು ತಡೆಹಿಡಿದಿರುವುದು ಅಕ್ಷಮ್ಯ ಅಪರಾಧ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ. -
ಬೆಂಗಳೂರು: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕ್ರೆಡಿಟ್ ರಾಜಕಾರಣ, ಒಳಮೀಸಲಾತಿ (internal Reservation) ಜಾರಿಯಲ್ಲಿನ ವಿಳಂಬ ಹಾಗೂ ಖಾಲಿ ಹುದ್ದೆಗಳ ಭರ್ತಿ ಕುರಿತು ಸಿಎಂ ಸಿದ್ಧರಾಮಯ್ಯ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಅವರು ಬಹಿರಂಗ ಪತ್ರ ಬರೆದಿದ್ದಾರೆ.
ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ತಾವು ನೀಡಿದ ಭಾಷಣವು ಕೇವಲ ರಾಜಕೀಯ ಪ್ರೇರಿತವಾಗಿದೆಯೇ ಹೊರತು, ಅದರಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿ ಎಳ್ಳಷ್ಟೂ ಕಾಣುತ್ತಿಲ್ಲ. ಜನರ ಕಣ್ಣಿಗೆ ಮಣ್ಣೆರಚುವ ಭಾಷಣಗಳಿಂದ ಸಮುದಾಯದ ಏಳಿಗೆ ಅಸಾಧ್ಯವೆಂಬ ಕಟು ಸತ್ಯವನ್ನು ಈ ಮೂಲಕ ತಮಗೆ ನೆನಪಿಸಬಯಸುತ್ತೇನೆ.
1.ಮೀಸಲಾತಿ ಹೆಚ್ಚಳ ಮತ್ತು ನಿಮ್ಮ ದ್ವಂದ್ವ ನಿಲುವು:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ. 15 ರಿಂದ 17ಕ್ಕೆ ಮತ್ತು ಶೇ. 3 ರಿಂದ 7ಕ್ಕೆ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದು ಬಿಜೆಪಿ ಸರ್ಕಾರ ಮತ್ತು ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು. ಅಂದು ಆ ನಿರ್ಧಾರವನ್ನು ʼಚುನಾವಣಾ ಗಿಮಿಕ್ʼ ಎಂದು ಲೇವಡಿ ಮಾಡಿದ್ದ ತಾವು, ಇಂದು ಅದೇ ಅಂಕಿ-ಅಂಶಗಳನ್ನು ಬಳಸಿಕೊಂಡು ವೇದಿಕೆಗಳ ಮೇಲೆ ಹಕ್ಕು ಸಾಧಿಸುತ್ತಿರುವುದು ನಿಮ್ಮ ನೈತಿಕ ಅಧಃಪತನಕ್ಕೆ ಸಾಕ್ಷಿಯಾದಂತಿದೆ. ಬಿಜೆಪಿ ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ, ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಈಗಲಾದರೂ ನಿಲ್ಲಿಸಿ.
2.ಒಳಮೀಸಲಾತಿ; ರಾಜಕೀಯ ನಾಟಕ ಬಿಡಿ:
ಒಳಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವು ಕಾಲಹರಣ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಂದು ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲು ತಮಗಿರುವ ಅಡ್ಡಿಯಾದರೂ ಏನು?ಸಮುದಾಯಗಳ ನಡುವೆ ಒಡಕು ಮೂಡಿಸಿ ರಾಜಕೀಯ ಲಾಭ ಪಡೆಯುವುದು ನಿಮ್ಮ ಉದ್ದೇಶವೇ?
ಒಳಮೀಸಲಾತಿ ಜಾರಿಗೊಳಿಸಲು ಇರುವ ಅಡೆತಡೆಗಳಿಗಿಂತ ನಿಮ್ಮ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಎದ್ದು ಕಾಣುತ್ತಿದೆ.ಕೇವಲ ಭಾಷಣಗಳಲ್ಲಿ "ಸಾಮಾಜಿಕ ನ್ಯಾಯ" ಎಂದು ಜಪಿಸುವ ತಾವು, ಕಾರ್ಯರೂಪಕ್ಕೆ ಬಂದಾಗ ಹಿಂಜರಿಯುತ್ತಿರುವುದು ಯಾಕೆ?
3.ಖಾಲಿ ಹುದ್ದೆಗಳ ಭರ್ತಿ ಮತ್ತು ಖಾಲಿಯಾದ ಖಜಾನೆ:
ರಾಜ್ಯದಲ್ಲಿ ಸುಮಾರು 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಒಳಮೀಸಲಾತಿಯ ನೆಪವೊಡ್ಡಿ ನೀವು ಈ ನೇಮಕಾತಿಗಳನ್ನು ತಡೆಹಿಡಿದಿರುವುದು ಅಕ್ಷಮ್ಯ ಅಪರಾಧ. ವಾಸ್ತವದಲ್ಲಿ, ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಹೊಸ ನೇಮಕಾತಿಗಳಿಗೆ ಸಂಬಳ ನೀಡಲು ನಿಮ್ಮ ಬಳಿ ಹಣವಿಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕತೆಯನ್ನು ಹದಗೆಡಿಸಿ, ಈಗ ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದೀರಿ.ಒಳಮೀಸಲಾತಿ ವಿವಾದವನ್ನು ಒಂದು 'ಗುರಾಣಿ'ಯನ್ನಾಗಿ ಮಾಡಿಕೊಂಡು ಹಣಕಾಸಿನ ಮುಗ್ಗಟ್ಟನ್ನು ಮರೆಮಾಚುವ ನಿಮ್ಮ ತಂತ್ರ ನಮಗೆ ಅರ್ಥವಾಗುತ್ತದೆ.
4.SCSP/TSP ಅನುದಾನದ ದಾರಿ ತಪ್ಪಿಸುವಿಕೆ:
ಶೇ. 24.1 ರಷ್ಟು ಹಣವನ್ನು ಮೀಸಲಿಟ್ಟಿದ್ದೇವೆ ಎಂದು ಹೇಳುವ ತಾವು, ಆ ಹಣವು ಸರಿಯಾದ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಎಸ್ಸಿ/ಎಸ್ಟಿ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಸಾವಿರಾರು ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಿರುವುದು ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೇ? 9ನೇ ಶೆಡ್ಯೂಲ್ಗೆ ಸೇರಿಸುವ ಮುನ್ನವೇ ಹಣ ಹಂಚಿಕೆ ಮಾಡಿದ್ದೇವೆ ಎನ್ನುವ ನೀವು, ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
Karnataka Budget 2026: ರಾಜ್ಯ ಬಜೆಟ್ ದಿನಾಂಕ ಸದ್ಯದಲ್ಲಿಯೇ ನಿಗದಿ: ಸಿಎಂ ಸಿದ್ದರಾಮಯ್ಯ
ನನ್ನ ಆಗ್ರಹಗಳು:
- ತಕ್ಷಣವೇ ಒಳಮೀಸಲಾತಿ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡು ಅನುಷ್ಠಾನಕ್ಕೆ ತನ್ನಿ.
- ಕೋರ್ಟ್ ಆದೇಶದ ಅನ್ವಯ, ಯಾವುದೇ ವಿಳಂಬವಿಲ್ಲದೆ 2.84 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿ.
- ಉದ್ಯೋಗ ನೇಮಕಾತಿಯಲ್ಲಿ ಶೆಡ್ಯೂಲ್ 9ರ ಬದಲಾವಣೆಗಳನ್ನು ನಂತರದ ಹಂತದಲ್ಲಿ ಅಳವಡಿಸಿಕೊಳ್ಳಲು ಅವಕಾಶವಿದೆ, ಮೊದಲು ನೇಮಕಾತಿ ಆರಂಭಿಸಿ ಯುವಜನತೆಗೆ ದಾರಿಕಲ್ಪಿಸಿ. ಸಂತೆ ಭಾಷಣ ಬಿಟ್ಟು ಕೇಂದ್ರದೊಂದಿಗೆ ಚರ್ಚಿಸಿ ಶೆಡ್ಯೂಲ್ 9ಗೆ ಸೇರಿಸಲು ಕೇಂದ್ರಕ್ಕೆ ಹೋಗಿ ಪ್ರಯತ್ನ ಮಾಡಿ ಹುಸಿ ಭಾಷಣ ಬೇಡ.
- ಸಂತೆಯಲ್ಲಿ ಭಾಷಣ ಮಾಡುವುದರಿಂದ ಹೊಟ್ಟೆ ತುಂಬುವುದಿಲ್ಲ, ಬದುಕು ಹಸನಾಗುವುದಿಲ್ಲ. ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ದಲಿತ ವಿರೋಧಿ ಧೋರಣೆಯನ್ನು ಕೈಬಿಡದಿದ್ದರೆ, ಬೀದಿಗಿಳಿದು ಹೋರಾಟ ಮಾಡಬೇಕಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾ, ನನ್ನ ಆಗ್ರಹಪೂರ್ವಕವಾದ ಮನವಿಯನ್ನು ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.