ಚೆನ್ನಮ್ಮ ಅಂತಿಮ ದರ್ಶನ ಪಡೆದ ಸಿಎಂ ಡಿ.ಕೆ.ಶಿವಕುಮಾರ್; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಸೂಚನೆ
ಚೆನ್ನಮ್ಮನವರು ದೇವೇಗೌಡರ ಪ್ರತಿ ಯಶಸ್ಸಿನ ಹಿಂದೆ ಹಾಗೂ ರಾಜಕೀಯದ ಏಳು-ಬೀಳುಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಮನೆಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಮೂಲಕ ಅವರು ಗೌಡರ ಬದುಕಿನ ನಿಜವಾದ ಶಕ್ತಿಯಾಗಿದ್ದರು. ಭಗವಂತ ಹಿರಿಯರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
-
ಬೆಂಗಳೂರು: ನಗರದ ಪದ್ಮನಾಭನಗರದ ನಿವಾಸದಲ್ಲಿ ಚೆನ್ನಮ್ಮ (Chennamma) ಅವರ ಅಂತಿಮ ದರ್ಶನವನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರು ಶನಿವಾರ ರಾತ್ರಿ ಪಡೆದು, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಅವರು, ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅವರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗುವುದು ಘೋಷಿಸಿದ್ದಾರೆ.
ಕುಟುಂಬಸ್ಥರ ಜತೆ ಭೇಟಿ ನೀಡಿದ್ದ ಸಿಎಂ ಡಿಕೆಶಿ ಅವರು, ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದ ಬಳಿಕ ದೇವೇಗೌಡರು ಮತ್ತು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಅವರು, ಇಂದು ಕುಟುಂಬಸ್ಥರೊಂದಿಗೆ ತೆರಳಿ ಮಾತೃ ಸ್ವರೂಪಿ ಶ್ರೀಮತಿ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡರಿಗೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದೆ.

ಚೆನ್ನಮ್ಮ ಅವರ ನಿಧನ ಆಘಾತ ತಂದಿದೆ. ಅವರು ಅಪಾರ ದೈವಭಕ್ತೆ. ಕಷ್ಟ-ಸುಖದಲ್ಲಿ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು ಸೇವೆ ಮಾಡಿದ ಧೀಮಂತ ಹೆಣ್ಣುಮಗಳು. ದೇಶ ಹಾಗೂ ರಾಜ್ಯದ ಹಲವು ನಾಯಕರಿಗೆ ತಾಯಿಯಂತೆ ಸೇವೆ ಮಾಡಿದ್ದರು. ಕುಟುಂಬಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ್ದರು. ಇಂದು ಅವರು ನಮ್ಮೊಂದಿಗಿಲ್ಲ. ಈ ದುಃಖದ ಸಂದರ್ಭದಲ್ಲಿ ದೇವರು ಕುಟುಂಬಸ್ಥರಿಗೆ ಧೈರ್ಯ ಹಾಗೂ ನೋವು ಭರಿಸುವ ಶಕ್ತಿ ನೀಡಲಿ. ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಮತಿ ಚೆನ್ನಮ್ಮ ಅವರ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಿದ್ದು, ಎಲ್ಲಾ ವ್ಯವಸ್ಥೆಯನ್ನು ಮಾಡಲು ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಚೆನ್ನಮ್ಮ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ ದೇವೇಗೌಡರ ಧರ್ಮಪತ್ನಿ, ಮಾತೃ ಸ್ವರೂಪಿ ಶ್ರೀಮತಿ ಚೆನ್ನಮ್ಮ ಅವರು ನಿಧನರಾಗಿರುವ ವಿಷಯ ಅತೀವ ದುಃಖವನ್ನುಂಟು ಮಾಡಿದೆ. ಶ್ರೀಮತಿ ಚೆನ್ನಮ್ಮ ಅವರು ಅಪಾರ ದೈವಭಕ್ತೆಯಾಗಿದ್ದರು. ಅವರು ಆಸ್ಪತ್ರೆಯಿಂದ ಗುಣಮುಖರಾಗಿ ವಾಪಸ್ಸು ಬರುತ್ತಾರೆಂದು ಎಲ್ಲರೂ ನಂಬಿಕೆ ಇಟ್ಟುಕೊಂಡಿದ್ದೆವು. ಆದರೆ ಆ ನಂಬಿಕೆ ಸುಳ್ಳಾಗಿರುವುದಕ್ಕೆ ಬಹಳ ಬೇಸರವಾಗಿದೆ.
ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎನ್ನುತ್ತಾರೆ. ಅದರಂತೆ ಚೆನ್ನಮ್ಮನವರು ದೇವೇಗೌಡರ ಪ್ರತಿ ಯಶಸ್ಸಿನ ಹಿಂದೆ ಹಾಗೂ ರಾಜಕೀಯದ ಏಳು-ಬೀಳುಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಮನೆಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಮೂಲಕ ಅವರು ಗೌಡರ ಬದುಕಿನ ನಿಜವಾದ ಶಕ್ತಿಯಾಗಿದ್ದರು. ಯಾವುದೇ ಪ್ರಚಾರ ಬಯಸದೆ ತೆರೆಮರೆಯಲ್ಲಿ ಇದ್ದರು. ಅವರ ಅಗಲಿಕೆ ಕುಟುಂಬಸ್ಥರಿಗೆ ಹಾಗೂ ಆಪ್ತರಿಗೆ ತುಂಬಲಾರದ ನಷ್ಟವಾಗಿದೆ.
ಭಗವಂತ ಹಿರಿಯರ ಆತ್ಮಕ್ಕೆ ಚಿರಶಾಂತಿ ನೀಡಲಿ, ಕುಟುಂಬಸ್ಥರಿಗೆ, ಬಂಧು-ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಿಎಂ ತಿಳಿಸಿದ್ದಾರೆ.