ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಎಂ ಡಿಕೆಶಿ ಪೌರಕಾರ್ಮಿಕ ಸಮವಸ್ತ್ರ ಧರಿಸಿದ್ದೇಕೆ ಗೊತ್ತಾ?; ಇದರ ಹಿಂದಿದೆ ಮಹಿಳಾ ಸಿಬ್ಬಂದಿ ಎದುರಿಸಿದ ಕಹಿ ಅನುಭವ

CM DK Shivakumar: ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದರು. ವೇದಿಕೆಗೆ ಆಗಮಿಸುತ್ತಿದ್ದಂತೆ ಪೌರ ಕಾರ್ಮಿಕರಿಂದ ಸಮವಸ್ತ್ರ ಕೇಳಿ ಪಡೆದು ಧರಿಸಿದ್ದಾರೆ. ನಂತರ ಅವರು ಪೌರಕಾರ್ಮಿಕರ ಜತೆ ಕುಳಿತು ಭೋಜನ ಸವಿದಿದ್ದು ಗಮನಸೆಳೆದಿದೆ.

ಸಿಎಂ ಡಿ.ಕೆ.ಶಿವಕುಮಾರ್‌ ಪೌರಕಾರ್ಮಿಕ ಸಮವಸ್ತ್ರ ಧರಿಸಿದ್ದೇಕೆ ಗೊತ್ತಾ?

ಪೌರಕಾರ್ಮಿಕರೊಂದಿಗೆ ಭೋಜನ ಸವಿದ ಸಿಎಂ ಡಿ.ಕೆ.ಶಿವಕುಮಾರ್.‌ -

Prabhakara R
Prabhakara R Sep 25, 2026 9:01 PM

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಅವರು ಪೌರ ಕಾರ್ಮಿಕರ ಸಮವಸ್ತ್ರ (Pourakarmika Uniform) ಧರಿಸುವ ಮೂಲಕ ನಾಡಿನ ಸ್ವಚ್ಛತಾ ಸೈನಿಕರ ಜತೆ ತಾವಿರುವುದಾಗಿ ಸಂದೇಶ ನೀಡಿದ್ದಾರೆ. ಇನ್ನು ಸಿಎಂ ಅವರು ಸ್ವತಃ ಪೌರ ಕಾರ್ಮಿಕರ ಯೂನಿಫಾರ್ಮ್‌ ಧರಿಸಲು ಕಾರಣವೇನು ಎಂಬುವುದು ಇದೀಗ ಗೊತ್ತಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದರು. ವೇದಿಕೆಗೆ ಆಗಮಿಸುತ್ತಿದ್ದಂತೆ ಪೌರ ಕಾರ್ಮಿಕರಿಂದ ಸಮವಸ್ತ್ರ ಕೇಳಿ ಪಡೆದು ಧರಿಸಿದರು. ನಂತರ ಪೌರಕಾರ್ಮಿಕರ ಜತೆ ಕುಳಿತು ಭೋಜನ ಸವಿದಿದ್ದು ವಿಶೇಷವಾಗಿತ್ತು.

ಇನ್ನು ಮುಖ್ಯಮಂತ್ರಿಗಳು ಸಮವಸ್ತ್ರ ಧರಿಸುವುದಕ್ಕೆ ಪೌರ ಕಾರ್ಮಿಕ ಮಹಿಳೆಯೊಬ್ಬರು ಅನುಭವಿಸಿದ ಕಹಿ ಘಟನೆ ಕಾರಣ ಎಂಬುವುದು ತಿಳಿದುಬಂದಿದೆ. ಮಹಿಳಾ ಪೌರಕಾರ್ಮಿಕರೊಬ್ಬರ ಮಗಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಮಗಳನ್ನು ಶಾಲೆಗೆ ಬಿಡಲು ತಾಯಿ ಹೋದಾಗ ಮಗಳ ಸಹಪಾಠಿ, "ನಿಮ್ಮಮ್ಮ ಕಾರ್ಪೋರೇಶನ್ ಯೂನಿಫಾರ್ಮ್ ಹಾಕಿಕೊಂಡು ಬಂದಿದ್ದಾರೆ, ವಾಸನೆ, ದೂರ ಕೂತ್ಕೋ, ನನ್ನ ಪಕ್ಕ ಬರಬೇಡ" ಎಂದು ಹೀಯಾಳಿಸಿ ದೂರ ತಳ್ಳಿದಳಂತೆ. ಇದನ್ನು ನೆನೆದು ಪೌರ ಕಾರ್ಮಿಕ ಮಹಿಳೆ ಕಣ್ಣೀರು ಹಾಕಿದ ವಿಡಿಯೊ ನೋಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಪೌರಕಾರ್ಮಿಕರ ದಿನಾಚರಣೆಯಲ್ಲಿ ವೇದಿಕೆ ಮೇಲೆಯೇ ಪೌರಕಾರ್ಮಿಕರ ಯುನಿಫಾರ್ಮ್ ಧರಿಸಿದರು ಎಂದು ತಿಳಿದುಬಂದಿದೆ.

ಪೌರ ಕಾರ್ಮಿಕರಿಗೆ ಶೀಘ್ರದಲ್ಲೇ ಭತ್ಯೆ ಹೆಚ್ಚಳ: ಸಿಎಂ ಭರವಸೆ

DK Shivakumar (30)

“ಶ್ರಮದಲ್ಲೇ ಶಿವನನ್ನು ಕಾಣುವ ನಿತ್ಯ ನೈರ್ಮಲ್ಯಗಾರರು ಪೌರ ಕಾರ್ಮಿಕರು (Pourakarmikas). ಇವರು ನಿಜವಾದ ಕರ್ಮಯೋಗಿ, ಕಾಯಕಜೀವಿಗಳು, ಸ್ವಚ್ಛತೆ ಕ್ರಾಂತಿಯ ಸರದಾರರು. ಪೌರಕಾರ್ಮಿಕರ ಭತ್ಯೆ ಏರಿಕೆ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಕೆ ಮಾಡಿ ಸಧ್ಯದಲ್ಲೇ ಆದೇಶ ಹೋರಡಿಸಲಾಗುವುದು” ಎಂದು ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಅವರು ಘೋಷಿಸಿದ್ದಾರೆ.

“ನಿಮ್ಮೆಲ್ಲರ ಬದುಕಿನಲ್ಲಿ ನೀವು ಯಾವತ್ತಿಗೂ ಕೀಳರಿಮೆಯಿಂದ ಮಾನಸಿಕವಾಗಿ ಕುಗ್ಗಬಾರದು. ನೀವು ದೇಶಸೇವೆ ಮಾಡುತ್ತಿರುವುದಾಗಿ ಸ್ವಾಭಿಮಾನದಿಂದ ಬದುಕಿ. ಪೌರಕಾರ್ಮಿಕರಿಲ್ಲದೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಂದ ನಂತರ ಏನೇ ಒತ್ತಡವಿದ್ದರೂ ಸಾವಿರಾರು ಜನ ಪೌರಕಾರ್ಮಿಕರನ್ನು ಕಾಯಂ ಮಾಡಿದ್ದು, ಉಳಿದವರನ್ನು ಕಾಯಂ ಮಾಡಲಾಗುವುದು. ಬಿಡಬ್ಲ್ಯೂಎಸ್‌ಎಸ್‌ಬಿ, ನೀರು ಸರಬರಾಜು ಇಲಾಖೆಗಳಲ್ಲಿ ಕಾಯಂ ಆಗಿ ಸ್ವಾಭಿಮಾನದ ಬದುಕು ನೀಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನೀವಿಲ್ಲ ಎಂದರೆ ಮಹಾನಗರ, ಪಟ್ಟಣಗಳು ಸ್ವಚ್ಛವಾಗಿರುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.

“ನಿಮ್ಮ ಸಂಘಟನೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳುವಂತೆ ನಾನು ಬಸವಂತಪ್ಪನವರಿಗೆ ಹೇಳಿದೆ. ನಿಮ್ಮ ಅಧ್ಯಕ್ಷರುಗಳೇ ನಿಮ್ಮ ಕೆಲಸ ಕಾಯಂ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂಬ ಅಂಶವನ್ನು ನನ್ನ ಗಮನಕ್ಕೆ ತಂದರು. ಈ ವಿಚಾರವನ್ನು ಜನರ ಮುಂದೆಯೇ ಪ್ರಸ್ತಾಪಿಸಿ ಎಂದು ನಾನು ಸೂಚಿಸಿದೆ. ಕಾರಣ ನೀವು ಜಾಗೃತರಾಗಬೇಕು. ನಾನು ಇಲ್ಲಿಂದಲೇ ಅಧಿಕಾರಿಗಳಿಗೆ ಆದೇಶ ನೀಡುತ್ತಿದ್ದೇನೆ” ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ.

ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಮೊದಲು SDRF ನಿಧಿ ಬಿಡುಗಡೆ ಮಾಡಲಿ: ಪ್ರಲ್ಹಾದ್‌ ಜೋಶಿ ಚಾಟಿ

ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ

ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಕಾರಣಕ್ಕೆ ನಾವು ಪ್ರಜಾಸೇವೆ ಇಲಾಖೆ ಆರಂಭಿಸಿದ್ದೇವೆ. ಯಾವ ಸಂಘಟನೆಯ ಮಧ್ಯವರ್ತಿಗಳು ಅಗತ್ಯವಿಲ್ಲ. ನಿಮ್ಮ ಸಮಸ್ಯೆಗಳನ್ನು ಬಾಲಕೃಷ್ಣ, ಯತೀಂದ್ರ, ಮುನಿಯಪ್ಪನವರು ಹಾಗೂ ಬಸವಂತಪ್ಪನವರು ತಿಳಿಸಿದ್ದಾರೆ. ನಿಮ್ಮ ಮಂಡಳಿ, ಯೋಗ ಕ್ಷೇಮ, ಕಲ್ಯಾಣ ನಿಧಿ ವಿಚಾರದಲ್ಲಿ ನಾನು ಗಮನಹರಿಸಬೇಕಾಗಿದ್ದು, ಇದಕ್ಕಾಗಿ ಸಮಾಜಕಲ್ಯಾಣ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಬಸವಂತಪ್ಪನವರನ್ನು ಒಳಗೊಂಡಂತೆ ಸಂಪುಟ ಉಪಸಮಿತಿ ರಚಿಸಿ, ಆರ್ಥಿಕ ಇಲಾಖೆ ವಿಶ್ವಾಸ ಪಡೆದು ತೀರ್ಮಾನ ಮಾಡಲಾಗುವುದು” ಎಂದು ಸಿಎಂ ಹೇಳಿದ್ದಾರೆ.