Karnataka Budget 2026: ರಾಜ್ಯದ 2ನೇ ಐಟಿ ಸಿಟಿಯಾಗಿ ʼಮೈಸೂರುʼ ಅಭಿವೃದ್ಧಿ, ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆ
ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ವಿಕೇಂದ್ರೀಕೃತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇನ್ನು ಬಜೆಟ್‌ನಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗೆ ಯಾವೆಲ್ಲಾ ಯೋಜನೆಗಳು ದೊರೆತಿವೆ ಎಂಬ ಮಾಹಿತಿ ಇಲ್ಲಿದೆ.
ಮೈಸೂರು ನಗರ (ಸಂಗ್ರಹ ಚಿತ್ರ) -
ಬೆಂಗಳೂರು: ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ (Karnataka Budget 2026) ಮಾಹಿತಿ ತಂತ್ರಜ್ಞಾನ, ಎಐ (AI) ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಲವು ಉಪಕ್ರಮಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಹಾಗೂ ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪಿಸುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.
ಬಜೆಟ್ ಮಂಡನೆ ವೇಳೆ ಮಾತನಾಡಿದ ಸಿಎಂ ಅವರು, ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ. ನಮ್ಮ ರಾಜ್ಯವು ಭಾರತದ ಐಟಿ ರಫ್ತುಗಳಲ್ಲಿ ಶೇ.43ರಷ್ಟು ಕೊಡುಗೆಯನ್ನು ನೀಡಿದೆ. ಹೊಸ ಐಟಿ ನೀತಿ 2025–30 ಅಡಿಯಲ್ಲಿ 2030ರ ವೇಳೆಗೆ ಸಾಫ್ಟ್‌ವೇರ್ ರಫ್ತು 11.5 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆಯಿದೆ.
ಕರ್ನಾಟಕ ರಾಜ್ಯವು 18 ಸಾವಿರಕ್ಕೂ ಹೆಚ್ಚು ಸಕ್ರಿಯ ಸ್ಟಾರ್ಟ್‌ಅಪ್‌ಗಳ ಕೇಂದ್ರವಾಗಿದ್ದು, ಜಾಗತಿಕ ಸ್ಟಾರ್ಟ್‌ಅಪ್ ಪರಿಸರಗಳಲ್ಲಿ ಕಳೆದ ವರ್ಷದ 21ನೇ ಸ್ಥಾನದಿಂದ 14ನೇ ಸ್ಥಾನಕ್ಕೇರಿದೆ. AI ಮತ್ತು ಬಿಗ್ ಡೇಟಾ ಕ್ಷೇತ್ರದಲ್ಲಿ ವಿಶ್ವದ ಟಾಪ್ 50 AI ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನದಲ್ಲಿದೆ.
Karnataka Budget 2026: ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಜನ್ಮಶತಮಾನೋತ್ಸವಕ್ಕೆ 2 ಕೋಟಿ ರೂ.
ನವೋದ್ಯಮ ಮತ್ತು ಉದ್ಯಮಶೀಲತೆಗೆ ಉತ್ತೇಜನ
ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮವು (LEAP) ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲಿ ನವೋದ್ಯಮ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು 1,000 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗುವುದು;
ದೀರ್ಘಕಾಲೀನ ಉದ್ಯಮ-ಶೈಕ್ಷಣಿಕ ಪಾಲುದಾರಿಕೆಗಳ ಮೂಲಕ ಉದ್ಯೋಗಾವಕಾಶ ಹೆಚ್ಚಿಸಲು KDEM ಸಂಸ್ಥೆಯ ಸಹಯೋಗದೊಂದಿಗೆ “Super 100 Industry-Academia Adoption Program” ಅನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಕೆ–ಕಾಂಬಿನೇಟರ್ (K-Combinator) ಮೂಲಕ ನವೋದ್ಯಮಿಗಳಿಗೆ ವೇಗವರ್ಧಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ರಾಜ್ಯದ 2ನೇ ಮತ್ತು 3ನೇ ಹಂತದ ನಗರಗಳಾದ ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಲ್ಲಿ ಉದ್ಯಮಿಗಳಿಗೆ Incubation ಸೌಲಭ್ಯಗಳನ್ನು ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್-ಅಂಡ್-ಪ್ಲೇ ಸೌಲಭ್ಯದ ʻಲೀಪ್ ಲ್ಯಾಬ್ಸ್ʼ ಗಳನ್ನು ಸ್ಥಾಪಿಸಲಾಗುವುದು.
ಇ.ಎಸ್.ಡಿ.ಎಂ ಮತ್ತು ಸೆಮಿಕಂಡಕ್ಟರ್ ವಲಯದಲ್ಲಿ ನಮ್ಮ ರಾಜ್ಯವು ಅಗ್ರಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಪ್ರಮುಖ ಜಾಗತಿಕ ಕಂಪನಿಗಳಾದ Foxconn, LAM Research, Applied Materials ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಿದ್ದು ಹೆಮ್ಮೆಯ ವಿಷಯವಾಗಿದೆ. ಬೃಹತ್ ಕಂಪನಿಗಳಿಂದ 45 ಸಾವಿರ ಕೋಟಿ ರೂ.ಗಳ ಹೂಡಿಕೆ ಅಂದಾಜಿಸಿದೆ.
AI ಕ್ಷೇತ್ರವನ್ನು ಬಲಪಡಿಸುವ ವಿವಿಧ ಉಪಕ್ರಮ ಜಾರಿ:
ಐಐಎಸ್‌ಸಿ ಅಧೀನದಲ್ಲಿರುವ ಪ್ರತಿಷ್ಠಾನವಾದ AI ಮತ್ತು ರೋಬೋಟಿಕ್ಸ್ ತಂತ್ರಜ್ಞಾನ ಪಾರ್ಕ್ (ART-PARK), ISRO ಮತ್ತು ಕಿಯೋನಿಕ್ಸ್ ಸಹಯೋಗದಲ್ಲಿ ʻಬೆಂಗಳೂರು ರೋಬೋಟಿಕ್ಸ್ ಮತ್ತು AI ಇನ್ನೊವೇಶನ್ ಝೋನ್ʼ (BRAINz) ಎಂಬ ರೋಬೋಟಿಕ್ಸ್ ಮತ್ತು AI ಕ್ಯಾಂಪಸ್ ಅನ್ನು ಸ್ಥಾಪಿಸಲಾಗುವುದು.
IIIT ರಾಯಚೂರಿನಲ್ಲಿ AI ಶ್ರೇಷ್ಠತಾ ಕೇಂದ್ರವನ್ನು ಐದು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆ
ಕರ್ನಾಟಕವು Global Capability Center (GCC) ನೀತಿಯನ್ನು ಪರಿಚಯಿಸಿದ ಮೊದಲ ರಾಜ್ಯವಾಗಿದೆ. ನಮ್ಮ ಸರ್ಕಾರದ ಸಕಾರಾತ್ಮಕ ನೀತಿಯಿಂದ ಇದುವರೆಗೂ ರಾಜ್ಯದಲ್ಲಿ 550ಕ್ಕೂ ಹೆಚ್ಚು GCCಗಳು ಕಾರ್ಯನಿರ್ವಹಿಸುತ್ತಿವೆ. GCC ನೀತಿಯಡಿಯಲ್ಲಿ 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ GCCಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಇದರಿಂದಾಗಿ 3.5 ಲಕ್ಷ ಜನರಿಗೆ ಉದ್ಯೋಗ ಮತ್ತು ಸುಮಾರು 50 ಬಿಲಿಯನ್ ಡಾಲರ್ ಆರ್ಥಿಕ ಉತ್ಪಾದನೆ ಸಾಧ್ಯವಾಗಲಿದೆ. ಕಿಯೋನಿಕ್ಸ್ ಮೂಲಕ ಮಂಗಳೂರಿನಲ್ಲಿ ಐಟಿ ಪಾರ್ಕ್ ಅನ್ನು ಅಭಿವೃದ್ಧಿಗೊಳಿಸಿ GCC ಅನ್ನು ಪ್ರೋತ್ಸಾಹಿಸಲಾಗುವುದು.
ಮೈಸೂರು ರಾಜ್ಯದ ಎರಡನೇ ಐಟಿ ಸಿಟಿ
ಮೈಸೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿದ್ದರಿಂದ 100 ಕಂಪನಿಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ವಿಕೇಂದ್ರೀಕೃತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು.
ಚಿಕ್ಕಬಳ್ಳಾಪುರದಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ
ಡ್ರೋನ್‌ಗಳ ಪರೀಕ್ಷೆ ಮತ್ತು ಕಾರ್ಯಕ್ಷಮತೆ ಮೌಲ್ಯಮಾಪನಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ. ಪರಿಣಾಮಕಾರಿ ನರ ಶಸ್ತ್ರಚಿಕಿತ್ಸೆಗೆ ಪೂರಕವಾಗಲು Advanced Surgical Assistive Robot ಗಳನ್ನು IIIT ಬೆಂಗಳೂರು ಮತ್ತು NIMHANS ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿನ್ಯಾಸಗೊಳಿಸಲು ನಾಲ್ಕು ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಹೊಸದಾಗಿ ಸ್ಥಾಪಿಸಲಾದ Institute of Advanced Genome Editing and Gene Therapy ಮತ್ತಿತರ ಬಯೋಟೆಕ್ನಾಲಜಿ ಆಧಾರಿತ ಪ್ರಯೋಗಾಲಯಗಳಿಗೆ ಸ್ಥಳಾವಕಾಶ ಕಲ್ಪಿಸಲು ಮಾನವ ತಳಿಶಾಸ್ತ್ರ ಕೇಂದ್ರದಲ್ಲಿ ಒಟ್ಟು 20 ಕೋಟಿ ರೂ.ಗಳ ವೆಚ್ಚದಲ್ಲಿ ಮೂಲಸೌಲಭ್ಯವನ್ನು ಒದಗಿಸಲಾಗುವುದು.
ಬೆಂಗಳೂರಿನಲ್ಲಿ ಅತ್ಯಾಧುನಿಕ AI ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದ Institute of Bioinformatics and Applied Biotechnology, Centre for Cellular and Molecular Platforms ಹಾಗೂ NASSCOM ಸಂಸ್ಥೆಯ ಸಹಭಾಗಿತ್ವದಲ್ಲಿ ಒಟ್ಟು 16 ಕೋಟಿ ರೂ. ಗಳ ವೆಚ್ಚದಲ್ಲಿ ಎರಡು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಮುಂದಿನ ಐದು ವರ್ಷಗಳಲ್ಲಿ ಕ್ವಾಂಟಂ ಕ್ಷೇತ್ರದಲ್ಲಿ ಅವಶ್ಯವಿರುವ ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ಪೂರೈಸಲು ಸಂಶೋಧಕರು ಹಾಗೂ ತಂತ್ರಜ್ಞರನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಕ್ವಾಂಟಮ್ ರೋಡ್ ಮ್ಯಾಪ್‌ನ ಪ್ರಥಮ ಹಂತದ ಅನುಷ್ಠಾನಕ್ಕೆ 10 ಕೋಟಿ ರೂ.ಗಳ ಅನುದಾನ ಒದಗಿಸಿದೆ.
ಬೆಂಗಳೂರಿನಲ್ಲಿ Science City ಸ್ಥಾಪನೆ
ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ʻವಿಜ್ಞಾನ ನಗರʼ ವನ್ನು (Science City) 233 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಇದಕ್ಕೆ ಅನುಮೋದನೆ ದೊರೆತ ನಂತರ ವಾಸ್ತುವಿನ್ಯಾಸ ತಯಾರಿಸಲು ಕ್ರಮಕೈಗೊಳ್ಳಲಾಗುವುದು.
6 ಹೊಸ ತಾರಾಲಯಗಳ ಸ್ಥಾಪನೆ
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಉದ್ದೇಶದೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಹಾಗೂ 11 ಜಿಲ್ಲೆಗಳಲ್ಲಿ ತಾರಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 6 ಹೊಸ ತಾರಾಲಯಗಳನ್ನು ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳಲ್ಲಿ ತಲಾ ನಾಲ್ಕು ಕೋಟಿ ರೂ.ಗಳಂತೆ ಒಟ್ಟು 24 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.