ಮೆಟ್ರೋ ರೈಲು ಹಳಿಗೆ ಹಾರಿ ಯುವಕ ಆತ್ಮಹತ್ಯೆ; ಹಳದಿ ಮಾರ್ಗದ ಸಂಚಾರ ಸ್ಥಗಿತ
ನಮ್ಮ ಮೆಟ್ರೊ ಹಳದಿ ಮಾರ್ಗದ ಹುಸ್ಕೂರು ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಸೋಮವಾರ ಸಂಜೆ ಯುವಕ ಹಳಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಎಲೆಕ್ಟ್ರಾನಿಕ್ ಸಿಟಿಯಿಂದ ಬೊಮ್ಮಸಂದ್ರ ಕಡೆಗೆ ಸಾಗುವ ಮೆಟ್ರೊ ರೈಲುಗಳು ಸ್ಥಗಿತಗೊಂಡಿವೆ. ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮಾತ್ರ ಸಂಚಾರ ಮುಂದುವರಿದಿದೆ. ಮೃತನನ್ನು 30-35 ವರ್ಷದ ಯುವಕ ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಜು. 27: ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದ ಹುಸ್ಕೂರು ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಸೋಮವಾರ (ಜುಲೈ 27) ಸಂಜೆ ಯುವಕ ಹಳಿಗೆ ಹಾರಿದ್ದು ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಹರ ಸಾಹಸಪಟ್ಟು ಮೃತದೇಹ ಹೊರ ತೆಗೆಯಲಾಗಿದೆ (Bengaluru News). ಮೃತ ಯುವಕ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಸಂಚಾರ ಪುನರಾರಂಭವಾಗುವ ನಿರೀಕ್ಷೆ ಇದೆ.
ಸಂಜೆ ಸುಮಾರು 5.50ರ ಹೊತ್ತಿಗೆ ಮೆಟ್ರೊ ರೈಲು ಬರುವ ಹೊತ್ತಿಗೆ ಪ್ರಯಾಣಿಕ ಹಳಿಗೆ ಹಾರಿದ್ದು, ನಿಲ್ದಾಣ ನಿಯಂತ್ರಕ ಮತ್ತು ಭದ್ರತಾ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದರು. ಅದಾಗ್ಯೂ ಗಂಭೀರ ಗಾಯಗೊಂಡಿದ್ದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರೈಲು ಹರಿದ ಪರಿಣಾಮ ದೇಹ 2 ಭಾಗ ಆಗಿದೆ ಎಂದು ಮೂಲಗಳು ತಿಳಿಸಿವೆ.
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನಷ್ಟು ರೈಲು, ಬಿಇಎಂಎಲ್ ಜೊತೆ ಒಪ್ಪಂದ
ಸದ್ಯ ಎಲೆಕ್ಟ್ರಾನಿಕ್ ಸಿಟಿಯಿಂದ ಬೊಮ್ಮಸಂದ್ರ ಕಡೆಗೆ ಸಾಗುವ ಮೆಟ್ರೊ ರೈಲುಗಳು ಸ್ಥಗಿತಗೊಂಡಿವೆ. ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮಾತ್ರ ಸಂಚಾರ ಮುಂದುವರಿದಿದೆ ಎಂದು ಪ್ರಕಟಣೆ ತಿಳಿಸಿದೆ. ಶೀಘ್ರದಲ್ಲಿ ಮೆಟ್ರೊ ಸಂಚಾರ ಆರಂಭಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋದ ಪ್ರಕಟಣೆ:
Public Information /ಸಾರ್ವಜನಿಕ ಮಾಹಿತಿ ಹೆಚ್ಚಿನ ವಿವರಿಗಳಿಗೆ ಸಾರ್ವಜನಿಕ ಮಾಹಿತಿಯನ್ನು ವೀಕ್ಷಿಸಿ. pic.twitter.com/dvV4Hxlnrm
— ನಮ್ಮ ಮೆಟ್ರೋ (@OfficialBMRCL) July 27, 2026
ಮೆಟ್ರೋ ಪ್ರಕಟಣೆ
ಈ ಬಗ್ಗೆ ನಮ್ಮ ಮೆಟ್ರೋ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದೆ. ʼʼಇಂದು ಸಂಜೆ ಸುಮಾರು 5:50 ಗಂಟೆಗೆ ಹಳದಿ ಮಾರ್ಗದ ಹುಸ್ಕೂರು ರಸ್ತೆ ಮೆಟ್ರೋ ನಿಲ್ದಾಣದ ಅಪ್‌ಲೈನ್‌ನಲ್ಲಿ ಆತ್ಮಹತ್ಯೆ ಶಂಕಿತ ಘಟನೆ ಸಂಭವಿಸಿದೆ. ಕರ್ತವ್ಯದಲ್ಲಿದ್ದ ನಿಲ್ದಾಣ ನಿಯಂತ್ರಕರು ಹಾಗೂ ಭದ್ರತಾ ಸಿಬ್ಬಂದಿ ತಕ್ಷಣವೇ ನಿಗದಿತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ, ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳು ತಾತ್ಕಾಲಿಕವಾಗಿ ಆರ್.ವಿ. ರಸ್ತೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಕಾರ್ಯಾಚರಿಸುತ್ತಿವೆ. ಪ್ರಯಾಣಿಕರು ಇದನ್ನು ಗಮನಿಸಬೇಕುʼʼ ಎಂದು ಮನವಿ ಮಾಡಿದೆ.
ಮುಂದುವರಿದು, ʼʼಸಾಮಾನ್ಯ ರೈಲು ಸೇವೆಗಳನ್ನು ಶೀಘ್ರವಾಗಿ ಪುನರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆʼʼ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಹಳದಿ ಮೆಟ್ರೋದಲ್ಲಿ ಪ್ರಯಾಣಿಸಿದ ತೇಜಸ್ವಿ ಸೂರ್ಯ
ಕಳೆದ ವರ್ಷ ಚಾಲನೆ
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 2025 ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಮಾರ್ಗದಿಂದ ಬೆಂಗಳೂರಿನ 8 ಲಕ್ಷಕ್ಕೂ ಅಧಿಕ ಮಂದಿಗೆ ಅನುಕೂಲವಾಗುವ ಅಂದಾಜಿದೆ. ಆರ್.ವಿ. ರಸ್ತೆ - ಬೊಮ್ಮಸಂದ್ರ ನಡುವಿನ 19.15 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಗ್ರೀನ್ ಲೈನ್ ಜತೆ ಸಂಪರ್ಕ ಹೊಂದಿರುವುದರಿಂದ ಈ ಮಾರ್ಗವು ದಕ್ಷಿಣ ಬೆಂಗಳೂರು ಜನರನ್ನು ನಗರ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಸಹಕಾರಿ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.