ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜೀನಾಮೆ ನೀಡಿ, ದೇಶದ ಜನರ ಕ್ಷಮೆಯಾಚಿಸಿ: ಎಲ್‌ಪಿಜಿ ಸಿಲಿಂಡರ್ ದರ ಏರಿಕೆಗೆ ಪ್ರಧಾನಿ ಮೋದಿ ವಿರುದ್ಧ ಸಿಎಂ ಆಕ್ರೋಶ

LPG Cylinder Price Hike: ಭಾರತದ ಇಂದಿನ ವಿದೇಶಾಂಗ ನೀತಿಯ ವೈಫಲ್ಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಫ್‌ಸ್ಟೀನ್ ಫೈಲ್ಸ್‌ನ ಬಗೆಗಿನ ಭಯ ಮತ್ತು ರಾಜತಾಂತ್ರಿಕ ತೀರ್ಮಾನಗಳಲ್ಲಿನ ಅಜ್ಞಾನವನ್ನು ತೋರುತ್ತದೆ ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ದರ ಏರಿಕೆಗೆ ಮೋದಿ ವಿರುದ್ಧ ಸಿಎಂ ಆಕ್ರೋಶ

ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ. -

Prabhakara R
Prabhakara R Mar 7, 2026 6:44 PM

ಬೆಂಗಳೂರು, ಮಾರ್ಚ್‌ 7: ಭಾರತದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿಹೋಗಿರುವ ಸಮಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ‌ ಅವರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಿಸಿರುವುದು (LPG cylinder price hike) ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಟೀಕಿಸಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಅವರು, ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು ₹60ರಷ್ಟು ಹೆಚ್ಚಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನನಿರ್ವಹಣೆಯ ವೆಚ್ಚ ದುಬಾರಿಯಾಗಲಿದೆ.

ಈ ಏರಿಕೆ ಅನಿವಾರ್ಯ ಕ್ರಮವೇನಲ್ಲ, ಇದು ಶರಣಾಗತಿಯನ್ನೇ ದೇಶದ ಕಾರ್ಯತಂತ್ರವೆಂದು ತಪ್ಪಾಗಿ ತಿಳಿದುಕೊಂಡ ವಿದೇಶಾಂಗ ನೀತಿಯ ಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಮಾತುಗಳಿಗೆ ಮೂಕರಂತೆ ತಲೆಯಾಡಿಸುವ ಮೂಲಕ ಭಾರತದ ವ್ಯೂಹಾತ್ಮಕ ಸ್ವಾತಂತ್ರ್ಯವನ್ನು ಬೇರೊಂದು ರಾಷ್ಟ್ರದ ಪಾದದಡಿ ಇಟ್ಟಿದ್ದಾರೆ ಮತ್ತು ರಷ್ಯಾ ಹಾಗೂ ಇರಾನ್‌ನಂತಹ ದೇಶಗಳೊಂದಿಗಿನ ಭಾರತದ ದೀರ್ಘಕಾಲೀನ ಇಂಧನ ಸಹಭಾಗಿತ್ವವನ್ನು ಹಾಳುಗೆಡವಿದ್ದಾರೆ ಎಂದು ಕಿಡಿಕಾರಿದ್ದಾರೆ.

Karnataka Budget 2026: ಸಾಲದ ಪ್ರಮಾಣ ಹೆಚ್ಚಳವೆಂಬುದು ಸತ್ಯಕ್ಕೆ ದೂರವಾದ ಮಾತು: ಸಿಎಂ ಸಿದ್ದರಾಮಯ್ಯ

ಇರಾನ್‌ ಮತ್ತು ರಷ್ಯಾ ಹಲವು ದಶಕಗಳಿಂದ ಭಾರತೀಯರಿಗೆ ಇಂಧನ ಸ್ಥಿರತೆಯನ್ನು ಖಾತ್ರಿಪಡಿಸಿದ ರಾಷ್ಟ್ರಗಳು ಎಂಬುದನ್ನು ಪ್ರಧಾನಿಗಳು ಮರೆತಂತಿದೆ. ಪಂಡಿತ್ ಜವಾಹರಲಾಲ್ ನೆಹರುರವರ ಪ್ರಕಾರ “ವಿದೇಶಾಂಗ ನೀತಿಯು ಆರ್ಥಿಕ ನೀತಿಯ ಪರಿಣಾಮವಾಗಿದೆ.” ನೆಹರು ಅವರು ಏಳೆಂಟು ದಶಕಗಳ ಹಿಂದೆಯೇ ನೀಡಿದ್ದ ಎಚ್ಚರಿಕೆ ಇಂದು ಅಕ್ಷರಶಃ ಸತ್ಯವಾಗಿದೆ. ರಾಜತಾಂತ್ರಿಕತೆ ಎನ್ನುವುದು ಕಾರ್ಯತಂತ್ರವಾಗದೆ, ಪ್ರದರ್ಶನದ ವಸ್ತುವಾಗಿ ಮಾರ್ಪಟ್ಟಾಗ, ಅದಕ್ಕೆ ಅನಿವಾರ್ಯವಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರು ಬಲಿಯಾಗುತ್ತಾರೆ.‌



ಇತ್ತೀಚೆಗೆ ತಮ್ಮ ಪುಸ್ತಕದಲ್ಲಿ ಮಾಜಿ ಸೇನಾಧಿಕಾರಿ ಜನರಲ್ ಎಂ.ಎಂ. ನರವಣೆ ಅವರು ಭಾರತದ ವಿದೇಶಾಂಗ ನೀತಿ ನಿರ್ಧಾರಗಳಲ್ಲಿ ಸಾಂಸ್ಥಿಕ ಸಮಾಲೋಚನೆ ಮತ್ತು ವ್ಯೂಹಾತ್ಮಕ ತಿಳಿವಳಿಕೆಯ ಕೊರತೆಯ ಬಗ್ಗೆ ಗಂಭೀರ ಆತಂಕಗಳನ್ನು ಎತ್ತಿದ್ದರು. ಇದು ಪ್ರಧಾನಮಂತ್ರಿಗೆ ರಾಜತಾಂತ್ರಿಕ ನಿಲುವು ಮತ್ತು ಅದರ ಆರ್ಥಿಕ ಪರಿಣಾಮಗಳ ಮೂಲಭೂತ ತಿಳಿವಳಿಕೆಯ ಕೊರತೆ ಇದೆ ಎಂಬ ಅನುಮಾನವನ್ನು ಖಚಿತಪಡಿಸುವಂತಿದೆ.

LPG Cylinder Price: ಗ್ರಾಹಕರಿಗೆ ಬಿಗ್ ಶಾಕ್ : ಇಂದಿನಿಂದಲೇ ಮನೆಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ 60 ರೂ., ವಾಣಿಜ್ಯ ಸಿಲಿಂಡರ್ 115 ರೂ. ಹೆಚ್ಚಳ

ಭಾರತದ ಇಂದಿನ ವಿದೇಶಾಂಗ ನೀತಿಯ ವೈಫಲ್ಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಫ್‌ಸ್ಟೀನ್ ಫೈಲ್ಸ್‌ನ ಬಗೆಗಿನ ಭಯ ಮತ್ತು ರಾಜತಾಂತ್ರಿಕ ತೀರ್ಮಾನಗಳಲ್ಲಿನ ಅಜ್ಞಾನವನ್ನು ತೋರುತ್ತದೆ. ಪ್ರಧಾನಿಗಳು ತಮ್ಮ ರಾಜತಾಂತ್ರಿಕ ವೈಫಲ್ಯಕ್ಕೆ ಕೋಟ್ಯಂತರ ಭಾರತೀಯರು ಯಾಕೆ ಬೆಲೆ ತೆರಬೇಕು ಎನ್ನುವುದನ್ನು ತಿಳಿಸಲಿ. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿಯವರು ಬಹಿರಂಗವಾಗಿ ದೇಶದ ಜನರ ಕ್ಷಮೆಯಾಚಿಸಲಿ ಮತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.