ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Minister Priyank Kharge: ಬೆಂಗಳೂರಿನಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರ ಉದ್ಘಾಟನೆ

"ದೇಶದ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ನಿರಂತರವಾಗಿ ಮುಂಚೂಣಿಯಲ್ಲಿದೆ. ಈ ಬಾಹ್ಯಾಕಾಶ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರವನ್ನು ಪ್ರಾರಂಭಿಸುವು ದರೊಂದಿಗೆ, ನಾವು ರಾಜ್ಯದ ನಾಯಕತ್ವವನ್ನು ಭವಿಷ್ಯದ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಒಂದಾಗಿರುವ ಬಾಹ್ಯಾ ಕಾಶ ತಂತ್ರಜ್ಞಾನಕ್ಕೆ ವಿಸ್ತರಿಸುತ್ತಿದ್ದೇವೆ.

ಬೆಂಗಳೂರಿನಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರ ಉದ್ಘಾಟನೆ

-

Profile
Ashok Nayak May 1, 2026 9:00 PM

ಬೆಂಗಳೂರು: ವ್ಯಾಪಕವಾಗಿ ಬೆಳೆಯುತ್ತಿರುವ ದೇಶದ ಬಾಹ್ಯಾಕಾಶ ಆರ್ಥಿಕತೆಗೆ ಗಮನಾರ್ಹ ಉತ್ತೇಜನ ನೀಡಲು ರಾಜ್ಯ ಸರ್ಕಾರದ ನೇತೃತ್ವದಲ್ಲಿನ ದೇಶದ ಮೊಟ್ಟ ಮೊದಲ ಬಾಹ್ಯಾಕಾಶ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರವು (ಸಿಒಇ ಸ್ಪೇಸ್‌ಟೆಕ್ ಫೌಂಡೇಷನ್) ಇಂದಿನಿಂದ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ.

ಈ ಶ್ರೇಷ್ಠತಾ ಕೇಂದ್ರದ ಕಾರ್ಯವಿಧಾನ ಬಲಪಡಿಸುವುದಕ್ಕೆ ನೆರವಾಗಲು ಅಮೆರಿಕದ ಹೆಲೋಜೆನ್ ಕಾರ್ಪೊರೇಷನ್ ಸೇರಿದಂತೆ ಐದು ಒಪ್ಪಂದಗಳಿಗೆ ಅಂಕಿತ ಹಾಕಲಾಗಿದೆ.

ರಾಜ್ಯ ಸರ್ಕಾರವು ಎಸ್ಐಎ-ಇಂಡಿಯಾ ಸಹಯೋಗದಲ್ಲಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಸ್ಥೆ (ಕೆಐಟಿಎಸ್‌) ಮೂಲಕ ಸ್ಥಾಪಿಸಿರುವ ಈ ಕೇಂದ್ರವನ್ನು ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ(Electronics, IT/BT Minister Priyank Kharge) ಅವರು ಇಲ್ಲಿ ಉದ್ಘಾಟಿಸಿದರು.

ಇದನ್ನೂ ಓದಿ: Mallikarjun Kharge: ಗಂಟೆ ಬಾರಿಸಿದರೆ ದೇವರು ಪ್ರಸನ್ನ ಆಗಲ್ಲ: ಮೋದಿ ಸೋಮನಾಥ ದೇಗುಲ ಭೇಟಿಗೆ ಖರ್ಗೆ ವ್ಯಂಗ್ಯ

ಬಾಹ್ಯಾಕಾಶ ವಲಯದಲ್ಲಿನ ನಾವೀನ್ಯತೆಯ ಪ್ರಯೋಜನವನ್ನು ವಿವಿಧ ವಲಯಗಳಲ್ಲಿ ಬಳಕೆಗೆ ತರಲು ಹಾಗೂ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವುದಕ್ಕೆ ದೇಶದ ಸಾಮರ್ಥ್ಯ ಗಳನ್ನು ಬಲಪಡಿಸುವಲ್ಲಿ ಈ ಉಪಕ್ರಮವು ಒಂದು ಪ್ರಮುಖ ಹೆಜ್ಜೆಯಾಗಿದೆ.

ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್., ಎಸ್ಐಎ-ಇಂಡಿಯಾ ಅಧ್ಯಕ್ಷ ಸುಬ್ಬ ರಾವ್ ಪವುಲೂರಿ, ಎಸ್ಐಎ-ಇಂಡಿಯಾ ಮಹಾನಿರ್ದೇಶಕ ಅನಿಲ್ ಪ್ರಕಾಶ್, ಸರ್ಕಾರದ ಇತರ ಉನ್ನತಾಧಿಕಾರಿಗಳು, ಉದ್ಯಮ ಮುಖಂಡರು ಮತ್ತು ವೈಜ್ಞಾನಿಕ ಸಮುದಾಯದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Priyank kharge M

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ದೇಶದ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ನಿರಂತರವಾಗಿ ಮುಂಚೂಣಿಯಲ್ಲಿದೆ. ಈ ಬಾಹ್ಯಾಕಾಶ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರವನ್ನು ಪ್ರಾರಂಭಿಸುವುದರೊಂದಿಗೆ, ನಾವು ರಾಜ್ಯದ ನಾಯಕತ್ವವನ್ನು ಭವಿಷ್ಯದ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಒಂದಾಗಿರುವ ಬಾಹ್ಯಾ ಕಾಶ ತಂತ್ರಜ್ಞಾನಕ್ಕೆ ವಿಸ್ತರಿಸುತ್ತಿದ್ದೇವೆ.

ಸಂಶೋಧನೆಗಳನ್ನು ಮುಂದುವರಿಸುವುದರ ಬಗ್ಗೆ ಮಾತ್ರ ನಾವು ಗಮನ ಕೇಂದ್ರೀಕರಿಸಿಲ್ಲ. ವಾಸ್ತವ ಬದುಕಿಗೆ ನಾವೀನ್ಯತೆಯು ಪ್ರಯೋಜನಕ್ಕೆ ಬರುವ ರೀತಿಯಲ್ಲಿ, ಆರ್ಥಿಕ ಬೆಳವಣಿಗೆಗೆ ನೆರವಾಗುವ ಮತ್ತು ಉತ್ತಮ-ಗುಣಮಟ್ಟದ ಉದ್ಯೋಗಗಳಾಗಿ ಪರಿವರ್ತಿಸ ಬಹುದಾದ ಪೂರಕ ವ್ಯವಸ್ಥೆ ನಿರ್ಮಾಣ ಮಾಡುವುದಕ್ಕೆ ಗಮನ ಕೇಂದ್ರೀಕರಿಸಲಾಗಿದೆ. ಈ ಕೇಂದ್ರವು ಕರ್ನಾಟಕವನ್ನು ಭಾರತದ ಬಾಹ್ಯಾಕಾಶ ಆರ್ಥಿಕತೆಯ ಪ್ರಮುಖ ಚಾಲಕನ ಸ್ಥಾನದಲ್ಲಿ ಇರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆʼ ಎಂದು ಹೇಳಿದ್ದಾರೆ.

Priyank kharge M1

ರಾಜ್ಯದ ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಅವರು ಮಾತನಾಡಿ, "ಸರ್ಕಾರ, ಕೈಗಾರಿಕೆ, ನವೋದ್ಯಮಗಳು ಮತ್ತು ಶೈಕ್ಷಣಿಕ ವಲಯಗಳು ಸಮನ್ವಯದ ವೇದಿಕೆಯಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಈ ಶ್ರೇಷ್ಠತಾ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ. ಕುಶಲ ಮಾನವ ಸಂಪನ್ಮೂಲ ಅಭಿವೃದ್ಧಿ, ಅನ್ವಯಿಕ ಸಂಶೋಧನೆ ಮತ್ತು ಪೂರಕ ವ್ಯವಸ್ಥೆಯ ನಿರ್ಮಾಣದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಕಾರ್ಯಸಾಧ್ಯವಾದ ಮತ್ತು ಸುಸ್ಥಿರ ಸ್ವರೂಪದ ನಾವೀನ್ಯತೆಯ ಅವಕಾಶಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಉಪಕ್ರಮವು ಡೀಪ್‌ಟೆಕ್‌ ವಲಯಗಳು ಕಾರ್ಯನಿರ್ವಹಿಸಲು ಮತ್ತು ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಭಾರತದ ಸ್ಥಾನ ಬಲಪಡಿಸಲು ಕರ್ನಾಟಕದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದ್ದಾರೆ.

ಕೆಐಟಿಎಸ್‌ ಮತ್ತು ಎಸ್‌ಐಎ-ಇಂಡಿಯಾ ನಡುವಣ ಒಪ್ಪಂದದಡಿ ಸ್ಥಾಪಿಸಿರುವ ಸಿಒಇ ಸ್ಪೇಸ್‌ಟೆಕ್ ಫೌಂಡೇಷನ್ ಉದ್ದೇಶಗಳು ಹೀಗಿವೆ:

  • ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಸುಧಾರಿತ ಸಂಶೋಧನೆ ಮತ್ತು ನಾವೀನ್ಯತೆ
  • ಉದ್ಯಮದ ನೆರವಿನಿಂದ ತರಬೇತಿ ಮತ್ತು ಕುಶಲ ಮಾನವ ಸಂಪನ್ಮೂಲ ಅಭಿವೃದ್ಧಿ
  • ನವೋದ್ಯಮಗಳಿಗೆ ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಉತ್ತೇಜನ ಮತ್ತು ಪೂರಕ ಪರಿಸರ ನಿರ್ಮಾಣ
  • ವಿವಿಧ ವಲಯಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳ ಬಳಕೆ

ಐದು ಒಪ್ಪಂದಗಳಿಗೆ ಅಂಕಿತ

ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿಯೇ ಈ ಶ್ರೇಷ್ಠತಾ ಕೇಂದ್ರವು ತನ್ನ ಕಾರ್ಯವಿಧಾನ ಬಲಪಡಿಸಲು ನೆರವಾಗುವ ಐದು ಒಪ್ಪಂದಗಳಿಗೆ ಅಂಕಿತ ಹಾಕಿದೆ.

  • ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಎಂಎಎಚ್‌ಇ) ಜೊತೆಗೆ ಒಪ್ಪಂದ: ಬಾಹ್ಯಾಕಾಶ ಜೈವಿಕ ವಿಜ್ಞಾನ ಸಹಯೋಗದ ಸಂಶೋಧನೆ, ವಿದ್ಯಾರ್ಥಿಗಳ ತರಬೇತಿ , ಬಾಹ್ಯಾಕಾಶ ಮತ್ತು ಜೈವಿಕ ತಂತ್ರಜ್ಞಾನದ ನವೋದ್ಯಮಗಳ ಜೊತೆಗೆ ಉದ್ಯಮ ತೊಡಗಿಸಿಕೊಳ್ಳುವಿಕೆ, ಸೂಕ್ಷ್ಮ ಗುರುತ್ವಾಕರ್ಷಣೆಯ ಸಂಶೋಧನೆಯಲ್ಲಿ ಅಂತರರಾಷ್ಟ್ರೀಯ ಕಾರ್ಯಾಗಾರಗಳು ಮತ್ತು ಬಾಹ್ಯಾಕಾಶ ಜೈವಿಕ ಸಂಶೋಧನಾ ಕ್ಲಸ್ಟರ್ ಸ್ಥಾಪನೆಯ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.
  • ಅಮೆರಿಕದ ಹೆಲೋಜೆನ್ ಕಾರ್ಪೊರೇಷನ್ : ಬಾಹ್ಯಾಕಾಶ ಆಧಾರಿತ ಜೈವಿಕ ಉತ್ಪಾದನೆ ಮುನ್ನಡೆಸಲು, ನಾವೀನ್ಯತೆ ಮತ್ತು ವಾಣಿಜ್ಯ ವಹಿವಾಟು ಹೆಚ್ಚಿಸಲು, ಉದ್ಯೋಗಿಗಳ ಪರಿಣತಿ ಹೆಚ್ಚಿಸಲು, ಆರೋಗ್ಯ ರಕ್ಷಣೆಯ ಫಲಿತಾಂಶ ಸುಧಾರಿಸಲು ಮತ್ತು ಜೈವಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆ ಬಲಪಡಿಸಲು ನೆರವಾಗಲಿದೆ.
  • ಜೈವಿಕ ತಂತ್ರಜ್ಞಾನ ನೇತೃತ್ವದ ಉದ್ಯಮಗಳ ಸಂಘ (ಎಬಿಎಲ್‌ಇ) ಜೊತೆಗಿನ ಒಪ್ಪಂದ: ಬಾಹ್ಯಾಕಾಶ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಗುರುತ್ವಾಕರ್ಷಣೆ ಸಂಶೋಧನಾ ಸಹಯೋಗ, ಉದ್ಯಮಶೀಲತೆ ಮತ್ತು ನವೋದ್ಯಮ ಅಭಿವೃದ್ಧಿ, ಜಂಟಿ ನಾವೀನ್ಯತೆ ಸವಾಲುಗಳು ಮತ್ತು ಹ್ಯಾಕಥಾನ್‌ಗಳು ಮತ್ತು ರಚನಾತ್ಮಕ ಇಂಟರ್ನ್‌ಶಿಪ್ ಮತ್ತು ಫೆಲೋಶಿಪ್ ಕಾರ್ಯಕ್ರಮಗಳನ್ನು ಉತ್ತೇಜಿಸಲು ನೆರವು.
  • ಡಸಾಲ್ಟ್ ಸಿಸ್ಟಮ್ಸ್‌ ಜೊತೆಗೆ ಒಪ್ಪಂದ: ತಂತ್ರಜ್ಞಾನ ಪಾಲುದಾರರಾಗಿ, ಬಾಹ್ಯಾಕಾಶ-ತಂತ್ರಜ್ಞಾನ ಅಪ್ಲಿಕೇಷನ್‌ಗಳಿಗೆ ಸುಧಾರಿತ ಸಾಫ್ಟ್‌ವೇರ್ ಪರಿಕರಗಳು ಮತ್ತು ತ್ರೀಡಿಎಕ್ಸ್‌ಪೀರಿಯನ್ಸ್‌ ಪ್ಲಾಟ್‌ಫಾರ್ಮ್ ಸಾಮರ್ಥ್ಯಗಳನ್ನು ಒದಗಿಸಲು, ಜೊತೆಗೆ ತರಬೇತಿ ಕಾರ್ಯಕ್ರಮಗಳು, ಆರಂಭಿಕ ಇನ್‌ಕ್ಯುಬೇಷನ್ ಬೆಂಬಲ ಮತ್ತು ವಿಶೇಷ ಕೋರ್ಸ್ ಅಭಿವೃದ್ಧಿ ಉದ್ದೇಶ ಸಾಕಾರಗೊಳಿಸಲು.
  • ಐಡಿಯಾ ಬಾಜ್ ಜೊತೆಗೆ ಒಪ್ಪಂದ: ಬಾಹ್ಯಾಕಾಶ -ತಂತ್ರಜ್ಞಾನದ ನವೋದ್ಯಮಗಳಿಗೆ ರಾಷ್ಟ್ರೀಯ ಮಾರುಕಟ್ಟೆ ವಿಸ್ತರಿಸಲು, ʼಸಿಒಇʼ ಉಪಕ್ರಮಗಳನ್ನು ಪ್ರದರ್ಶಿಸುವ ಸಾಕ್ಷ್ಯಚಿತ್ರ ನಿರ್ಮಿಸಲು ಮತ್ತು ಮಾರ್ಗದರ್ಶನ, ಇನ್‌ಕ್ಯುಬೇಷನ್‌ ಮತ್ತು ಹಣಕಾಸು ನೆರವಿಗೆ ನವೋದ್ಯಮಗಳಿಗೆ ವೇದಿಕೆಯನ್ನು ಒದಗಿಸಲು ಈ ಒಪ್ಪಂದ ನೆರವಾಗಲಿದೆ.

ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಮತ್ತು ಮಾರುಕಟ್ಟೆಗೆ ಸಿದ್ಧವಾಗಿರುವ ಪರಿಹಾರಗಳ ನಡುವಣ ಅಂತರವನ್ನು ಕಡಿಮೆ ಮಾಡಲು ಈ ಉಪಕ್ರಮವನ್ನು ವಿನ್ಯಾಸ ಗೊಳಿಸಲಾಗಿದೆ. ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತೀಯ ಕಂಪನಿಗಳು ವೇಗವಾಗಿ ಬೆಳೆಯಲು ಅನುವು ಮಾಡಿಕೊಡಲಿದೆ.

ಎಸ್‌ಐಎ – ಇಂಡಿಯಾದ ಅಧ್ಯಕ್ಷ ಹಾಗೂ ಅನಂತ ಟೆಕ್ನಾಲಜೀಸ್‌ನ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಬ್ಬ ರಾವ್‌ ಪವುಲುರಿ ಅವರು ಮಾತನಾಡಿ, "ಭಾರತವು ಈಗಾಗಲೇ ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಅಪಾರ ಪರಿಣತಿ, ಜ್ಞಾನ ಮತ್ತು ಸೌಲಭ್ಯ ಗಳನ್ನು ಅಭಿವೃದ್ಧಿಪಡಿಸಿದೆ. ಈ ಸಾಮರ್ಥ್ಯವನ್ನು ಸುಸ್ಥಿರ ರೀತಿಯಲ್ಲಿ ವರಮಾನ, ಲಾಭ ಮತ್ತು ಮಾರುಕಟ್ಟೆ ಪಾಲು ಹೆಚ್ಚಳದಂತಹ ಲಾಭದಾಯಕ ವಾಣಿಜ್ಯ ವಹಿವಾಟಿನ ರೂಪದಲ್ಲಿ ಪರಿವರ್ತಿಸಲು ಕಾರ್ಯೋನ್ಮುಖವಾಗುವ ಅಗತ್ಯ ಉದ್ಭವಿಸಿದೆ. ಈ ಪ್ರಕ್ರಿಯೆ ಯನ್ನು ಸಾಂಸ್ಥಿಕಗೊಳಿಸಿ ಭಾರತದ ಕಂಪನಿಗಳು ವೇಗವಾಗಿ ಬೆಳೆಯಲು ನೆರವಾಗುವ ರೀತಿಯಲ್ಲಿ ಈ ಶ್ರೇಷ್ಠತಾ ಕೇಂದ್ರದ (ಸಿಒಇ) ಕಾರ್ಯವೈಖರಿಯನ್ನು ವಿನ್ಯಾಸಗೊಳಿಸ ಲಾಗಿದೆʼ ಎಂದು ಹೇಳಿದ್ದಾರೆ.

ಸಿಒಇ ಸ್ಪೇಸ್‌ಟೆಕ್‌ ಫೌಂಡೇಷನ್‌ ನಿರ್ದೇಶಕ ಗೋವಿಂದರಾಜನ್‌ ಅವರು ಪ್ರತಿಕ್ರಿಯಿಸಿ, ʼಬಾಹ್ಯಾಕಾಶ ತಂತ್ರಜ್ಞಾನವು ಸಮಾಜದ ಒಳಿತಿಗೆ ಬಳಸಿಕೊಳ್ಳುವ ಮುಖ್ಯ ಆಶಯ ಆಧರಿಸಿ, ವಿವಿಧ ಕ್ಷೇತ್ರಗಳ ಸವಾಲುಗಳನ್ನು ಪರಿಹರಿಸುವುದು ನಮ್ಮ ಉದ್ದೇಶವಾಗಿದೆ. ಕೃಷಿ, ಹವಾಮಾನ, ನೈಸರ್ಗಿಕ ವಿಪತ್ತು ನಿರ್ವಹಣೆ, ಸಂವಹನ, ಔಷಧ, ಜೀವ ವಿಜ್ಞಾನ ಮತ್ತು ರಾಷ್ಟ್ರೀಯ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸಲು ನಾವು ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಗುರಿ ಹಾಕಿಕೊಂಡಿದ್ದೇವೆ. ಪ್ರತಿಭಾನ್ವಿತರ ಲಭ್ಯತೆ, ನಾವೀನ್ಯತೆ, ನವೋದ್ಯಮಗಳಿಗೆ ನೆರವು ವ್ಯವಸ್ಥೆ ಮತ್ತು ಸಹಯೋಗದ ಮೂಲಕ ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮ ಆಶಯವಾಗಿದೆʼ ಎಂದು ಹೇಳಿದ್ದಾರೆ.

ಎಸ್‌ಐಎ ಇಂಡಿಯಾದ ಮಹಾನಿರ್ದೇಶಕ ಅನಿಲ್‌ ಪ್ರಕಾಶ್‌ ಮಾತನಾಡಿ, ʼಬಾಹ್ಯಾಕಾಶ ತಂತ್ರಜ್ಞಾನಗಳು ವಿಭಿನ್ನ ವಲಯಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದಂತೆ, ಕಾರ್ಯ ಸಾಧ್ಯವಾದ ಮತ್ತು ವಿಶ್ವಾಸಾರ್ಹ ಪರಿಹಾರಗಳಿಗೆ ಬೇಡಿಕೆ ತ್ವರಿತವಾಗಿ ಹೆಚ್ಚುತ್ತಿದೆ. ದೊಡ್ಡ ಪ್ರಮಾಣದಲ್ಲಿ ನಾವೀನ್ಯತೆ ಬೆಂಬಲಿಸುವ ಮಹತ್ವದ ಸಾಂಸ್ಥಿಕ ಹೆಜ್ಜೆಯನ್ನು ಈ ಕೇಂದ್ರವು ಪ್ರತಿನಿಧಿಸುತ್ತದೆ. ಈ ಪ್ರಯತ್ನದಲ್ಲಿ ಪಾಲುದಾರರಾಗಲು ಎಸ್‌ಐಎ - ಇಂಡಿಯಾ ಹೆಮ್ಮೆಪಡುತ್ತದೆ. ಈ ಉಪಕ್ರಮದ ದೀರ್ಘಕಾಲೀನ ಯಶಸ್ಸಿಗೆ ಬದ್ಧವಾಗಿದೆ" ಎಂದು ಹೇಳಿದ್ದಾರೆ.

ಕರ್ನಾಟಕವು ಈಗಾಗಲೇ ಭಾರತದ ಬಾಹ್ಯಾಕಾಶ-ತಂತ್ರಜ್ಞಾನದ ನವೋದ್ಯಮಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕುಶಲ ಮಾನವ ಸಂಪನ್ಮೂಲದ ದೊಡ್ಡ ಪಾಲು ಹೊಂದಿದೆ. ಈಗ ʼಸಿಒಇʼ ಕಾರ್ಯಾರಂಭ ಮಾಡುವುದರೊಂದಿಗೆ, ಜಾಗತಿಕ ಬಾಹ್ಯಾಕಾಶ ಆರ್ಥಿಕ ಶಕ್ತಿ ಕೇಂದ್ರವಾಗಬೇಕೆಂಬ ಭಾರತದ ಮಹತ್ವಾಕಾಂಕ್ಷೆ ಜೊತೆಗೆ ಹೊಂದಿಕೊಂಡಿ ರುವ ಡೀಪ್‌ಟೆಕ್‌ ನಾವೀನ್ಯತೆಯಲ್ಲಿ ರಾಜ್ಯವು ರಾಷ್ಟ್ರೀಯ ನಾಯಕನಾಗಿ ತನ್ನ ಸ್ಥಾನ ವನ್ನು ಮತ್ತಷ್ಟು ಬಲಪಡಿಸುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಸಹಯೋಗವನ್ನು ಕಾರ್ಯಗತಗೊಳಿಸುವಲ್ಲಿ, ನವೋದ್ಯಮಗಳನ್ನು ಬೆಂಬಲಿಸುವಲ್ಲಿ ಮತ್ತು ಭಾರತದ ಅಭಿವೃದ್ಧಿಗೆ ಮಹತ್ವದ ವಲಯಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳ ಬಳಕೆಯ ಸಾಧ್ಯತೆಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ʼಸಿಒಇʼ ಪ್ರಮುಖ ಪಾತ್ರ ವಹಿಸಲಿದೆ.

ಈ ಶ್ರೇಷ್ಠತಾ ಕೇಂದ್ರವು (ಸಿಒಇ) ಈಗ ಕಾರ್ಯಾರಂಭ ಮಾಡಿರುವುದರಿಂದ ನಾವೀನ್ಯತೆಯ ಸೃಷ್ಟಿಯಿಂದ ನಾವೀನ್ಯತೆಗಳ ಬಳಕೆಯ ಕಾರ್ಯಸಾಧ್ಯತೆಗಳತ್ತ ಗಮನ ಬದಲಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಭಾರತದ ಮುನ್ನಡೆಯು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಪ್ರಭಾವ ಬೀರುವಲ್ಲಿ ನೆರವಾಗಲಿರುವುದನ್ನು ಖಚಿತಪಡಿಸಲಿದೆ.

*

ರಾಜ್ಯ ಸರ್ಕಾರದ ನೇತೃತ್ವದಲ್ಲಿನ ದೇಶದ ಮೊದಲ ಶ್ರೇಷ್ಠತಾ ಕೇಂದ್ರ

  • ಬಾಹ್ಯಾಕಾಶ ನಾವೀನ್ಯತೆಯ ರಾಷ್ಟ್ರೀಯ ಕೇಂದ್ರವಾಗಿ ಬಲಗೊಂಡ ಕರ್ನಾಟಕದ ಸ್ಥಾನ
  • ಕೃಷಿ, ಹವಾಮಾನ, ನೈಸರ್ಗಿಕ ವಿಪತ್ತು ನಿರ್ವಹಣೆ, ಸಂವಹನ, ಔಷಧ, ಜೀವ ವಿಜ್ಞಾನ ಮತ್ತು ರಾಷ್ಟ್ರೀಯ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿನ ಸವಾಲುಗಳಿಗೆ ಬಾಹ್ಯಾಕಾಶ ತಂತ್ರಜ್ಞಾನಗಳ ಬಳಕೆಗೆ ಅವಕಾಶ
  • ಕೇಂದ್ರದ ಕಾರ್ಯವಿಧಾನ ಬಲಪಡಿಸಲು ನೆರವಾಗುವ ಐದು ಒಪ್ಪಂದಗಳಿಗೆ ಅಂಕಿತ
image

‘ದೇಶದ ಬಾಹ್ಯಾಕಾಶ ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಯನ್ನಾಗಿ ಕರ್ನಾಟಕವನ್ನು ಅಭಿವೃದ್ಧಿಪಡಿಸುವಲ್ಲಿ ʼಈ ಶ್ರೇಷ್ಠತಾ ಕೇಂದ್ರವು ಮಹತ್ವದ ಪಾತ್ರ ನಿರ್ವಹಿಸಲಿದೆʼ

- ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ