Sonu Nigam: ಕನ್ನಡಿಗರಿಗೆ ಅವಮಾನ; ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ದೂರು
Sonu Nigam: ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಸಂಗೀತ ಕಾರ್ಯಕ್ರಮದಲ್ಲಿ ಯುವಕನೊಬ್ಬ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದು ಗಾಯಕ ಸೋನು ನಿಗಮ್ ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಈ ಸಂಬಂಧ ಆವಲಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.


ಬೆಂಗಳೂರು: ಕನ್ನಡಿಗರಿಗೆ ಅವಮಾನ ಮತ್ತು ವಿವಿಧ ಭಾಷೆಯ ಜನರ ನಡುವೆ ದ್ವೇಷ ಹುಟ್ಟಿಸಲು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ (Sonu Nigam) ವಿರುದ್ಧ ನಗರದ ಆವಲಹಳ್ಳಿ ಪೋಲೀಸ್ ಠಾಣೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಘಟಕದ ಜಿಲ್ಲಾಧ್ಯಕ್ಷ ಧರ್ಮರಾಜ್.ಎ ದೂರು ನೀಡಿದ್ದಾರೆ. ಸೋನು ನಿಗಮ್ ಅವರ ಹೇಳಿಕೆಗಳ ಪರಿಣಾಮವಾಗಿ, ಕನ್ನಡಿಗರ ಭಾವನೆಗಳಿಗೆ ತೀವ್ರ ಘಾಸಿಯಾಗಿದೆ. ಇಂತಹ ವಿಭಜನಕಾರಿ ಹೇಳಿಕೆಗಳನ್ನು ತಡೆಯಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರವೇ ಧರ್ಮರಾಜ್.ಎ ಮನವಿ ಮಾಡಿದ್ದಾರೆ.
ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಗೋನಗರದ ಈಸ್ಟ್ ಪಾಯಿಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏಪ್ರಿಲ್ ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ಮಾಡಿದ ಆಕ್ಷೇಪಾರ್ಹ ಮತ್ತು ಭಾವನೆಗಳನ್ನು ಕೆರಳಿಸುವ ಹೇಳಿಕೆಗಳಿಗಾಗಿ ದೂರು ದಾಖಲಿಸಲಾಗುತ್ತಿದೆ. ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಭಾವನೆಗಳಿಗೆ ತೀವ್ರ ಘಾಸಿಯನ್ನುಂಟುಮಾಡಿದ್ದು, ಕರ್ನಾಟಕದ ವಿವಿಧ ಭಾಷಿಕ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆಯಲ್ಲದೆ, ಹಿಂಸೆಗೆ ಪ್ರಚೋದನೆ ನೀಡುವಂತಿದೆ. ಈಗಾಗಲೇ ಸೋನು ನಿಗಮ್ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ರಾಜ್ಯಾದ್ಯಂತ ಕೋಟ್ಯಂತರ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಧರ್ಮರಾಜ್ ತಿಳಿಸಿದ್ದಾರೆ.
ಬಿಎನ್ ಎಸ್ ಸೆಕ್ಷನ್ 352(1) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಪ್ರಕಾರ ಭಾಷೆ, ಜಾತಿ, ಅಥವಾ ಸಮುದಾಯದಂತಹ ಕಾರಣಗಳ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಮತ್ತು ಸೇಡಿನ ಭಾವನೆಗಳನ್ನು ಉತ್ತೇಜಿಸುವ ಕೃತ್ಯಗಳನ್ನು ಈ ಸೆಕ್ಷನ್ ಶಿಕ್ಷಾರ್ಹಗೊಳಿಸುತ್ತದೆ. ಕನ್ನಡ ವಿದ್ಯಾರ್ಥಿಯ ಕೋರಿಕೆಯನ್ನು ಭಯೋತ್ಪಾದಕ ದಾಳಿಗೆ ಸಂಬಂಧಿಸುವ ಮೂಲಕ, ಸೋನು ನಿಗಮ್ ಅವರು ಕನ್ನಡಿಗ ಮತ್ತು ಇತರ ಭಾಷಿಕ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ.
ಬಿ.ಎನ್.ಎಸ್. ಸೆಕ್ಷನ್ 351(2) (ಕ್ರಿಮಿನಲ್ ಮಾನಹಾನಿ ಪ್ರಕರಣ) ಪ್ರಕಾರ ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಸಾಂಸ್ಕೃತಿಕ ಅಥವಾ ಭಾಷಿಕ ಅಭಿವ್ಯಕ್ತಿಗಳನ್ನು ಭಯೋತ್ಪಾದನೆಗೆ ಜೋಡಿಸುವ ಮೂಲಕ ಕನ್ನಡಿಗರ ಮಾನಹಾನಿ ಮಾಡಿವೆ. ಇದರಿಂದ ಶಾಂತಿಪ್ರಿಯ ಸಮುದಾಯವಾಗಿರುವ ಕನ್ನಡಿಗರ ಖ್ಯಾತಿಗೆ ಧಕ್ಕೆಯುಂಟಾಗಿದೆ. ಈ ಹೇಳಿಕೆಗಳು ಸಾರ್ವಜನಿಕವಾಗಿ, ಕಾರ್ಯಕ್ರಮದ ವೇಳೆ ಮಾಡಲಾಗಿದ್ದು, ಕೆರಳಿಸುವ ಮತ್ತು ಅವಮಾನಿಸುವ ಉದ್ದೇಶವನ್ನು ಹೊಂದಿವೆ.
ಬಿಎನ್ ಎಸ್ ಸೆಕ್ಷನ್ 353 (ಧಾರ್ಮಿಕ ಅಥವಾ ಭಾಷಿಕ ಭಾವನೆಗಳನ್ನು ಕೆರಳಿಸುವುದು) ಪ್ರಕಾರ ಕನ್ನಡ ಗೀತೆಯ ಕೋರಿಕೆಯನ್ನು ಗೇಲಿ ಮಾಡಿ, ಭಯೋತ್ಪಾದಕ ದಾಳಿಗೆ ಹೋಲಿಕೆ ಮಾಡುವ ಮೂಲಕ, ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಭಾಷಿಕ ಭಾವನೆಗಳನ್ನು ಕೆರಳಿಸಿವೆ.
ಸೋನು ನಿಗಮ್ ಅವರ ಹೇಳಿಕೆಗಳ ಪರಿಣಾಮವಾಗಿ, ಕನ್ನಡಿಗರ ಭಾವನೆಗಳಿಗೆ ತೀವ್ರ ಘಾಸಿಯಾಗಿದೆ. ಒಂದು ಕನ್ನಡ ಹಾಡು ಹೇಳಿ ಎಂಬ ಸಣ್ಣ ಸಾಂಸ್ಕೃತಿಕ ಕೋರಿಕೆಯನ್ನು ಭಯೋತ್ಪಾದಕ ಕೃತ್ಯಕ್ಕೆ ಸಮೀಕರಿಸುವ ಮೂಲಕ, ಸೋನು ನಿಗಮ್ ಅವರು ಕನ್ನಡಿಗರನ್ನು ಅಸಹಿಷ್ಣು ಅಥವಾ ಹಿಂಸಾಪ್ರಿಯರು ಎಂದು ಚಿತ್ರಿಸಿದ್ದಾರೆ. ಕನ್ನಡಿಗರು ಸ್ವಭಾವತಃ ಶಾಂತಿಪ್ರಿಯರು. ಕನ್ನಡಿಗರ ಸೌಹಾರ್ದತೆ ಮತ್ತು ಸಹಬಾಳ್ವೆಯ ಸ್ವಭಾವಕ್ಕೆ ವಿರುದ್ಧವಾಗಿ ಈ ಹೇಳಿಕೆ ಹೊರಬಂದಿದೆ.
ಸೋನು ನಿಗಮ್ ಅವರ ಹೇಳಿಕೆ ಕರ್ನಾಟಕದಲ್ಲಿ ಭಾಷಾ ಗಲಭೆಗೆ ನಾಂದಿ ಹಾಡುವಂತಿದೆ. ಕರ್ನಾಟಕ ವೈವಿಧ್ಯತೆಗೆ ಹೆಸರಾದ ರಾಜ್ಯ, ಸೋನು ನಿಗಮ್ ಅವರಂತಹ ಸಾರ್ವಜನಿಕ ವ್ಯಕ್ತಿಯಿಂದ, ವ್ಯಾಪಕ ಅನುಯಾಯಿಗಳನ್ನು ಹೊಂದಿರುವವರಿಂದ, ಇಂತಹ ಹೇಳಿಕೆಗಳು ಕನ್ನಡಿಗರ ಕುರಿತು ಕೆಟ್ಟ ಅಭಿಪ್ರಾಯ ಮೂಡಿಸುವಂತಿವೆ. ಅಲ್ಲದೆ ಸಮಾಜದಲ್ಲಿ ಸಮುದಾಯಗಳ ನಡುವೆ ವಿಭಜನೆಯನ್ನು ಮೂಡಿಸುತ್ತಿದೆ. ಇದು ಸಾಮುದಾಯಿಕ ಸೌಹಾರ್ದತೆಗೆ ಅಪಾಯವನ್ನುಂಟುಮಾಡುತ್ತದೆ.
ಹೀಗಾಗಿ ನಿಟ್ಟಿನಲ್ಲಿ ಬಿಎನ್ ಎಸ್, 2023 ರ ಸೆಕ್ಷನ್ 352(1), 351(2), ಮತ್ತು 353 ಅಡಿಯಲ್ಲಿ ಸೋನು ನಿಗಮ್ ವಿರುದ್ಧ ಈ ದೂರು ದಾಖಲಿಸಿ, ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ, ಕ್ರಿಮಿನಲ್ ಮಾನಹಾನಿಗಾಗಿ, ಮತ್ತು ಭಾಷಿಕ ಭಾವನೆಗಳನ್ನು ಆಕ್ಷೇಪಿಸಿದ್ದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಕೋರಿದ್ದಾರೆ.
ಈ ಸುದ್ದಿಯನ್ನೂ ಓದಿ | Sonu Nigam: ಕನ್ನಡ ಹಾಡಿಗೂ ಪಹಲ್ಗಾಂ ದಾಳಿಗೂ ಏನು ಸಂಬಂಧ? ಸೋನು ನಿಗಮ್ ಮಾತಿಗೆ ರೊಚ್ಚಿಗೆದ್ದ ಕನ್ನಡಿಗರು
ಈ ಘಟನೆಯನ್ನು ಸಂಪೂರ್ಣವಾಗಿ ತನಿಖೆ ಮಾಡಿ, ಕಾರ್ಯಕ್ರಮದ ವಿಡಿಯೋ ಸಾಕ್ಷ್ಯ ಮತ್ತು ಏಪ್ರಿಲ್ 30, 2025 ರಂದು ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಉಪಸ್ಥಿತರಿದ್ದ ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಿ ಕನ್ನಡಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಮತ್ತು ಭವಿಷ್ಯದಲ್ಲಿ ಇಂತಹ ವಿಭಜನಕಾರಿ ಹೇಳಿಕೆಗಳನ್ನು ತಡೆಯಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.