ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಕೃತಿ ಕಾರಂತ್‌ಗೆ ನ್ಯಾಷನಲ್ ಜಿಯಾಗ್ರಫಿಕ್ ಎಕ್ಸ್‌ಪ್ಲೋರರ್ ಆಫ್ ದಿ ಇಯರ್ ಪ್ರಶಸ್ತಿ

ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಕೃತಿ ಕಾರಂತ್ ಅವರಿಗೆ 2026ರ ಪ್ರತಿಷ್ಠಿತ 'ರೋಲೆಕ್ಸ್ ನ್ಯಾಷನಲ್ ಜಿಯಾಗ್ರಫಿಕ್ ಎಕ್ಸ್‌ಪ್ಲೋರರ್ ಆಫ್ ದ ಇಯರ್' ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಗೆ ಕೃತಿ ಪಾತ್ರರಾಗಿದ್ದು, ಮುಂಬೈಯಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕೃತಿ ಕಾರಂತ್‌ಗೆ ನ್ಯಾಷನಲ್ ಜಿಯಾಗ್ರಫಿಕ್ ಎಕ್ಸ್‌ಪ್ಲೋರರ್ ಪ್ರಶಸ್ತಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 7, 2026 10:00 AM

ಬೆಂಗಳೂರು: ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಕೃತಿ ಕಾರಂತ್ (Krithi Karanth) ಅವರಿಗೆ 2026ರ ಪ್ರತಿಷ್ಠಿತ 'ರೋಲೆಕ್ಸ್ ನ್ಯಾಷನಲ್ ಜಿಯಾಗ್ರಫಿಕ್ ಎಕ್ಸ್‌ಪ್ಲೋರರ್ ಆಫ್ ದ ಇಯರ್' (Rolex National Geographic Explorer of the Year) ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಗೆ ಕೃತಿ ಪಾತ್ರರಾಗಿದ್ದು, ಮುಂಬೈಯಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕೃತಿ ಕೆ. ಕಾರಂತ್ ಅವರು ಭಾರತದ ಪ್ರಖ್ಯಾತ ವನ್ಯಜೀವಿ ಸಂರಕ್ಷಣಾ ಜೀವಶಾಸ್ತ್ರಜ್ಞೆ (Conservation Biologist) ಮತ್ತು ಬೆಂಗಳೂರಿನ 'ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್'ನ ಸಿಇಒ ಆಗಿದ್ದಾರೆ.

ʼವೈಲ್ಡ್ ಸೇವೆʼ (Wild Seve) ಮತ್ತು ʼವೈಲ್ಡ್ ಶಾಲೆʼ (Wild Shaale) ಸೇರಿದಂತೆ ಅವರ ಮಹತ್ವದ ಉಪಕ್ರಮಗಳು ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ. ಈ ಪ್ರಶಸ್ತಿಯು ಅವರ ಸಮರ್ಪಿತ ಪ್ರಯತ್ನಗಳು ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅವರು ತಂದ ಬದಲಾವಣೆಗಳಿಗೆ ಸಂದ ಗೌರವವಾಗಿದೆ.

ಭಾರತದಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು (Human-Wildlife Conflict) ಪರಿಹರಿಸಲು ಮೂರು ದಶಕಗಳಿಂದ ಕೃತಿ ಶ್ರಮಿಸುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಇವರು ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅವರ ಪುತ್ರಿ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತ ಅವರ ಮೊಮ್ಮಗಳು. ಕೃತಿ 28 ವರ್ಷಗಳಲ್ಲಿ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇದರಲ್ಲಿ ಯುಕೆಯ ಎಸ್ಮಂಡ್ ಬಿ ಮಾರ್ಟಿನ್ ರಾಯಲ್ ಜಿಯಾಗ್ರಫಿಕಲ್ ಸೊಸೈಟಿ ಪ್ರಶಸ್ತಿ ಕೂಡ ಸೇರಿದೆ. 2019ರಲ್ಲಿ ರೋಲೆಕ್ಸ್ ಪ್ರಶಸ್ತಿಗೆ ಆಯ್ಕೆಯಾದ ಹತ್ತು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು.

ʼವೈಲ್ಡ್ ಸೇವೆʼ ಮತ್ತು ʼವೈಲ್ಡ್ ಶಾಲೆʼ ಯೋಜನೆಗಳ ಮೂಲಕ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸುವಲ್ಲಿ ಕೃತಿ ಕಾರಂತ್‌ ಅವರ ಪಾತ್ರ ದೊಡ್ಡದು. 7,000 ಹಳ್ಳಿಗಳಲ್ಲಿ 1,00,000ಕ್ಕೂ ಹೆಚ್ಚು ಜನರಿಗೆ ಮಾನವ-ವನ್ಯಜೀವಿ ಸಂಘರ್ಷವನ್ನು ನಿಭಾಯಿಸಲು ಇವರ ʼಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ʼ ಸಹಾಯ ಮಾಡಿದೆ. ಕೃತಿ 100ಕ್ಕೂ ಹೆಚ್ಚು ವನ್ಯಜೀವಿ ಮೀಸಲು ಪ್ರದೇಶಗಳಲ್ಲಿ 50,000 ಸ್ಥಳೀಯ ಸಮುದಾಯದ ಸದಸ್ಯರಿಗೆ ತರಬೇತಿ ನೀಡಿದ್ದಾರೆ. ʼವೈಲ್ಡ್ ಸೇವೆʼ ಉಪಕ್ರಮವು ಕರ್ನಾಟಕ, ತಮಿಳುನಾಡು ಮತ್ತು ಕೇರಳದ 2,914 ಹಳ್ಳಿಗಳಿಗೆ ವಿಸ್ತರಿಸಿದೆ.

ವೈಲ್ಡ್ ಶಾಲೆ ಉದ್ದೇಶ

ರೈತರ ಬೆಳೆ ನಾಶವಾದಾಗ, ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಕಷ್ಟಪಡುತ್ತಾರೆ. ಇದನ್ನು ಮನಗಂಡ ಕೃತಿ ಕಾರಂತ್, ʼವೈಲ್ಡ್ ಶಾಲೆʼ ಎಂಬ ಉಪಕ್ರಮ ಪ್ರಾರಂಭಿಸಿದರು. ʼವೈಲ್ಡ್ ಶಾಲೆʼ ಎಂಬುದು ಕಾಡುಗಳ ಬಳಿ ವಾಸಿಸುವ ಮಕ್ಕಳಿಗೆ ವನ್ಯಜೀವಿಗಳೊಂದಿಗೆ ಹೇಗೆ ಸಹಬಾಳ್ವೆ ನಡೆಸಬೇಕೆಂದು ಆಟ, ಕಲೆ, ಹಾಡುಗಳ ಮೂಲಕ ಅರಿವು ನೀಡುವ ಯೋಜನೆ. 2018ರಿಂದ ಇಲ್ಲಿಯವರೆಗೆ 1,626 ಶಾಲೆಗಳಲ್ಲಿ 72,000 ಮಕ್ಕಳಿಗೆ ಈ ಕುರಿತು ತರಬೇತಿ ನೀಡಿದ ಹೆಗ್ಗಳಿಕೆ ಕೃತಿ ಕಾರಂತ್‌ ಅವರಿಗೆ ಸಲ್ಲುತ್ತದೆ.