Drought Compensation: ಬರಪೀಡಿತ ರೈತರಿಗೆ ತುರ್ತು ನೆರವು; 5000 ರೂ. ಬರ ಪರಿಹಾರ ನೀಡಲು ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್
Karnataka Drought: ಕೇಂದ್ರ ಸರ್ಕಾರದಿಂದ ಇನ್ನೂ ಬರ ಪರಿಹಾರದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ, ಸದ್ಯಕ್ಕೆ ರಾಜ್ಯ ಸರ್ಕಾರದ ಸ್ವಂತ ಸಂಪನ್ಮೂಲಗಳಿಂದಲೇ ಈ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ವಿಚಾರವಾಗಿ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದು, ಅವರಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
-
ಬೆಂಗಳೂರು, ನ.05: ರಾಜ್ಯದಲ್ಲಿ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ತುರ್ತು ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ ಗರಿಷ್ಠ 2 ಹೆಕ್ಟೇರ್ಗೆ ಮಿತಿಗೊಳಿಸಿ, 5000 ರೂ.ಗಳ ಬರ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದರ ಮೊದಲ ಕಂತಿನ ಮಧ್ಯಂತರ ಪರಿಹಾರವಾಗಿ 2,500 ರೂ. ಬಿಡುಗಡೆ ಮಾಡುವ ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ತಿಳಿಸಿದರು. ವಿಧಾನಸೌಧದಲ್ಲಿ 2026ರ ಮುಂಗಾರು ಅವಧಿಯ ಬರಗಾಲದಿಂದ ಉಂಟಾದ ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರಿಗೆ ಮೊದಲ ಕಂತಿನ ಮಧ್ಯಂತರ ಇನ್ಪುಟ್ ಸಬ್ಸಿಡಿ ನೆರವು ಬಿಡುಗಡೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಒಟ್ಟು 226 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. 2026ರ ಜೂನ್ 1ರಿಂದ ಸೆಪ್ಟೆಂಬರ್ 16ರವರೆಗೆ ಕರ್ನಾಟಕಕ್ಕೆ ಕೇವಲ 495 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಮಳೆ 766 ಮಿ.ಮೀ.ಗೆ ಹೋಲಿಸಿದರೆ ಶೇ. 35ರಷ್ಟು ಕೊರತೆ ದಾಖಲಾಗಿದೆ. ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶೇ. 47ರಷ್ಟು, ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ. 42, ಮಲೆನಾಡಿನಲ್ಲಿ ಶೇ. 37 ಮತ್ತು ಕರಾವಳಿ ಕರ್ನಾಟಕದಲ್ಲಿ ಶೇ. 27 ಕೊರತೆ ಕಂಡುಬಂದಿದೆ. 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು, 240 ತಾಲ್ಲೂಕುಗಳ ಪೈಕಿ 226 ತಾಲೂಕುಗಳು ಮತ್ತು 850 ಹೋಬಳಿಗಳ ಪೈಕಿ 765 ಹೋಬಳಿಗಳಲ್ಲಿ ತೀವ್ರ ಮಳೆ ಕೊರತೆ ದಾಖಲಾಗಿದೆ ಎಂದರು.
ಜಂಟಿ ಬೆಳೆಹಾನಿ ಸಮೀಕ್ಷೆಯ ವರದಿಯ ಪ್ರಕಾರ, ರಾಜ್ಯದಾದ್ಯಂತ ಒಟ್ಟು ಬಿತ್ತನೆ ಗುರಿ 84.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 69.57 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಇದರಲ್ಲಿ ಅಂದಾಜು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ (ಶೇ. 83.26 ರಷ್ಟು) ಬೆಳೆ ಹಾನಿಯಾಗಿದ್ದು, ಒಟ್ಟು 62,481.88 ಕೋಟಿ ರೂ.ಗಳಷ್ಟು ಆರ್ಥಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಎನ್ಡಿಆರ್ಎಫ್ ಅಡಿಯಲ್ಲಿ 22,400.58 ಕೋಟಿ ರೂ.ಗಳ ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದರಲ್ಲಿ ಬೆಳೆಹಾನಿ ಇನ್ಪುಟ್ ಸಬ್ಸಿಡಿಗೆ 7,943.55 ಕೋಟಿ ರೂ., ಕುಡಿಯುವ ನೀರಿಗೆ 1,727 ಕೋಟಿ ರೂ., ಜಾನುವಾರು ರಕ್ಷಣೆಗೆ 583.04 ಕೋಟಿ ರೂ. ಹಾಗೂ 61.91 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 12,146.99 ಕೋಟಿ ರೂ.ಗಳ ಅನುಗ್ರಹ ಪರಿಹಾರ ಸೇರಿದೆ. ಕೇಂದ್ರ ಸರ್ಕಾರವು ಎನ್ಡಿಆರ್ಎಫ್ ನಿಯಮಗಳನ್ನು ಮರುಪರಿಶೀಲಿಸಿ ಸಡಿಲಗೊಳಿಸಬೇಕೆಂದು ಹಾಗೂ ಬರ ಪರಿಹಾರ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವರು ಹಾಗೂ ಕೇಂದ್ರ ಗೃಹ ಸಚಿವರಿಗೆ ಐದಕ್ಕೂ ಹೆಚ್ಚು ಬಾರಿ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಹೇಳಿದರು.
ಪರಿಹಾರ ವಿತರಣೆಯಲ್ಲಿ ವಿಳಂಬ ಮತ್ತು ಅಕ್ರಮಗಳನ್ನು ತಪ್ಪಿಸಲು 'ಪರಿಹಾರ' ಪೋರ್ಟಲ್, ಡಿಜಿಟಲ್ ಬೆಳೆ ಸಮೀಕ್ಷೆ ಮತ್ತು 'ಫ್ರೂಟ್ಸ್' (FRUITS) ದತ್ತಾಂಶಗಳನ್ನು ಒಳಗೊಂಡ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಈ ವ್ಯವಸ್ಥೆಯಿಂದಾಗಿ ರೈತರು ಯಾವುದೇ ಕಚೇರಿಗಳಿಗೆ ಅಲೆಯುವುದು ಅಥವಾ ಭೌತಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಬದಲಾಗಿ ಆಧಾರ್ ಆಧಾರಿತ ಡಿಬಿಟಿ ಮೂಲಕ ಪರಿಹಾರದ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಎನ್ಡಿಆರ್ಎಫ್ನಿಂದ ಅನುದಾನ ಬಿಡುಗಡೆಯಾದ ಕೂಡಲೇ ಬಾಕಿ ಉಳಿದಿರುವ ಪರಿಹಾರ ಮೊತ್ತವನ್ನು ಇದೇ ಪರಿಷ್ಕೃತ ದರಗಳ ಅನ್ವಯ ಒಂದೇ ಕಂತಿನಲ್ಲಿ ಪಾವತಿಸಲಾಗುವುದು. 1,743.53 ಲಕ್ಷ ರೂ.ಗಳ ಇನ್ಪುಟ್ ಸಬ್ಸಿಡಿಯನ್ನು ವಿತರಿಸಲಾಗುತ್ತಿದ್ದು, ಯಾದಗಿರಿ ಜಿಲ್ಲೆಗೆ ಒಟ್ಟು ಅರ್ಹ ರೈತರಿಗೆ ಪಾವತಿಸಬೇಕಾಗಿರುವ ಇನ್ಪುಟ್ ಸಬ್ಸಿಡಿ ಮೊತ್ತವು 16,830 ಲಕ್ಷ ರೂ. ಗಳಾಗಿರುತ್ತದೆ. ಉಳಿದ ಜಿಲ್ಲೆಗಳಿಗೆ ಪರಿಹಾರ ಬಿಡುಗಡೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇನ್ಪುಟ್ ಸಬ್ಸಿಡಿಯ ಜತೆಗೆ, ಫಸಲ್ ಬಿಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ (WBCIS) ಅಡಿಯಲ್ಲಿಯೂ ರೈತರಿಗೆ ವಿಮಾ ಪರಿಹಾರವನ್ನು ತ್ವರಿತವಾಗಿ ಒದಗಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಕೇಂದ್ರ ಸರ್ಕಾರದಿಂದ ಇನ್ನೂ ಬರ ಪರಿಹಾರದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ, ಸದ್ಯಕ್ಕೆ ರಾಜ್ಯ ಸರ್ಕಾರದ ಸ್ವಂತ ಸಂಪನ್ಮೂಲಗಳಿಂದಲೇ ಈ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ವಿಚಾರವಾಗಿ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದು, ಅವರಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.