ಸೋಷಿಯಲ್ ಮೀಡಿಯಾದಲ್ಲಿರುವ ಜೆನ್ ಝೀಗಳ ಪಾಲಕರೇ ಎಚ್ಚರ; ಇನ್‌ಸ್ಟಾಗ್ರಾಮ್ ಮೂಲಕ ಯುವಕರನ್ನು ಸೆಳೆದು ಭಯೋತ್ಪಾದಕರನ್ನಾಗಿಸುವ ಜಾಲ ಪತ್ತೆ
Shahzad Bhatti Gang: ಸೋಷಿಯಲ್ ಮೀಡಿಯಾ ಮೂಲಕ ಯುವ ಜನತೆಯನ್ನು ಸೆಳೆದು ಭಯೋತ್ಪಾದಕರನ್ನಾಗಿಸುವ ವ್ಯವಸ್ಥಿತ ಸಂಚನ್ನು ಉತ್ತರ ಪ್ರದೇಶದ ಎಟಿಎಸ್ ಬಯಲಿಗೆಳೆದಿದೆ. 18-25 ವರ್ಷದ ಜೆನ್ ಝೀಗಳೇ ಈ ಜಾಲದ ಮುಖ್ಯ ಗುರಿ ಎನ್ನುವ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ.
ಚಾಟ್‌ಜಿಪಿಟಿ ರಚಿತ ಚಿತ್ರ -
ಲಖನೌ, ನ. 5: ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದ್ದು, ಬೇರು ಸಮೇತ ಕಿತ್ತು ಹಾಕಲು ಪಣ ತೊಟ್ಟಿದೆ. ಈ ಬಗ್ಗೆ ರಾಜ್ಯಗಳಿಗೂ ನಿರ್ದೇಶನ ನೀಡಲಾಗಿದ್ದು, ಅನುಮಾನಾಸ್ಪದ ಚಟುವಟಿಗಳ ಮೇಲೆ ನಿಗಾ ಇರಿಸಲಾಗಿದೆ. ಇದರ ಭಾಗವಾಗಿ ಇದೀಗ ಭಯೋತ್ಪದನೆಯ ಪ್ರಮುಖ ಜಾಲವೊಂದು ಪತ್ತೆಯಾಗಿದೆ. ಯುವ ಸಮುದಾಯದವರನ್ನು ಗುರಿಯಾಗಿಸಿಕೊಂಡು, ಸೋಷಿಯಲ್ ಮೀಡಿಯಾ ಮೂಲಕ ಅವರನ್ನು ಸೆಳೆದು ಭಯೋತ್ಪಾದಕರನ್ನಾಗಿಸುವ ವ್ಯವಸ್ಥಿತ ಸಂಚನ್ನು ಉತ್ತರ ಪ್ರದೇಶದ ಎಟಿಎಸ್ (Anti-Terrorism Squad) ಬಯಲಿಗೆಳೆದಿದೆ. ʼʼ18-25 ವರ್ಷದ ಜೆನ್ ಝೀಗಳೇ ಈ ಜಾಲದ ಮುಖ್ಯ ಗುರಿಯಾಗಿತ್ತುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
18-25 ವರ್ಷದೊಳಗಿನ ಯುವ ಜನತೆಯ ಬ್ರೇನ್ ವಾಷ್ ಮಾಡಿ ಭಯೋತ್ಪಾದಕ ದಾಳಿ ನಡೆಸಲು, ಬಾಂಬ್ ತಯಾರಿಸಲು ಸಜ್ಜುಗೊಳಿಸಲಾಗುತ್ತಿತ್ತು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಇನ್‌ಸ್ಟಾಗ್ರಾಮ್ ಮೂಲಕ ಗಾಳ
ಪಾಕಿಸ್ತಾನದ ಗಡಿ ದಾಟಿದ ಭಯೋತ್ಪಾದನಾ ನೇಮಕಾತಿ ಇದಾಗಿದ್ದು, ಭಾರತೀಯ ಯುವಜನತೆಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಿಸುತ್ತಿದೆ ಎಂದು ಎಟಿಸಿ ಹೇಳಿದೆ. ಮುಖ್ಯವಾಗಿ ಇನ್‌ಸ್ಟಾಗ್ರಾಮ್ ಮೂಲಕ ಯುವಜನತೆಯನ್ನು ಸೆಳೆಯಲಾಗುತ್ತಿದೆ. ಪಾಕಿಸ್ತಾನದ ಭಯೋತ್ಪಾದಕ ಶಹಜಾದ್ ಭಟ್ಟಿಯ ಗ್ಯಾಂಗ್ ಸೇರಿ ವಿವಿಧ ಗುಂಪುಗಳು ಇನ್‌ಸ್ಟಾಗ್ರಾಮ್‌ನಲ್ಲಿ ಭಾರತೀಯ ಯುವಕನ್ನು ಸಂಪರ್ಕಿಸಿ ಅವರಿಗೆ ಆರ್ಥಿಕ ಸಹಾಯ, ನಕಲಿ ಪಾಸ್‌ಪೋರ್ಟ್‌ನ ಆಮಿಷ ಒಡ್ಡಿ ಉಗ್ರ ಚಟುವಟಿಕೆ ನಡೆಸುವಂತರ ಪ್ರೇರೇಪಿಸುತ್ತಿವೆ.
ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿ ಜಾಲವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೇಂದ್ರ
ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕವಾಗಿ ದುರ್ಬಲವಾಗಿರುವ ಯುವಕರನ್ನು ಆಕರ್ಷಿಸಿ ನಂತರ ಅವರನ್ನು ವಾಟ್ಸ್‌ಆ್ಯಪ್ ಮತ್ತು ಸಿಗ್ನಲ್‌ನಂತಹ ಎನ್‌ಕ್ರಿಪ್ಟ್ ಮಾಡಿದ ಪ್ಲಾಟ್‌ಫಾರ್ಮ್ ಮೂಲಕ ಬ್ರೇನ್ ವಾಶ್ ಮಾಡಲಾಗುತ್ತದೆ ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಲಖನೌನಲ್ಲಿ ಶಹಜಾದ್ ಭಟ್ಟಿಯ ಗ್ಯಾಂಗ್ ಜಾಲದ ಭಾಗವಾಗಿದ್ದ ಮೂವರು ಕಾರ್ಯಕರ್ತರನ್ನು ಬಂಧಿಸಿದೆ. ಇದರಲ್ಲಿ ಬಾಲಾಪರಾಧಿಗಳಿದ್ದು, ವಿದೇಶಿ ಪಿಸ್ತೂಲ್ ಮತ್ತು ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಂಕಿತರು ರಾಣಾ ಭಾಯ್ ಎಂದು ಗುರುತಿಸಲ್ಪಟ್ಟ ಪಾಕಿಸ್ತಾನಿ ಹ್ಯಾಂಡ್ಲರ್‌ನ ಸೂಚನೆಯ ಮೇರೆಗೆ ಪೊಲೀಸ್ ಮತ್ತು ಸೇನಾ ಸಿಬ್ಬಂದಿಯ ಮೇಲೆ ಗುರಿಯಾಗಿಸಿಕೊಂಡು ಕಾರ್ಯಾಚರಿಸುತ್ತಿದ್ದರು ಎನ್ನಲಾಗಿದೆ.
ಪಂಜಾಬ್‌ನಲ್ಲಿ ನಡೆದ ಪೊಲೀಸ್ ಸಿಬ್ಬಂದಿಯ ಹತ್ಯೆ, ಜಲಂಧರ್‌ನಲ್ಲಿರುವ ಗಡಿ ಭದ್ರತಾ ಪಡೆಯ (BSF) ಪ್ರಧಾನ ಕಚೇರಿಯ ಹೊರಗೆ ನಡೆದ ದಾಳಿ ಮತ್ತು ರಾಂಚಿಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಚೇರಿಯಲ್ಲಿ ನಡೆದ ಸ್ಫೋಟ ಸೇರಿ ಹಲವು ವಿಧ್ವಂಸಕ ಕೃತ್ಯಗಳೊಂದಿಗೆ ಈ ಜಾಲಕ್ಕೆ ಸಂಬಂಧವಿರುವುದನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿವೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (UAPA) ಅಡಿಯಲ್ಲಿ ಶಹಜಾದ್ ಭಟ್ಟಿಯ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ನಂತರ, ಕೇಂದ್ರ ತನಿಖಾ ಸಂಸ್ಥೆಗಳು ಇದರ ವಿರುದ್ಧ ದೇಶಾದ್ಯಂತ ಕಾರ್ಯಾಚರಣೆ ನಡೆಸಿ, ವಿವಿಧ ರಾಜ್ಯಗಳಲ್ಲಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿವೆ.
ಶಹಜಾದ್ ಭಟ್ಟಿ ಜತೆ ಸಂಪರ್ಕ ಹೊಂದಿದ್ದ ನಾಲ್ವರ ಬಂಧನ; 2 ಪಿಸ್ತೂಲ್, 5 ಫೋನ್ ವಶ
ಮೂಲಗಳ ಪ್ರಕಾರ ಭಾರತದಾದ್ಯಂತ ಸುಮಾರು 700 ಜನರನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಹಲವರಿಗೆ ಸಮಾಲೋಚನೆ (ಕೌನ್ಸೆಲಿಂಗ್) ನೀಡಿ ನಂತರ ಬಿಡುಗಡೆ ಮಾಡಲಾಗಿದೆ. ಸದ್ಯ ಈ ಜಾಲ ಆತಂಕ ಸೃಷ್ಟಿಸಿದ್ದು, ತಮ್ಮ ಮಕ್ಕಳ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಅಧಿಕಾರಿಗಳು ಪಾಲಕರಿಗೆ ಸೂಚಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.