Deekshith Nayar: ಯುವ ಲೇಖಕ ದೀಕ್ಷಿತ್ ನಾಯರ್ ಅವರ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಕೃತಿ ಲೋಕಾರ್ಪಣೆ
Deekshith Nayar: ಬೆಂಗಳೂರು ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಲೇಖಕ ಮತ್ತು ಪತ್ರಕರ್ತ ದೀಕ್ಷಿತ್ ನಾಯರ್ ಅವರ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಕೃತಿಯನ್ನು ಖ್ಯಾತ ಲೇಖಕ, ಪತ್ರಕರ್ತ ಜೋಗಿ ಅವರು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಹಾಯ್ ಬೆಂಗಳೂರು ವಾರ ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆ ಉಪಸ್ಥಿತರಿದ್ದರು.


ಬೆಂಗಳೂರು: ಯುವ ಲೇಖಕ ಮತ್ತು ಪತ್ರಕರ್ತ ದೀಕ್ಷಿತ್ ನಾಯರ್ (Deekshith Nayar) ಅವರ ಅಂಕಣ ಬರಹಗಳ ಸಂಗ್ರಹ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಕೃತಿಯ ಲೋಕಾರ್ಪಣಾ ಸಮಾರಂಭವು ಭಾನುವಾರ (ಜ. 26) ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.
ಕೃತಿಯನ್ನು ಖ್ಯಾತ ಲೇಖಕ, ಪತ್ರಕರ್ತ ಜೋಗಿ ಅವರು ಬಿಡುಗಡೆ ಮಾಡಿ ಮಾತನಾಡಿ, ದೀಕ್ಷಿತ್ ನಾಯರ್ ಅವರು ಅಂಕಣಗಳಿಗೆ ಆಯ್ಕೆ ಮಾಡಿಕೊಳ್ಳುವ ವಿಷಯವೇ ತೀರಾ ವಿಶೇಷವಾಗಿರುತ್ತದೆ. ಅವರು ಈವರೆಗೆ ತಮ್ಮ ಅಂಕಣಗಳಲ್ಲಿ ಪರಿಚಯಿಸಿರುವ ವ್ಯಕ್ತಿಗಳೆಲ್ಲರೂ ಅಸಾಮಾನ್ಯರು. ಅವರನ್ನು ನೇರಾ ಕಂಡು ಗಂಟೆಗಟ್ಟಲೆ ಅವರನ್ನು ಸಂದರ್ಶಸಿ, ಅವರೊಂದಿಗೆ ಕೆಲ ಹೊತ್ತು ಕಳೆದು ಅಂಕಣಗಳನ್ನು ಬರೆದಿದ್ದಾರೆ. ದೀಕ್ಷಿತ್ ಅವರಲ್ಲಿ ತಾಳ್ಮೆ, ಸಂಯಮವಿದೆ. ಅದು ಇದ್ದಾಗ ಮಾತ್ರ ಈ ರೀತಿಯ ಅಂಕಣಗಳನ್ನು ಬರೆಯಲು ಸಾಧ್ಯ. ನಾನು ಆರಂಭದ ದಿನಗಳಲ್ಲಿ ಬೆಂಗಳೂರಿಗೆ ಬಂದಾಗ ರವಿ ಬೆಳಗೆರೆ ತಮ್ಮ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ನನ್ನ ಅಂಕಣಗಳಿಗೆ ಜಾಗ ಕೊಟ್ಟರು. ಅವರಿಂದಾಗಿಯೇ ನಾನು ಹೆಚ್ಚು ಓದುಗರನ್ನು ತಲುಪಿದೆ. ಈಗ ಭಾವನಾ ಬೆಳಗೆರೆ ದೀಕ್ಷಿತ್ ಅವರಿಗೆ ಅದೇ ರೀತಿಯ ಅವಕಾಶ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಹಾಗೂ ಹಾಯ್ ಬೆಂಗಳೂರು ವಾರ ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆ ಅವರು ಮಾತನಾಡಿ, ಹಾಯ್ ಬೆಂಗಳೂರ್ ವಾರ ಪತ್ರಿಕೆ ಮತ್ತೆ ಆರಂಭ ಮಾಡಿದಾಗ ದೀಕ್ಷಿತ್ ನಾಯರ್ ಬಳಿ ಪ್ರತಿ ವಾರ ಅಂಕಣ ಬರೆಸಬೇಕು ಅನ್ನಿಸಿತು. ಹೇಳಿದ ತಕ್ಷಣ ಒಪ್ಪಿಕೊಂಡ. ʼವಾರೆನೋಟʼ ಎಂಬ ಹೆಸರಿನೊಂದಿಗೆ ಕಾಯಂ ಅಂಕಣ ಶುರುವಾಗಯಿತು. ಅವನು ಅಪ್ಪನನ್ನು (ರವಿ ಬೆಳಗೆರೆ ) ಓದಿಕೊಂಡು ಬೆಳೆದವನು. ಅವರ ಪ್ರಭಾವ ಅವನ ಮೇಲೆ ಹೆಚ್ಚಾಗಿಯೇ ಇದೆ. ಕಳೆದ ನಲವತ್ತು ವಾರಗಳಿಂದ ಅಚ್ಚುಕಟ್ಟಾಗಿ ಅಂಕಣಗಳನ್ನು ಬರೆದುಕೊಡುತ್ತಿದ್ದಾನೆ. ಅವನ ಪ್ರತಿ ಅಂಕಣವೂ ಅದ್ಭುತವಾಗಿರುತ್ತದೆ. ಅವನ ಬರಹದ ಶೈಲಿ ಮತ್ತು ಅವನು ಆಯ್ಕೆ ಮಾಡಿಕೊಳ್ಳುವ ವಿಷಯಗಳಲ್ಲಿ ಹೊಸತನವಿರುತ್ತದೆ. ಹತ್ತಾರು ಓದುಗರು ಕರೆ ಮಾಡಿ ದೀಕ್ಷಿತ್ ನಾಯರ್ ಚೆನ್ನಾಗಿ ಬರೆಯುತ್ತಾರೆ ಎಂದು ಹೇಳುತ್ತಾರೆ. ನನ್ನ ಮಗಳು ಕೂಡ ದೀಕ್ಷಿತ್ ಬರಹಗಳ ಅಭಿಮಾನಿ. ಅವನು ಎಷ್ಟು ವರ್ಷ ಬೇಕಾದರೂ ಹಾಯ್ ಪತ್ರಿಕೆಗೆ ಬರೆಯಬಹುದು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Janamejaya Umarji Column: ಜನಪದದಲ್ಲಿ ಮಾರ್ಕ್ಸ್‌ವಾದಿಗಳ ಅಪಲಾಪ
ಕೃತಿಯನ್ನು (avarillade badukinalli gellaballiraa?) ಉಪನ್ಯಾಸಕಿ ಅಜ್ಜಂಪುರ ಎಸ್. ಶ್ರುತಿ ಅವರು ಪರಿಚಯಿಸಿದರು. ಕೃತಿಯ ಲೇಖಕ ದೀಕ್ಷಿತ್ ನಾಯರ್ ಮತ್ತು ಕನಸುಗಳ ಇನ್ಫಿ ನಿಟಿ ಪ್ರಕಾಶಕ ಪೃಥ್ವಿ ಸೂರಿ ವೇದಿಕೆಯಲ್ಲಿದ್ದರು. ವಿಶೇಷ ಆಹ್ವಾನಿತರಾಗಿ ಕನ್ನಡ ಪರಿಚಾರಕ ಕೆ. ರಾಜಕುಮಾರ್, ಖ್ಯಾತ ಗಾಯಕ ರಾಮಚಂದ್ರ ಹಡಪದ್, ಸಮಾಜ ಸೇವಕ ಸೈಯದ್ ಇಸಾಖ್, ಮತ್ತು ಅನಾಥ ಹೆಣಗಳ ಆಪ್ತಬಂಧು ಅಯೂಬ್ ಅಹಮ್ಮದ್ ಭಾಗವಹಿಸಿದ್ದರು.