6ನೇ ಗ್ಯಾರಂಟಿ ಘೋಷಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; 23 ಲಕ್ಷ ಮನೆಗಳಿಗೆ ಹಕ್ಕು ಪತ್ರ ವಿತರಿಸಲು ಕ್ರಮ
D.K. Shivakumar: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ-ಭೂ ಗ್ಯಾರಂಟಿ ಹಾಗೂ ಬೆಂಗಳೂರಿಗೆ ಸಂಬಂಧಿಸಿದ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಡಿಕೆಶಿ ಮಾಹಿತಿ ನೀಡಿದರು. ಬೆಂಗಳೂರಿನ 23 ಲಕ್ಷ ಮನೆಗಳ ಆಸ್ತಿಗಳನ್ನು ಅಧಿಕೃತಗೊಳಿಸಿ, ಹಕ್ಕು ಪತ್ರಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಬೆಂಗಳೂರಿನಲಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು. -
ಬೆಂಗಳೂರು, ಮೇ 13: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೂ ಮುನ್ನ ಬೆಂಗಳೂರಿಗರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. 6ನೇ ಗ್ಯಾರಂಟಿಯಾಗಿ ʼಭೂಮಿ ಗ್ಯಾರಂಟಿʼ ಜಾರಿಗೊಳಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಆ ಮೂಲಕ ಬಿ ಖಾತಾದಾರರ ಬಹು ದಿನಗಳ ಬೇಡಿಕೆ ಈಡೇರಲಿದೆ. ಅನಧಿಕೃತ ಕಟ್ಟಡಗಳ ಮಿತಿ ಸಡಿಲಿಸಿರುವ ರಾಜ್ಯ ಸರ್ಕಾರ ಖಾತಾ ಪರಿವರ್ತನಾ ಗೈಡ್ಲೈನ್ಸ್ ವ್ಯಾಲ್ಯುವನ್ನೂ ಶೇಕಡ 3ರಷ್ಟು ಕಡಿತ ಮಾಡಿದೆ. ಮೇ 17ರಿಂದಲೇ ಹೊಸ ನಿಯಮ ಜಾರಿಯಾಗಲಿದೆ.
ಬೆಂಗಳೂರಿನ ಅಭಿವೃದ್ಧಿ ಮತ್ತು ನಗರದ ಸಮಸ್ಯೆಗಳ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಅವರು ಭೂ ಗ್ಯಾರಂಟಿ ಘೋಷಿಸಿದರು. ಬೆಂಗಳೂರು ನಗರದ 23 ಲಕ್ಷ ಅಧಿಕೃತ ಮನೆಗಳ ಆಸ್ತಿಗಳ ದಾಖಲೆಗಳು ಡಿಜಿಟಲೈಸೇಷನ್ ಮಾಡಲಾಗಿದೆ ಎಂದ ತಿಳಿಸಿದರು.
ಡಿಕೆಶಿ ಅವರ ಎಕ್ಸ್ ಪೋಸ್ಟ್:
ನಮ್ಮ ಬೆಂಗಳೂರು - ನಮ್ಮ ಗ್ಯಾರಂಟಿ!
— DK Shivakumar (@DKShivakumar) May 13, 2026
ಇಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ನಮ್ಮ ಸರ್ಕಾರದ 6ನೇ ಗ್ಯಾರಂಟಿ - ಭೂ ಗ್ಯಾರಂಟಿ ಹಾಗೂ ಬೆಂಗಳೂರಿಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದೆ.
ಬೆಂಗಳೂರು ನಗರದ ಇತಿಹಾಸದಲ್ಲಿ ಈವರೆಗೆ ಯಾರೂ ಇಂತಹ… pic.twitter.com/6rxkhViubr
ʼʼಜನರ ಆಸ್ತಿಗಳು ಅವರ ಕೈ ಬಿಟ್ಟು ಹೋಗಬಾರದು ಎನ್ನುವುದೇ ನಮ್ಮ ಉದ್ದೇಶ. ಅದು ದುರುಪಯೋಗ ಆಗಬಾರದು ಎಂದು ಇ ಖಾತೆ ಮಾಡಿದ್ದೇವೆ. ಈ 23 ಲಕ್ಷದ ಪೈಕಿ 16 ಲಕ್ಷ ಆಸ್ತಿಗಳು ಎ ಖಾತಾ ಆಸ್ತಿ ಹಾಗೂ 7 ಲಕ್ಷ ಬಿ ಖಾತಾ ಇದೆ. ಒಂದು ಕ್ಷೇತ್ರದಲ್ಲಿ ಹತ್ತು ಕಡೆ ಖಾತಾ ಪರಿವರ್ತನೆ ಮೇಳ ಆಯೋಜಿಸಲಾಗುತ್ತಿದೆ. 'ನನ್ನ ಖಾತೆ - ನನ್ನ ಹಕ್ಕು' ಅಭಿಯಾನವನ್ನು ಮೇ 16ರಿಂದ ಆರಂಭಿಸಿ ಸುಮಾರು 3 ತಿಂಗಳ ಕಾಲ ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ನಡೆಸಲಾಗುವುದು'' ಎಂದರು. ಇನ್ನು ಬಿ ಖಾತಾದಿಂದ ಎ ಖಾತಾ ಮಾಡಿಸಲು 100 ದಿನ ಸಮಯ ನೀಡಲಾಗಿದೆ.
ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಆರನೇ ಗ್ಯಾರಂಟಿ 'ಭೂಮಿ ಗ್ಯಾರಂಟಿ' ಅನುಷ್ಠಾನ: ಡಿಸಿಎಂ ಡಿ.ಕೆ. ಶಿವಕುಮಾರ್
ಗೈಡ್ಲೈನ್ಸ್ ವ್ಯಾಲ್ಯೂ ಕಡಿತ
ಬಿ ಖಾತಾದಿಂದ ಎ ಖಾತಾ ಮಾಡಿಕೊಳ್ಳಲು ಜನರು ಹಿಂದೇಟು ಹಾಕಿರುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿದ್ದು, ಖಾತಾ ಪರಿವರ್ತನೆಗೆ ಗೈಡ್ಲೈನ್ಸ್ ವ್ಯಾಲ್ಯೂವನ್ನ ಕಡಿತಗೊಳಿಸಿದೆ. ಶೇಕಡ 5ರಿಂದ ಶೇಕಡ 2ಕ್ಕೆ ಗೈಡ್ ಲೈನ್ಸ್ ವ್ಯಾಲ್ಯೂವನ್ನ ಇಳಿಸಲಾಗಿದೆ. ಅಂದರೆ 5 ಲಕ್ಷ ರುಪಾಯಿ ಬದಲು 2 ಲಕ್ಷ ರುಪಾಯಿಗೆ ಗೈಡ್ ಲೈನ್ಸ್ ಇಳಿಸಲಾಗಿದೆ. 100 ದಿನಗಳ ಅವಧಿಗೆ ಮಾತ್ರ ಹೊಸ ರಿಯಾಯಿತಿ ದರ ಇರಲಿದೆ ಎಂದು ಮೂಲಗಳು ತಿಳಿಸಿವೆ.
'ಗ್ರೀನ್ ಬೆಂಗಳೂರು' ನಿರ್ಮಾಣಕ್ಕೆ ಒತ್ತು
ʼʼಆಡಳಿತಾತ್ಮಕ ಸುಧಾರಣೆಗಳ ಜತೆಗೆ 'ಗ್ರೀನ್ ಬೆಂಗಳೂರು' ನಿರ್ಮಾಣಕ್ಕೂ ನಾವು ಒತ್ತು ನೀಡಿದ್ದೇವೆ. ಈ ನಿಟ್ಟಿನಲ್ಲಿ ಕೆಂಪೇಗೌಡ ಜಯಂತಿಯ ಅಂಗವಾಗಿ ಜೂನ್ 27ರಂದು ಶಾಲೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದಾದ್ಯಂತ 15 ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಿದ್ದೇವೆ. ಆ ಮೂಲಕ ಬೆಂಗಳೂರನ್ನು ಮತ್ತೆ ಹಸಿರು ನಗರವನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆʼʼ ಎಂದರು.
ಸಸ್ಪೆಂಡ್ ಮಾಡ್ತೀರಿ ಅನ್ಕೊಂಡೆ: ಇ-ಖಾತಾ ದಂಧೆ ವಿಚಾರಕ್ಕೆ ಡಿಕೆಶಿ-ಸುನೀಲ್ ಕುಮಾರ್ ನಡುವೆ ವಾಕ್ಸಮರ!
ಸಚಿವ ಕೆ.ಜೆ. ಜಾರ್ಜ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಶಾಸಕರಾದ ಎನ್.ಎ. ಹ್ಯಾರಿಸ್, ಎ.ಸಿ. ಶ್ರೀನಿವಾಸ್ ಹಾಗೂ ಪರಿಷತ್ ಸದಸ್ಯ ಕೆ. ಗೋವಿಂದರಾಜ್ ಉಪಸ್ಥಿತರಿದ್ದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.