Divya Suresh: ಕಾನೂನಿನ ಮುಂದೆ ಎಲ್ಲೆರೂ ಒಂದೇ; ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್
ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ನಟಿ ದಿವ್ಯಾ ಸುರೇಶ್ ವಿರುದ್ಧ ದೂರು ದಾಖಲಾಗಿದೆ. ಅಕ್ಟೋಬರ್ 4ರಂದು ನಟಿ ದಿವ್ಯಾ ಸುರೇಶ್ ಕಾರಿನಲ್ಲಿ ಅಪಘಾತ ಮಾಡಿ ಸ್ಥಳದಿಂದ ಪರಾರಿ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಪ್ರತಿಕ್ರಿಯೆ ನೀಡಿದ್ದು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ ಎಂದಿದ್ದಾರೆ.
ದಿವ್ಯಾ ಸುರೇಶ್ -
ಬೆಂಗಳೂರು: 'ʼಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ತಪ್ಪು ಯಾರೇ ಮಾಡಿರಲಿ, ಹೇಗೆ ಮಾಡಿರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು, ಆಗಿಯೇ ಆಗುತ್ತೆ'' ಎಂದು ಬಿಗ್ ಬಾಸ್(Bigg Boss) ಕನ್ನಡ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ (Divya Suresh) ಹೇಳಿದ್ದಾರೆ.
'ಹಿಟ್ ಆ್ಯಂಡ್ ರನ್(Hit and Run)' ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೊ ಪೋಸ್ಟ್ ಶೇರ್ ಮಾಡಿರುವ ದಿವ್ಯಾ ಸುರೇಶ್, "ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಹಾಗೇಯೇ ತಪ್ಪು ಮಾಡಿದ ಮೇಲೆ ಕ್ಷಮಿಸಿ ಎಂದು ಕೇಳುವುದೂ ಒಳ್ಳೆಯ ಗುಣ. ಜತೆಗೆ ಮಾಡಿದ ತಪ್ಪನ್ನು ಕ್ಷಮಿಸುವುದೂ ಸಹ ದೊಡ್ಡ ಗುಣ. ಆದರೆ ಕೆಲವರು ತಪ್ಪು ಮಾಡಿದರೂ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ವಿತ್ತಂಡ ವಾದ ಮಾಡುತ್ತಾರೆ. ಮತ್ತೆ ಕೆಲವರು ತಾವು ಮಾಡದ ತಪ್ಪಿಗೂ ಕೆಲವೊಮ್ಮೆ ಕ್ಷಮೆ ಕೇಳುವ ಪರಿಸ್ಥಿತಿ ಎದುರಾಗುತ್ತದೆ" ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೇ ಇದೇ ಹಿಟ್ ಆ್ಯಂಡ್ ರನ್ ಆರೋಪದ ಕುರಿತು ಯೂಟ್ಯೂಬ್(YouTube)ನಲ್ಲಿ ಹಾಕಿರುವ ವಿಡಿಯೊಗಳಿಗೆ ಹಾಕಿರುವ ಅನೇಕ ಕಮೆಂಟ್‌ಗಳ ಸ್ಕ್ರೀನ್ ಶಾಟ್‌ಗಳನ್ನು ಸಹ ದಿವ್ಯಾ ಸುರೇಶ್ ಹಂಚಿಕೊಂಡಿದ್ದು, "ನನ್ನ ಪರವಾಗಿ ಕಮೆಂಟ್ ಮಾಡಿದ ಪುಣ್ಯಾತ್ಮಿಗೆ ಧನ್ಯವಾದಗಳು. ಜನ ಬೆಂಬಲಕ್ಕಿಂತ ಮತ್ತೊಂದು ಇಲ್ಲ" ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಚಲಿಸುತ್ತಿದ್ದ ವಾಹನದಿಂದ ರಸ್ತೆಗೆ ಜಿಗಿದ ಸಿಂಹ; ಮೈಜುಮ್ಮೆನಿಸುವ ವಿಡಿಯೊ ಇಲ್ಲಿದೆ
ದಿವ್ಯಾ ಸುರೇಶ್ ಹಂಚಿಕೊಂಡಿರುವ ಕಮೆಂಟ್‌ಗಳ ಸ್ಕ್ರೀನ್ ಶಾಟ್‌ಗಳಲ್ಲಿ ನೆಟ್ಟಿಗರು ದಿವ್ಯಾ ಸುರೇಶ್ ಪರವಾಗಿಯೇ ಬ್ಯಾಟ್ ಬೀಸಿದ್ದು, ಅಪಘಾತದಲ್ಲಿ ಬೈಕ್ ಸವಾರನದ್ದೇ ತಪ್ಪು ಎಂದು ಹೇಳಿದ್ದಾರೆ. "ದಯವಿಟ್ಟು ಸಿಸಿಟಿವಿ ದೃಶ್ಯಾವಳಿಯನ್ನು ನೋಡಿ. ಇಲ್ಲವಾದರೆ ಕಣ್ಣನ್ನು ಪರೀಕ್ಷಿಸಿಕೊಳ್ಳಿ. ಕಲಾವಿದರು ಎಂಬ ಕಾರಣಕ್ಕೆ ಸುಖಾ ಸುಮ್ಮನೇ ಆರೋಪ ಮಾಡಬೇಡಿ" ಎಂದು ಕಮೆಂಟ್ ಮಾಡಿದ್ದಾರೆ.
ಅಕ್ಟೋಬರ್ 4ರ ಬೆಳಗಿನ ಬ್ಯಾಟರಾಯನಪುರ ಠಾಣೆ ಬಳಿ ದಿವ್ಯಾ ಸರೇಶ್ ಅವರ ಕಾರು ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಬಳಿಕ ಅಕ್ಟೋಬರ್ 7ರಂದು ಬೈಕ್ ಚಲಾಯಿಸುತ್ತಿದ್ದ ಜಿ ಕಿರಣ್ ಎಂಬವವರು ಬ್ಯಾಟರಾಯನಪುರ ಠಾಣೆಗೆ ತೆರಳಿ ದಿವ್ಯಾ ಸರೇಶ್ ವಿರುದ್ಧ ದೂರು ದಾಖಲಿಸಿದ್ದರು. "ನಮ್ಮ ಸೋದರ ಸಂಬಂಧಿಗಳೊಂದಿಗೆ ಆಸ್ಪತ್ರೆಗೆ ಹೊರಟಿದ್ದ ವೇಳೆ, ಏಕಾಏಕಿ ಬಂದ ದಿವ್ಯಾ ಅವರ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಬಳಿಕ ಮಾಧ್ಯಮದವರ ಮುಂದೆಯೂ ದಿವ್ಯಾ ಸುರೇಶ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಅಪಘಾತದಲ್ಲಿ ಗಾಯಗೊಂಡ ಮಹಿಳೆ ಅನಿತಾ, "ನಾನು ಟೈಲರಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇನೆ. ಪತಿ ಆಟೋ ಓಡಿಸುತ್ತಿದ್ದಾರೆ. ಈಗಾಗಲೇ ಚಿಕತ್ಸೆಗೆ ಸುಮಾರು 2 ಲಕ್ಷ ರೂಪಾಯಿ ಖರ್ಚಾಗಿದ್ದು, ಸಾಲ ಮಾಡಿ ಹಣ ಕಟ್ಟಿದ್ದೇವೆ. ದಯವಿಟ್ಟು ಇದಕ್ಕೆ ಪರಿಹಾರ ಕೊಡಿಸಿ" ಎಂದು ಮನವಿ ಮಾಡಿದ್ದರು.