ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಡ್ನಾಡಿಗಳ ಬಗ್ಗೆ ಬಿಜೆಪಿ ದಿಲ್ಲಿ ವರಿಷ್ಠರಿಗೆ ವಿವರಣೆ

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನಕ್ಕೆ ಕಂಗೆಟ್ಟಿರುವ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಆಣೆಪ್ರಮಾಣದ ಹೇಳಿಕೆಯ ನಂತರ ಕೇಂದ್ರ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿರುವ ರಾಜ್ಯ ನಾಯಕರು ವರದಿ ಒಪ್ಪಿಸಲು, ಇಲ್ಲವೇ ತಲೆದಂಡಕ್ಕೆ ಸಿದ್ಧರಾಗಬೇಕಾದ ಪರಿಸ್ಥಿತಿ ಬಂದೊದಗಿದೆ.

ಅಡ್ನಾಡಿಗಳ ಬಗ್ಗೆ ಬಿಜೆಪಿ ದಿಲ್ಲಿ ವರಿಷ್ಠರಿಗೆ ವಿವರಣೆ

-

Profile
Ashok Nayak Jun 23, 2026 6:53 AM

ಪರಿಷತ್ ಅಡ್ಡಮತ: ದಿಲ್ಲಿಯಲ್ಲಿ ವಿಜಯೇಂದ್ರ, ಅಶೋಕ್

ಆಣೆ ಪ್ರಮಾಣದ ಬಗ್ಗೆ ಮುಂದುವರಿದ ಪರ-ವಿರೋಧ ಚರ್ಚೆ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನಕ್ಕೆ ಕಂಗೆಟ್ಟಿರುವ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಗೊಂಡಿದೆ. ಆಣೆಪ್ರಮಾಣದ ಹೇಳಿಕೆಯ ನಂತರ ಕೇಂದ್ರ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿರುವ ರಾಜ್ಯ ನಾಯಕರು ವರದಿ ಒಪ್ಪಿಸಲು, ಇಲ್ಲವೇ ತಲೆ ದಂಡಕ್ಕೆ ಸಿದ್ಧರಾಗಬೇಕಾದ ಪರಿಸ್ಥಿತಿ ಬಂದೊದಗಿದೆ. ಇದೇ ವೇಳೆ ರಾತ್ರಿ ಅಪಾರ್ಟ್‌ʼಮೆಂಟ್‌ನ ರಹಸ್ಯ ಕಾರ್ಯಾಚರಣೆಯ ಬಗ್ಗೆ ಹೇಳಿದ್ದರೂ, ಪಕ್ಷದ ಮುಖಂಡರು ಹೊಂದಾಣಿಕೆ ಮಾಡಿ ಕೊಂಡಿರುವ ವಿಚಾರವೂ ಮುನ್ನೆಲೆಗೆ ಬಂದಿದೆ.

ಪಕ್ಷದ ವರಿಷ್ಠರ ಜತೆ ಚರ್ಚಿಸುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ ದೆಹಲಿಗೆ ತೆರಳಿದ್ದು, ಮಂಗಳವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸೇರಿ ಇತರ ವರಿಷ್ಠರನ್ನು ಭೇಟಿ ಮಾಡಿ ಅಡ್ಡ ಮತದಾನದ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ.

ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ: ಸೋಮವಾರ ಬೆಳಗ್ಗೆ ವಿಜಯೇಂದ್ರ ಮತ್ತು ಅಶೋಕ್ ಅವರು ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣಿಸಿದ್ದಾರೆ. ಮಂಗಳವಾರ ಇಡೀ ದಿನ ವಿವಿಧ ನಾಯಕರ ಭೇಟಿ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಲಿಖಿತ ವಿವರಣೆ ಸಿದ್ಧಪಡಿಸಿ ಕೊಂಡಿದ್ದು, ವರಿಷ್ಠರಿಗೆ ಸಲ್ಲಿಸಲಿದ್ದಾರೆ ಅನ್ನಲಾಗಿದೆ. ಅಡ್ಡಮತದಾನದ ಬೆಳವಣಿಗೆಯನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ತೆಗೆದುಕೊಂಡಿದ್ದು, ಯಾರು ಪಕ್ಷದ ಬೇಲಿ ಹಾರಿದ್ದಾರೋ ಭವಿಷ್ಯದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂಬ ನಿಲುವು ಹೊಂದಿದ್ದಾರೆ.

ಇದನ್ನೂ ಓದಿ: MLC Election: ಮತ ಕೊಟ್ಟರೆ ಕಿಸೆಗೆ 50 ಕೋಟಿ, ಕ್ಷೇತ್ರಕ್ಕೆ 100 ಕೋಟಿ ಅನುದಾನದ ಆಮಿಷ: ಕಾಂಗ್ರೆಸ್‌ ವಿರುದ್ಧ ಎಚ್‌ಡಿಕೆ ಆರೋಪ

ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಶುಕ್ರವಾರ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಕ್ಕೆ ತಕ್ಕಂತೆ ಎಲ್ಲ ಮಾಹಿತಿಯೊಂದಿಗೆ ದಿಲ್ಲಿಗೆ ತೆರಳಿದ್ದಾರೆ ಎನ್ನಲಾ ಗಿದೆ. ಈ ಮಧ್ಯೆ ಪಕ್ಷಕ್ಕೆ ದ್ರೋಹ ಬಗೆದಿರುವುದು ಮಾತೆಗೆ ದ್ರೋಹ ಬಗೆದಂತೆ ಎಂದು ಹೇಳಿದ್ದ ವಿಜಯೇಂದ್ರ, ಧರ್ಮಸ್ಥಳದಲ್ಲಿ ಶಾಸಕರ ಸಭೆ ನಡೆಸಿ ಆಣೆ ಪ್ರಮಾಣದ ಮಾತನ್ನಾಡಿದ್ದರು. ಅಂತಿಮವಾಗಿ ಹಲವು ಹಿರಿಯ ನಾಯಕರು, ರಾಜಕೀಯ ಉದ್ದೇಶಗಳಿಗಾಗಿ ಪವಿತ್ರಸ್ಥಳವನ್ನು ಬಳಸದಂತೆ ಸಲಹೆ ನೀಡಿದ್ದನ್ನು ಪರಿಗಣಿಸಿ, ವಿಚಾರವನ್ನು ಕೈಬಿಟ್ಟಿದ್ದಾರೆ. ಅಡ್ಡ ಮತದಾನವನ್ನು ಕೆಲವರು ತಮ್ಮದೇ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಇದನ್ನು ಅಭಿವೃದ್ಧಿಯ ಹಿತಾಸಕ್ತಿಯಿಂದ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದರಲ್ಲಿ ಕುದುರೆ ವ್ಯಾಪಾರ ನಡೆದಿದೆ. ಆದರೂ ಇದನ್ನು ಅಭಿವೃದ್ಧಿ ಎಂದು ಬಿಂಬಿಸಲಾ ಗುತ್ತಿದೆ. ಯಾರ ಅಭಿವೃದ್ಧಿ? ಕ್ಷೇತ್ರದ ಅಭಿವೃದ್ಧಿ ಯಲ್ಲ, ಅದು ವೈಯಕ್ತಿಕ ಅಭಿವೃದ್ಧಿಯಾಗಿದೆ. ಅಡ್ಡ ಮತದಾನದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಶಿಸ್ತುಕ್ರಮ ಎದುರಿಸ ಬೇಕಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದರೂ, ತೆರೆಮರೆಯಲ್ಲಿ ಪಕ್ಷದ ಪ್ರಮುಖರೇ ಹಣಕಾಸಿನ ಮುಗ್ಗಟ್ಟು ಹಾಗೂ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆರ್ಥಿಕ ಸಹಾಯಬೇಕಾಗುತ್ತದೆ ಎಂದಿದ್ದಾರೆ. ಈ ಕಾರಣಕ್ಕೆ ಮಾರಾಟವಾದವರೂ ಇದ್ದಾರೆ ಎನ್ನುವುದು ಕೂಡ ಈಗ ಬಿಜೆಪಿಯಲ್ಲಿ ಗುಟ್ಟಾಗಿ ಉಳಿದಿಲ್ಲ.

ಮೊದಲೇ ‘ಅಡ್ಡದ’ ಮಾಹಿತಿ ನೀಡಿದ್ದೆ: ಸದಾನಂದ ಗೌಡ

ಬಿಜೆಪಿ ಕಾರ್ಯದರ್ಶಿಗೆ ರಹಸ್ಯಸಭೆ ಮಾಹಿತಿ ನೀಡಿದ್ದೆ

ಮತದಾನದ ವಿಚಾರಕ್ಕೆ ಸಂಬಂಧಿಸಿದಂತೆ ಹೆಬ್ಬಾಳದ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನಲ್ಲಿ ರಹಸ್ಯ ಸಭೆ ನಡೆಸಲಾಗಿದೆ ಎಂದು ಮಾಜಿ ಸಿಎಂ ಸದಾನಂದ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ಪಕ್ಷದ ರಾಜ್ಯ ನಾಯಕರ ಉದಾಸೀನತೆಯೇ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ಗೆಲುವಿಗೆ ಪ್ರಮುಖ ಕಾರಣ ಎಂದು ಚಾಟಿ ಬೀಸಿದ್ದಾರೆ. ಜೂನ್ 13ರಂದು ನನಗೆ ಹೆಬ್ಬಾಳದ ಪ್ರೆಸ್ಟೀಜ್ ಅಪಾರ್ಟ್‌ ಮೆಂಟ್‌ನಿಂದ ಒಂದು ಕರೆ ಬಂದಿತ್ತು. ಕಾಂಗ್ರೆಸ್‌ನ ನಾಲ್ಕು ಪ್ರಮುಖ ನಾಯಕರು ಮತ್ತು ಬಿಜೆಪಿಯ ಕೆಲ ಶಾಸಕರು ಅಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ಆ ವ್ಯಕ್ತಿ ಮಾಹಿತಿ ನೀಡಿದರು.

ನಾನು ತಕ್ಷಣವೇ ಅಲರ್ಟ್ ಆಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ಮತ್ತು ಆರ್.ಅಶೋಕ ಅವರಿಗೆ ಕರೆ ಮಾಡಿದೆ. ಆದರೆ ಇಬ್ಬರೂ ಸಿಗಲಿಲ್ಲ. ತಕ್ಷಣವೇ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು ‘ಸರಿ ನೋಡುತ್ತೇನೆ’ ಎಂದರು. ಅದರ ಮರುದಿನವೇ ಅದೇ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಪಕ್ಕದ ಮತ್ತೊಂದು ಅಪಾರ್ಟ್‌ಮೆಂಟ್ನಲ್ಲಿ ಎರಡನೇ ಸಭೆಯೂ ನಡೆಯಿತು. ಆಗಲೂ ನಾನು ಅದೇ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ ಎಚ್ಚರಿಸಿದೆ. ಆದರೆ ನಮ್ಮವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಗೌಡರು ದೂರಿದ್ದಾರೆ.

ಹೀಗಿದ್ದರೂ ಅಡ್ಡಮತದಾನ ನಡೆದು ಪಕ್ಷಕ್ಕೆ ಭಾರಿ ಮುಖಭಂಗವಾದ ಮೇಲೆ ಅದೇ ಪ್ರಧಾನ ಕಾರ್ಯದರ್ಶಿ ಡಿವಿಎಸ್ ಅವರಿಗೆ ಕರೆ ಮಾಡಿ, ಅಣ್ಣ ನೀವು ಹೇಳಿದ ಹಾಗೆಯೇ ಆಯ್ತಲ್ಲ ಎಂದಿದ್ದ ರಂತೆ. ಅದಕ್ಕೆ ಸದಾನಂದ ಗೌಡರು, ಹೊಳೆ ದಾಟಿದ ಮೇಲೆ ಮತ್ತೇನು ಚರ್ಚೆ? ಎಂದು ಉತ್ತರಿಸಿ ದ್ದಾರೆ. ಈ ವಿಚಾರವೂ ಕೂಡ ಈಗ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ.

ನಮ್ಮ ಶಾಸಕನೂ ಮಾರಾಟ: ಕ್ಷೇತ್ರಗಳಲ್ಲಿ ಜನರ ಅಪಹಾಸ್ಯ

ಎಷ್ಟೇ ನಿಷ್ಠರಾಗಿದ್ದರೂ ಕೂಡ ಬಿಜೆಪಿ ಶಾಸಕರಿಗೆ ಈಗ ನೆಮ್ಮದಿ ಇಲ್ಲದಂತಾಗಿದೆ. ಕಟ್ಟಾ ಬಿಜೆಪಿ ಗರಿಗೂ ಈಗ ಅವರವರ ಕ್ಷೇತ್ರದಲ್ಲೇ ಕಾರ್ಯಕರ್ತರಾದಿಯಾಗಿ ಸಾಮಾಜಿಕ ಜಾಲತಾಣದಲ್ಲಿ ನಮ್ಮವನೂ ಮಾರಾಟವಾಗಿದ್ದಾನೆ ಎಂಬ ಮಾತುಗಳು ನಿರಂತರವಾಗಿ ಕೇಳಿ ಬರುತ್ತಿದೆ. ಇನ್ನು ಕರಾವಳಿ ಭಾಗದ ಇಬ್ಬರು ಶಾಸಕರು, ಮೈಸೂರು ಭಾಗದ ಶಾಸಕರು, ಉತ್ತರ ಕರ್ನಾಟಕದ ಮೂವರು ಶಾಸಕರು ಸ್ಥಳೀಯವಾಗಿ ಮುಖ ಎತ್ತಿಕೊಂಡು ಓಡಾಡದಂತಹ ಪರಿಸ್ಥಿತಿ ಇದೆ. ಅನುಮಾನದಿಂದಲೇ ನೋಡುವಂತಾಗಿದೆ.

‘ಅಡ್ಡದ’ ಮಾಹಿತಿ ನೀಡಿದ್ದರೂ ಬಿಜೆಪಿ ಉದಾಸೀನ: ಡಿವಿಎಸ್

ಮತದಾನದ ವಿಚಾರಕ್ಕೆ ಸಂಬಂಧಿಸಿದಂತೆ ಹೆಬ್ಬಾಳದ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನಲ್ಲಿ ರಹಸ್ಯ ಸಭೆ ನಡೆಸಲಾಗಿದೆ ಎಂದು ಮಾಜಿ ಸಿಎಂ ಸದಾನಂದ ಗೌಡ ಸೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ಪಕ್ಷದ ರಾಜ್ಯ ನಾಯಕರ ಉದಾಸೀನತೆಯೇ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ಗೆಲುವಿಗೆ ಪ್ರಮುಖ ಕಾರಣ ಎಂದು ಚಾಟಿ ಬೀಸಿದ್ದಾರೆ. ಜೂನ್ 13ರಂದು ನನಗೆ ಹೆಬ್ಬಾಳದ ಪ್ರೆಸ್ಟೀಜ್ ಅಪಾರ್ಟ್‌ ಮೆಂಟ್‌ನಿಂದ ಒಂದು ಕರೆ ಬಂದಿತ್ತು. ಅದನ್ನು ಯಾವುದೇ ಬಿಜೆಪಿ ನಾಯಕರೂ ಗಂಭೀರವಾಗಿ ಸ್ವೀಕರಿಸಿಲ್ಲ ಎಂದಿದ್ದಾರೆ.

image

ಚುನಾವಣೆಯಲ್ಲಿ ಕಾಂಗ್ರೆಸ್ ಕುದುರೆ ವ್ಯಾಪಾರ ನಡೆಸಿದ್ದನ್ನು, ಹಣದ ಹೊಳೆ ಹರಿಸಿರುವುದನ್ನು ತಿಳಿಸುತ್ತೇವೆ. ಕೇಂದ್ರ ನಾಯಕರ ಜೊತೆಗೆ ಗಂಭೀರವಾಗಿ ಚರ್ಚೆ ಮಾಡಿ ಕ್ರಮಕ್ಕೆ ಆಗ್ರಹಿಸುತ್ತೇವೆ. ಅಡ್ಡಮತದಾನ ಮಾಡಿದವರು ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೆ ಮಾಡುತ್ತೇವೆ.

-ಅರ್.ಅಶೋಕ, ಪ್ರತಿಪಕ್ಷ ನಾಯಕ