Varthur-Gunjur Road: ವರ್ತೂರು-ಗುಂಜೂರು ರಸ್ತೆ ಅಗಲೀಕರಣಕ್ಕೆ ವೇಗ ನೀಡಿದ ಲಿಂಬಾವಳಿ ತಂಡ
Aravind Limbavali: ಬೆಂಗಳೂರಿನ ಮಹದೇವಪುರ ಭಾಗದ ಪ್ರಮುಖ ರಸ್ತೆಯಾಗಿರುವ ವರ್ತೂರು-ಗುಂಜೂರು ಫ್ಲೈಓವರ್ ಕಾಮಗಾರಿ ಚುರುಕು ಪಡೆದುಕೊಂಡಿದೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಮಂಜುಳಾ ಲಿಂಬಾವಳಿ ಅವರು ಸ್ಥಳೀಯರನ್ನು ಹಾಗೂ ಗುತ್ತಿಗೆದಾರರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾಮಗಾರಿಗೆ ವೇಗ ನೀಡಿದ್ದಾರೆ.
ಮಹದೇವಪುರ ಭಾಗದ ವರ್ತೂರು-ಗುಂಜೂರು ಫ್ಲೈಓವರ್ ಕಾಮಗಾರಿಯನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಪರಿಶೀಲಿಸಿದರು. -
- ಸರಕಾರ ಮಾಡದ ಕೆಲಸ, ಲಿಂಬಾವಳಿ ತಂಡದಿಂದ ನಿರ್ವಹಣೆ
- ಅರವಿಂದ ಲಿಂಬಾವಳಿಗಾಗಿ ತ್ವರಿತ ಕಾಮಗಾರಿಗೆ ಮುಂದಾದ ಅನ್ಯ ಗುತ್ತಿಗೆದಾರರು
- ಸಂಚಾರ ದಟ್ಟಣೆ ತಗ್ಗಿಸಲು, ಕಾಮಗಾರಿಗೆ ವೇಗ ನೀಡಲು ಲಿಂಬಾವಳಿ ಶ್ರಮ
ವಿಶ್ವವಾಣಿ ಸುದ್ದಿಮನೆ, ಬೆಂಗಳೂರು: ಕಾಮಗಾರಿಯ ನೆಪದಲ್ಲಿ ರಾಜಧಾನಿ ಬೆಂಗಳೂರಿನ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆಯಲಾಗುತ್ತಿದೆ. ಇನ್ನೊಂದೆಡೆ, ವರ್ಷಗಳ ಹಿಂದೆಯೇ ಘೋಷಣೆಯಾಗಿರುವ ರಸ್ತೆ ಕಾಮಗಾರಿಯೂ ಅನುದಾನದ ಕೊರತೆಯಿಂದ ಪೂರ್ಣಗೊಳ್ಳದೇ ವಾಹನ ಸವಾರರಿಗೆ ಭಾರಿ ಸಮಸ್ಯೆಯಾಗುತ್ತಿದೆ. ಈ ಎಲ್ಲ ‘ಇಲ್ಲ’ಗಳ ನಡುವೆ ಮಹದೇವಪುರ ಭಾಗದ ಪ್ರಮುಖ ರಸ್ತೆಯಾಗಿರುವ ವರ್ತೂರು-ಗುಂಜೂರು ಫ್ಲೈಓವರ್ ಕಾಮಗಾರಿಗೆ ವೇಗ ಸಿಕ್ಕಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ವರ್ತೂರು-ಗುಂಜೂರು ರಸ್ತೆ ಅಗಲೀಕರಣಕ್ಕೆ ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ (Aravind Limbavali) ಅವರ ದೂರದೃಷ್ಟಿಯ ಕಾರಣಕ್ಕೆ 60 ಅಡಿ ಇದ್ದ ರಸ್ತೆಯನ್ನು 100 ಅಡಿ ರಸ್ತೆಗೆ ಹಾಗೂ 60 ಅಡಿ ಫ್ಲೈಓವರ್ ಅನ್ನು 1.42 ಕಿ.ಮೀ( ವರ್ತೂರು-ಗುಂಜೂರು ರಸ್ತೆಯ ವರ್ತೂರು ಸೇತುವೆಯಿಂದ ಗುಂಜೂರು ರಸ್ತೆಯ ವಿಶಾಲ್ ಮಾರ್ಟ್ವರೆಗೆ) ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ರಸ್ತೆಯನ್ನು 100 ಅಡಿಗೆ ವಿಸ್ತರಣೆ ಮಾಡಲು ಮತ್ತೊಂದು ಕಾರಣವೆಂದರೆ, ಈ ಭಾಗದಲ್ಲಿ ಪ್ರತಿವರ್ಷ ಅದ್ಧೂರಿ ರಥೋತ್ಸವ ನಡೆಯುತ್ತದೆ. ಫ್ಲೈಓವರ್ ಕೆಳಗೆ ರಥೋತ್ಸವ ಹಾದುಹೋಗಲು ಸಹಾಯವಾಗಲಿ ಎನ್ನುವ ಕಾರಣಕ್ಕೆ 100 ಅಡಿಗೆ ವಿಸ್ತರಣೆ ಮಾಡಲು ತೀರ್ಮಾನಿಸಿ, ಸ್ಥಳೀಯರ ಭಾವನೆಗಳಿಗೂ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗಿತ್ತು.

ಇದಾದ ಬಳಿಕ 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಯೋಜನೆಗೆ ಹಣದ ಕೊರತೆಯಾಗಿದ್ದರಿಂದ ಕಾಮಗಾರಿ ಮಂದಗತಿಯಾಯಿತು. ಈ ನಡುವೆ ಗುತ್ತಿಗೆದಾರರು ಪರಿಷ್ಕೃತ ದರವನ್ನು ಕೊಡಲು ಸರಕಾರದ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಸರಕಾರ ಮತ್ತು ಗುತ್ತಿಗೆದಾರರ ನಡುವೆ ಜಟಾಪಟಿ ಮುಂದುವರಿಯುತ್ತಿದೆ. ಇದರೊಂದಿಗೆ ರಸ್ತೆ ಅಗಲೀಕರಣಕ್ಕೆ ಮನೆ ಹಾಗೂ ವಾಣಿಜ್ಯ ಕಟ್ಟಡ ಕಳೆದುಕೊಳ್ಳುವವರಿಗೆ ಪರಿಹಾರ ಕೊಡುವಲ್ಲಿಯೂ ಸರಕಾರ ನಿಧಾನಗೊಳಿಸಿದೆ. ಅರವಿಂದ ಲಿಂಬಾವಳಿ ಅವರ ನಿರಂತರ ಪ್ರಯತ್ನದ ಪರಿಣಾಮವಾಗಿ ಬಹುಪಾಲು ಕಟ್ಟಡಗಳಿಗೆ ಪರಿಹಾರ ದೊರೆತಿದೆ. ಆದರೂ, ಇನ್ನೂ ಶೇ.33ರಷ್ಟು ಕಟ್ಟಡಗಳಿಗೆ ಸರಕಾರದಿಂದ ಪರಿಹಾರ ಸಿಗಬೇಕಿದೆ. ಹಾಗೆಯೇ ಈ ಭಾಗದಲ್ಲಿ ಬರುವ ಸರಕಾರಿ ಆಸ್ತಿಗಳಿಗೆ ಮತ್ತು ದೇವಾಸ್ಥಾನ, ಮಸೀದಿಗಳಿಗೆ ಪರಿಹಾರ ನೀಡಲು ಸರಕಾರ ಹಿಂದೇಟು ಹಾಕುತ್ತಿದೆ. ಈ ಎಲ್ಲ ಕಾರಣಗಳಿಗೆ ಸ್ಥಗಿತಗೊಂಡು ಸ್ಥಳೀಯರು ಹಾಗೂ ವಾಹನ ಸವಾರರಿಗೆ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಗುತ್ತಿಗೆದಾರರ ಮನವೊಲಿಕೆ:
ಈ ನಡುವೆ ಉಪಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಡಿ.ಕೆ.ಶಿವಕುಮಾರ್, ಇಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸರಕಾರ ಮುಖ್ಯ ಕಾರ್ಯದರ್ಶಿ ಸೇರಿದಂತೆ ಜಿಬಿಎಯ ಹಿರಿಯ ಅಧಿಕಾರಿಗಳು, ಜಿಬಿಎ ಮುಖ್ಯ ಆಯುಕ್ತರು ಸೇರಿದಂತೆ ಹಲವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಸಚಿವರು, ಇಲಾಖಾ ಕಾರ್ಯದರ್ಶಿಗಳು ಭೇಟಿ ನೀಡಿಲ್ಲ. ಭೇಟಿ ನೀಡಿರುವವರು ಯಾರೂ ಕೂಡ ಅನುದಾನದ ವಿಷಯದಲ್ಲಿ ಸ್ಪಷ್ಟನೆ ನೀಡದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಕೈಗೊಳ್ಳಲು ಹಿಂದೇಟು ಹಾಕಿದ್ದ ಸಮಯದಲ್ಲಿ, ವಾಹನ ಸವಾರರು ಅನುಭವಿಸುತ್ತಿದ್ದ ನಿತ್ಯ ನರಕಕ್ಕೆ ಪರಿಹಾರ ನೀಡಲು ಸ್ವತಃ ಅರವಿಂದ ಲಿಂಬಾವಳಿ ಅವರು ಕೆಲವು ಗುತ್ತಿಗೆದಾರರೊಂದಿಗೆ ಚರ್ಚಿಸಿ, ‘ಗುಡ್ವಿಲ್’ನಲ್ಲಿ ಕಾಮಗಾರಿಯನ್ನು ನಡೆಸಲು ಪ್ರಾರಂಭಿಸಿದ್ದಾರೆ.

ಅರವಿಂದ ಲಿಂಬಾವಳಿ ಹಾಗೂ ಮಂಜುಳಾ ಲಿಂಬಾವಳಿ ಅವರು ಸ್ಥಳೀಯರನ್ನು ಹಾಗೂ ಗುತ್ತಿಗೆದಾರರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾಮಗಾರಿಗೆ ವೇಗ ನೀಡಿದ್ದಾರೆ. ಕೆಲವು ಗುತ್ತಿಗೆದಾರರೊಂದಿಗೆ ಇರುವ ವಿಶ್ವಾಸದ ಆಧಾರದಲ್ಲಿ ಇದೀಗ ಗುತ್ತಿಗೆದಾರರು ವರ್ತೂರು-ಗುಂಜೂರು ರಸ್ತೆಯ ಒಂದು ಭಾಗದ ಅಗಲೀಕರಣ ಕಾಮಗಾರಿಗೆ ವೇಗ ನೀಡಿದ್ದಾರೆ. ಅಧಿಕೃತವಾಗಿ ಗುತ್ತಿಗೆ ಪಡೆದಿರುವ ಹೈದರಾಬಾದ್ ಮೂಲದ ಗುತ್ತಿಗೆದಾರ ಹಾಗೂ ಸರಕಾರದೊಂದಿಗೆ ತಿಕ್ಕಾಟ ನಡೆಯುತ್ತಿದ್ದರೂ, ಲಿಂಬಾವಳಿ ಅವರು ಕ್ಷೇತ್ರದ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ತಡೆಯಲು ಹಾಗೂ ನಿತ್ಯ ಲಕ್ಷಾಂತರ ಐಟಿ ಉದ್ಯೋಗಿಗಳು ಮತ್ತು ಶಾಲಾ ಮಕ್ಕಳಿಗೆ ಆಗುವ ತೊಂದರೆ ತಗ್ಗಿಸಲು ರಸ್ತೆಯನ್ನು ಆದಷ್ಟು ಬೇಗ ಸಂಚಾರ ಮುಕ್ತಗೊಳಿಸಲು ಬೇರೆ ಗುತ್ತಿಗೆದಾರರಿಂದ ಕೆಲಸ ಮಾಡಿಸುತ್ತಿದ್ದಾರೆ. ಈ ಮೂಲಕ ಸರಕಾರ, ಅಧಿಕಾರಿಗಳು, ಇಲಾಖೆಗಳು ಮಾಡದ ಕಾರ್ಯವನ್ನು ಅರವಿಂದ ಲಿಂಬಾವಳಿ ಅವರು ಮಾಡುತ್ತಿರುವುದಕ್ಕೆ ಸ್ಥಳೀಯವಾಗಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

15 ಕೋಟಿಗೂ ಹೆಚ್ಚು ಸಿಎಸ್ಆರ್ ಫಂಡ್
ವರ್ತೂರು- ಗುಂಜೂರು ರಸ್ತೆ ಅಗಲೀಕರಣದ ಸಮಯದಲ್ಲಿ ರಸ್ತೆಯ ಪಕ್ಕದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಬೇಕಿತ್ತು. ಆದರೆ ಅದಕ್ಕೆ ಬೇಕಿರುವ ಅನುದಾನ ಹಾಗೂ ಕೆಲವು ಜಾಗಕ್ಕೆ ಕಾನೂನಾತ್ಮಕ ಅಂಶಗಳನ್ನು ನೀಡಿ ಪರಿಹಾರವನ್ನು ನೀಡಲು ಸರಕಾರ ನಿರಾಕರಿಸಿದಾಗ, ಅರವಿಂದ ಲಿಂಬಾವಳಿ ಅವರು ಖಾಸಗಿ ಕಂಪನಿಗಳೊಂದಿಗೆ ಚರ್ಚಿಸಿ ಸಿಎಸ್ಆರ್ ಅನುದಾನದ ಮೂಲಕ ಪರಿಹಾರ ಕೊಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಪ್ರಮುಖವಾಗಿ ರಸ್ತೆಯಲ್ಲಿ ಬರುವ ಆಂಜನೇಯ ದೇವಾಲಯ, ಶಕ್ತಿ ವೀರಾಂಜನೇಯ ದೇವಾಲಯ, ವರ್ತೂರು ಮಸೀದಿ, ದ್ರೌಪದಪ್ಪ ದೇವಾಲಯದ ಆರ್ಚ್, ರೇಣುಕಾ ಯಲ್ಲಮ್ಮ ದೇವಾಸ್ಥಾನ, ಗುಂಜೂರಿನ ಶ್ರೀರಾಮ ದೇವಸ್ಥಾನ, ವರ್ತೂರು ಮಾರ್ಕೆಟ್, ವರ್ತೂರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದ ಹೆಚ್ಚುವರಿಯಾಗಿ ಬೇಕಾಗಿದ್ದ 14 ಕೊಠಡಿಗಳನ್ನು ನಿರ್ಮಿಸಲು ಅನುದಾನ ಕೊಡಿಸಿದ್ದಾರೆ. ಸುಮಾರು 15 ಕೋಟಿ ರೂ.ಗೂ ಹೆಚ್ಚು ಅನುದಾನ ಈ ರೀತಿ ಸಿಎಸ್ಆರ್ ಫಂಡ್ನಲ್ಲಿ ಕಾಮಗಾರಿ ಪ್ರಾರಂಭಿಸಿರುವುದು ಇತಿಹಾಸ.