Gana Movie: ಪ್ರಜ್ವಲ್ ದೇವರಾಜ್ ಅಭಿನಯದ ʼಗಣʼ ಚಿತ್ರ ಜ.31ಕ್ಕೆ ರಿಲೀಸ್
Gana Movie: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಟೈಮ್ ಟ್ರಾವೆಲಿಂಗ್ ಜಾನರ್‌ನ ʼಗಣʼ ಸಿನಿಮಾ ಜನವರಿ 31ರಂದು ಶುಕ್ರವಾರ ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಜ್ವಲ್ ದೇವರಾಜ್ ಅಭಿನಯದ ʼಗಣʼ ಚಿತ್ರ.

ಬೆಂಗಳೂರು: ಗಣ ಸಿನಿಮಾ ಎಂಬುದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಆ ಎರಡು ಕಾಲಘಟ್ಟಕ್ಕೆ ಸೇತುವೆ ಆಗಿರುವುದು ಲ್ಯಾಂಡ್‌ಲೈನ್ ಫೋನ್. ಒಮ್ಮೆ 1993ರ ಕಾಲಘಟ್ಟಕ್ಕೆ ಕಥೆ ಸಾಗಿದರೆ, ಇನ್ನೊಮ್ಮೆ ಪ್ರಸ್ತುತತೆಗೆ ಹೊರಳುತ್ತದೆ. ಹೀಗೆ ಟೈಮ್ ಟ್ರಾವೆಲಿಂಗ್ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ ಈ ಗಣ (Gana Movie). ಲೇಟ್ ಆದರೂ ಲೇಟೆಸ್ಟ್ ಆಗಿಯೇ ಈ ಚಿತ್ರ ತೆರೆಗೆ ಬರುತ್ತಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರೆ, ಯಶಾ ಶಿವಕುಮಾರ್, ವೇದಿಕಾ ನಾಯಕಿಯರಾಗಿ ನಟಿಸಿದ್ದಾರೆ. ಇದೀಗ ಇದೇ ಚಿತ್ರ ಜನವರಿ 31ರಂದು ಚಿತ್ರಮಂದಿರಗಳಿಗೆ ಗ್ರ್ಯಾಂಡ್ ಆಗಿ ಲಗ್ಗೆ ಇಡುತ್ತಿದೆ.
ಹೈದರಾಬಾದ್ ಮೂಲದ ಪಾರ್ಥು ಎಂಬುವವರು ತಮ್ಮ ಚೆರಿ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಗಣ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ. ಇವರಷ್ಟೇ ಅಲ್ಲ, ಗಣ ಸಿನಿಮಾದ ನಿರ್ದೇಶಕರೂ ಕೂಡ ತೆಲುಗು ಮೂಲದವರೇ. ಇತ್ತೀಚೆಗಷ್ಟೇ ಟಾಲಿವುಡ್‌ನಲ್ಲಿ ಹಿಟ್ ಆದ ಪುಷ್ಪ 2 ಸಿನಿಮಾ ನಿರ್ದೇಶಕ ಸುಕುಮಾರ್ ಅವರ ಜತೆಗೆ ಕೆಲಸ ಮಾಡಿದ ಅನುಭವ ಇರುವ ಹರಿಪ್ರಸಾದ್ ಜಕ್ಕ, ಗಣ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದಾರೆ.
ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಪಾರ್ಥು, ʼನಾನು ತೆಲುಗು ಮೂಲದವನು, ಗಣ ನನ್ನ ಮೊದಲ ಸಿನಿಮಾ. ಈ ಸಿನಿಮಾ ಕೈ ಹಿಡಿದರೆ, ಇನ್ನೂ ಒಂದಷ್ಟು ಕನ್ನಡ ಸಿನಿಮಾಗಳನ್ನು ಮಾಡುವ ಬಯಕೆ ಇದೆ. ಇದೇ ಜನವರಿ 31ರ ಶುಕ್ರವಾರ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡ ನಾಡಿನ ಪ್ರೇಕ್ಷಕರು ನಮ್ಮ ಸಿನಿಮಾವನ್ನು ಮೆಚ್ಚಿಕೊಂಡು ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆʼ ಎನ್ನುತ್ತಾರೆ ನಿರ್ಮಾಪಕ ಪಾರ್ಥು.
ಟೈಮ್ ಟ್ರಾವೆಲಿಂಗ್ ಜಾನರ್‌ನ ಸಿನಿಮಾ
ಚಿತ್ರದ ಬಗ್ಗೆ ಮಾತನಾಡುವ ಅವರು, ʼಇದೊಂದು ಪಕ್ಕ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಒಳ್ಳೆಯ ಮನರಂಜನೆಯ ಜತೆಗೆ ಪ್ರೇಕ್ಷಕ ಬಯಸುವ ಎಲ್ಲ ಅಂಶಗಳೂ ಗಣ ಸಿನಿಮಾದಲ್ಲಿದೆ. ಕರ್ಮಷಿಯಲ್ ಕೋನದಲ್ಲಿ ನಿರ್ಮಾಣ ಮಾಡಿದರೂ, ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ತಾಕತ್ತು ನಮ್ಮ ಈ ಚಿತ್ರಕ್ಕಿದೆ. ಈಗಾಗಲೇ ಟ್ರೇಲರ್‌ನಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ. ಟೈಮ್ ಟ್ರಾವೆಲಿಂಗ್ ಜಾನರ್‌ನ ಈ ಸಿನಿಮಾ, ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಗಟ್ಟಿ ಕಂಟೆಂಟ್ ಜತೆಗೆ ಅಮ್ಮ ಮಗನ ಬಾಂಧವ್ಯವೂ ಈ ಸಿನಿಮಾದ ಹೈಲೈಟ್ʼ ಎಂಬುದು ಪಾರ್ಥು ಅವರ ಮಾತು.
200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಗಣ
ಸರಿ ಸುಮಾರು 75 ದಿನಗಳ ಕಾಲ ಈ ಸಿನಿಮಾ ಶೂಟಿಂಗ್ ಮಾಡಿದ್ದೇವೆ. ಎಲ್ಲಿಯೂ ಕೊರತೆ ಬಾರದೆ, ರಿಚ್ ಆಗಿಯೇ ಸಿನಿಮಾ ಮಾಡಿದ್ದೇವೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಬಹುತೇಕ ಶೂಟಿಂಗ್ ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳು ಸರಿಗಮ ಕನ್ನಡ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಆಗಿವೆ. ಟ್ರೇಲರ್ ಸಹ ಎಲ್ಲರಿಗೂ ಇಷ್ಟವಾಗಿದೆ. ಇದೀಗ ಜನವರಿ 31ರ ಶುಕ್ರವಾರ ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಕಮರ್ಷಿಯಲ್ ಆಗಿ ಟೈಮ್ ಟ್ರಾವೆಲಿಂಗ್ ಎಳೆಯ ಥ್ರಿಲ್ಲಿಂಗ್ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಬಹುದು ಎನ್ನುತ್ತಾರೆ ಪಾರ್ಥು.
ಈ ಸುದ್ದಿಯನ್ನೂ ಓದಿ | 76th Republic Day: ಗಣರಾಜ್ಯೋತ್ಸವ- 2025: ಲಕ್ಕುಂಡಿ ಸ್ತಬ್ಧಚಿತ್ರಕ್ಕೆ ವೋಟ್ ಮಾಡಲು ಹೇಮಂತ್ ನಿಂಬಾಳ್ಕರ್ ಮನವಿ
ಅಂದಹಾಗೆ ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪಾತ್ರವರ್ಗದಲ್ಲಿ ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ.