Caste Census: ಜಿಬಿಎ ಅಧಿಕಾರಿಯಿಂದಲೇ ಜಾತಿ ಗಣತಿಗೆ ಅಸಹಕಾರ
Bengaluru: ಸಮೀಕ್ಷೆಗೆ ಸಹಕರಿಸಿ ಸಾರ್ವಜನಿಕರಿಗೆ ಆದರ್ಶವಾಗಬೇಕಿದ್ದ ಜಿಬಿಎ ಅಧಿಕಾರಿ ಮುನೀಶ್ ಮುದ್ಗಿಲ್ ಹಾಗೂ ಅವರ ಕುಟುಂಬಸ್ಥರೇ ಸಮೀಕ್ಷೆಗೆ ಸಹಕರಿಸಿಲ್ಲ. ಸಮೀಕ್ಷೆಗೆ ಹೋದವರಿಗೆ ಮುದ್ಗಿಲ್ ಹಾಗೂ ಅವರ ಕುಟುಂಬಸ್ಥರು ಕನಿಷ್ಠ ಬಾಗಿಲು ಕೂಡ ತೆರೆದಿಲ್ಲ ಎನ್ನಲಾಗಿದೆ.

-

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ (Caste Censes) ಇನ್ನು ಒಂದೇ ದಿನ ಉಳಿದಿದೆ. ಬೆಂಗಳೂರಿನಲ್ಲಿ (Bengaluru) ಗಣತಿ ಭರದಿಂದ ಸಾಗುತ್ತಿದ್ದು, ರಾತ್ರಿ ಹಗಲೂ ಎನ್ನದೇ ಸಮೀಕ್ಷೆ ಮಾಡುವಂತೆ ಶಿಕ್ಷಕರಿಗೆ ಸರ್ಕಾರ ಆದೇಶಿಸಿದೆ. ಇದರ ನಡುವೆ ಇನ್ಫೋಸಿಸ್ ನಾರಾಯಣ ಮೂರ್ತಿ (Infosys Narayana Murthy) ಹಾಗೂ ಸುಧಾಮೂರ್ತಿ (Sudha Murthy) ದಂಪತಿ ನಾವು ಸಮೀಕ್ಷೆಗೆ ಮಾಹಿತಿ ನೀಡಲ್ಲ ಅಂತ ಹೇಳಿದ್ದು ಭಾರೀ ಸುದ್ದಿಯಾಗಿದೆ. ಇದೀಗ ಸರ್ಕಾರದ ಭಾಗವಾದ ಗ್ರೇಟರ್ ಬೆಂಗಳೂರು (GBA) ಆಡಳಿತಕ್ಕೆ ಸೇರಿದ ಹಿರಿಯ ಅಧಿಕಾರಿಯೊಬ್ಬರು ಕೂಡ ಸಮೀಕ್ಷೆಗೆ ಸಹಕರಿಸದೇ, ಮನೆ ಬಾಗಿಲು ತೆಗೀತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಸಮೀಕ್ಷೆಗೆ ಸಹಕರಿಸಿ ಸಾರ್ವಜನಿಕರಿಗೆ ಆದರ್ಶವಾಗಬೇಕಿದ್ದ ಜಿಬಿಎ ಅಧಿಕಾರಿ ಮುನೀಶ್ ಮುದ್ಗಿಲ್ ಹಾಗೂ ಅವರ ಕುಟುಂಬಸ್ಥರೇ ಸಮೀಕ್ಷೆಗೆ ಸಹಕರಿಸಿಲ್ಲ. ಸಮೀಕ್ಷೆಗೆ ಹೋದವರಿಗೆ ಮುದ್ಗಿಲ್ ಹಾಗೂ ಅವರ ಕುಟುಂಬಸ್ಥರು ಕನಿಷ್ಠ ಬಾಗಿಲು ಕೂಡ ತೆರೆದಿಲ್ಲ ಎನ್ನಲಾಗಿದೆ. ಇವರ ಮನೆಗೆ ಸಮೀಕ್ಷೆಗೆ ಹೋದ ಶಿಕ್ಷಕರು, ಮನೆ ಬಾಗಿಲು ತೆಗೆಯುತ್ತಿಲ್ಲ, ಸಮೀಕ್ಷೆಗೆ ಸಹಕರಿಸುತ್ತಿಲ್ಲ ಅಂತ ಸಮೀಕ್ಷಾ ಅಧಿಕಾರಿಗಳ ಗ್ರೂಪ್‌ನಲ್ಲಿ ಫೋಟೋ ಹಾಗೂ ಲೊಕೇಶನ್ ಹಾಕಿ, ಬೇಸರ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಕಂದಾಯ ಇಲಾಖೆ ವಿಶೇಷ ಆಯುಕ್ತರಾಗಿರುವ ಮುನೀಶ್ ಮುದ್ಗಲ್, ಸದ್ಯ ಬೆಂಗಳೂರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಮುಖ್ಯಸ್ಥರೂ ಆಗಿದ್ದಾರೆ. ಆದರೆ ಅವರೇ ಸಮೀಕ್ಷೆಗೆ ಸಹಕರಿಸುತ್ತಿಲ್ಲ ಎಂದು ಸಮೀಕ್ಷೆದಾರರು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಸಮೀಕ್ಷೆ ಆ್ಯಪ್‌ನಲ್ಲಿರುವ ರಿಫ್ರೆಶ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಪ್ರಕ್ರಿಯೆ ಪೂರ್ಣಗೊಳಿಸುವಂತೆ ನೂಡಲ್ ಅಧಿಕಾರಿಗಳು ಸೂಚನೆ ನೀಡಿದ್ದಾರಂತೆ.
ಇದನ್ನೂ ಓದಿ: Caste Census: ಜಾತಿ ಗಣತಿ ಮಾಡುತ್ತಿದ್ದಾಗಲೇ ಶಿಕ್ಷಕಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
ಇನ್ಫೋಸಿಸ್ ಸಂಸ್ಥೆಯ ಸ್ಥಾಪಕರಾದ ಎನ್.ಆರ್. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಈ ಸಮೀಕ್ಷೆಯಲ್ಲಿ ಭಾಗವಹಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸಮೀಕ್ಷೆಗಾಗಿ ಬೆಂಗಳೂರಿನ ಜಯನಗರದಲ್ಲಿರುವ ಅವರ ಮನೆಗೆ ತೆರಳಿದ್ದ ಗಣತಿದಾರರಿಗೆ "ಕ್ಷಮಿಸಿ, ನಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ," ಎಂದು ಅವರು ಹೇಳಿದ್ದಾರೆ.
ಸಮೀಕ್ಷೆಗೆ ಸಹಕರಿಸುವಂತೆ ಬೆಂಗಳೂರು ನಿವಾಸಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಬೆಂಗಳೂರು ನಗರ ಹಾಗೂ ರಾಜ್ಯದ ಜನರಲ್ಲಿ ಮನವಿ ಮಾಡ್ತೇನೆ. ಎಲ್ಲರ ಆಪೇಕ್ಷೆಯ ಮೇರೆಗೆ ಮತ್ತೆ ಸಮೀಕ್ಷೆ ಮಾಡ್ತಿದ್ದಾರೆ. ನಮ್ಮ ಜನರನ್ನ ಕಡಿಮೆ ತೋರಿಸಿರುವ ಆಪಾದನೆ ಇತ್ತು. ಕಾಂಗ್ರೆಸ್ ಪಕ್ಷದ ವರಿಷ್ಠರು ಎಲ್ಲಾ ಚರ್ಚೆ ಮಾಡಿ, ಹತ್ತು ವರ್ಷವಾಗಿದೆ ಎಂದು ಮರು ಸಮೀಕ್ಷೆ ಮಾಡಲು ಅವಕಾಶ ಕೊಡಲಾಗಿದೆ. ಇದಕ್ಕೆ ಸಹಕರಿಸಿ ಎಂದಿದ್ದಾರೆ.