ಶಾಲೆಗಳಲ್ಲಿ ʼವಂದೇ ಮಾತರಂʼ 6 ಚರಣ ಹಾಡುವುದು ಕಡ್ಡಾಯ ಆದೇಶ ವಿರೋಧಿಸಿ ಅರ್ಜಿ; ಹೈಕೋರ್ಟ್ ಹೇಳಿದ್ದೇನು?
Karnataka High Court: ಶಾಲೆಗಳಲ್ಲಿ ಪ್ರತಿದಿನ ಬಂಕಿಮ ಚಟರ್ಜಿ ಅವರ 'ವಂದೇ ಮಾತರಂ' ಗೀತೆಯನ್ನು ಎಲ್ಲ 6 ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸಿತು. ಬಳಿಕ ಅರ್ಜಿ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿತು.
ಕರ್ನಾಟಕ ಹೈಕೋರ್ಟ್ (ಸಂಗ್ರಹ ಚಿತ್ರ) -
ಬೆಂಗಳೂರು, ಮಾ. 26: ಶಾಲೆಗಳಲ್ಲಿ ಪ್ರತಿದಿನ ಬಂಕಿಮ ಚಟರ್ಜಿ ಅವರ 'ವಂದೇ ಮಾತರಂ' (Vande Mataram) ಗೀತೆಯನ್ನು ಎಲ್ಲ 6 ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ನಡೆಸಿತು. ಕೇಂದ್ರ ಸರ್ಕಾರ ಹೊರಡಿಸಿರುವ ಈ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಗುರುವಾರ (ಮಾರ್ಚ್ 26) ನಡೆಸಿ ಏಪ್ರಿಲ್ 9ಕ್ಕೆ ಮುಂದೂಡಿದೆ.
ಬೆಂಗಳೂರಿನ ವಕೀಲ ಸೋಮಶೇಖರ್ ರಾಜವಂಶಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ ಕಾಮತ್ ವಾದಿಸಿ, “ಸುಪ್ರೀಂ ಕೋರ್ಟ್‌ನಲ್ಲಿ ಇಂಥದೇ ಮನವಿಯುಳ್ಳ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ಆದೇಶವನ್ನೇ ಅಲ್ಲೂ ಪ್ರಶ್ನಿಸಲಾಗಿತ್ತು. ಆ ಅರ್ಜಿಯನ್ನು ಮಾರ್ಚ್ 25ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ” ಎಂದು ತಿಳಿಸಿದರು.
ಇದಕ್ಕೆ ನ್ಯಾಯಾಲಯವು “ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಇದೆಯೇ?” ಎಂದು ಎಎಸ್‌ಜಿ ಅವರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್ “ಇನ್ನೂ ಆದೇಶ ಬಿಡುಗಡೆಯಾಗಿಲ್ಲ. ಅರ್ಜಿ ವಿಚಾರಣೆ ಮುಂದೂಡಿದರೆ, ಆದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು. ಇದನ್ನು ಪರಿಗಣಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿತು.
ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ ಮುಡಾ ಹಗರಣ; ಹೈಕೋರ್ಟ್‌ನಿಂದ ತುರ್ತು ನೋಟಿಸ್
ಏನಿದು ಪ್ರಕರಣ?
ಸಂವಿಧಾನದ ರಚನಾ ಸಭೆಯಲ್ಲಿ ʼವಂದೇ ಮಾತರಂʼ ಗೀತೆಯಲ್ಲಿನ ಒಟ್ಟು 6 ಚರಣಗಳ ಪೈಕಿ 2 ಚರಣಗಳನ್ನು ಮಾತ್ರ ಹಾಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಎಲ್ಲ 6 ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ತಿಳಿಸಲಾಗಿದೆ. ಆದರೆ ʼವಂದೇ ಮಾತರಂʼ ಗೀತೆಯ 3ರಿಂದ 6ರವರೆಗಿನ ಚರಣಗಳಲ್ಲಿ ಹಿಂದೂ ದೇವತೆಗಳಾದ ದುರ್ಗಾ, ಲಕ್ಷ್ಮೀ ಮತ್ತು ಸರಸ್ವತಿ ಪ್ರಸ್ತಾವನೆ ಇದೆ. ಈ ಅಂಶವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ʼವಂದೇ ಮಾತರಂʼ ಗೀತೆಯ 3ರಿಂದ 6ನೇ ಚರಣಗಳನ್ನು ಅಧಿಕೃತ ಆವೃತ್ತಿಯ ಭಾಗವನ್ನಾಗಿ ಸೂಚಿಸಿ, ಕಡ್ಡಾಯವಾಗಿ ಹಾಡುವುದಕ್ಕೆ ಸಂಬಂಧಿಸಿದ ಶಿಷ್ಟಾಚಾರ ಆದೇಶವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಶಾಲೆಗಳಲ್ಲಿ ದಿನ ನಿತ್ಯ ʼವಂದೇ ಮಾತರಂʼ ಹಾಡುವುದನ್ನು ಕಡ್ಡಾಯಗೊಳಿಸಿ ಹೊರಡಿಸಲಾಗಿರುವ ಶಿಷ್ಟಾಚಾರ ಮಾರ್ಗಸೂಚಿಗಳ ಆದೇಶವನ್ನು ಪರಿಷ್ಕರಿಸುವಂತೆ ನಿರ್ದೇಶಿಸಬೇಕು. ʼವಂದೇ ಮಾತರಂʼ ಗೀತೆಯಲ್ಲಿ ಯಾವುದೇ ಧಾರ್ಮಿಕ ಅಂಶಗಳನ್ನು ಒಳಗೊಳ್ಳದ ಮೊದಲ 2 ಚರಣಗಳಿಗೆ ಸೀಮಿತಗೊಳಿಸಲು ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.
ಗೃಹ ಸಚಿವಾಲಯದ ಆದೇಶ ಅಲ್ಪ ಸಂಖ್ಯಾತರ ನಂಬಿಕೆ ಮತ್ತು ದೇವರ ಬಗ್ಗೆ ನಂಬಿಕೆಯಿಲ್ಲದ ಕುಟುಂಬಗಳ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದೂ ಮನವಿ ಮಾಡಲಾಗಿದೆ. ಸದ್ಯ ವಿಚಾರಣೆ ಮುಂದೂಡಿಕೆಯಾಗಿದ್ದು, ಈ ಬಗ್ಗೆ ಕುತೂಹಲ ಮೂಡಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.