Namma Metro: ಇಬ್ಬಲೂರು ಮೆಟ್ರೋ ನಿಲ್ದಾಣಕ್ಕೆ ʼಇನ್‌ಮೊಬಿʼ ಹೆಸರು; ಬಿಎಂಆರ್‌ಸಿಎಲ್ ಜತೆ 65 ಕೋಟಿ ರೂ. ಒಪ್ಪಂದ
Namma Metro: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಹೊರ ವರ್ತುಲ ರಸ್ತೆ (ಒಆರ್‌ಆರ್) ಮೆಟ್ರೋ ಕಾರಿಡಾರ್‌ನ (ನೀಲಿ ಮಾರ್ಗ) ಅಡಿಯಲ್ಲಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾದ ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗಾಗಿ ಇನ್‌ಮೊಬಿಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
-
ಬೆಂಗಳೂರು: ನಗರದ ಹೊರ ವರ್ತುಲ ರಸ್ತೆ (ಒಆರ್‌ಆರ್) ಮೆಟ್ರೋ ಕಾರಿಡಾರ್‌ನ (ನೀಲಿ ಮಾರ್ಗ) ಅಡಿಯಲ್ಲಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾದ ಇಬ್ಬಲೂರು ಮೆಟ್ರೋ ನಿಲ್ದಾಣದ (Namma Metro) ನಾಮಕರಣ ಹಕ್ಕುಗಳಿಗಾಗಿ ನ.3ರಂದು ಇನ್‌ಮೊಬಿ ಸಂಸ್ಥೆಯೊಂದಿಗೆ (InMobi) ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ಸಹಿ ಹಾಕಿದೆ.
ಕಾರಿಡಾರ್‌ನ ಎರಡೂ ಬದಿಗಳಲ್ಲಿರುವ ಹಲವಾರು ಐಟಿ ಮತ್ತು ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಉದ್ಯೋಗಿಗಳ ಪ್ರಯಾಣದ ಅಗತ್ಯಗಳನ್ನು ಈ ನಿಲ್ದಾಣ ಪೂರೈಸುವ ನಿರೀಕ್ಷೆಯಿದೆ. ಇದರಿಂದ ಉತ್ತಮ ಸಂಪರ್ಕ ಹಾಗೂ ಮೆಟ್ರೋ ಜಾಲಕ್ಕೆ ಅನುಕೂಲಕರ ಪ್ರವೇಶ ದೊರೆಯಲಿದೆ ಎಂದು ತಿಳಿಸಿದೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಸಿ. ಜಾಫರ್ ಮತ್ತು ಇನ್‌ಮೊಬಿಯ ಜಾಗತಿಕ ಹಿರಿಯ ಉಪಾಧ್ಯಕ್ಷೆ ಹಾಗೂ ಮುಖ್ಯ ಕಾರ್ಪೊರೇಟ್ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ಅಧಿಕಾರಿ ಡಾ.ಸುಬಿ ಚತುರ್ವೇದಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದದ ಪ್ರಕಾರ, ನಿಲ್ದಾಣಕ್ಕೆ "ಇನ್‌ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ" ಎಂದು ನಾಮಕರಣ ಮಾಡಲಾಗುತ್ತದೆ. ನಿಲ್ದಾಣದ ನಾಮಕರಣ ಹಕ್ಕುಗಳು ಮತ್ತು ನಿರ್ಮಾಣ ವೆಚ್ಚಕ್ಕೆ ಕೊಡುಗೆಯನ್ನು ಒಳಗೊಂಡಿರುವ ಈ ವ್ಯವಸ್ಥೆಯಿಂದ ಬಿಎಂಆರ್‌ಸಿಎಲ್‌ಗೆ ₹65 ಕೋಟಿ ದೊರೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಸಿ. ಜಾಫರ್ ಅವರು, 'ಭಾರತದ ಮೊದಲ ಡಬಲ್ ಯುನಿಕಾರ್ನ್ ಕಂಪನಿಯಾದ ಇನ್‌ಮೊಬಿಯನ್ನು ಬೆಂಗಳೂರಿನ ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಮ್ಮ ಪಾಲುದಾರರಾಗಿ ಸ್ವಾಗತಿಸಲು ಸಂತೋಷವಾಗುತ್ತಿದೆ. ಸಾರ್ವಜನಿಕ ಸಾರಿಗೆಯ ಬೆಳವಣಿಗೆಗೆ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಅರ್ಥಪೂರ್ಣ ಕೊಡುಗೆ ನೀಡಬಹುದು ಎಂಬುದನ್ನು ಈ ಪಾಲುದಾರಿಕೆ ತೋರಿಸುತ್ತದೆ ಎಂದು ಹೇಳಿದ್ದಾರೆ.
ಇನ್‌ಮೊಬಿಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ತಿವಾರಿ ಮಾತನಾಡಿ, 'ಬೆಂಗಳೂರು ಇನ್‌ಮೊಬಿಗೆ ಜಾಗತಿಕ ಭವಿಷ್ಯವನ್ನು ಕಲ್ಪಿಸಿಕೊಳ್ಳಲು ಮತ್ತು ನಿರ್ಮಿಸಲು ಆತ್ಮವಿಶ್ವಾಸ ನೀಡಿತು. ನಾವು ಬೆಳೆದಂತೆ ನಮ್ಮ ಪ್ರಯಾಣಕ್ಕೆ ದಾರಿ ಮಾಡಿಕೊಟ್ಟ ಈ ನಗರದತ್ತ ನಮ್ಮ ಜವಾಬ್ದಾರಿಯ ಭಾವನೆಯೂ ಹೆಚ್ಚಾಗಿದೆ, ಬೆಂಗಳೂರಿಗೆ ಮರಳಿ ಕೊಡುಗೆ ನೀಡುವ ನಮ್ಮ ಬದ್ಧತೆಯನ್ನು ಮತ್ತು ತಾವು ಭಾಗವಾಗಿರುವ ಸಮುದಾಯಗಳ ಅಭಿವೃದ್ಧಿಯಲ್ಲಿ ವ್ಯವಹಾರ ಸಂಸ್ಥೆಗಳಿಗೂ ಪಾತ್ರವಿದೆ ಎಂಬ ನಮ್ಮ ನಂಬಿಕೆಯನ್ನು ಈ ಪಾಲುದಾರಿಕೆ ಪ್ರತಿಬಿಂಬಿಸುತ್ತದೆ. ಭಾರತದಿಂದ ಜಗತ್ತಿಗಾಗಿ ನಿರ್ಮಿಸುವ ನಮ್ಮ ಕಾರ್ಯವನ್ನು ಮುಂದುವರಿಸುವುದರ ಜತೆಗೆ, ನಮ್ಮ ಪ್ರಯಾಣ ಆರಂಭವಾದ ನಗರಕ್ಕೆ ಕೊಡುಗೆ ನೀಡುವುದಕ್ಕೂ ನಾವು ಬದ್ದರಾಗಿದ್ದೇವೆ" ಎಂದು ತಿಳಿಸಿದ್ದಾರೆ.